ಬೆಂಗಳೂರು: ನಮ್ಮ ಮೆಟ್ರೋ (Namma Metro) ನೇರಳೆ ಮಾರ್ಗದಲ್ಲಿ (purple line) ಮೆಜೆಸ್ಟಿಕ್‌ನಿಂದ ಪಟ್ಟಂದೂರು ಕಡೆಗೆ ಸಂಚರಿಸುವ ರೈಲುಗಳ ಸಂಖ್ಯೆಯಲ್ಲಿ ಹೆಚ್ಚಳ ಮಾಡಲಾಗಿದೆ. ಇದರಿಂದ ಐಟಿ ಬಿಟಿ ಕಂಪನಿಗಳಿಗೆ ತೆರಳುವ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲ ಆಗಲಿದೆ.
ಇಂದಿನಿಂದ ಜಾರಿಗೆ ಬರುವಂತೆ ನೇರಳೆ ಮಾರ್ಗದಲ್ಲಿ ವೇಳಾಪಟ್ಟಿ ಬದಲಾವಣೆಗೆ ಬಿಎಂಆರ್‌ಸಿಎಲ್ ಕ್ರಮ ಕೈಗೊಂಡಿದೆ. ಪ್ರಸ್ತುತ 9 ರೈಲುಗಳ ಬದಲಾಗಿ ಹೆಚ್ಚುವರಿಯಾಗಿ 15 ರೈಲುಗಳನ್ನು ಪ್ರಯಾಣಿಕರ ಸೇವೆಗೆ ಬಿಡಲಾಗಿದೆ. ಪ್ರತಿ 3.5 ನಿಮಿಷಕ್ಕೆ ಒಂದು ರೈಲು ಸೇವೆ ಸಿಗುವುದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ(BMRCL) ಮಾಹಿತಿ ನೀಡಿದೆ.
ಪ್ರಕಟಣೆಯ ಪೂರ್ಣ ಪಾಠ ಹೀಗಿದೆ:
ಬಿ.ಎಂ.ಆರ್.ಸಿ.ಎಲ್ ಪುಯಾಣಿಕರ ಉತ್ತಮ ಪ್ರತಿಕ್ರಿಯೆ ಹಾಗೂ ನಿರಂತರ ಪ್ರೋತ್ಸಾಹಕ್ಕಾಗಿ ಧನ್ಯವಾದಗಳನ್ನು ಕೋರುತ್ತದೆ. ದಿನಾಂಕ 06.07.2024 ರಿಂದ ಜಾರಿಗೆ ಬರುವಂತೆ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದ್ದು ನಾಡಪ್ರಭು ಕೆಂಪೇಗೌಡ ನಿಲ್ದಾಣ – ಮೆಜೆಸ್ಟಿಕ್‌ನಿಂದ ಹೆಚ್ಚುವರಿ ರೈಲು ಸೇವೆಗಳನ್ನು ಒದಗಿಸಲಾಗುತ್ತಿದೆ.
ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮಜೆಸ್ಟಿಕ್‌ನಿಂದ ಪ್ರಸ್ತುತ 9 ರೈಲುಗಳ ಬದಲಾಗಿ ಹೆಚ್ಚುವರಿಯಾಗಿ 15 ರೈಲುಗಳನ್ನು ಪ್ರಯಾಣಿಕರ ಸೇವೆಗೆ ಒದಗಿಸಲಾಗುವುದು. ಈ ಹದಿನೈದು ರೈಲುಗಳಲ್ಲಿ ಹತ್ತು ರೈಲುಗಳು ಪಟ್ಟಂದೂರು ಅಗ್ರಹಾರದ (ಐಟಿಪಿಎಲ್) ವರೆಗೆ, ನಾಲ್ಕು ರೈಲು ವೈಟ್‌ಫೀಲ್ಡ್ ಮತ್ತು ಒಂದು ರೈಲು ಬೈಯಪ್ಪನಹಳ್ಳಿ ನಿಲ್ದಾಣದವರೆಗೆ ಚಲಿಸುತ್ತವೆ.
ಅದರಂತೆ, ಬೆಳಗಿನ ಸಮಯದಲ್ಲಿ ರೈಲುಗಳು ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ 8.48, 8.58, 9.08, 9.18, 9.29, 9.39, 9.50, 10.00, 10.11, 10.21, 10.39, 10.50, 11.00, 11.22 ಪೂರ್ವಕ್ಕೆ ಹೊರಡುತ್ತವೆ. ಇದಲ್ಲದೆ, ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್‌ನಲ್ಲಿ 3.3 ನಿಮಿಷಗಳ ಆವರ್ತನದಲ್ಲಿ ಬೆಳಿಗ್ಗೆ 10.25 ಗಂಟೆಯವರೆಗೆ ನಿಯಮಿತವಾಗಿ ಹಾದುಹೋಗುವ ರೈಲುಗಳು ಸಹ ಲಭ್ಯವಿರುತ್ತವೆ.
ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು, ಪ್ರಸ್ತುತ ಗರುಡಾಚಾರ್ ಪಾಳ್ಯ ಮೆಟ್ರೋ ನಿಲ್ದಾಣದಲ್ಲಿ ಕೊನೆಗೊಳ್ಳುವ 14 ರೈಲುಗಳಲ್ಲಿ, 6 ರೈಲುಗಳನ್ನು ಪಟ್ಟಂದೂರು ಅಗ್ರಹಾರ (ಐಟಿಪಿಎಲ್) ವೈಟ್‌ಫೀಲ್ಡ್ ವರೆಗೆ ವಿಸ್ತರಿಸಲಾಗಿದೆ. ಗರುಡಾಚಾರ್ ಪಾಳ್ಯ ಮೆಟ್ರೋ ನಿಲ್ದಾಣದಲ್ಲಿ ಇಳಿಯುವ ಪಯಾಣಿಕರಿಗೆ ಪಟ್ಟಂದೂರು ಅಗ್ರಹಾರ (ಐಟಿಪಿಎಲ್) ಕಡೆಗೆ ಪ್ರಯಾಣಿಸಲು ಮುಂದಿನ ರೈಲು 3.5 ನಿಮಿಷಗಳ ಆವರ್ತನದಲ್ಲಿ ಲಭ್ಯವಿರುತ್ತದೆ. ಪುಯಾಣಿಕರ ಅನುಕೂಲಕ್ಕಾಗಿ 5 ನಿಮಿಷಗಳ ಆವರ್ತನದಲ್ಲಿ ಬೈಯಪ್ಪನಹಳ್ಳಿಯಿಂದ ಸಂಜೆ 4:40 ರ ಬದಲಿಗೆ 4:20 ಕ್ಕೆ ಮೈಸೂರು ರಸ್ತೆ ನಿಲ್ದಾಣದ ಕಡೆಗೆ ಪ್ರಾರಂಭವಾಗಲಿದೆ.
ಹಸಿರು ಮಾರ್ಗದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಸಾರ್ವಜನಿಕರು ತಮ್ಮ ಅನುಕೂಲಕರ ಪ್ರಯಾಣಕ್ಕಾಗಿ ಮೇಲಿನ ಬದಲಾವಣೆಯನ್ನು ಗಮನಿಸಿ ಪ್ರಯಾಣಿಸಲು ಕೋರಿದೆ.
ಇದನ್ನೂ ಓದಿ: Namma Metro: ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್; ನಾಳೆಯಿಂದ ನೇರಳೆ ಮಾರ್ಗದಲ್ಲಿ ಹೆಚ್ಚುವರಿ ರೈಲು ಸೇವೆ