Site icon Vistara News

Namma Metro: ರಾಜಾಜಿನಗರ ಮೆಟ್ರೊ ನಿಲ್ದಾಣದಲ್ಲಿ ತಾಂತ್ರಿಕ ದೋಷ, ಹಸಿರು ಮೆಟ್ರೊ ಸೇವೆ ಅಸ್ತವ್ಯಸ್ತ, ಎಲ್ಲಿ ಓಡಾಟವಿಲ್ಲ?

namma metro glitch

ಬೆಂಗಳೂರು: ರಾಜಾಜಿನಗರ ಮೆಟ್ರೊ (namma metro) ನಿಲ್ದಾಣದಲ್ಲಿ ತಾಂತ್ರಿಕ ದೋಷ (Technical problem) ಉಂಟಾದ ಪರಿಣಾಮ ಮೆಟ್ರೊ ಸೇವೆ ವ್ಯತ್ಯಯವಾಗಿದೆ. ಹಸಿರು ಮಾರ್ಗದ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ.

ರೀ ರೈಲ್ ವಾಹನ ಆಯತಪ್ಪಿ ಟ್ರ್ಯಾಕ್‌ನಿಂದ ವಾಲಿದ ಪರಿಣಾಮ ಹೀಗಾಗಿದೆ. ರಾಜಾಜಿನಗರ ನಿಲ್ದಾಣದ ತಿರುವಿನಲ್ಲಿ ಘಟನೆ ನಡೆದಿದೆ. ಹೀಗಾಗಿ ನಾಗಸಂದ್ರದಿಂದ ರೇಷ್ಮೆ ಸಂಸ್ಥೆವರೆಗಿನ ಟ್ರ್ಯಾಕ್‌ನಲ್ಲಿ ಸಂಚಾರಕ್ಕೆ ತೊಂದರೆ ಉಂಟಾಯಿತು. ಈ ಬಗ್ಗೆ ನಮ್ಮ ಮೆಟ್ರೋ ಎಕ್ಸ್‌ (ಟ್ವೀಟ್‌) ಮಾಡಿದೆ.

ಒಂದು ಟ್ರ್ಯಾಕ್‌ ಬಳಕೆಗೆ ಬರದ ಕಾರಣ, ಏಕಮುಖವಾಗಿ ಮಾತ್ರ ರೈಲುಗಳು ಸಂಚರಿಸಿದವು. ಪೀಕ್‌ ಅವರ್‌ನಲ್ಲಿ ಹೀಗಾದ ಪರಿಣಾಮ ಪ್ರಯಾಣಿಕರಿಗೆ ಭಾರೀ ಅನಾನುಕೂಲ ಉಂಟಾಯಿತು. ರೀ ರೈಲ್ ವಾಹನವನ್ನು‌ ಹಳಿಗೆ ತರಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಇಂದು ಮಧ್ಯಾಹ್ನದವರೆಗೂ ಪ್ರಯಾಣಿಕರಿಗೆ ತೊಂದರೆ ಮುಂದುವರಿಯುವ ಸಾಧ್ಯತೆ ಇದೆ.

ಸದ್ಯ ನಾಗಸಂದ್ರದಿಂದ ಯಶವಂತಪುರ ಮತ್ತು ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆಯಿಂದ ರೇಷ್ಮೆ ಸಂಸ್ಥೆ ಮೆಟ್ರೊ ನಿಲ್ದಾಣದ ನಡುವೆ ಮಾತ್ರ ಹಸಿರು ಮಾರ್ಗದಲ್ಲಿ ರೈಲು ಸೇವೆಗಳು ಲಭ್ಯವಿವೆ. ಯಶವಂತಪುರದಿಂದ ಮಂತ್ರಿ ಸ್ಕ್ವೇರ್‌ ವರೆಗೆ ಸೇವೆ ಲಭ್ಯವಿಲ್ಲ. ಶ್ರೀರಾಮಂಪುರ, ಕುವೆಂಪುನಗರ, ರಾಜಾಜಿನಗರ, ಮಹಾಲಕ್ಷ್ಮೀ, ಸ್ಯಾಂಡಲ್​ ಸೋಪ್ ಫ್ಯಾಕ್ಟರಿ ನಡುವೆ ಮೆಟ್ರೋ ಸೇವೆ ಸಂಚಾರ ಇರುವುದಿಲ್ಲ.

ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಅಧಿಕವಾಗಿದ್ದು, ಅರ್ಧಗಂಟೆಗೊಮ್ಮೆ ರೈಲುಗಳು ಬರುತ್ತಿವೆ. ರೈಲಿಗೆ ಕ್ಯೂನಲ್ಲಿ ಕಾದು ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಬರುವ ಟ್ರೈನ್‌ಗಳು ಕೂಡ ತುಂಬಿ ತುಳುಕುತ್ತಿವೆ. ಪೀಕ್‌ ಅವರ್‌ನಲ್ಲಿ ಕಾಲೇಜು, ಕಚೇರಿಗಳಿಗೆ ಹೊರಟ ಪ್ರಯಾಣಿಕರು ಇದರಿಂದ ಬವಣೆ ಅನುಭವಿಸಿದರು. ಹಲವರು ಫೋಟೋ ತೆಗೆದು BMRCLಗೆ ಟ್ಯಾಗ್‌ ಮಾಡಿ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: Namma Metro: ಐಟಿ ಉದ್ಯೋಗಿಗಳಿಗೆ ಗುಡ್‌ ನ್ಯೂಸ್‌; ಅ.6ಕ್ಕೆ ಚಲ್ಲಘಟ್ಟ- ವೈಟ್‌ಫೀಲ್ಡ್‌ ಮೆಟ್ರೋ ಸಂಚಾರ ಆರಂಭ ಸಾಧ್ಯತೆ

Exit mobile version