ಬೆಂಗಳೂರು: ರಾಜಧಾನಿಯಲ್ಲಿ ಮುಂಜಾನೆ ತಮ್ಮ ಕಚೇರಿ, ಶಾಲೆ, ಕಾಲೇಜುಗಳಿಗೆ ಹೋಗುವವರನ್ನು ಭಾರಿ ಇಕ್ಕಟ್ಟಿಗೆ ಸಿಲುಕಿಸಿದ್ದ ಮೆಟ್ರೋ ಸಂಚಾರ (Namma Metro) ಮಧ್ಯಾಹ್ನದ ಹೊತ್ತಿಗೆ ಬಗೆಹರಿದಿದೆ. ಕೆಂಗೇರಿ ಮತ್ತು ಬಯ್ಯಪ್ಪನ ಹಳ್ಳಿ (Kengeri to Bayyappanahalli) ನಡುವೆ ಸಂಚರಿಸುವ ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ (Metro Operation) ಮುಂಜಾನೆ ಏಳು ಗಂಟೆಯಿಂದ ವ್ಯತ್ಯಯವಾಗಿತ್ತು. ಬಯ್ಯಪ್ಪನ ಹಳ್ಳಿಯಲ್ಲಿ ಸಿಗ್ನಲ್ ಸಮಸ್ಯೆ (Signal probelm) ಉಂಟಾದ ಹಿನ್ನೆಲೆಯಲ್ಲಿ ಮ್ಯಾನುವಲ್ ಆಗಿಯೇ ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಇದರಿಂದಾಗಿ ವಿಳಂಬ ಸಂಚಾರ, ಕೆಲವು ರೈಲುಗಳು ಕ್ಯಾನ್ಸಲ್ ಆಗುವುದು ಸೇರಿದಂತೆ ಕೆಲವು ಬದಲಾವಣೆಗಳಾಗಿದ್ದವು. ಇದರಿಂದ ಮೆಟ್ರೋ ಪ್ರಯಾಣಿಕರಿಗೆ ಭಾರಿ ತೊಂದರೆಯಾಗಿತ್ತು.
ನಿಜವೆಂದರೆ, ಇದು ಕೆಲವೇ ನಿಮಿಷಗಳಲ್ಲಿ ಸರಿಪಡಿಸಬಹುದಾದ ಸಮಸ್ಯೆ ಎಂದು ಹೇಳಲಾಗಿದೆ. 10 ನಿಮಿಷ ಸಂಚಾರ ನಿಲ್ಲಿಸಿದರೆ ಸಿಗ್ನಲ್ ವ್ಯವಸ್ಥೆಯನ್ನು ಮರಳಿ ಸ್ಥಾಪಿಸಬಹುದಿತ್ತು. ಆದರೆ ಮುಂಜಾನೆಯ ಪೀಕ್ ಅವರ್‌ನಲ್ಲಿ ಅರ್ಧ ಗಂಟೆ ಸಂಚಾರ ತಡೆ ಹಿಡಿದರೆ ಪ್ರಯಾಣಿಕರಿಗೆ ಭಾರಿ ತೊಂದರೆಯಾಗಲಿದೆ ಎಂಬ ಕಾರಣಕ್ಕೆ ಎಲೆಕ್ಟ್ರಾನಿಕ್ ಸಿಗ್ನಲ್ ಬದಲು ಮ್ಯಾನುವಲ್ ಆಗಿಯೇ ಸಂಚಾರ ಮುಂದುವರಿಸುವ ಮಹತ್ವದ ತೀರ್ಮಾನಕ್ಕೆ ಬಂತು.
ಹೀಗಾಗಿ ಮ್ಯಾನವಲ್ ಆಗಿ ಮೆಟ್ರೋ ಓಡಿಸಿದ್ದರಿಂದ ಓಡಾಟದಲ್ಲಿ ವ್ಯತ್ಯಯವಾಯಿತು. ಪೀಕ್ ಅವರ್ ಒತ್ತಡ ಮುಗಿದ ಬಳಿಕ ಮಧ್ಯಾಹ್ನ 12 ಗಂಟೆಗೆ ರೈಲು ಸಂಚಾರವನ್ನು ಸ್ಥಗಿತಗೊಳಿಸಿ ಸಿಗ್ನಲ್ ವ್ಯವಸ್ಥೆಯನ್ನು ಸರಿಪಡಿಸಲಾಯಿತು.
10 ನಿಮಿಷ ದುರಸ್ತಿ ಬಳಿಕ ಸಹಜ ಸ್ಥಿತಿಯಲ್ಲಿ ಮೆಟ್ರೋ ಓಡಾಟ ಆರಂಭಗೊಂಡಿದೆ.
ಏನಾಗಿತ್ತು ಬೆಳ್ಳಂಬೆಳಗ್ಗೆ?
ಮುಂಜಾನೆ ಏಳು ಗಂಟೆಯ ಹೊತ್ತಿಗೆ ನೇರಳೆ ಮಾರ್ಗದಲ್ಲಿ ರೈಲು ಹತ್ತಲು ಬಂದವರಿಗೆ ಮತ್ತು ಹಸಿರು ಟ್ರ್ಯಾಕ್‌ನಲ್ಲಿ ಬಂದು ಮೆಜೆಸ್ಟಿಕ್ ನಿಲ್ದಾಣದಲ್ಲಿ ನೇರಳೆ ಮಾರ್ಗಕ್ಕೆ ಶಿಫ್ಟ್ ಆಗಲು ಹೊರಟವರಿಗೆ ಆಘಾತ ಕಾದಿತ್ತು. ರೈಲುಗಳು ಸಮಯಕ್ಕೆ ಸರಿಯಾಗಿ ಬಾರದೆ ಇರುವುದು, ಯಾವುದೋ ಹೊತ್ತಿಗೆ ಬರುವುದು, ಕೆಲವು ರೈಲುಗಳು ಕ್ಯಾನ್ಸಲ್ ಆಗುವುದು ಹೀಗೆ ಹಲವು ಸಮಸ್ಯೆಗಳು ಕಂಡುಬಂದವು. ಎಷ್ಟೋ ನಿಮಿಷಕ್ಕೊಮ್ಮೆ ಬರುವ ರೈಲುಗಳು ಕೂಡಾ ತುಂಬಿ ತುಳುಕುತ್ತಿದ್ದುದರಿಂದ ಅದಕ್ಕೆ ಹತ್ತಲಾಗದೆ ಜನರು ನಿರಾಶರಾದರು. ಹೀಗಾಗಿ ಬಹುತೇಕ ಎಲ್ಲ ನಿಲ್ದಾಣಗಳಲ್ಲಿ ಜನಸಾಗರವೇ ಕಂಡುಬಂತು. ಪ್ಲ್ಯಾಟ್ ಫಾರಂಗಳಲ್ಲಿ ನಿಲ್ಲಲೂ ಜಾಗವಿರಲಿಲ್ಲ.
ಹೆಚ್ಚು ಜನ ಸಂಚರಿಸುವ ಅವಧಿಯಾದ ಪೀಕ್ ಟೈಮ್ನಲ್ಲೇ ಮೆಟ್ರೋ ಏಕಾಏಕಿ ಸ್ಥಗಿತಗೊಂಡಿದ್ದರಿಂದ ಕಚೇರಿ, ಶಾಲಾ-ಕಾಲೇಜಿಗೆ ಹೋಗಲು ಮೆಟ್ರೋ ಅವಲಂಬಿಸಿರುವ ಜನರಿಗೆ ಭಾರಿ ತೊಂದರೆಯಾಯಿತು. ಆದರೆ, ಇದೀಗ ಎಲ್ಲವೂ ಬಗೆಹರಿದಿದೆ.
ಇದನ್ನೂ ಓದಿ: Namma Metro : ಬೆಂಗಳೂರು ಮೆಟ್ರೊ ಸಂಚಾರ ಅಸ್ತವ್ಯಸ್ತ; ಪ್ರಯಾಣಿಕರ ಪರದಾಟ, ಏನು ಸಮಸ್ಯೆ?