Site icon Vistara News

Namma Metro Ticket Price Hike: ಮೆಟ್ರೋ ಟಿಕೆಟ್‌ ದರದ ಮೇಲೆ ಕೈ ಇಟ್ರೋ! ಬೆಂಗಳೂರು ಜನರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ?

Namma Metro ticket price hike

ಬೆಂಗಳೂರು: ನಿತ್ಯ ವಸ್ತುಗಳ ಬೆಲೆ ಏರಿಕೆಗಳ (Price Hike) ನಡುವೆ ತತ್ತರಿಸುತ್ತಿರುವ ರಾಜಧಾನಿಯ (Bangalore) ಜನತೆಗೆ ಇನ್ನೊಂದು ಶಾಕ್‌ ನೀಡಲು ಸರ್ಕಾರ ಸಿದ್ಧವಾಗಿದೆ. ಮೆಟ್ರೋ ರೈಲಿನ ಟಿಕೆಟ್ ದರ ಏರಿಕೆಗೆ (Namma Metro Ticket Price Hike) ಬಿಎಂಆರ್‌ಸಿಎಲ್‌ (BMRCL) ಚಿಂತನೆ ನಡೆಸಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ದರ ಏರಿಕೆ ಅನಿವಾರ್ಯ ಎಂದು ಬಿಎಂಆರ್‌ಸಿಎಲ್‌ ಹೇಳಿದೆ. ಮೆಟ್ರೋ ರೈಲ್ವೆ ನಿಲ್ದಾಣಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್‌ಫಾರಂ ಸ್ಕ್ರೀನ್ (PSD) ಅಳವಡಿಸಲು ಚಿಂತಿಸಲಾಗಿದೆ. ಗ್ಲಾಸ್ ಅಳವಡಿಕೆಯಿಂದ ಒಂದು ನಿಲ್ದಾಣಕ್ಕೆ 6-7 ಕೋಟಿ ವೆಚ್ಚ ಆಗಲಿದೆ. ಹೀಗಾಗಿ ಟಿಕೆಟ್ ದರ ಏರಿಕೆ ಮಾಡಲು ಚಿಂತಿಸಲಾಗುತ್ತಿದೆ.

ಈ ಹಿಂದಿನಿಂದಲೂ PSD ಅಳವಡಿಕೆ ಮಾಡಲು ಚಿಂತನೆ ನಡೆದಿತ್ತು. ಪ್ರತಿ ಸ್ಟೇಷನ್ನಿಗೂ ಅಳವಡಿಕೆ ಮಾಡಬೇಕೆಂದರೆ 6-7 ಕೋಟಿ ಬೇಕಾಗುತ್ತದೆ. ಈ‌ ಹಣವನ್ನು ಟಿಕೆಟ್ ದರ ಹೆಚ್ಚು ಮಾಡುವ ಮೂಲಕವೇ ಪಡೆಯಬೇಕಿದೆ. ಮೊನ್ನೆ ಆದ ಆತ್ಮಹತ್ಯೆ ಪ್ರಕರಣದ ಬಳಿಕ, ಎಲ್ಲಾ ಸ್ಟೇಷನ್‌ಗಳಲ್ಲಿ ಇದನ್ನು ಮಾಡಬೇಕು ಅಂತ ಚಿಂತನೆ ಇದೆ.

ಹಳೆ ಸ್ಟೇಷನ್‌ಗಳಲ್ಲಿ ಪಿಎಸ್‌ಡಿ ಅಳವಡಿಕೆ ಮಾಡಲು ತಾಂತ್ರಿಕವಾಗಿ ಸಮಸ್ಯೆಗಳಿವೆ. ಯಾಕೆಂದರೆ ಹಳೆಯ ಸಿಗ್ನಲ್ ಇದೆ. ಸಾಫ್ಟ್‌ವೇರ್‌ ಬದಲಾವಣೆಗೆ ಕೂಡ ವೆಚ್ಚವಾಗುತ್ತದೆ. ಎಲ್ಲ ನಿಲ್ದಾಣಗಳಲ್ಲಿ ಮಾಡಬೇಕೆಂದರೆ 70 ಕೋಟಿ ಬೇಕಾಗಬಹುದು. ಹೊಸ ಮೂರು ನಿಲ್ದಾಣ ಕೂಡಿ 70 ಮೆಟ್ರೋ ನಿಲ್ದಾಣಗಳು ಇವೆ. ಹೀಗಾಗಿ ದರ ಏರಿಕೆ ಬಗ್ಗೆ ಚಿಂತನೆ ಇದೆ ಅಷ್ಟೇ ಎಂದು ಮೆಟ್ರೋದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ ಚವಾನ್ ವಿಸ್ತಾರ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.

ಮೆಟ್ರೋ ರೈಲಿನಡಿಗೆ ಜಿಗಿದು ವ್ಯಕ್ತಿ ಆತ್ಮಹತ್ಯೆ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ (Namma Metro) ಪದೇಪದೆ ಅವಘಡಗಳು ಸಂಭವಿಸುತ್ತಿದ್ದರೂ ಅಧಿಕಾರಿಗಳು, ಸಿಬ್ಬಂದಿ ಎಚ್ಚರಗೊಂಡಂತೆ ಕಾಣುತ್ತಿಲ್ಲ. ಮೊನ್ನೆ ಮೆಟ್ರೋ ಟ್ರ್ಯಾಕ್‌ಗೆ 4 ವರ್ಷದ ಮಗು ಬಿದ್ದ ಬೆನ್ನಲ್ಲೇ ಆಗಸ್ಟ್‌ 3ರಂದು ವ್ಯಕ್ತಿಯೊಬ್ಬ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ದೊಡ್ಡಕಲ್ಲಸಂದ್ರ ಬಳಿ ನಡೆದಿದೆ.

ಸಂಜೆ 5:45 ಸುಮಾರಿಗೆ ದೊಡ್ಡಕಲ್ಲಸಂದ್ರ ಬಳಿ ಘಟನೆ‌ ನಡೆದಿದೆ. ಇದರಿಂದ ಯಲಚೇನಹಳ್ಳಿ- ಸಿಲ್ಕ್ ಇನ್‌ಸ್ಟಿಟ್ಯೂಟ್ ನಡುವೆ ರೈಲು ಸಂಚಾರ ಸ್ಥಗಿತಗೊಂಡಿದೆ. ಸ್ಥಳಕ್ಕೆ ಕೊಣನಕುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತಪಟ್ಟ ವ್ಯಕ್ತಿ ಯಾರು?, ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಆ. 1ರಂದು ರಾತ್ರಿ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ 2ರಲ್ಲಿ ಆಟವಾಡುತ್ತಿದ್ದ 4 ವರ್ಷದ ಬಾಲಕ, ಆಕಸ್ಮಿಕವಾಗಿ ಹಳಿ ಮೇಲೆ ಬಿದ್ದಿದ್ದ ಘಟನೆ ನಡೆದಿತ್ತು. ತಕ್ಷಣ ಭದ್ರತಾ ಸಿಬ್ಬಂದಿ ತುರ್ತು ರೈಲು ನಿಲುಗಡೆ ವ್ಯವಸ್ಥೆಯನ್ನು ಬಳಸುವ ಮೂಲಕ ರೈಲು ಸಂಚಾರವನ್ನು ನಿಲ್ಲಿಸಿದ್ದರು. ಬಳಿಕ ಬಾಲಕನನ್ನು ರಕ್ಷಣೆ ಮಾಡಲಾಗಿತ್ತು.

ದಾಖಲೆ ಸಂಖ್ಯೆಯ ಪ್ರಯಾಣಿಕರು

ಬೆಂಗಳೂರು: ಆಗಸ್ಟ್ 6ರಂದು ನಮ್ಮ ಮೆಟ್ರೋದಲ್ಲಿ ದಾಖಲೆ ಸಂಖ್ಯೆಯಲ್ಲಿ ಪ್ರಯಾಣಿಕರ ಓಡಾಟ ನಡೆಸಿದ್ದು, ಈ ಹಿಂದಿನ ರೈಡರ್‌ಶಿಪ್ ದಾಖಲೆಗಳನ್ನು ಮುರಿದಂತಾಗಿದೆ. ನಮ್ಮ ಮೆಟ್ರೋದಲ್ಲಿ ಮಂಗಳವಾರ 8.26 ಲಕ್ಷ ಮಂದಿ ಪ್ರಯಾಣಿಸಿದ್ದು, ಈ ಸಾಧನೆಗೆ ಕಾರಣರಾದ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್‌ ಧನ್ಯವಾದ ಹೇಳಿದೆ.

ಆ.6ರಂದು ಒಟ್ಟಾರೆ 8,26,883 ಪ್ರಯಾಣಿಕರಿಂದ ಮೆಟ್ರೋ ಬಳಕೆಯಾಗಿದೆ. ನಮ್ಮ ಮೆಟ್ರೋವನ್ನು ತಮ್ಮ ಪ್ರಯಾಣದ ಪಾಲುದಾರರನ್ನಾಗಿ ಮಾಡಿಕೊಂಡಿದ್ದಕ್ಕಾಗಿ ಮತ್ತು ವಾತಾವರಣದ ಕಾರ್ಬನ್‌ ಡೈ ಆಕ್ಸೈಡ್‌ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನವನ್ನು ಬೆಂಬಲಿಸುತ್ತಿರುವುದಕ್ಕೆ ಪ್ರಯಾಣಿಕರಿಗೆ ಧನ್ಯವಾದಗಳು ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಇದನ್ನೂ ಓದಿ: Metro City: ಬೆಂಗಳೂರಿಗೆ ‘ಮೆಟ್ರೊ ಸಿಟಿ’ ಸ್ಥಾನಮಾನ ನೀಡಲು ನಿರಾಕರಿಸಿದ ಕೇಂದ್ರ ಸರ್ಕಾರ!

Exit mobile version