Site icon Vistara News

Nandini Milk: ಮತ್ತೆ ನಂದಿನಿ ಹಾಲಿನ ದರ ಏರಿಕೆ? ಯಾವಾಗ? ಎಷ್ಟು ಹೆಚ್ಚಳ ಮಾಡಬಹುದು?

milk price hike

ಬೆಂಗಳೂರು: ಕಳೆದ ಆಗಸ್ಟ್‌ನಲ್ಲಿ ನಂದಿನಿ ಹಾಲಿನ (Nandini Milk) ಹಾಗೂ ಮೊಸರಿನ ದರ ಸೇರಿದಂತೆ ಇನ್ನಿತರ ಉತ್ಪನ್ನಗಳ ದರವನ್ನು ಏರಿಸಲಾಗಿತ್ತು. ಇದು ಜನಸಾಮಾನ್ಯರ ಜೇಬಿಗೆ ಹೊರೆಯಾಗಿ ಪರಿಣಮಿಸಿತ್ತು. ಇದೀಗ ಮತ್ತೆ ನಂದಿನಿ ಹಾಲಿನ ದರ ಏರಿಕೆ ಮಾಡುವ ಬಗ್ಗೆ ಕೆಎಂಎಫ್‌ (KMF) ಚಿಂತನೆ ನಡೆಸಿದೆ ಎನ್ನಲಾಗಿದೆ. ಆದರೆ, ಇದಕ್ಕೆ ಸರ್ಕಾರ ಒಪ್ಪುತ್ತದೆಯೇ? ಒಪ್ಪಿದರೂ ಎಷ್ಟು ರೂಪಾಯಿ ಏರಿಕೆ ಆಗಲಿದೆ ಎಂಬುದು ಮಾತ್ರ ಇನ್ನೂ ನಿರ್ಧಾರ ಆಗಿಲ್ಲ.

ಕರ್ನಾಟಕ ಹಾಲು ಮಾರಾಟ ಮಹಾಮಂಡಳ (KMF) ವು ಈ ತೀರ್ಮಾನ ತೆಗೆದುಕೊಳ್ಳಲು 14 ಹಾಲು ಒಕ್ಕೂಟಗಳ ಮನವಿ ಕಾರಣ ಎನ್ನಲಾಗಿದೆ. ಏಕೆಂದರೆ ಕಳೆದ ಬಾರಿ 5 ರೂಪಾಯಿ ಹೆಚ್ಚಳ ಮಾಡುವ ಪ್ರಸ್ತಾಪ ಇದ್ದರೂ, ವ್ಯಾಪಕ ವಿರೋಧ ವ್ಯಕ್ತವಾಗಿದ್ದರಿಂದ 3 ರೂಪಾಯಿ ಹೆಚ್ಚಳ ಮಾಡಿ ಆದೇಶಿಸಲಾಗಿತ್ತು. ಆದರೆ, ಈ 3 ರೂಪಾಯಿಯನ್ನು ನೇರವಾಗಿ ರೈತರಿಗೆ ನೀಡುವಂತೆ ಸೂಚಿಸಲಾಗಿತ್ತು. ಇದು ಹಾಲು ಒಕ್ಕೂಟಗಳಿಗೆ ಹೊಡೆತ ನೀಡಿತ್ತು. ಹಾಲು ಒಕ್ಕೂಟಗಳಿಗೆ ಆಗುತ್ತಿದ್ದ, ನಷ್ಟವನ್ನು ಸರಿದೂಗಿಸಲು ದರ ಪರಿಷ್ಕರಣೆ ಅನಿವಾರ್ಯ ಎಂದು ಕೆಎಂಎಫ್‌ಗೆ ಮನವಿಯನ್ನು ಸಲ್ಲಿಸಲಾಗಿತ್ತು. ಹೀಗಾಗಿ ಈ ಮನವಿ ಬಗ್ಗೆ ಕೆಎಂಎಫ್ ಉನ್ನತ ಮಟ್ಟದಲ್ಲಿ ದರ ಏರಿಕೆಯ ಚರ್ಚೆಗಳು ನಡೆದಿವೆ. ಈ ಕುರಿತು ಸರ್ಕಾರದ ಮುಂದೆ ಪ್ರಸ್ತಾವವನ್ನು ಇಟ್ಟು, ಅಲ್ಲಿಂದ ಒಪ್ಪಿಗೆ ಸಿಕ್ಕರೆ ದರ ಏರಿಕೆ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಜನವರಿಯಲ್ಲಿ ಒಕ್ಕೂಟಗಳ ಸಭೆ?

ಈ ಸಂಬಂಧ ಜನವರಿಯಲ್ಲಿ 14 ಹಾಲು ಒಕ್ಕೂಟಗಳ ಸಭೆ ಕರೆಯಲು ಕೆಎಂಎಫ್‌ ಚಿಂತನೆ ನಡೆಸಿದೆ ಎನ್ನಲಾಗಿದೆ. ಇಲ್ಲಿ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿ ವರದಿ ಸಿದ್ಧಪಡಿಸಿ, ಬಳಿಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಆಲೋಚನೆಯಲ್ಲಿ ಕೆಎಂಎಫ್ ಇದೆ ಎನ್ನಲಾಗಿದೆ. ಸದ್ಯ ಇದು ಚರ್ಚಾ ಹಂತದಲ್ಲಿ ಇರುವುದರಿಂದ ಗ್ರಾಹಕರು ಈ ಕ್ಷಣಕ್ಕೆ ಆತಂಕ ಪಡುವ ಅಗತ್ಯ ಇಲ್ಲ.

ಜನರಲ್‌ ಸ್ಟೋರ್‌ಗಳಲ್ಲೂ ನಂದಿನಿ ಹಾಲಿಗೆ ಹೆಚ್ಚುವರಿ ಹಣ ಪಡೆಯುವಂತಿಲ್ಲ; KMF ಕಟ್ಟಾಜ್ಞೆ

ಕೆಲವು ನಂದಿನಿ ಬೂತ್‌ಗಳು (Nandini retail stores) ಸೇರಿದಂತೆ ಜನರಲ್‌ ಸ್ಟೋರ್‌ಗಳಲ್ಲಿ (General stores) ಗರಿಷ್ಠ ಮಾರಾಟ ದರಕ್ಕಿಂತ (Maximum Retail price) ಹೆಚ್ಚಿನ ಹಣವನ್ನು ಗ್ರಾಹಕರಿಂದ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಕರ್ನಾಟಕ ಹಾಲು ಮಹಾಮಂಡಳಿ (Karnataka Milk Federation- KMF) ಅಧಿಕ ದರ ವಸೂಲಿ ಮಾಡುವವರ ವಿರುದ್ಧ ಗಂಭೀರ ಕ್ರಮದ ಎಚ್ಚರಿಕೆಯನ್ನು ಆಗಸ್ಟ್‌ ತಿಂಗಳಿನಲ್ಲಿಯೇ ಕೆಎಂಎಫ್‌ ನೀಡಿತ್ತು. ಹೀಗಾಗಿ ಅಂತಹ ಪ್ರಕರಣಗಳು ಕಂಡುಬಂದರೆ ಕೆಎಂಎಫ್‌ಗೆ ದೂರು ನೀಡಬಹುದು.

ನಂದಿನಿ ಹಾಲಿಗೆ ಎಂಆರ್‌ಪಿ ದರಕ್ಕಿಂತಲೂ ಹೆಚ್ಚಿಗೆ ವಸೂಲಿ ಮಾಡುತ್ತಿರುವುದು ಹಲವು ಕಡೆಗಳಲ್ಲಿ ಸಾಮಾನ್ಯ ಆಗಿದ್ದು, ಗ್ರಾಹಕರು ವಿಧಿ ಇಲ್ಲದೆ ಖರೀದಿ ಮಾಡುತ್ತಿದ್ದಾರೆ. ಸದ್ಯ ಈ ಪ್ರಕರಣಗಳು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹಾಲು ಮಹಾಮಂಡಳಿ, ಹೆಚ್ಚುವರಿ ವಸೂಲಿ ಮಾಡುವವ ವಿರುದ್ಧ ದೂರು ನೀಡಲು ಮನವಿ ಮಾಡಿದೆ.

ಇದನ್ನೂ ಓದಿ: CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

ನಂದಿನಿ ಪಾರ್ಲರ್‌ಗಳಲ್ಲಿ ಮಾತ್ರ ಅಲ್ಲದೆ ಯಾವುದೇ ಇತರೆ ಸಾಮಾನ್ಯ ಅಂಗಡಿಗಳಲ್ಲಿ ಸಹ ಗರಿಷ್ಠ ಮಾರಾಟದ ದರಕ್ಕಿಂತಲೂ ಹೆಚ್ಚು ಹಣ ಪಡೆಯಬಾರದು. ಹೆಚ್ಚು ಹಣ ಕೇಳಿದರೆ ನಂದಿನಿ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬೇಕಾಗಿ ಕೆಎಂಎಫ್‌ ಎಂಡಿ ಜಗದೀಶ್ ಮನವಿ ಮಾಡಿದ್ದರು.

Exit mobile version