Site icon Vistara News

BBMP Tax: ಏಪ್ರಿಲ್ 1ರಿಂದ ಬೆಂಗಳೂರಲ್ಲಿ ಹೊಸ ಆಸ್ತಿ ತೆರಿಗೆ; ಎಲ್ಲೆಲ್ಲಿ ದುಪ್ಪಟ್ಟು ಟ್ಯಾಕ್ಸ್? ಬಾಡಿಗೆದಾರರಿಗೆ ಭಾರಿ ಬರೆ!

New property BBMP Tax from April 1 double tax and heavy for tenants

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಏಪ್ರಿಲ್ 1 ರಿಂದ ಹೊಸ ಆಸ್ತಿ ತೆರಿಗೆಯನ್ನು (BBMP Tax) ಜಾರಿಗೆ ತರಲು ಸಿದ್ಧತೆ ನಡೆಸುತ್ತಿರುವುದರಿಂದ ವಸತಿ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ (properties for residential and commercial purposes) ಬಾಡಿಗೆಗೆ ಪಡೆದಿರುವವರಿಗೆ ದೊಡ್ಡ ಮಟ್ಟದ ಹೊರೆಯಾಗಲಿದೆ.

ಇದರಿಂದಾಗಿ ಆಸ್ತಿ ತೆರಿಗೆ ಮೌಲ್ಯದ ಹೆಚ್ಚಳದಿಂದಾಗಿ ಈಗಾಗಲೇ ವಾರ್ಷಿಕವಾಗಿ ಹೆಚ್ಚು ಬಾಡಿಗೆ ಪಾವತಿಸುತ್ತಿರುವ ಬಾಡಿಗೆದಾರರಿಗೆ ಮತ್ತೊಂದು ಸಂಕಷ್ಟ ಎದುರಾಗಲಿದೆ. ಅಂದರೆ ಈ ಹೊಸ ವ್ಯವಸ್ಥೆಯಿಂದ ಸ್ವಯಂ-ಆಕ್ರಮಿತ ವಸತಿ ಆಸ್ತಿಗಳಿಗೆ (self occupied residential properties) ಸಂಬಂಧಪಟ್ಟಂತೆ ನೀಡಲಾಗುವ ತೆರಿಗೆ ಮೊತ್ತಕ್ಕಿಂತ ಎರಡು ಪಟ್ಟು ಹೆಚ್ಚುವರಿ ಟ್ಯಾಕ್ಸ್‌ ಅನ್ನು ಬಾಡಿಗೆ ನೀಡುವ ಆಸ್ತಿಗಳ ಮೇಲೆ ವಿಧಿಸಲಾಗಿದೆ. ಈ ನಡುವೆ ವಿವಿಧ ವರ್ಗದ ವಾಣಿಜ್ಯ ಕಟ್ಟಡಗಳಿಗೆ ಸುಂಕವನ್ನು ಮೂರರಿಂದ ಐದು ಪಟ್ಟು ಹೆಚ್ಚಿಸಲಾಗುತ್ತಿದೆ.

ಪ್ರಸ್ತುತ ಜಾರಿಗೊಳಿಸಲಾಗುತ್ತಿರುವ ನಿಯಮವು ಪೇಯಿಂಗ್‌ ಗೆಸ್ಟ್‌,, ಕನ್ವೆನ್ಷನ್ ಹಾಲ್‌ಗಳು ಇಲ್ಲವೇ ಮಾಲ್‌ಗಳಂತಹ ದೊಡ್ಡ ಕಟ್ಟಡಗಳಲ್ಲಿನ ಬಾಡಿಗೆಗೆ ಸಂಬಂಧಪಟ್ಟ ಆಸ್ತಿಗಳಿಗೆ ಸಂಬಂಧಪಡುತ್ತದೆ. ಇದರ ಸಂಬಂಧ ಏಳು ವಿಭಿನ್ನ ಸುಂಕಗಳನ್ನು ಪಟ್ಟಿ ಮಾಡಲಾಗಿದೆ. ಹಾಗಂತ ಹವಾನಿಯಂತ್ರಣ ಅಥವಾ ಎಸ್ಕಲೇಟರ್‌ ಹೊಂದಿರುವುದನ್ನು ಪರಿಗಣಿಸಿಲ್ಲ.

ಈ ಮೌಲ್ಯವನ್ನು ಶೇ. 33 ರಷ್ಟು ಏರಿಕೆ ಮಾಡುವುದರಿಂದ ಬಿಬಿಎಂಪಿಯು ವಾರ್ಷಿಕವಾಗಿ ತೆರಿಗೆಯನ್ನು ಕನಿಷ್ಠ ಶೇ.40 ಏರಿಕೆ ಮಾಡಬಹುದು ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಆಸ್ತಿ ತೆರಿಗೆ ಹೆಚ್ಚಳವನ್ನು ಶೇಕಡಾ 20ಕ್ಕೆ ಸೀಮಿತಗೊಳಿಸಿರುವುದಾಗಿ ಬಿಬಿಎಂಪಿ ತನ್ನ ಹೊಸ ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ. ಆದರೆ ಮುಂದಿನ ಆರ್ಥಿಕ ವರ್ಷದಿಂದ ಈ ತೆರಿಗೆ ಹೆಚ್ಚಳದಲ್ಲಿ ವ್ಯತ್ಯಾಸವಾಗಲಿದೆ ಎನ್ನಲಾಗಿದೆ.

ನಾಗರಿಕರ ಆಕ್ರೋಶ

ಬಾಡಿಗೆ ಕಟ್ಟಡಗಳ ಆಸ್ತಿ ತೆರಿಗೆ ಸುಮಾರು ಒಂಬತ್ತು ಪಟ್ಟು ಗಗನಕ್ಕೇರಿದೆ. ಅಲ್ಲದೆ, ಬಾಡಿಗೆ ಮನೆಗಳು ಅಥವಾ ಫ್ಲ್ಯಾಟ್‌ಗಳ ಮೇಲಿನ ತೆರಿಗೆಯನ್ನು ದ್ವಿಗುಣಗೊಳಿಸಿದರೂ ಬಿಬಿಎಂಪಿ ಯಾವುದೇ ಹೆಚ್ಚುವರಿ ಸೇವೆಗಳನ್ನು ನೀಡುತ್ತಿಲ್ಲ ಎಂಬುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದು ಜನರ ಮೇಲೆ ಹೊರೆ ಹಾಕಿದಂತೆ ಆಗುವುದಿಲ್ಲವೇ ಎಂಬ ಪ್ರಶ್ನೆಯನ್ನು ಇಡುತ್ತಿದ್ದಾರೆ.

ಕರ್ನಾಟಕದ ಬಹುತೇಕ ಎಲ್ಲ ನಗರಗಳಲ್ಲಿ ಮಾರ್ಗದರ್ಶಿ ಮೌಲ್ಯಾಧಾರಿತ ಆಸ್ತಿ ತೆರಿಗೆ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಒಟ್ಟಾರೆಯಾಗಿ, ಆಸ್ತಿ ತೆರಿಗೆ ಸಂಗ್ರಹವು ಶೇಕಡಾ 5 ಕ್ಕಿಂತ ಹೆಚ್ಚಾಗುವುದಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಅಂದಾಜಿಸಿದ್ದಾರೆ.

ಒನ್‌ ಟೈನ್ ಸೆಟ್ಲ್‌ಮೆಂಟ್‌ಗೆ ಅವಕಾಶ

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯನ್ನು ತಪ್ಪಾಗಿ ಘೋಷಿಸಿಕೊಂಡಿರುವ ಆಸ್ತಿ ಮಾಲೀಕರಿಗೆ ಸರ್ಕಾರದ ಆದೇಶದಂತೆ ‘ಒನ್ ಟೈಮ್ ಸೆಟ್ಲ್‌ಮೆಂಟ್’ (One Time Settlement-OTS) ಅನ್ನು ಆನ್‌ಲೈನ್ ಮೂಲಕ ಪಾವತಿಸಲು ಬಿಬಿಎಂಪಿ ಅವಕಾಶ ನೀಡಿದೆ. ಈ ಕುರಿತು ಫೆ. 22ರಂದು ರಾಜ್ಯ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿತ್ತು.

ಅದರಂತೆ ಪಾಲಿಕೆಯ ಆಸ್ತಿ ತೆರಿಗೆಯನ್ನು ಆನ್‌ಲೈನ್ ಮೂಲಕ ಪಾವತಿಸುವ ಸಾಫ್ಟ್‌ವೇರ್‌ನಲ್ಲಿ ಒಟಿಎಸ್ ಅನ್ನು ಪಾವತಿಸಲು ಅವಕಾಶ ಕಲ್ಪಿಸಲಾಗಿದ್ದು, ನಾಗರಿಕರು ಈಗ ಒಟಿಎಸ್‌ ವ್ಯವಸ್ಥೆಯಡಿ ಆನ್‌ಲೈನ್‌ನಲ್ಲಿ ಪಾವತಿ ಮಾಡಬಹುದಾಗಿದೆ.

ಏನಿದರ ಪ್ರಯೋಜನ?

ಬಿಬಿಎಂಪಿಯ ಆನ್‌ಲೈನ್ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆಯಲ್ಲಿ ಒಟಿಎಸ್‌ ಆದೇಶವನ್ನು ಜಾರಿಗೆ ತಂದಿದ್ದು, ನಾಗರಿಕರು ಸಂಪೂರ್ಣ ಬಡ್ಡಿ ಮನ್ನಾ, ವಂಚನೆ ಪ್ರಕರಣಗಳಲ್ಲಿ ಶೇ.50 ರಷ್ಟು ದಂಡ ಕಡಿತ ಹಾಗೂ ವಸತಿ ಮತ್ತು ಮಿಶ್ರ ಬಳಕೆಗೆ ಪ್ರಕರಣಗಳಲ್ಲಿ ಮಾತ್ರ ಗರಿಷ್ಠ 5 ವರ್ಷಗಳ ಮಿತಿ ಪ್ರಯೋಜನವನ್ನು ಪಡೆಯಬಹುದಾಗಿದೆ. ಪಾಲಿಕೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಒಟಿಎಸ್‌ ಪ್ರಯೋಜನವನ್ನು ಪಡೆಯಬಹುದಾಗಿದೆ. ಅಲ್ಲಿಯೇ ಆನ್‌ಲೈನ್‌ ಮೂಲಕ ಪಾವತಿ ಮಾಡಿ ಋಣಮುಕ್ತರಾಗಬಹುದಾಗಿದೆ.

ಎಷ್ಟು ವಸೂಲಿ ಬಾಕಿ ಇದೆ?

ಆಸ್ತಿ ತೆರಿಗೆ ಪಾವತಿ ಸಂದರ್ಭದಲ್ಲಿ 78,254 ಮಾಲೀಕರು ವಲಯ ವರ್ಗೀಕರಣವನ್ನು ತಪ್ಪಾಗಿ ನಮೂದಿಸು ಮೂಲಕ ತೆರಿಗೆಯನ್ನು ಕಡಿಮೆ ಪಾವತಿ ಮಾಡಿರುವ ಕುರಿತು ಬಿಬಿಎಂಪಿ ಗುರುತಿಸಿತ್ತು. ಹೀಗಾಗಿ ಅಂಥವರಿಗೆ ನೋಟಿಸ್‌ ಜಾರಿ ಮಾಡಿದ್ದ ಬಿಬಿಎಂಪಿ, ವ್ಯತ್ಯಾಸದ ಮೊತ್ತ, ದುಪ್ಪಟ್ಟು ದಂಡ ಮತ್ತು ಬಡ್ಡಿ ಪಾವತಿಸುವಂತೆ ಸೂಚನೆ ನೀಡಿತ್ತು. ಈ ಬಗ್ಗೆ ಅಪಸ್ವರಗಳು ಕೇಳಿಬಂದಿತ್ತಾದರೂ 2023ರ ಸೆಪ್ಟಂಬರ್ ಅಂತ್ಯಕ್ಕೆ 7,891 ಮಂದಿ 13,33,12,978 ರೂಪಾಯಿಯನ್ನು ಬಿಬಿಎಂಪಿಗೆ ಪಾವತಿ ಮಾಡಿದ್ದರು. ಆದರೆ, ಈ ಬಗ್ಗೆ ತೀವ್ರವಾಗಿ ವಿರೋಧ ಕೇಳಿ ಬಂದಿದ್ದರಿಂದ ಉಳಿದ 70,633 ಆಸ್ತಿ ಮಾಲೀಕರಿಂದ 440,37,91,005 ರೂಪಾಯಿ ಮೊತ್ತವನ್ನು ವಸೂಲಿ ಮಾಡಲು ಆಗಿರಲಿಲ್ಲ. ಈಗ ಇಂಥವರಿಗೆ ಒನ್‌ ಟೈಮ್ ಸೆಟ್ಲಮೆಂಟ್‌ ಮಾಡಿಕೊಳ್ಳಲು ಅವಕಾಶವನ್ನು ನೀಡಲಾಗಿದೆ.

Exit mobile version