ಬೆಂಗಳೂರು: ನ್ಯೂ ಇಯರ್ ಪಾರ್ಟಿಗಳ ಮೇಲೆ ಭಯೋತ್ಪಾದಕರ ಕರಿನೆರಳು ಚಾಚಿದ್ದು, ಈ ಸಂದರ್ಭದಲ್ಲಿ ಸಿಲಿಕಾನ್ ಸಿಟಿಯಲ್ಲಿ ಕಟ್ಟೆಚ್ಚರ ವಹಿಸಲು ಪೊಲೀಸರು ಮುಂದಾಗಿದ್ದಾರೆ. ಇತ್ತೀಚಿನ ಭಯೋತ್ಪಾದಕ ಚಟುವಟಿಕೆಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಜನಜಂಗುಳಿ ಸೇರಿದ ಸಂದರ್ಭದಲ್ಲಿ ಕೆಲವು ಸಮಾಜಘಾತುಕ ಶಕ್ತಿಗಳು ಅಹಿತಕರ ಘಟನೆಗಳ ಮೂಲಕ ಶಾಂತಿಭಂಗ ಉಂಟುಮಾಡುವ ಸಾಧ್ಯತೆಯಿದ್ದು, ಅಂತಹವರ ಮೇಲೆ ತೀವ್ರ ನಿಗಾ ವಹಿಸುವುದು ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಕಮಿಷನರ್ ಕಚೇರಿಯಿಂದ ಸೂಚನೆ ನೀಡಲಾಗಿದೆ.
ಠಾಣೆಯ ಎಲ್ಲಾ ಹೊಯ್ಸಳ ಮತ್ತು ಚೀತಾಗಳು ಠಾಣೆ ವ್ಯಾಪ್ತಿಯಲ್ಲಿ ಚುರುಕಾದ ಗಸ್ತು ಕರ್ತವ್ಯ ಮಾಡುವುದು, ಗಸ್ತು ಮತ್ತು ಪಾಯಿಂಟ್‌ಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ತಮ್ಮ ಸ್ಥಳದಲ್ಲಿ ಏನಾದರೂ ವಿಶೇಷತೆ ಕಂಡುಬಂದಲ್ಲಿ ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತರಲು ಸೂಚನೆ ನೀಡಲಾಗಿದೆ.
ಹೊಸ ವರ್ಷಕ್ಕೆ ಕೇಂದ್ರ ವಿಭಾಗದ ಭದ್ರತೆಯೇ ಪೊಲೀಸರಿಗೆ ಸವಾಲಾಗಿದೆ. ಇಲ್ಲೇ ಬಹಳಷ್ಟು ಪಬ್ ಹಾಗೂ ರೆಸ್ಟೋರೆಂಟ್‌ಗಳಿವೆ. 31 ಪಬ್, 5 ಡಿಸ್ಕೋಥೆಕ್, 26 ಲೇಡಿಸ್ ಬಾರ್, 13 ಕ್ಲಬ್ ಹಾಗೂ 71 ರೆಸ್ಟೋರೆಂಟ್‌ಗಳು ಕೇಂದ್ರ ಭಾಗದಲ್ಲಿವೆ. ಎಂಜಿ ರಸ್ತೆ, ಹಲಸೂರು, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರಸ್ತೆಯಲ್ಲಿ ಶೇಕಡಾ 30ರಷ್ಟು ಪಬ್ ಮತ್ತು ಲೇಡಿಸ್ ಬಾರ್‌ಗಳಿವೆ. ಇಲ್ಲೆಲ್ಲಾ ಜನಜಂಗುಳಿ ಹೆಚ್ಚಾಗುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಪಹರೆ ನಿಯೋಜಿಸಲಾಗುತ್ತಿದೆ. 1800 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನ ಕೇಂದ್ರ ವಿಭಾಗದಲ್ಲಿ ನಿಯೋಜಿಸಲಾಗುತ್ತಿದೆ.
ಬ್ರಿಗೇಡ್ ರಸ್ತೆ, ಎಂಜಿ ರಸ್ತೆ, ಸುತ್ತಮುತ್ತ ಡ್ರೋಣ್ ಮೂಲಕ ಕಣ್ಗಾವಲು ಇಡಲಾಗುತ್ತಿದ್ದು, ಬೆಂಗಳೂರಿಗೆ ಹೊಸದಾಗಿ ಎಂಟ್ರಿ ಕೊಟ್ಟವರ ಬಯೋಡೇಟಾ ಕಲೆಹಾಕಲು ಪೊಲೀಸರು ಮುಂದಾಗಿದ್ದಾರೆ. ಲಾಡ್ಜ್‌ಗಳಲ್ಲಿ ಬಂದು ನೆಲೆಸಿರುವ ವ್ಯಕ್ತಿಗಳ ಮಾಹಿತಿಗಳನ್ನು ಕಲೆಹಾಕಲಾಗುತ್ತಿದೆ. ಎಲ್ಲಾ ಪಬ್, ಲೇಡಿಸ್ ಬಾರ್‌ಗಳಲ್ಲಿ ಕಟ್ಟುನಿಟ್ಟಿನ ಭದ್ರತೆ ಕೈಗೊಳ್ಳಲು, ಏನೇ ಅಹಿತಕರ ಘಟನೆ ಸಂಭವಿಸಿದರೂ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ | New Year 2023 | ಹೊಸ ವರ್ಷಕ್ಕೂ ನೈತಿಕ ಪೊಲೀಸ್‌ಗಿರಿ ಟೆನ್ಶನ್; ಹಿಂದು ಸಂಘಟನೆಗಳ ಪ್ರಮುಖರಿಗೆ ನೋಟಿಸ್