ಬೆಂಗಳೂರು: ಡಿಸೆಂಬರ್ 31ರ ರಾತ್ರಿ 2024ನೇ ಇಸವಿಯನ್ನು ಎದುರುಗೊಳ್ಳಲು ಬೆಂಗಳೂರು ಸಜ್ಜಾಗಿದೆ. ಬೆಂಗಳೂರಿನ ಎಲ್ಲ ಕಡೆಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ (New Year Celebration) ಮುಗಿಲು ಮುಟ್ಟಲಿದೆ. ಆದರೆ, ಅದು ತುರೀಯ ಸ್ಥಿತಿ ತಲುಪುವುದು ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೆಂಟ್ ಮಾರ್ಕ್ಸ್ ರಸ್ತೆ, ಮತ್ತು ಚರ್ಚ್ ಸ್ಟ್ರೀಟ್‌ನಲ್ಲಿ. ಬೆಂಗಳೂರಿನ ನಾನಾ ಭಾಗಗಳಿಂದ ಲಕ್ಷಾಂತರ ಜನರು ಇಲ್ಲಿಗೆ ಆಗಮಿಸುತ್ತಾರೆ. ಹೀಗಾಗಿ ಸಾರ್ವಜನಿಕರ ಸುರಕ್ಷತೆ ಹಾಗೂ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆ ಬೆಂಗಳೂರಿನಲ್ಲಿ ವಾಹನಗಳ ಸಂಚಾರ ಮಾರ್ಪಾಡು (Vehicle traffic) ಮಾಡಿದೆ. ಕೆಲವು ಕಡೆ ವಾಹನಗಳ ಪ್ರವೇಶವನ್ನೇ ನಿಷೇಧ (Vehicles not allowed) ಮಾಡಿದ್ದರೆ, ಇನ್ನು ಕೆಲವು ಕಡೆ ಸಂಚಾರ ಡೈವರ್ಷನ್‌ಗೆ ಸೂಚಿಸಲಾಗಿದೆ.
ಎಲ್ಲೆಲ್ಲಿ ವಾಹನಗಳ ಪ್ರವೇಶ ನಿಷೇಧ?
ಈ ಕೆಳಗಿನ ಭಾಗಗಳಲ್ಲಿ ಪೊಲೀಸ್ ವಾಹನಗಳು ಹಾಗೂ ಕರ್ತವ್ಯ ನಿರತ ತುರ್ತು ಸೇವಾ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳ ಪ್ರವೇಶ ನಿಷೇಧ ಮಾಡಲಾಗಿದೆ.
- ಎಂ.ಜಿ.ರಸ್ತೆ ಅನಿಲ್ ಕುಂಬ್ಳೆ ವೃತ್ತದಿಂದ ಮೆಯೋ ಹಾಲ್ ಜಂಕ್ಷನ್ ವರೆಗೆ
- ಬ್ರಿಗೇಡ್ ರಸ್ತೆಯಲ್ಲಿ, ಕಾವೇರಿ ಎಂಪೋರಿಯಂ ಜಂಕ್ಷನ್ ನಿಂದ ಅಪೇರಾ ಜಂಕ್ಷನ್‌ವರೆಗೆ
- ಚರ್ಚ್ ಸ್ಟ್ರೀಟ್ರಲ್ಲಿ, ಬ್ರಿಗೇಡ್ ರಸ್ತೆ ಜಂಕ್ಷನ್ ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್ ವರೆಗೆ
- ರೆಸ್ಟ್ ಹೌಸ್ ರಸ್ತೆಯಲ್ಲಿ ಮ್ಯೂಸಿಯಂ ರಸ್ತೆ ಜಂಕ್ಷನ್ ನಿಂದ ಬ್ರಿಗೇಡ್ ರಸ್ತೆ ಜಂಕ್ಷನ್ ವರೆಗೆ
- ರೆಸಿಡೆನ್ಸಿ ಕ್ರಾಸ್ ರಸ್ತೆಯಲ್ಲಿ ರೆಸಿಡೆನ್ಸಿ ರಸ್ತೆ ಜಂಕ್ಷನ್ ನಿಂದ ಎಂ.ಜಿ ರಸ್ತೆ ಜಂಕ್ಷನ್ ವರೆಗೆ (ಶಂಕರ್ ನಾಗ್ ಚಿತ್ರಮಂದಿರ)
- ರೆಸಿಡೆನ್ಸಿ ರಸ್ತೆಯ ಆಶಿರ್ವಾದಂ ಜಂಕ್ಷನ್‌ನಿಂದ ಮೆಯೋ ಹಾಲ್ ಜಂಕ್ಷನ್ ವರೆಗೆ
ಇದನ್ನೂ ಓದಿ: New Year Celebration: ಹೊಸ ವರ್ಷಾಚರಣೆ: ಬಾರ್, ಪಬ್‌ಗಳಿಗೆ ಬಿಗಿ ರೂಲ್; ಹೀಗೆಲ್ಲಾ ಆದರೆ ಲೈಸೆನ್ಸ್ ಕ್ಯಾನ್ಸಲ್!
ಡಿ. 31ರಂದು ರಾತ್ರಿ 8 ಗಂಟೆ ಬಳಿಕ ಇಲ್ಲಿ ಸಂಚಾರ ಮಾರ್ಗ ಬದಲು
1. ಎಂ.ಜಿ ರಸ್ತೆಯಲ್ಲಿ, ಕ್ವೀನ್ಸ್ ವೃತ್ತದ ಕಡೆಯಿಂದ ಹಲಸೂರು ಹಾಗು ಇನ್ನು ಮುಂದಕ್ಕೆ ಹೋಗುವಂತಹ ಚಾಲಕರು ಅನಿಲ್ ಕುಂಬ್ಳೆ ವೃತ್ತದಲ್ಲಿ ಎಡ ತಿರುವು ಪಡೆದು, ಸೆಂಟ್ರಲ್ ಸ್ಟ್ರೀಟ್-ಬಿ.ಆರ್.ವಿ ಜಂಕ್ಷನ್-ಬಲ ತಿರುವು ಕಬ್ಬನ್‌ರಸ್ತೆ ಮೂಲಕ ಸಂಚರಿಸಿ ವೆಬ್‌ಜಂಕ್ಷನ್ ಬಳಿ ಎಂ.ಜಿ ರಸ್ತೆಯನ್ನು ಸೇರಿ ಮುಂದೆ ಸಾಗಬಹುದಾಗಿದೆ.
2. ಹಲಸೂರು ಕಡೆಯಿಂದ ಕಂಟೊನ್ವೆಂಟ್ ಕಡೆಗೆ ಹೋಗುವಂತಹ ವಾಹನಗಳು ಟ್ರಿನಿಟಿ ವೃತ್ತದಲ್ಲಿ ಬಲ ತಿರುವು ಪಡೆದುಕೊಂಡು ಹಲಸೂರು ರಸ್ತೆ-ಡಿಕನ್ಸನ್ ರಸ್ತೆ ಮಾರ್ಗವಾಗಿ ಸಂಚರಿಸಿ ಕಬ್ಬನ್ ರಸ್ತೆಗೆ ಸಾಗುವುದು
3. ಹಲಸೂರು ಕಡೆಯಿಂದ ಮೆಜೆಸ್ಟಿಕ್ ಕಡೆಗೆ ಹೋಗುವಂತಯ ವಾಹನಗಳು ಮೆಯೋಹಾಲ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಕಮೀಷನರೇಟ್ ರಸ್ತೆಯ ಮೂಲಕ ಗರುಡ ಮಾಲ್ ಜಂಕ್ಷನ್, ಡಿಸೋಜಾ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ರಿಚ್ಮಂಡ್ ರಸ್ತೆಯ ಮೂಲಕ ಸಾಗಬಹುದು.