ಚೆನ್ನೈ: ಭಾರತ ಮತ್ತು ಶ್ರೀಲಂಕಾದಲ್ಲಿ ಮಾದಕ ವಸ್ತುಗಳ ಅಕ್ರಮ ಸಾಗಣೆ ಹಾಗೂ ಶಸ್ತ್ರಾಸ್ತ್ರ ವ್ಯಾಪಾರ ಮಾಡುತ್ತಿದ್ದ ಇಬ್ಬರು ಕಿಂಗ್‌ಪಿನ್‌ಗಳು ಸೇರಿ ಶ್ರೀಲಂಕಾದ 9 ಪ್ರಜೆಗಳನ್ನು ತಮಿಳುನಾಡಿನ ತಿರುಚ್ಚಿಯಲ್ಲಿ ಎನ್‌ಐಎ ಅಧಿಕಾರಿಗಳು (NIA Raid) ಸೋಮವಾರ ಬಂಧಿಸಿದ್ದಾರೆ.
ಸಿ.ಗುಣಶೇಖರನ್ ಅಲಿಯಾಸ್ ಗುಣ, ಪುಷ್ಪರಾಜನ್ ಅಲಿಯಾಸ್ ಪೋಕುಟ್ಟಿ ಖನ್ನ ಬಂಧಿತ ಕಿಂಗ್‌ಪಿನ್‌ಗಳಾಗಿದ್ದಾರೆ. ಉಳಿದಂತೆ ಮೊಹಮ್ಮದ್ ಅಸ್ಮಿನ್, ಅಲಹಪ್ಪೆರುಮಗ ಸುನಿಲ್, ಘಮಿನಿ ಫೊನ್ಸೆಕಾ, ಸ್ಟಾನ್ಲಿ ಕೆನ್ನಾಡಿ ಫರ್ನಾಂಡೊ, ಲಾಡಿಯಾ, ಧನುಕ್ಕಾ ರೋಶನ್, ವೆಲ್ಲಾ ಸುರಂಕಾ ಅಲಿಯಾಸ್ ಗಮಗೆ ಸುರಂಗ ಪ್ರದೀಪ್ ಮತ್ತು ತಿಲಿಪನ್ ಅಲಿಯಾಸ್ ದಿಲೀಪನ್ ಸೇರಿ 9 ಮಂದಿಯನ್ನು ಬಂಧಿಸಲಾಗಿದೆ.
ತಮಿಳುನಾಡಿನ ತಿರುಚ್ಚಿಯ ಶ್ರೀಲಂಕಾ ಕ್ಯಾಂಪ್ ಮೇಲೆ ಎನ್‌ಐಏ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಇಬ್ಬರು ಕಿಂಗ್‌ಪಿನ್‌ಗಳ ವಿರುದ್ಧ ಪಾಕಿಸ್ತಾನ ಮೂಲದ ಹಾಜಿ ಸಲೀಂ ಜತೆ ಸೇರಿ ಡ್ರಗ್ ಮಾಫಿಯಾ ಹಾಗೂ ಶ್ರೀಲಂಕಾದ ಎಲ್‌ಟಿಟಿಇ ಉಗ್ರಸಂಘಟನೆ ಬಲವರ್ಧನೆಗೆ ಶಸ್ತ್ರಾಸ್ತ್ರಗಳ ಪೂರೈಕೆ ಮಾಡುತ್ತಿರುವ ಬಗ್ಗೆ ಆರೋಪಗಳಿವೆ.
ಜುಲೈ 8 ರಂದು ಈ ಬಗ್ಗೆ ಎನ್ಐಎ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. ಇದರಲ್ಲಿ ಶ್ರೀಲಂಕಾ ಮೂಲದ ಬಂಧಿತ ಆರೋಪಿ ಅಲಹಪ್ಪೆರುಮಗ ಸುನಿಲ್ ಬೆಂಗಳೂರಿನ ಎಚ್ಎಸ್ಆರ್ ಲೇಔಟ್‌ನಲ್ಲಿ ವಾಸವಾಗಿದ್ದ ಎಂದು ತಿಳಿದುಬಂದಿದೆ. ಬೆಂಗಳೂರು ಸೇರಿ ದಕ್ಷಿಣ ಭಾರತದ ವಿವಿಧ ನಗರಗಳಿಗೆ ಮಾದಕ ವಸ್ತುಗಳ ಸಾಗಣೆ ಹಾಗೂ ಉಗ್ರ ಕೃತ್ಯಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಆರೋಪಿಗಳ ಬಂಧನವಾಗಿದೆ.
ಇದನ್ನೂ ಓದಿ | Rescue Operation | ಕಿಡ್ನ್ಯಾಪ್ ಆಗಿದ್ದ 12 ಗಂಟೆಯೊಳಗೆ ಬಾಲಕನ ರಕ್ಷಿಸಿದ ರೈಲ್ವೆ ಪೊಲೀಸರು