Site icon Vistara News

Nitin Gadkari : ಪೆಟ್ರೋಲ್‌ ಬೆಲೆ ಶೀಘ್ರವೇ 50 ರೂ.ಗೆ ಇಳಿಯಲಿದೆ ಎಂದ ನಿತಿನ್‌ ಗಡ್ಕರಿ

Nitin Gadkari highways

ಬೆಳಗಾವಿ/ಶಿವಮೊಗ್ಗ: ಲೋಕಸಭಾ ಚುನಾವಣೆ (Parliament Election) ಸಮೀಪಿಸುತ್ತಿರುವ ಹೊತ್ತಿನಲ್ಲೇ ರಾಜ್ಯದಲ್ಲಿ 13,458 ಕೋಟಿ ರೂ. ವೆಚ್ಚದ 18 ಹೆದ್ದಾರಿ ಯೋಜನೆಗಳಿಗೆ (18 National high way scheme) ಚಾಲನೆ ದೊರೆತಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ (Nitin Gadkari) ಅವರು ಬೆಳಗಾವಿ ಮತ್ತು ಶಿವಮೊಗ್ಗದಲ್ಲಿ ನಡೆದ ಎರಡು ಕಾರ್ಯಕ್ರಮಗಳ ಮೂಲಕ ಹೆದ್ದಾರಿ ಕ್ರಾಂತಿಗೆ ಅಡಿಗಲ್ಲಿಟ್ಟರು. ಇದೇ ವೇಳೆ ಎಲೆಕ್ಟ್ರಾನಿಕ್‌ ವಾಹನಗಳ ಬಳಕೆ ಹೆಚ್ಚಾಗುತ್ತಿದ್ದಂತೆಯೇ ಮುಂದಿನ ದಿನಗಳಲ್ಲಿ ಪೆಟ್ರೋಲ್‌ ಬೆಲೆ 50 ರೂ.ಗಳಿಗೆ ಇಳಿಯಲಿದೆ ಎಂದರು.

ಬೆಳಗಾವಿಯಲ್ಲಿ 7290 ಕೋಟಿ ರೂ. ವೆಚ್ಚದ 376 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಚಾಲನೆ

ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿತಿನ್ ಗಡ್ಕರಿ ಅವರು ಬೆಳಗಾವಿ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ, ಕೊಪ್ಪಳ, ರಾಯಚೂರು, ಕಲಬುರಗಿ, ಬೀದರ್ ಸೇರಿ 8 ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಕೇಂದ್ರ ಸರ್ಕಾರ ಈ 8 ಜಿಲ್ಲೆಗಳ‌ 376 ಕಿ.ಮೀ ಉದ್ದದ ರಸ್ತೆಗಳಿಗೆ 7290 ಕೋಟಿ ರೂ.ಗಳ ಪ್ಯಾಕೇಜ್ ಬಿಡುಗಡೆ ಮಾಡಿದೆ.

ಈ ವೇಳೆ ಮಾತನಾಡಿದ ನಿತಿನ್ ಗಡ್ಕರಿ ಅವರು, ಬೆಳಗಾವಿ ಮುಂದಿನ ದಿನಗಳಲ್ಲಿ ಎಥೆನಾಲ್‌ ಉತ್ಪಾದನೆ ಅಷ್ಟೇ ಅಲ್ಲ, ವಿಮಾನಗಳ ಇಂಧನ ಉತ್ಪಾದನೆ ಮಾಡುವ ಕೇಂದ್ರವಾಗಲಿದೆ ಎಂದರು.

ಲೋಕೋಪಯೋಗಿ ಸಚಿವರು ಕರ್ನಾಟಕದಲ್ಲಿ ಇಥೆನಾಯಿಲ್ ಬಳಕೆಗೆ ಪ್ರೋತ್ಸಾಹ ಕೊಡಿ ಎಂದು ಕೇಳಿದ್ದಾರೆ. ಇದರಿಂದ ಪೆಟ್ರೋಲ್ ಗಿಂತಲೂ ಕಡಿಮೆ ದರದಲ್ಲಿ ಎಥೆನಾಲ್‌ ಲಭ್ಯವಾಗಲಿದೆ. ಪೆಟ್ರೋಲ್​ನಲ್ಲಿ ಎಥೆನಾಲ್ ಹಾಕಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಥೆನಾಲ್​ನ್ನು ಡೀಸೆಲ್​ನಲ್ಲಿ ಉಪಯೋಗಿಸಲಾಗುವುದು ಎಂದು ಗಡ್ಕರಿ ತಿಳಿಸಿದರು.

ನಿತಿನ್‌ ಗಡ್ಕರಿ ಅವರನ್ನು ಹಾಡಿ ಹೊಗಳಿದ ಸತೀಶ್‌ ಜಾರಕಿಹೊಳಿ

ಸಮಾರಂಭದಲ್ಲಿ ಮಾತನಾಡಿದ ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸತೀಶ್ ಜಾರಕಿಹೊಳಿ ಅವರು ನಿತಿನ್‌ ಗಡ್ಕರಿ ಅವರು ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಅವರನ್ನು ನೋಡಿದರೆ ಹೆಮ್ಮೆ ಆಗುತ್ತದೆ. ನಿತಿನ್ ಗಡ್ಕರಿ ಅಂದರೆ ಸಡಕ್ ಕೆ ಭಾಷಾ ಎಂದು ಕೊಂಡಾಡಿದರು.

ಕಳೆದ 9 ತಿಂಗಳಲ್ಲಿ 5 ಬಾರಿ ಗಡ್ಕರಿ ಅವರನ್ನ ಭೇಟಿ ಮಾಡಿರುವೆ. ರಾಜ್ಯದಲ್ಲಿ ನನೆಗುದ್ದಿಗೆ ಬಿದ್ದಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸೂಚಿಸಿದ್ದಾರೆ. ಅದರಲ್ಲಿ ಕೆಲವೊಂದಿಷ್ಟು ಕಾಮಗಾರಿ ಆರಂಭ ಮಾಡಿದ್ದೇವೆ ಎಂದು ತಿಳಿಸಿದರು. ಕೇಂದ್ರ ರಾಜ್ಯದಲ್ಲಿ ಬೇರೆ ಬೇರೆ ಪಕ್ಷಗಳ ಸರ್ಕಾರ ಇದ್ದಾಗ ದ್ವೇಷದ ಭಾವನೆ ಇರುತ್ತದೆ. ಆದರೆ ನಿತಿನ್ ಗಡ್ಕರಿ ಅವರ ಸಚಿವಾಲಯದಲ್ಲಿ ಹಾಗಾಗಿಲ್ಲ. ಅದು ನಮಗೆ ನಮ್ಮದೇ ಸರ್ಕಾರ ಎನ್ನುವ ಭಾವನೆ ಬರುತ್ತದೆ. ಪಕ್ಷಕ್ಕಿಂತ ರಸ್ತೆ ಅಭಿವೃದ್ಧಿ ಕಾರ್ಯ ಮುಖ್ಯ. ಇದೇ ಕಾರಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಬಿಜೆಪಿ, ಕಾಂಗ್ರೆಸ್ ಶಾಸಕರಿಗೆ ಸಮಾನ ಅನುದಾನ ನೀಡಿದ್ದೇವೆ ಎಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ಈರಣ್ಣ ಕಡಾಡಿ, ಮಂಗಳಾ ಅಂಗಡಿ ಅಮರೇಶ ನಾಯಕ್, ಕರಡಿ ಸಂಗಣ್ಣ, ಪಿ.ಸಿ.ಗದ್ದಿಗೌಡರ್ ಉಪಸ್ಥಿತರಿದ್ದರು.

ಕರ್ನಾಟಕದಲ್ಲಿ ಎರಡು ರೋಪ್‌ ವೇ ನಿರ್ಮಾಣ: ನಿತಿನ್‌ ಗಡ್ಕರಿ

ಬೆಳಗಾವಿ ಕಾರ್ಯಕ್ರಮದ ಬಳಿಕ ಶಿವಮೊಗ್ಗಕ್ಕೆ ಆಗಮಿಸಿದ ನಿತಿನ್‌ ಗಡ್ಕರಿ ಅವರು ಅಲ್ಲಿ 6168 ಕೋಟಿ ರೂ. ವೆಚ್ಚದ 18 ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಎಕ್ಸ್‌ಪ್ರೆಸ್‌ ಹೈ ವೇ ನಿರ್ಮಾಣ ಮಾಡಲಾಗುವುದು ಎಂದು ಪ್ರಕಟಿಸಿದರು. ದೇಶದಲ್ಲಿ 16 ರೋಪ್ ವೇ ನಿರ್ಮಾಣ ಮಾಡಲಾಗುವುದು. ಅದರಲ್ಲಿ ಎರಡು ಕರ್ನಾಟಕದಲ್ಲಿ ನಿರ್ಮಾಣವಾಗಲಿವೆ. ಕೊಡಚಾದ್ರಿಯಿಂದ ಕೊಲ್ಲೂರಿಗೆ ಮತ್ತು ಕೊಪ್ಪಳದಲ್ಲಿ ಅಂಜನಾದ್ರಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡಲಾಗುವುದು ಎಂದರು.

ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಕೇಂದ್ರ ಸಚಿವರು, ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಅವರು ದೇಶಕ್ಕೆ ನಂಬರ್ ಒನ್‌ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಅವರು ನಿರಂತರವಾಗಿ ನನ್ನ ಕಚೇರಿಗೆ ಬಂದು ಭೇಟಿ ಮಾಡಿದ್ದಾರೆ. ರಾಘವೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರಲ್ಲದೆ, ಮುಂದಿನ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸಿ ಎಂದರು.

ಪೆಟ್ರೋಲ್‌ ಬೆಲೆ 50 ರೂ.ಗೆ ಇಳಿಯಲಿದೆ ಎಂದ ಗಡ್ಕರಿ

ಕರ್ನಾಟಕ ಆರ್ಥಿಕವಾಗಿ ಮುಂದುವರಿದಿದೆ. ಕರ್ನಾಟಕದಲ್ಲಿ ಎಲೆಕ್ಟ್ರಾನಿಕ್ ವಾಹನಗಳು ಹೆಚ್ಚೆಚ್ಚು ಬಳಕೆಯಾಗುತ್ತಿವೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ಅನಿಲ ಬಳಕೆಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಎಲೆಕ್ಟ್ರಾನಿಕ್ ವಾಹನಗಳನ್ನು ಹೆಚ್ಚು ಹೆಚ್ಚು ಬಳಕೆ ಮಾಡಬೇಕು. ಆಗ ಪೆಟ್ರೋಲ್ 50 ರೂಪಾಯಿಗೆ ಸಿಗುತ್ತದೆ ಎಂದು ಹೇಳಿದರು.

ರಾಘವೇಂದ್ರ ಅವರು ಸಾಗರದಿಂದ ಮರಕುಟುಕಕ್ಕೆ ರಸ್ತೆ ಕೇಳಿದ್ದಾರೆ. ಅದಕ್ಕೆ ಅನುಮೋದನೆ ನೀಡುತ್ತೇನೆ. ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ ಮಾಡಲು, ಅಧಿಕಾರಿಗಳು ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ನಿತಿನ್‌ ಗಡ್ಕರಿ ಹೇಳಿದರು.

ಕರ್ನಾಟಕಕ್ಕೆ ಸಾಕಷ್ಟು ರಸ್ತೆಗಳನ್ನು ನೀಡಿದ್ದೇನೆ, ಇನ್ನಷ್ಟು ರಾಷ್ಟ್ರೀಯ ಹೆದ್ದಾರಿಗಳನ್ನು ಮುಂದಿನ ದಿನದಲ್ಲಿ ನಿರ್ಮಾಣ ಮಾಡಲಾಗುವುದು. ಬೆಂಗಳೂರು ಟು ಚೆನೈ ಎಕ್ಸ್‌ಪ್ರೆಸ್‌ ರಸ್ತೆ ಶ್ರೀಘ್ರದಲ್ಲೇ ಮುಕ್ತಾಯವಾಗುತ್ತದೆ. ಆಗ ಆಗ ಎರಡು ಗಂಟೆಯಲ್ಲಿ ಚೆನ್ನೈ ತಲುಪಬಹುದು ಎಂದು ಹೇಳಿದರು.

Exit mobile version