Site icon Vistara News

New Year: ಹೊಸ ವರ್ಷಕ್ಕೆ ಬಾರ್‌ ಟೈಮಿಂಗ್‌ ವಿಸ್ತರಣೆ; ನೋ ಅಂದ್ರು ಡಾ. ಪರಮೇಶ್ವರ್

New Year celebration

ಬೆಂಗಳೂರು: ಹೊಸ ವರ್ಷ (New Year) ಸೆಲೆಬ್ರೇಷನ್‌ ದಿನದಂದು ರಾಜ್ಯ ಪೊಲೀಸ್‌ ಇಲಾಖೆ ಸರ್ವ ಸನ್ನದ್ಧವಾಗಿರಬೇಕು. ಡಿಸೆಂಬರ್‌ 31ರಂದು ನಡೆಯುವ ಪಾರ್ಟಿಗಳು ಸೇರಿದಂತೆ ಸಂಭ್ರಮಾಚರಣೆಗೆ ಪಬ್ ಮತ್ತು ಬಾರ್‌ಗಳು ಸುರಕ್ಷತಾ ಕ್ರಮ‌ಗಳನ್ನು ಕೈಗೊಂಡಿವೆಯೇ ಎಂಬುದನ್ನು ಪರಿಶೀಲಿಸಬೇಕು. ಬಹುಮುಖ್ಯವಾಗಿ ಮದ್ಯದ ಅಂಗಡಿಗಳಿಗೆ ಎಂದಿಗಿಂತ ಹೆಚ್ಚಿನ ಸಮಯಾವಕಾಶ ನೀಡುವುದು ಬೇಡ ಎಂದು‌ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಸೂಚಿಸಿದ್ದಾರೆ.

ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪೊಲೀಸ್ ಇಲಾಖೆ, ಆರೋಗ್ಯ, ಅಬಕಾರಿ ಇಲಾಖೆ, ಬಿಬಿಎಂಪಿ, ಬಿಎಂಆರ್‌ಸಿಎಲ್‌, ಬಿಎಂಟಿಸಿಯ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ‌ಹೊಸ ವರ್ಷದ ಸೆಲೆಬ್ರೇಷನ್‌ಗೆ ಬೆಂಗಳೂರಿನ ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಎಲೆಕ್ಟ್ರಾನಿಕ್ ಸಿಟಿ, ಇಂದಿರಾನಗರ ಹಾಗೂ ಶಾಪಿಂಗ್ ಮಾಲ್, ಸ್ಟಾರ್ ಹೋಟೆಲ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಸಾಧ್ಯತೆ ಇದೆ. ಹೀಗಾಗಿ ಎಲ್ಲ ರೀತಿಯ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಬೇಕು. ಇದರ ಜತೆಗೆ ರಾಜ್ಯದ ಪ್ರಮುಖ ನಗರಗಳಲ್ಲಿಯೂ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ‌ ನೀಡಿದರು.

ಎಂಜಿ.ರಸ್ತೆ, ಬ್ರಿಗೇಡ್ ರೋಡ್, ಇಂದಿರಾನಗರ, ಎಲೆಕ್ಟ್ರಾನಿಕ್ ಸಿಟಿಗಳಲ್ಲಿ‌ನ ರಸ್ತೆಗಳಲ್ಲಿ ಪಬ್‌ ಮತ್ತು ಬಾರ್, ಶಾಪಿಂಗ್ ಮಾಲ್, ಸ್ಟಾರ್ ಹೋಟೆಲ್‌ಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಿದ್ದಾರೆ. ಇದರಿಂದ ಅವಘಡಗಳಾಗುವ ಸಾಧ್ಯತೆ ಇರುತ್ತದೆ. ಅಗ್ನಿಶಾಮಕ ದಳ‌ ಸಿಬ್ಬಂದಿ ಅಲರ್ಟ್ ಆಗಿರಬೇಕು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಹೇಳಿದರು.

New Year celebration

ಹೊರಗಿಂದ ಬರುವವರ ಮೇಲೆ ನಿಗಾ ಇಡಿ

ರಾಜ್ಯದಲ್ಲಿ ಉಗ್ರ ಚಟುವಟಿಕೆ ನಡೆಯುವ ಬಗ್ಗೆ ಶಂಕೆ ಇದೆ. ಎನ್‌ಐಎ ಅಧಿಕಾರಿಗಳು ಕಳೆದೊಂದು ತಿಂಗಳಿನಿಂದ ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ದಾಳಿ‌ ನಡೆಸಿ, ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ. ಕ್ರಿಸ್‌ಮಸ್ ಹಬ್ಬ, ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಹೊರಗಡೆಯಿಂದ ಬರುವವರ ಚಲನವಲನಗಳ ಬಗ್ಗೆ ಸೂಕ್ತ ನಿಗಾವಹಿಸಬೇಕು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಹೇಳಿದರು.

ತುರ್ತು ಚಿಕಿತ್ಸೆಗಾಗಿ ಅಲರ್ಟ್ ಇರಿ

ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಬೇಕು. ಹೊಸ ವರ್ಷ ಆಚರಿಸಲು ಜನ ಸೇರುವ ಪ್ರಮುಖ ಸ್ಥಳಗಳನ್ನು ಗುರುತಿಸಿ, ಪೊಲೀಸ್ ಅಧಿಕಾರಿಗಳು ಪರಿಶೀಲಿಸಬೇಕು. ಎಸ್‌ಡಿಆರ್‌ಎಫ್‌ ತಂಡಗಳು ಇರಬೇಕು. ಎಂ.ಜಿ.ರಸ್ತೆ, ಬ್ರಿಗೇಡ್ ರೋಡ್‌ಗಳಲ್ಲಿ ಬಿಬಿಎಂಪಿಯವರು ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ತೆರೆಯಬೇಕು. ನಗರದ ಎಲ್ಲ ವಿಭಾಗದ ಡಿಸಿಪಿಗಳು ಸ್ಥಳೀಯ ಆಸ್ಪತ್ರೆಗಳಿಗೆ ಭೇಟಿ ನೀಡಿ, ಡಿಸೆಂಬರ್ 31ರ ತಡರಾತ್ರಿ ತುರ್ತು ಚಿಕಿತ್ಸೆಗಾಗಿ ಅಲರ್ಟ್ ಇರುವಂತೆ ತಿಳಿಸಬೇಕು ಎಂದು ಡಾ. ಜಿ. ಪರಮೇಶ್ವರ್‌ ಸೂಚನೆ ನೀಡಿದರು.

ತಾತ್ಕಾಲಿಕ ಪೊಲೀಸ್ ಹೆಲ್ಪ್‌ಡೆಸ್ಕ್

ನ್ಯೂ ಇಯರ್ ಸೆಲೆಬ್ರೇಷನ್‌ಗಾಗಿ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ತಾತ್ಕಾಲಿಕ “ಪೊಲೀಸ್ ಹೆಲ್ಪ್ ಡೆಸ್ಕ್” ತೆರೆಯಬೇಕು. ಈ ಬಗ್ಗೆ ಜನರಿಗೆ ಅನೌನ್ಸ್‌ಮೆಂಟ್ ಮಾಡಬೇಕು. ಮೆಟ್ರೋ ರೈಲುಗಳು ಹೆಚ್ಚಿನ ಅವಧಿಯವರೆಗೆ ಸಂಚರಿಸಲಿ. ಅಲ್ಲದೆ, ಬಿಎಂಟಿಸಿ ವತಿಯಿಂದ ಪ್ರತ್ಯೇಕ ಬಸ್‌ಗಳನ್ನು ಬಿಡಬೇಕು. ಖಾಸಗಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಡಾ. ಜಿ. ಪರಮೇಶ್ವರ್‌ ಸೂಚನೆ ನೀಡಿದರು.

ಇದನ್ನೂ ಓದಿ: Covid Subvariant JN1: ಕೋವಿಡ್‌ ಉಲ್ಬಣ; ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚನೆ

ಸಭೆಯಲ್ಲಿ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾಶಂಕರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ನಗರ ಪೊಲೀಸ್ ಆಯುಕ್ತ ದಯಾನಂದ್, ಅಗ್ನಿಶಾಮಕ ವಿಭಾಗದ ಮುಖ್ಯಸ್ಥ ಕಮಲ್ ಪಂತ್, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಸೇರಿದಂತೆ ಮತ್ತಿತರ ಹಿರಿಯ ಅಧಿಕಾರಿಗಳು ಹಾಜರಿದ್ದರು.

Exit mobile version