Site icon Vistara News

Load Shedding: ಬೇಸಿಗೆಯಲ್ಲಿ ಲೋಡ್‌ ಶೆಡ್ಡಿಂಗ್‌ ಇಲ್ಲ; ಇಂಧನ ಸಚಿವ ಜಾರ್ಜ್‌ ಕೊಟ್ಟ 12 ಕಾರಣ!

Load shedding No load shedding in summer 12 reasons given by Energy Minister George

ಬೆಂಗಳೂರು: ಬೇಸಿಗೆಯಲ್ಲಿ ಸಮರ್ಪಕ ವಿದ್ಯುತ್‌ ಪೂರೈಕೆ (Power supply in summer) ನಮ್ಮ ಸರ್ಕಾರದ ಆದ್ಯತೆಯಾಗಿದ್ದು, ಇದಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಯಾವುದೇ ಕಾಣರಕ್ಕೂ ಲೋಡ್‌ ಶೆಡ್ಡಿಂಗ್‌ (Load Shedding) ಮಾಡುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ (KJ George) ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಇಂಧನ ಸಚಿವ ಜಾರ್ಜ್‌, “ಸದ್ಯ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಬಿಕ್ಕಟ್ಟಿಲ್ಲ. ಜನರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು” ಎಂದಿದ್ದಾರೆ.

“ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚುವುದು ನಿರೀಕ್ಷಿತ. ಅದಕ್ಕಾಗಿಯೇ ಬಹಳ ಮುಂಚಿತವಾಗಿ ಸರಿಯಾದ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ರಾಜ್ಯದ ಯಾವುದೇ ವರ್ಗದ ಗ್ರಾಹಕರಿಗೆ ಲೋಡ್‌ ಶೆಡ್ಡಿಂಗ್‌ ಬಿಸಿ ತಟ್ಟದಂತೆ ಇಲಾಖೆ ಎಚ್ಚರವಹಿಸಿದೆ” ಎಂದು ತಿಳಿಸಿದ್ದಾರೆ.

“ರಾಜ್ಯದಲ್ಲಿ ಪ್ರತಿ ದಿನದ ವಿದ್ಯುತ್ ಬಳಕೆ 329 ಮಿಲಿಯನ್ ಯೂನಿಟ್‌ನಷ್ಟಿದ್ದು – ಹಿಂದಿನ ವರ್ಷ ಇದೇ ಅವಧಿಯ ವಿದ್ಯುತ್‌ ಬಳಕೆ ಪ್ರಮಾಣ 300 ಮಿ.ಯೂ. ನಷ್ಟಿತ್ತು. ಕಳೆದ ವರ್ಷದ ಗರಿಷ್ಠ ಲೋಡ್ 15300+ ಮೆ.ವ್ಯಾ. ಆಗಿದ್ದರೆ, ಈ ವರ್ಷದ ಗರಿಷ್ಠ ಲೋಡ್ 17000+ ಮೆ.ವ್ಯಾ.ಗೆ ಏರಿದೆ,” ಎಂದು ಕೆ.ಜೆ. ಜಾರ್ಜ್‌ ವಿವರಿಸಿದ್ದಾರೆ.

“ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಓದಲು ತೊಂದರೆಯಾಗದಂತೆ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದೆ. ಈಗಾಗಲೇ ಕೃಷಿ ಪಂಪ್‌ಸೆಟ್‌ಗಳಿಗೆ 7 ತಾಸು ವಿದ್ಯುತ್‌ ಪೂರೈಕೆಗೆ ಆದೇಶ ನೀಡಲಾಗಿದೆ. ಬೇಸಿಗೆ ಕಾರಣದಿಂದ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳಲಾಗುವುದು,”ಎಂದು ಕೆ.ಜೆ. ಜಾರ್ಜ್‌ ತಿಳಿಸಿದ್ದಾರೆ.

ಲೋಡ್‌ ಶೆಡ್ಡಿಂಗ್‌ ಏಕಿಲ್ಲ; ಇಲ್ಲಿದೆ 12 ಕಾರಣ

  1. 2024ನೇ ಸಾಲಿನ ಮಾರ್ಚ್ ಮತ್ತು ಏಪ್ರಿಲ್‌ ತಿಂಗಳ ಬೇಡಿಕೆಗೆ ಅನುಗುಣವಾಗಿ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಗರಿಷ್ಠ ಉತ್ಪಾದನೆಗೆ ಒತ್ತು ನೀಡಲಾಗಿದೆ.
  2. ಉಷ್ಣ ವಿದ್ಯುತ್ ಸ್ಥಾವರಗಳು ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯ ಮುಖ್ಯ ಆಧಾರವಾಗಿದ್ದು, ರಾಜ್ಯದ 3 ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಕಳೆದ ವರ್ಷ ಗರಿಷ್ಠ 22,000 ಮಿ.ಯೂ. ವಿದ್ಯುತ್ ಉತ್ಪಾದನೆಯಾಗಿದೆ (ಹಿಂದಿನ ಗರಿಷ್ಠ- ಕಳೆದ ವರ್ಷ 18,000 ಮಿ.ಯೂ. ಆಗಿತ್ತು) ಪ್ರಸ್ತುತ 3,250 ಮೆ.ವ್ಯಾ ಅಥವಾ ದಿನಕ್ಕೆ 75 ಮಿ.ಯೂ.ನಂತೆ ವಿದ್ಯುತ್‌ ಉತ್ಪಾದನೆ ಆಗುತ್ತಿದೆ.
  3. ಈ ಬಾರಿ ಮಳೆ ಅಭಾವದಿಂದ ಜಲಾಶಯಗಳು ಕೇವಲ ಅರ್ಧದಷ್ಟು ತುಂಬಿರುವ ಕಾರಣ ನೀರನ್ನು ಸಂರಕ್ಷಿಸಿ, ಬಹಳ ಎಚ್ಚರಿಕೆಯಿಂದ ಬಳಸಲಾಗುತ್ತಿದೆ. ಹಾಗಾಗಿ, ಜಲ ವಿದ್ಯುತ್‌ ಉತ್ಪಾದನೆ ಕೊಂಚ ಮಟ್ಟಿಗೆ ಕುಂಠಿತಗೊಂಡಿದ್ದರೂ, ಮಾರ್ಚ್ ಮತ್ತು ಏಪ್ರಿಲ್‌ನ ಹೆಚ್ಚಿನ ಬೇಡಿಕೆಯ ಅವಧಿಯಲ್ಲಿ (ದಿನಕ್ಕೆ 20 ಮಿ.ಯೂ. ಅಥವಾ 1000 ಮೆ.ವ್ಯಾ.) ಲಭ್ಯವಿದೆ.
  4. ಉತ್ತರ ಪ್ರದೇಶ, ಪಂಜಾಬ್ ಜತೆಗೆ 2024ರ ಜೂನ್‌ನಲ್ಲೇ ದ್ವಿಪಕ್ಷೀಯ ವಿನಿಮಯ ಒಪ್ಪಂದ ಮಾಡಿಕೊಳ್ಳುವ ಮೂಲಕ ಮುನ್ನೆಚ್ಚರಿಕೆ ವಹಿಸಲಾಗಿದೆ. ಈ ರಾಜ್ಯಗಳಿಂದ ವಿನಿಮಯ ಆಧಾರದ ಮೇಲೆ ಪ್ರತಿದಿನ ಸರಾಸರಿ 900 ಮೆ.ವ್ಯಾ. ವಿದ್ಯುತ್‌ ಪಡೆಯಲಾಗುತ್ತಿದೆ. (ಮುಂದಿನ ವರ್ಷ ಆ ರಾಜ್ಯಗಳಿಗೆ ವಿದ್ಯುತ್‌ ಹಿಂದಿರುಗಿಸಲಾಗುವುದು).
  5. ವಿದ್ಯುತ್‌ ಕಾಯ್ದೆಯ ಸೆಕ್ಷನ್ 11 ಜಾರಿಗೊಳಿಸಿ, ಖಾಸಗಿ ವಿದ್ಯುತ್ ಉತ್ಪಾದಕರಿಂದ ವಿದ್ಯುತ್‌ ಖರೀದಿ ಮಾಡಲಾಗುತ್ತಿದೆ. ಪ್ರಸ್ತುತ 500 ಮೆ.ವ್ಯಾ. ವಿದ್ಯುಚ್ಛಕ್ತಿಯನ್ನು ಖಾಸಗಿ ಉತ್ಪಾದಕರಿಂದ ಪಡೆಯಲಾಗುತ್ತಿದೆ.
  6. ಸೌರ ಮತ್ತು ಪವನ ವಿದ್ಯುತ್ ಸ್ಥಾವರಗಳು (ಬಹುತೇಕ ಖಾಸಗಿ ವಲಯ) ಸಾಮಾನ್ಯವಾಗಿ ‘ಮಸ್ಟ್‌ ರನ್‌’ ಆಧಾರದ ಮೇಲೆ ನಡೆಯುತ್ತವೆ. ಹವಾಮಾನ ಬದಲಾವಣೆಗೆ ಅನುಗುಣವಾಗಿ ಈ ಸ್ಥಾವರಗಳಿಂದ ಉತ್ಪಾದನೆ ಆಗುವ ವಿದ್ಯುತ್‌ ರಾಜ್ಯಕ್ಕೆ ಲಭ್ಯವಿರುತ್ತದೆ.
  7. ರಾಜ್ಯಕ್ಕೆ ಹೆಚ್ಚುವರಿ ವಿದ್ಯುತ್ತಿನ ಅಗತ್ಯ ಇದೆ ಎಂದು ಮನವರಿಕೆ ಮಾಡಿಕೊಟ್ಟು, ಕೇಂದ್ರ ಗ್ರಿಡ್‌ನಿಂದ ಈ ವರ್ಷವೂ (302 ಮೆ.ವ್ಯಾ.) ವಿದ್ಯುತ್ ಪಡೆಯಲಾಗಿದೆ. ಕಳೆದ ವರ್ಷ ಕೇಂದ್ರ ಗ್ರಿಡ್‌ಗೆ ಒಪ್ಪಿಸಲಾಗಿದ್ದ 150 ಮೆಗಾವ್ಯಾಟ್ ವಿದ್ಯುಚ್ಛಕ್ತಿಯನ್ನೂ ವಾಪಸ್ ಪಡೆದಿದ್ದೇವೆ. ಈ ಹೆಚ್ಚುವರಿ ವಿದ್ಯುತ್, ಡಿಸೆಂಬರ್ ತಿಂಗಳಿನಿಂದ ರಾಜ್ಯಕ್ಕೆ ಲಭ್ಯವಾಗಿದೆ.

ಇದನ್ನೂ ಓದಿ: Karnataka Weather : ಕರಾವಳಿ, ಮಲೆನಾಡಲ್ಲಿ ಸಾಧಾರಣ ಮಳೆ; ಬೆಂಗಳೂರಲ್ಲಿ ಹೇಗೆ?

  1. ಕೇಂದ್ರೀಯ ಉತ್ಪಾದನಾ ಕೇಂದ್ರ (ಸಿಜಿಎಸ್‌)ಗಳಿಂದ ರಾಜ್ಯದ ಪಾಲು (ಅಂದಾಜು 4,000 ಮೆ.ವ್ಯಾ.ವಿದ್ಯುತ್‌) ಪಡೆಯಲಾಗಿದ್ದು, ಅವರೊಂದಿಗೆ ಉತ್ತಮ ಸಮನ್ವಯವನ್ನು ಕಾಪಾಡಿಕೊಳ್ಳಲಾಗಿದೆ.
  2. ಅನಿರೀಕ್ಷಿತ ಅಥವಾ ಹಠಾತ್‌ ವಿದ್ಯುತ್‌ ಬೇಡಿಕೆಯನ್ನು ಪೂರೈಸಲು, ಕೇಂದ್ರ ಸರ್ಕಾರವು ನಿಗದಿಪಡಿಸಿರುವಂಥ ವಿದ್ಯುತ್ ವಿನಿಮಯ ಕೇಂದ್ರದಿಂದ ಪಾರದರ್ಶಕವಾಗಿ ವಿದ್ಯುತ್ ಖರೀದಿಸಲಾಗುತ್ತಿದೆ.
  3. ರಾಜ್ಯದಾದ್ಯಂತ ಸಮರ್ಪಕ ವಿದ್ಯುತ್ ಸರಬರಾಜಿನ ಮೇಲ್ವಿಚಾರಣೆಗೆ ಪ್ರತಿ ಜಿಲ್ಲೆಗೆ ಮುಖ್ಯ ಇಂಜಿನಿಯರ್ ಶ್ರೇಣಿಯ ಅಧಿಕಾರಿಗಳನ್ನು ನೇಮಿಸಲಾಗಿದೆ. ಇಂಧನ ಸಚಿವರು ಹಾಗೂ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ನಿರ್ದೇಶನದಂತೆ ಎಸ್ಕಾಂಗಳು, ಕೆಪಿಟಿಸಿಎಲ್‌ ಹಾಗೂ ರಾಜ್ಯದ ಲೋಡ್‌ ಡಿಸ್ಪ್ಯಾಚ್ ಸೆಂಟರ್‌ಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಿಗಳು ವಿದ್ಯುತ್‌ ಸರಬರಾಜಿನ ಬಗ್ಗೆ ನಿಗಾ ವಹಿಸಿದ್ದಾರೆ.
  4. ಕಲ್ಲಿದ್ದಲು ಸಚಿವಾಲಯದಿಂದ ಹೆಚ್ಚುವರಿ ಕಲ್ಲಿದ್ದಲನ್ನು ಸಕಾಲದಲ್ಲಿ ಪಡೆಯಲಾಗಿದೆ; ಮತ್ತು ಆಮದು ಮಾಡಿದ ಹೆಚ್ಚಿನ ವಿದೇಶಿ ಕಲ್ಲಿದ್ದಲನ್ನು ದೇಶೀಯ ಕಲ್ಲಿದ್ದಲಿನೊಂದಿಗೆ ಮಿಶ್ರಣ ಮಾಡಲಾಗುತ್ತಿದೆ.
  5. 370 ಮೆ.ವ್ಯಾ.ಸಾಮರ್ಥ್ಯದ ಯಲಹಂಕ ಅನಿಲ ಸ್ಥಾವರದಲ್ಲಿ ಶೀಘ್ರದಲ್ಲೇ ಉತ್ಪಾದನೆ ಆರಂಭವಾಗಲಿದೆ.
Exit mobile version