Site icon Vistara News

ಪ್ರಧಾನಿ ನರೇಂದ್ರ ಮೋದಿ ಸಂಚರಿಸಿದ ರಸ್ತೆಗಳೀಗ ಆ್ಯಕ್ಸಿಡೆಂಟ್ ಜೋನ್: ಹಂಪ್‌ಗೆ ಬೇಡಿಕೆಯಿಟ್ಟ ವಿವಿ

ರಸ್ತೆ ಕುಸಿತ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಪ್ರವಾಸದ ವೇಳೆ ಸಂಚರಿಸಿದ ರಸ್ತೆಗಳ ಡಾಂಬರ್‌ ಕಳಪೆಯಾಗಿತ್ತು ಎಂಬ ಸುದ್ದಿಯ ಬೆನ್ನಲ್ಲೆ ಇದೀಗ ಆ ರಸ್ತೆಗಳು ಆ್ಯಕ್ಸಿಡೆಂಟ್‌ ವಲಯಗಳಾಗಿವೆ. ಬೆಂಗಳೂರು ವಿಶ್ವವಿದ್ಯಾನಿಲಯ ಆವರಣದಲ್ಲಿ ಹೊಸದಾಗಿ ನಿರ್ಮಾಣವಾದ ರಸ್ತೆಗಳಲ್ಲಿ ನಿತ್ಯ ಅಪಘಾತಗಳಾಗುತ್ತಿವೆ ಎಂದು ಬಿಬಿಎಂಪಿಗೆ ಬೆಂಗಳೂರು ವಿಶ್ವವಿದ್ಯಾಲಯ ಪತ್ರ ಬರೆದಿದೆ.

ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿರುವ ಡಾ. ಬಿ.ಆರ್‌. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (ಬೇಸ್‌) ಕ್ಯಾಂಪಸ್‌ ಉದ್ಘಾಟನೆ ಹಾಗೂ ಡಾ. ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆ ಲೋಕಾರ್ಪಣೆ ಮಾಡಲು ಮೋದಿ ಜೂನ್‌ 20ರಂದು ಆಗಮಿಸಿದ್ದರು. ಪ್ರಧಾನಿಯವರು ಸಾಗುವ ದೈಹಿಕ ಶಿಕ್ಷಣ ವಿಭಾಗ ರಸ್ತೆ, ಮರಿಯಪ್ಪನ ಪಾಳ್ಯ ರಸ್ತೆ, ಗಾಂಧಿ ಭವನ ರಸ್ತೆ ಮತ್ತು ಮೈಸೂರು ರಸ್ತೆಯಿಂದ ಉಲ್ಲಾಳ ಜಂಕ್ಷನ್‌ವರೆಗೆ ಒಟ್ಟು ಸುಮಾರು 7 ಕಿ.ಮೀ ಮಾರ್ಗದಲ್ಲಿ ಬಿಬಿಎಂಪಿ ಡಾಂಬರ್‌ ಹಾಕಿತ್ತು.

ಪ್ರಧಾನಿಯವರ ಕಾರು ಸಲೀಸಾಗಿ ಸಾಗಲಿ ಎಂಬ ಕಾರಣಕ್ಕೆ, ಹೊಸದಾಗಿ ಡಾಂಬರ್‌ ಹಾಕಿದ್ದ ರಸ್ತೆ ಮೇಲೆ ಇದ್ದ ಎಲ್ಲ ಹಂಪ್‌ಗಳನ್ನು (ರಸ್ತೆ ಉಬ್ಬು) ಬಿಬಿಎಂಪಿ ತೆಗೆದುಹಾಕಿತ್ತು.

ಇದನ್ನೂ ಓದಿ | ಮೋದಿ ಪ್ರವಾಸದ ವೇಳೆ ಕಳಪೆ ರಸ್ತೆ ನಿರ್ಮಾಣ; ಗುತ್ತಿಗೆದಾರನಿಗೆ ಬಿತ್ತು 3 ಲಕ್ಷ ರೂ. ದಂಡ

ದಿನಂಪ್ರತಿ ಅಪಘಾತಗಳು

ವಿವಿ ಆವರಣದೊಳಗೆ ರಸ್ತೆಯಲ್ಲಿದ್ದ 22 ಹಂಪ್‌ಗಳನ್ನು ತೆಗೆದು ಹಾಕಿದ್ದರಿಂದ ವಾಹನ ಸವಾರರಿಗೆ ಅನುಕೂಲವಾಗಿದೆ. ಆದರೆ ಹಂಪ್‌ಗಳ ಕಾಟವಿಲ್ಲದೆ ಸರಾಗವಾಗಿ ಸಾಗುವ ರಸ್ತೆಯಲ್ಲಿ ವೇಗವಾಗಿ ವಾಹನ ಚಲಾಯಿಸುವ ಕಾರಣಕ್ಕೆ ಇದು ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಪ್ರತಿದಿನ 3-4 ಅಪಘಾತ ಪ್ರಕರಣ ದಾಖಲಾಗುತ್ತಿವೆ. ಜೂನ್ 18ರಂದು ರಸ್ತೆಯಲ್ಲಿದ್ದ ಹಂಪ್‌ ತೆರವು ಮಾಡಿ 10 ದಿನ ಕಳೆದರೂ ಮತ್ತೆ ಹಂಪ್‌ ಹಾಕಲು ಬಿಬಿಎಂಪಿ ಮೀನಮೇಷ ಎಣಿಸುತ್ತಿದೆ.

ಈ ಕುರಿತು ಬೆಂಗಳೂರು ವಿವಿ ಇಂಜಿನಿಯರ್‌, ಬಿಬಿಎಂಪಿ ರಾಜರಾಜೇಶ್ವರಿನಗರದ ಕಾರ್ಯಪಾಲಕ ಇಂಜಿನಿಯರ್‌ಗೆ ಪತ್ರ ಬರೆದಿದ್ದಾರೆ. ಪ್ರತಿದಿನ 2-3 ಅಪಘಾತ ಪ್ರಕರಣಗಳು ಈ ರಸ್ತೆಯಲ್ಲಿ ವರದಿಯಾಗುತ್ತಿವೆ. ಹಂಪ್‌ ಹಾಕುವಂತೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ಒತ್ತಡ ಬರುತ್ತಿದೆ. ಹಾಸ್ಟೆಲ್‌ ಪ್ರಧಾನ ಕ್ಷೇಮಪಾಲಕರೂ ಈ ಬಗ್ಗೆ ಮನವಿ ಮಾಡಿದ್ದಾರೆ. ಇಲ್ಲಿ ಆಗುತ್ತಿರುವ ಅಪಘಾತಗಳನ್ನು ತಪ್ಪಿಸಲು ಹಂಪ್‌ಗಳನ್ನು ಪುನಃ ಹಾಕಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಪಾಲಿಕೆಗೆ ಪತ್ರ ಬರೆದ ಬೆಂಗಳೂರು ವಿವಿ ಇಂಜಿನಿಯರ್

ಇದನ್ನೂ ಓದಿ | ಬೆಂಗಳೂರು ರಸ್ತೆಗೆ ಬಂದಿಳಿದ ಮಂಗಳ ಗ್ರಹ !

Exit mobile version