ಬೆಂಗಳೂರು: ಪ್ರಾಕೃತಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸಿ, ಸುಸ್ಥಿರ ಅಭಿವೃದ್ಧಿಗೆ ಪೂರಕವಾಗುವ ನವೋದ್ಯಮಗಳನ್ನು ಉತ್ತೇಜಿಸುವ ಜತೆಗೆ ತಾಂತ್ರಿಕ, ಬಂಡವಾಳದ ವಿಚಾರದಲ್ಲಿ ನೆರವಾಗಲು ಇಕೋ ಯೂತ್ ಸ್ಟಾರ್ಟ್-ಅಪ್ ಶೃಂಗಸಭೆ ಮತ್ತು ಸ್ಪರ್ಧೆ ಆಯೋಜಿಸಲಾಗಿದೆ.
ಇದನ್ನೂ ಓದಿ | Explainer: Cannes Film Festival ಮಿಂಚುತ್ತಿರುವ ಭಾರತ, ಏನಿದರ ವಿಶೇಷತೆ?
ಪರ್ಯಾವರಣ ಗತಿವಿಧಿ, ಸಿ.ಎಂ.ಆರ್ ಯೂನಿವರ್ಸಿಟಿ ಹಾಗೂ ರೈನ್-ಮ್ಯಾಟರ್ ಫೌಂಡೇಶನ್ ನೇತೃತ್ವದಲ್ಲಿ ಆಯೋಜಿಸಲಾಗಿರುವ ಈ ಶೃಂಗಸಭೆ ಕುರಿತ ಪತ್ರಿಕಾಗೋಷ್ಠಿಯಲ್ಲಿ ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ರಿಕಿ ಕೇಜ್ ಹಾಗೂ ಜಿರೋಧಾ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಭಾಗವಹಿಸಿದ್ದರು.
ಲಾಭ ಗಳಿಕೆಯ ಜತೆಗೆ ಹವಾಮಾನ ವೈಪರೀತ್ಯದ ನಷ್ಟ ತಗ್ಗಿಸುವ ಪ್ರಯತ್ನ ಉದ್ಯಮಿಗಳದ್ದಾಗಬೇಕು ಎಂದು ರಿಕಿ ಕೇಜ್ ಹೇಳಿದರೆ, ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಬೇಕೆಂದು ನಿಖಿಲ್ ಕಾಮತ್ ನುಡಿದರು.
ಆಗಸ್ಟ್ 19-20ರಂದು ಶೃಂಗಸಭೆ ನಡೆಯಲಿದ್ದು, ಅಂದೇ ಅಂತಿಮ ಸ್ಪರ್ಧೆ ನಡೆಯಲಿದೆ. ಜೂನ್ 15ರಿಂದ ಜುಲೈ 31 ರವರೆಗೆ ಆನ್-ಲೈನ್ ಅರ್ಜಿ ಸಲ್ಲಿಸಲು ಸ್ಪರ್ಧಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಪ್ಲಾಸ್ಟಿಕ್ ಗೆ ಪರ್ಯಾಯಗಳು, ಇಂಧನ, ತ್ಯಾಜ್ಯ ನಿರ್ವಹಣೆ, ವಸ್ತುಗಳ ಪುನರ್ ಬಳಕೆ, ನೀರಿನ ಸದ್ಬಳಕೆ ಸೇರಿದಂತೆ ಇಂತಹ ಇತರೆ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರು ಅರ್ಜಿ ಸಲ್ಲಿಸಬಹುದು.
ಇಲ್ಲಿ ಪರಿಸರ ಕಾಳಜಿ ಮೆರೆಯುವ ವಿನೂತನ ಪ್ರಾಜೆಕ್ಟ್‌ಗಳನ್ನು ಆಯ್ಕೆ ಮಾಡಿ, ಗೆದ್ದ ಸ್ಪರ್ಧಿಗಳಿಗೆ ಉಚಿತ ಇನ್ಕ್ಯೂಬೇಶನ್ ಸ್ಪೇಸ್, ಬಂಡವಾಳದಾರರ, ಉದ್ಯಮಿಗಳ ಸಂಪರ್ಕ ಹಾಗು ವೆಂಚರ್ ಕ್ಯಾಪಿಟಲಿಸ್ಟ್‌ಗಳೊಂದಿಗೆ 3 ತಿಂಗಳ ತರಬೇತಿ ಹಾಗು ಮಾರ್ಗದರ್ಶನ ಪಡೆಯುವ ಉತ್ತಮ ಅವಕಾಶವಿದೆ. ಅಭಿವೃದ್ಧಿಯ ನಾಗಾಲೋಟದಲ್ಲಿ ಮೈಮರೆತಿರುವ ಕಂಪನಿಗಳು ಆದರಿಂದ ಆಗುತ್ತಿರುವ ನೈಸರ್ಗಿಕ ಹಾನಿಯ ಕುರಿತು ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂಬುದು ಮುಖ್ಯ ಉದ್ದೇಶ.
ಇದನ್ನೂ ಓದಿ | ಟೆಸ್ಲಾದಲ್ಲಿ 10,000 ಉದ್ಯೋಗ ಕಡಿತಕ್ಕೆ ಸಿಇಒ ಎಲಾನ್ ಮಸ್ಕ್ ಚಿಂತನೆ, ಅಮೆರಿಕದ ಆರ್ಥಿಕತೆ ಹದಗೆಟ್ಟಿದೆ ಎಂದ ಉದ್ಯಮಿ