ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯಂದು “ಸ್ವಾಂತಂತ್ರ್ಯ ನಡಿಗೆʼʼ ಬೃಹತ್ ಪಾದಯಾತ್ರೆ ಮೂಲಕ ಶಕ್ತಿ ಪ್ರದರ್ಶನ ಮಾಡಿ ಕಾಂಗ್ರೆಸ್ ನಾಯಕರು ಬೀಗುತ್ತಿರುವ ನಡುವೆಯೇ ಪಕ್ಷದ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐನಲ್ಲಿ ನಡೆದಿದ್ದ ಬಣ ಬಡಿದಾಟದ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಕಾಂಗ್ರೆಸ್ ಸ್ವಾತಂತ್ರ್ಯ ನಡಿಗೆ ವೇಳೆ ಎನ್‌ಎಸ್‌ಯುಐ ಘಟಕದ ಎರಡು ಗುಂಪುಗಳು ಕೈ ಕೈ ಮಿಲಾಯಿಸಿಕೊಂಡಿದ್ದವು. ಹಿರಿಯ ನಾಯಕರ ಸೂಚನೆಗೂ ಕ್ಯಾರೆ ಎನ್ನದೆ ಇದೀಗ ಯುವ ನಾಯಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಎರಡು ಗುಂಪುಗಳಿಂದ ಬೇರೆ ಬೇರೆ ಠಾಣೆಗಳಲ್ಲಿ ದೂರು ಹಾಗೂ ಪ್ರತಿ ದೂರು ದಾಖಲಾಗಿವೆ.
ಎನ್‌ಎಸ್‌ಯುಐ ಅಧ್ಯಕ್ಷ ಕೀರ್ತಿ ಗಣೇಶ್ ಮೇಲೆ ಉಪಾಧ್ಯಕ್ಷ ಜಯಂದರ್, ಪ್ರಧಾನ ಕಾರ್ಯದರ್ಶಿ ದೀಪಕ್ ಗೌಡ ಹಲ್ಲೆ ಮಾಡಿದ್ದರು. ಹೀಗಾಗಿ ಇವರಿಬ್ಬರ ವಿರುದ್ಧ ವಿವಿಪುರಂ ಪೊಲೀಸ್ ಠಾಣೆಗೆ ಅಧ್ಯಕ್ಷ ಕೀರ್ತಿ ಗಣೇಶ್ ದೂರು ನೀಡಿದ್ದಾರೆ.
ಮತ್ತೊಂದೆಡೆ ದೀಪಕ್ ಗೌಡ ಹಾಗೂ ಜಯಂದರ್, ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಅಧ್ಯಕ್ಷ ಕೀರ್ತಿ ಗಣೇಶ್ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ. ಕಾಂಗ್ರೆಸ್ ಕಚೇರಿಯಲ್ಲಿ ಬಗೆ ಹರಿಯಬೇಕಿದ್ದ ಜಗಳ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿರುವುದು ಪಕ್ಷಕ್ಕೆ ಮುಜುಗರ ತಂದಿದೆ.
ಸ್ವಾತಂತ್ರ್ಯ ನಡಿಗೆಯಲ್ಲಿ ಆಗಿದ್ದೇನು?
ಸ್ವಾತಂತ್ರ್ಯ ನಡಿಗೆಗೆ ಎನ್‌ಎಸ್‌ಯುಐ ಅಧ್ಯಕ್ಷ ಕೀರ್ತಿ ಡ್ಯಾನ್ಸ್ ಟೀಮ್ ಒಂದನ್ನು ಸಿದ್ಧ ಮಾಡಿದ್ದರು. ಆ ತಂಡಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ದೀಪಕ್ ಗೌಡ ಹಾಗೂ ಜಯಂದರ್ ಕರೆ ತಂದಿದ್ದಾರೆ. ಈ ವಿಷಯ ಕೀರ್ತಿ ಗಣೇಶ್ ಗಮನಕ್ಕೆ ತಾರದ ಹಿನ್ನೆಲೆಯಲ್ಲಿ ಉಭಯ ಬಣಗಳ ನಡುವೆ ಜಗಳವಾಗಿದೆ. ಸಂಘಟನೆಯಲ್ಲಿ ಮೊದಲಿಂದಲೂ ಈ ಎರಡು ಬಣಗಳ ನಡುವೆ ಭಿನ್ನಾಭಿಪ್ರಾಯ ಇದೆ ಎನ್ನಲಾಗಿದೆ.
ಇದನ್ನೂ ಓದಿ | Janotsava | ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಚಿವರ, ಶಾಸಕರ ಪೂರ್ವಭಾವಿ ಸಭೆ