ಬನ್ನೇರುಘಟ್ಟ: ಬೆಂಗಳೂರು ನಗರದ (Bangalore City) ಬೊಮ್ಮನಹಳ್ಳಿ ಕೂಡ್ಲು ಗೇಟ್ ಬಳಿ ಕೆಲವು ತಿಂಗಳ ಹಿಂದೆ ಚಿರತೆಯೊಂದು ಕಾಣಿಸಿಕೊಂಡು ಭಾರಿ ಆತಂಕವನ್ನು ಸೃಷ್ಟಿಸಿತ್ತು. ಅಂತಿಮವಾಗಿ ಇದನ್ನು ಸೆರೆ ಹಿಡಿಯಲಾಯಿತಾದರೂ ಕಾರ್ಯಾಚರಣೆ (Operation Cheetah) ವೇಳೆ ಗುಂಡೇಟು ತಿಂದಿದ್ದ ಅದು ಪ್ರಾಣವನ್ನೇ ಕಳೆದುಕೊಂಡಿತ್ತು. ಈ ಘಟನೆಯ ಬಳಿಕ ನಗರದೊಳಗೆ ಚಿರತೆ ಬಂದರೆ ಏನು ಮಾಡಬೇಕು ಎನ್ನುವ ವಿಚಾರದಲ್ಲಿ ಸೂಕ್ತ ಅವಲೋಕನಕ್ಕೆ ಕ್ಷಿಪ್ರ ಚಿರತೆ ಕಾರ್ಯಪಡೆ ರಚಿಸಲಾಗಿತ್ತು. ಇದೀಗ ಆ ಕಾರ್ಯಪಡೆಗೆ ಒಂದು ಕೌಶಲ್ಯ ತರಬೇತಿಯನ್ನು (Special training) ಆಯೋಜಿಸಲಾಗಿತ್ತು.
ಚಿರತೆ ಕಾಣಿಸಿಕೊಂಡ ಬಳಿಕ ಅರಣ್ಯ ಸಚಿವ ಈಶ್ವರ ಖಂಡ್ರೆ (Forest Minister Eshwar Khandre) ಅವರ ಆದೇಶದ ಮೇಲೆ ಬೆಂಗಳೂರು ನಗರಕ್ಕೆ ಸಮರ್ಪಿತವಾದ ಕ್ಷಿಪ್ರ ಚಿರತೆ ಕಾರ್ಯಪಡೆಯನ್ನು ರಚಿಸಿ ಮುಂದೆ ಅನಾಹುತಗಳು ಆಗದಂತೆ ನೋಡಿಕೊಳ್ಳಲು ಸೂಚಿಸಲಾಗಿತ್ತು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಬೆಂಗಳೂರು ನಗರದ ಚಿರತೆ ಕಾರ್ಯಪಡೆಯ 100ಕ್ಕೂ ಹೆಚ್ಚು ಸಿಬ್ಬಂದಿಗೆ ಕಾರ್ಯಾಚರಣೆಯ ಕಾರ್ಯ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಾಯಿತು.
ಹೊಳೆಮತ್ತಿ ಪ್ರತಿಷ್ಠಾನದ ವನ್ಯಜೀವಿ ಸಂರಕ್ಷಕ ಹಾಗೂ ಸಂಪನ್ಮೂಲ ವ್ಯಕ್ತಿ ಸಂಜಯ್ ಗುಬ್ಬಿ ಮತ್ತು ಡೆಹರಾಡೂನ್ ನಲ್ಲಿ ವನ್ಯಜೀವಿ ಕಾರ್ಯಾಚರಣೆಯ ತರಬೇತಿ ಪಡೆದಿರುವ ಹಿರಿಯ ಅಧಿಕಾರಿಗಳು ಕಾರ್ಯಪಡೆ ಸಿಬ್ಬಂದಿಗೆ ಕೌಶಲ್ಯಗಳ ಬಗ್ಗೆ ತಿಳಿಸಿಕೊಟ್ಟರು.
ಏನೆಲ್ಲಾ ತರಬೇತಿ ನೀಡಲಾಯಿತು?
- ಕಾಡಿನಂಚಿನ ಹೊಲಗದ್ದೆ, ತೋಟಗಳಲ್ಲಿ ಉರುಳಿಗೆ ಸಿಲುಕುವ ಚಿರತೆ ಮತ್ತು ವನ್ಯ ಜೀವಿಗಳ ಪ್ರಾಣ ರಕ್ಷಣೆ ಮಾಡುವ ವಿಧಾನ
- ಚಿರತೆಗಳು ನಾಡಿಗೆ ಬಂದಾಗ ಅವುಗಳ ಚಲನವಲನದ ಬಗ್ಗೆ ನಿಗಾ ಹೇಗೆ ಇಡಬೇಕು?
- ಚಿರತೆ ಹೆಜ್ಜೆ ಗುರುತಿಸುವುದು ಹೇಗೆ?
- ಚಿರತೆ ಸೆರೆ ಹಿಡಿಯಲು ಬೋನುಗಳನ್ನು ಹೇಗೆ ಅಳವಡಿಸಬೇಕು?
- ಪಶುವೈದ್ಯರು ಅರವಳಿಕೆ ಚುಚ್ಚುಮದ್ದು ನೀಡಿದ ಬಳಿಕ ಹೇಗೆ ಸೆರೆ ಹಿಡಿಯಬೇಕು?
- ಬಲೆಗಳನ್ನು ಹೇಗೆ ಬಳಸಬೇಕು?
- ಕಾರ್ಯಾಚರಣೆಯ ವೇಳೆ ಯಾವ ಯಾವ ಸುರಕ್ಷತಾ ಸಾಧನ ಧರಿಸಬೇಕು?
- ರಾತ್ರಿಯ ವೇಳೆ ಹೇಗೆ ಕಟ್ಟೆಚ್ಚರ ವಹಿಸಬೇಕು ಮತ್ತು ಥರ್ಮನ್ ಡ್ರೋನ್ ಕ್ಯಾಮರಾಗಳ ಬಳಕೆ ಹೇಗೆ ಮಾಡಬೇಕು ಎಂಬಿತ್ಯಾದಿ ಹಲವು ಅಂಶಗಳ ಬಗ್ಗೆ ಕಾರ್ಯಪಡೆ ಸಿಬ್ಬಂದಿಗೆ ತರಬೇತಿ ನೀಡಲಾಯಿತು.
ಇದನ್ನೂ ಓದಿ : Operation Cheetah | ಇನ್ನೇನು ಕೈಗೆ ಸಿಕ್ತು ಎನ್ನುವಾಗಲೇ ಕಣ್ಣೆದುರಿಗೇ ಚಿರತೆ ಜಸ್ಟ್ ಪಾಸ್!
ಈಶ್ವರ ಖಂಡ್ರೆ ನೀಡಿದ ಆದೇಶದಂತೆ ಕಾರ್ಯಪಡೆ ರಚನೆ
ಬೆಂಗಳೂರು ನಗರದ ಹೊರ ವಲಯಗಳಲ್ಲಿ ಚಿರತೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜನರು ಭೀತಿಗೊಳಗಾದಾಗ ಬೆಂಗಳೂರಿಗೆ ಸಮರ್ಪಿತವಾದ ಚಿರತೆಯ ಕ್ಷಿಪ್ರ ಕಾರ್ಯಪಡೆ ರಚಿಸಿ, ಸಿಬ್ಬಂದಿಗೆ ಅಗತ್ಯ ಸುರಕ್ಷತಾ ಸಾಧನ ಸಲಕರಣೆ ಒದಗಿಸಿ, ತರಬೇತಿ ನೀಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ರಚಿಸಲಾಗಿರುವ ಪಡೆಗೆ ಇಂದು ಒಂದು ದಿನದ ತರಬೇತಿ ನೀಡಲಾಯಿತು. ಈ ತರಬೇತಿ ವಿವಿಧ ಹಂತದಲ್ಲಿ ಮುಂದುವರಿಯಲಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಬೆಂಗಳೂರು ನಗರ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಶಿವ ಶಂಕರ್, ಬೆಂಗಳೂರು ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.