ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನ ಭಾರತಿ ಆವರಣದಲ್ಲಿ ಗಣೇಶ ದೇವಸ್ಥಾನ ನಿರ್ಮಾಣ ವಿರೋಧಿಸಿ ನೂರಾರು ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು. ಬೆಂಗಳೂರು ವಿಶ್ವವಿದ್ಯಾಲಯ ಆಡಳಿತ ಕಚೇರಿ ಎದುರು ಜಮಾಯಿಸಿದ ವಿದ್ಯಾರ್ಥಿಗಳು, ದೇವಸ್ಥಾನ ನಿರ್ಮಾಣಕ್ಕೆ ಯಾರು ಅನುಮತಿ ನೀಡಿದ್ದಾರೆ ಎನ್ನುವುದು ನಮಗೂ ತಿಳಿದಿಲ್ಲ. ವಿದ್ಯಾರ್ಥಿಗಳ ಬಗ್ಗೆ ನಿಜವಾದ ಕಾಳಜಿ ಇದ್ದರೆ ದೇವಸ್ಥಾನದ ಬದಲು ಗ್ರಂಥಾಲಯ ನಿರ್ಮಿಸಲಿ. ಇದರಿಂದ ವಿದ್ಯಾರ್ಥಿಗಳಿಗೂ ಅನುಕೂಲವಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ | PSI Scam | ಪೊಲೀಸ್ ನೇಮಕಾತಿ ಹಗರಣದ ಮತ್ತೊಬ್ಬ ಆರೋಪಿ ಅರೆಸ್ಟ್, 40 ಲಕ್ಷಕ್ಕೂ ಹೆಚ್ಚು ಹಣ ನೀಡಿದ್ದ!
ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ(ಯುಜಿಸಿ) ನಿಯಮಾವಳಿ ಪ್ರಕಾರ ವಿಶ್ವವಿದ್ಯಾಲಯ ಆವರಣವನ್ನು ಶಿಕ್ಷಣ ಸಂಬಂಧಿತ ಕಾರ್ಯ ಕಲಾಪಗಳಿಗೆ ಬಳಸಿಕೊಳ್ಳಬೇಕು, ಯಾವುದೇ ಧಾರ್ಮಿಕ ಆಚರಣೆಗಳಿಗೆ ಉಪಯೋಗಿಸಿಕೊಳ್ಳಬಾರದು ಎಂದು ಆಕ್ರೋಶ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯವನ್ನು ಬಿಬಿಎಂಪಿ ಕೇಸರೀಕರಣ ಮಾಡಲು ಹೊರಟಿದೆ. ಯಾವುದೇ ಕಾರಣಕ್ಕೂ ಆವರಣದಲ್ಲಿ ದೇವಾಲಯ ನಿರ್ಮಿಸಬಾರದು ಎಂದು ಒತ್ತಾಯಿಸಿದರು. ದೇವಾಲಯ ಕಾಮಗಾರಿ ಕೈಬಿಡದಿದ್ದರೆ ಅಹೋರಾತ್ರಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜ್ಞಾನಭಾರತಿ ಆವರಣದ ಮಲ್ಲತ್ತಹಳ್ಳಿಗೆ ಹೋಗುವ ಮಾರ್ಗದಲ್ಲಿ ಈಗಾಗಲೇ ಇರುವ ಗಣೇಶ ದೇವಸ್ಥಾನವನ್ನು ಕೆಂಗೇರಿ ಹೊರ ವರ್ತುಲ ರಸ್ತೆ ಅಗಲೀಕರಣ ಕಾರ್ಯಕ್ಕೆ ತೆರವು ಮಾಡಲು ಬಿಬಿಎಂಪಿ ನಿರ್ಧರಿಸಿದೆ. ಈ ಕಾರಣಕ್ಕೆ ಸಮೀಪದಲ್ಲೇ ಹೊಸ ದೇವಸ್ಥಾನ ನಿರ್ಮಿಸಿ ಅಲ್ಲಿನ ಗಣೇಶ ಮೂರ್ತಿಯನ್ನು ಸ್ಥಳಾಂತರಿಸಲು ವಿಶ್ವವಿದ್ಯಾಲಯ ಹಾಗೂ ಬಿಬಿಎಂಪಿ ಮುಂದಾಗಿವೆ. ಹೊಸ ದೇವಸ್ಥಾನ ನಿರ್ಮಾಣ ಮಾಡುವುದು ಬೇಡ ಎಂದು ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವವಿದ್ಯಾಲಯದ ಅಧಿಕಾರಿಗಳು, ಇದು ಹೊಸ ದೇವಸ್ಥಾನವಲ್ಲ, ದೇವಸ್ಥಾನವನ್ನು ಸ್ಥಳಾಂತರಿಸಲಾಗುತ್ತಿದೆ. ವಿದ್ಯಾರ್ಥಿಗಳು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಪೊಲೀಸ್ ಭದ್ರತೆಯೊಂದಿಗೆ ಕಾಮಗಾರಿ
ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ ವಿದ್ಯಾರ್ಥಿಗಳ ವಿರೋಧದ ನಡುವೆಯೂ ಬಿಬಿಎಂಪಿಯಿಂದ ಗಣೇಶ ದೇವಸ್ಥಾನದ ಕಾಮಗಾರಿ ಆರಂಭಿಸಲಾಗಿದೆ. ಕಾಮಗಾರಿ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿ ನಿರ್ಮಾಣದ ಹಂತದ ದೇವಾಲಯದ ಯಾರೂ ಪ್ರವೇಶಿಸಿದಂತೆ ನಿರ್ಬಂಧ ವಿಧಿಸಿ, 30ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಹೀಗಾಗಿ ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಕರ ಮಂಡಳಿ(ಬಿಯುಟಿಸಿ) ಮಾರ್ಗದರ್ಶನದಲ್ಲೀ ವಿವಿ ವಿದ್ಯಾರ್ಥಿ ಸಂಘಟನೆ ಸಭೆ ನಡೆಸಿ, ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಿದ್ದಾರೆ ಎನ್ನಲಾಗಿದೆ.
ದೇವರ ಹೆಸರಲ್ಲಿ ಭೂಮಿ ಕಬಳಿಸಲು ಕುಮ್ಮಕ್ಕು
ವಿಶ್ವವಿದ್ಯಾಲಯಗಳಲ್ಲಿ ಬಿಜೆಪಿಯ ರಾಜಕೀಯ ಹಿತಾಸಕ್ತಿ ಜೆಎನ್‌ಯುನಿಂದ ಶುರುವಾಗಿ ಬೆಂಗಳೂರು ವಿಶ್ವವಿದ್ಯಾಲಯದವರೆಗೆ ಬಂದಿದೆ. ದೇವರನ್ನು ಮುಂದಿಟ್ಟು ಬೆಂಗಳೂರು ವಿವಿಯ ಬೆಲೆ ಬಾಳುವ ಭೂಮಿಯನ್ನು ಕಬಳಿಸಲು ಸರ್ಕಾರವೇ ಕುಮ್ಮಕ್ಕು ನೀಡಿರುವುದು ದುರಂತ. ಉನ್ನತ ಶಿಕ್ಷಣ ಸಚಿವ ಡಾ. ಸಿ. ಅಶ್ವತ್ಥನಾರಾಯಣ ಅವರು ವಿದ್ಯಾರ್ಥಿಗಳ ಅಗ್ರಹದಂತೆ ವಿವಿಯ ಭೂಮಿ ಉಳಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ | murder | ಒಂಟಿಯಾಗಿ ವಾಸಿಸುತ್ತಿದ್ದ ನಿವೃತ್ತ ಶಿಕ್ಷಕಿಯ ಕೊಲೆ, ಚಿನ್ನಾಭರಣದೊಂದಿಗೆ ಪರಾರಿಯಾದ ದುಷ್ಕರ್ಮಿಗಳು