ಬೆಂಗಳೂರು: ಎಲ್ಲ ಭಾಷೆಗಳಿಗಿಂತ ಹೆಚ್ಚು, ಒಟ್ಟು 8 ಬಾರಿ ಜ್ಞಾನಪೀಠ ಪುರಸ್ಕಾರಕ್ಕೆ ಪಾತ್ರವಾದ ಹಿರಿಮೆ ಹೊಂದಿರುವ ಕನ್ನಡ ಸಾಹಿತ್ಯ ಸಂಪುಟದಲ್ಲಿ ನನ್ನ ಕೃತಿಯೂ ಈಗ ಅನುವಾದದ ಮೂಲಕ ಸೇರಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಗೋವಾ ರಾಜ್ಯಪಾಲರಾದ ಪಿ. ಎಸ್. ಶ್ರೀಧರನ್ ಪಿಳ್ಳ (P.S. Sreedharan Pillai) ಅವರು ಹೇಳಿದರು. ಬೆಂಗಳೂರಿನಲ್ಲಿ ಭಾನುವಾರ ನಡೆದ ತಮ್ಮ ಮಲಯಾಳಂ ಭಾಷೆಯ ಕಥಾ ಸಂಕಲನ ‘ತತ್ತ ವರಾತಿರಿಕ್ಕಿಲ್ಲ’ದ ಕನ್ನಡ ಅನುವಾದ ‘ಗಿಳಿಯು ಬಾರದೇ ಇರದು’ ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗೋವಾ ರಾಜ್ಯಪಾಲ ಪಿ. ಎಸ್. ಶ್ರೀಧರನ್ ಪಿಳ್ಳ ಅವರ ಕಥಾ ಸಂಕಲನದ ಕನ್ನಡ ಅನುವಾದ ಬಿಡುಗಡೆ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಡಾ. ಚಂದ್ರಶೇಖರ ಕಂಬಾರ, ಸುದರ್ಶನ್ ಚನ್ನಂಗಿಹಳ್ಳಿ, ಮೇರಿ ಜೋಸೆಫ್, ಶೋಭಾ ರಾವ್, ವೀರಕಪುತ್ರ ಶ್ರೀನಿವಾಸ್ ಭಾಗವಹಿಸಿದ್ದರು.
ಕನ್ನಡವು ಪ್ರಾಚೀನ ಮತ್ತು ಶಾಸ್ತ್ರೀಯ ಭಾಷೆ. ಕನ್ನಡ ನೆಲದಲ್ಲಿ ನನ್ನ ಕೃತಿ ಬಿಡುಗಡೆ ಆಗುತ್ತಿರುವುದು ಅಭಿಮಾನದ ಸಂಗತಿಯಾಗಿದೆ ಎಂದ ಅವರು, ಕಳೆದ 50 ವರ್ಷಗಳಲ್ಲಿ ಶೇ.40ರಷ್ಟು ಮಾತೃ ಭಾಷೆಗಳು ಮರೆಯಾಗಿವೆ. ಹಾಗಾಗಿ ಮಾತೃ ಭಾಷೆ ಉಳಿಸಿ, ಬೆಳೆಸುವತ್ತ ನಾವೆಲ್ಲ ಗಮನ ಕೊಡಬೇಕಿದೆ, ಮಾತೃ ಭಾಷೆಯ ಶಿಕ್ಷಣಕ್ಕೆ ಒತ್ತು ನೀಡಬೇಕಿದೆ ಎಂದರು.
ವೀರಲೋಕ ಬುಕ್ಸ್ ಪ್ರಕಟಿಸಿರುವ ಈ ಕೃತಿಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರ ಅವರು ಬಿಡುಗಡೆ ಮಾಡಿದರು. ʼವಿಜಯ ಕರ್ನಾಟಕʼದ ಜೂನಿಯರ್ ಅಸಿಸ್ಟೆಂಟ್ ಎಡಿಟರ್ ಮೇರಿ ಜೋಸೆಫ್ ಅವರು ಈ ಕೃತಿಯನ್ನು ಕನ್ನಡಕ್ಕೆ ನವಿರಾಗಿ ಅನುವಾದಿಸಿದ್ದಾರೆ.
ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕರಾದ ಸುದರ್ಶನ ಚನ್ನಂಗಿಹಳ್ಳಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಾಹಿತಿ ಶೋಭಾ ರಾವ್ ಅವರು ಕೃತಿಯ ಪರಿಚಯ ಮಾಡಿಕೊಟ್ಟರು. ವೀರಲೋಕ ಬುಕ್ಸ್‌ನ ರೂವಾರಿಯಾಗಿರುವ ವೀರಕಪುತ್ರ ಶ್ರೀನಿವಾಸ್ ಅವರು ಈ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು.
ಇದನ್ನೂ ಓದಿ : Book Release : ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ರಚಿತ ‘ರಾಹುಲ್ ಗಾಂಧಿ’ ಕುರಿತ ಕೃತಿ ಸೆ.12ರಂದು ಬಿಡುಗಡೆ
ಕೃತಿಯ ಹಿನ್ನೆಲೆ ಏನು?
‘ತತ್ತ ವರಾತಿರಿಕ್ಕಿಲ್ಲ’ ಕಥಾ ಸಂಕಲನ ಪಿ. ಎಸ್. ಶ್ರೀಧರನ್ ಪಿಳ್ಳ ಅವರ 150 ನೇ ಕೃತಿಯಾಗಿದೆ. ಸೃಜನಶೀಲ ಸಾಹಿತಿಯಾದ ಅವರು ಇದುವರೆಗೆ ಸುಮಾರು 200 ಕೃತಿಗಳನ್ನು ರಚಿಸಿದ್ದಾರೆ. ಹೊಸತನದೊಂದಿಗೆ ಸಮಕಾಲೀನ ಕಥಾವಸ್ತುವನ್ನು ಹೊಂದಿರುವ ಐದು ಸಣ್ಣ ಕಥೆಗಳ ಗುಚ್ಛವೇ ‘ಗಿಳಿಯು ಬಾರದೇ ಇರದು’ ಕಥಾಸಂಕಲನ.
ಈಗಾಗಲೇ ಮೌಲ್ಯಯುತ ಹಲವು ಕೃತಿಗಳನ್ನು ಪ್ರಕಾಶಿಸಿರುವ ವೀರಲೋಕ ಬುಕ್ಸ್ ಮಲಯಾಳಂ ಕಥೆಗಳ ಸೊಬಗನ್ನು ಕನ್ನಡಕ್ಕೆ ಪರಿಚಯಿಸಿಕೊಡುವ ಉದ್ದೇಶದಿಂದ ಈ ಕಥಾ ಸಂಕಲನವನ್ನು ಕನ್ನಡದಲ್ಲಿ ಬಿಡುಗಡೆಗೊಳಿಸಿದೆ.