ಕಲೆ/ಸಾಹಿತ್ಯ
P.S. Sreedharan Pillai : ಗೋವಾ ರಾಜ್ಯಪಾಲರ ಕಥಾ ಸಂಕಲನದ ಕನ್ನಡ ಅನುವಾದ ಬಿಡುಗಡೆ
ಗೋವಾ ರಾಜ್ಯಪಾಲರಾದ ಪಿ. ಎಸ್. ಶ್ರೀಧರನ್ ಪಿಳ್ಳ ಅವರ ಮಲಯಾಳಂ ಕಥಾ ಸಂಕಲನ ‘ತತ್ತ ವರಾತಿರಿಕ್ಕಿಲ್ಲ’ದ ಕನ್ನಡ ಅನುವಾದ ‘ಗಿಳಿಯು ಬಾರದೇ ಇರದು’ ಕೃತಿಯ ಕನ್ನಡ ಅನುವಾದ ಭಾನುವಾರ ಬಿಡುಗಡೆಯಾಯಿತು. ಪತ್ರಕರ್ತೆ ಮೇರಿ ಜೋಸೆಫ್ ಅವರು ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಬೆಂಗಳೂರು: ಎಲ್ಲ ಭಾಷೆಗಳಿಗಿಂತ ಹೆಚ್ಚು, ಒಟ್ಟು 8 ಬಾರಿ ಜ್ಞಾನಪೀಠ ಪುರಸ್ಕಾರಕ್ಕೆ ಪಾತ್ರವಾದ ಹಿರಿಮೆ ಹೊಂದಿರುವ ಕನ್ನಡ ಸಾಹಿತ್ಯ ಸಂಪುಟದಲ್ಲಿ ನನ್ನ ಕೃತಿಯೂ ಈಗ ಅನುವಾದದ ಮೂಲಕ ಸೇರಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಗೋವಾ ರಾಜ್ಯಪಾಲರಾದ ಪಿ. ಎಸ್. ಶ್ರೀಧರನ್ ಪಿಳ್ಳ (P.S. Sreedharan Pillai) ಅವರು ಹೇಳಿದರು. ಬೆಂಗಳೂರಿನಲ್ಲಿ ಭಾನುವಾರ ನಡೆದ ತಮ್ಮ ಮಲಯಾಳಂ ಭಾಷೆಯ ಕಥಾ ಸಂಕಲನ ‘ತತ್ತ ವರಾತಿರಿಕ್ಕಿಲ್ಲ’ದ ಕನ್ನಡ ಅನುವಾದ ‘ಗಿಳಿಯು ಬಾರದೇ ಇರದು’ ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗೋವಾ ರಾಜ್ಯಪಾಲ ಪಿ. ಎಸ್. ಶ್ರೀಧರನ್ ಪಿಳ್ಳ ಅವರ ಕಥಾ ಸಂಕಲನದ ಕನ್ನಡ ಅನುವಾದ ಬಿಡುಗಡೆ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಡಾ. ಚಂದ್ರಶೇಖರ ಕಂಬಾರ, ಸುದರ್ಶನ್ ಚನ್ನಂಗಿಹಳ್ಳಿ, ಮೇರಿ ಜೋಸೆಫ್, ಶೋಭಾ ರಾವ್, ವೀರಕಪುತ್ರ ಶ್ರೀನಿವಾಸ್ ಭಾಗವಹಿಸಿದ್ದರು.
ಕನ್ನಡವು ಪ್ರಾಚೀನ ಮತ್ತು ಶಾಸ್ತ್ರೀಯ ಭಾಷೆ. ಕನ್ನಡ ನೆಲದಲ್ಲಿ ನನ್ನ ಕೃತಿ ಬಿಡುಗಡೆ ಆಗುತ್ತಿರುವುದು ಅಭಿಮಾನದ ಸಂಗತಿಯಾಗಿದೆ ಎಂದ ಅವರು, ಕಳೆದ 50 ವರ್ಷಗಳಲ್ಲಿ ಶೇ.40ರಷ್ಟು ಮಾತೃ ಭಾಷೆಗಳು ಮರೆಯಾಗಿವೆ. ಹಾಗಾಗಿ ಮಾತೃ ಭಾಷೆ ಉಳಿಸಿ, ಬೆಳೆಸುವತ್ತ ನಾವೆಲ್ಲ ಗಮನ ಕೊಡಬೇಕಿದೆ, ಮಾತೃ ಭಾಷೆಯ ಶಿಕ್ಷಣಕ್ಕೆ ಒತ್ತು ನೀಡಬೇಕಿದೆ ಎಂದರು.
ವೀರಲೋಕ ಬುಕ್ಸ್ ಪ್ರಕಟಿಸಿರುವ ಈ ಕೃತಿಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರ ಅವರು ಬಿಡುಗಡೆ ಮಾಡಿದರು. ʼವಿಜಯ ಕರ್ನಾಟಕʼದ ಜೂನಿಯರ್ ಅಸಿಸ್ಟೆಂಟ್ ಎಡಿಟರ್ ಮೇರಿ ಜೋಸೆಫ್ ಅವರು ಈ ಕೃತಿಯನ್ನು ಕನ್ನಡಕ್ಕೆ ನವಿರಾಗಿ ಅನುವಾದಿಸಿದ್ದಾರೆ.
ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕರಾದ ಸುದರ್ಶನ ಚನ್ನಂಗಿಹಳ್ಳಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಾಹಿತಿ ಶೋಭಾ ರಾವ್ ಅವರು ಕೃತಿಯ ಪರಿಚಯ ಮಾಡಿಕೊಟ್ಟರು. ವೀರಲೋಕ ಬುಕ್ಸ್‌ನ ರೂವಾರಿಯಾಗಿರುವ ವೀರಕಪುತ್ರ ಶ್ರೀನಿವಾಸ್ ಅವರು ಈ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು.
ಇದನ್ನೂ ಓದಿ : Book Release : ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ರಚಿತ ‘ರಾಹುಲ್ ಗಾಂಧಿ’ ಕುರಿತ ಕೃತಿ ಸೆ.12ರಂದು ಬಿಡುಗಡೆ
ಕೃತಿಯ ಹಿನ್ನೆಲೆ ಏನು?
‘ತತ್ತ ವರಾತಿರಿಕ್ಕಿಲ್ಲ’ ಕಥಾ ಸಂಕಲನ ಪಿ. ಎಸ್. ಶ್ರೀಧರನ್ ಪಿಳ್ಳ ಅವರ 150 ನೇ ಕೃತಿಯಾಗಿದೆ. ಸೃಜನಶೀಲ ಸಾಹಿತಿಯಾದ ಅವರು ಇದುವರೆಗೆ ಸುಮಾರು 200 ಕೃತಿಗಳನ್ನು ರಚಿಸಿದ್ದಾರೆ. ಹೊಸತನದೊಂದಿಗೆ ಸಮಕಾಲೀನ ಕಥಾವಸ್ತುವನ್ನು ಹೊಂದಿರುವ ಐದು ಸಣ್ಣ ಕಥೆಗಳ ಗುಚ್ಛವೇ ‘ಗಿಳಿಯು ಬಾರದೇ ಇರದು’ ಕಥಾಸಂಕಲನ.
ಈಗಾಗಲೇ ಮೌಲ್ಯಯುತ ಹಲವು ಕೃತಿಗಳನ್ನು ಪ್ರಕಾಶಿಸಿರುವ ವೀರಲೋಕ ಬುಕ್ಸ್ ಮಲಯಾಳಂ ಕಥೆಗಳ ಸೊಬಗನ್ನು ಕನ್ನಡಕ್ಕೆ ಪರಿಚಯಿಸಿಕೊಡುವ ಉದ್ದೇಶದಿಂದ ಈ ಕಥಾ ಸಂಕಲನವನ್ನು ಕನ್ನಡದಲ್ಲಿ ಬಿಡುಗಡೆಗೊಳಿಸಿದೆ.
ಕಲೆ/ಸಾಹಿತ್ಯ
Booker Prize 2023: ಭಾರತೀಯ ಮೂಲದ ಚೇತನಾ ಮಾರೂ ಕೃತಿ ʼವೆಸ್ಟರ್ನ್ ಲೇನ್ʼ ಬೂಕರ್ ಪ್ರಶಸ್ತಿಯ ಶಾರ್ಟ್‌ಲಿಸ್ಟ್‌ಗೆ
ಚೇತನಾ ಮಾರೂ ಅವರ ʼವೆಸ್ಟರ್ನ್ ಲೇನ್’ ಗೋಪಿ ಎಂಬ 11 ವರ್ಷದ ಬ್ರಿಟಿಷ್ ಗುಜರಾತಿ ಹುಡುಗಿ ಮತ್ತು ಅವಳ ಕುಟುಂಬದೊಂದಿಗೆ ಅವಳ ಸಂಬಂಧದ ಸುತ್ತಲಿನ ಕಥೆಯಾಗಿದೆ.
ಹೊಸದಿಲ್ಲಿ: ಭಾರತೀಯ ಮೂಲದ ಲೇಖಕಿ ಚೇತನಾ ಮಾರೂ (Chetna Maroo) ಅವರ ಕಾದಂಬರಿ ʼವೆಸ್ಟರ್ನ್ ಲೇನ್ʼ (Western lane) ಈ ವರ್ಷದ ಬೂಕರ್ ಪ್ರಶಸ್ತಿಯ (Booker Prize 2023) ಶಾರ್ಟ್ ಲಿಸ್ಟ್‌ನಲ್ಲಿ ಸ್ಥಾನ ಪಡೆದುಕೊಂಡಿದೆ.
ಬೂಕರ್ ಪ್ರಶಸ್ತಿ 2023ರ (Booker Award 2023) ತೀರ್ಪುಗಾರರ ಸಮಿತಿಯು 13 ಕೃತಿಗಳ ಲಾಂಗ್‌ಲಿಸ್ಟ್ ಮಾಡಿದ ಪಟ್ಟಿಯಿಂದ ಆರು ಕಾದಂಬರಿಗಳ ಅಂತಿಮ ಪಟ್ಟಿಯನ್ನು ಗುರುವಾರ ಪ್ರಕಟಿಸಿತು. ಬೂಕರ್ ಡಜನ್ ಎಂದು ಇದನ್ನು ಕರೆಯಲಾಗುತ್ತದೆ. ಇವುಗಳನ್ನು ಕಳೆದ ವರ್ಷ ಅಕ್ಟೋಬರ್ ಮತ್ತು ಈ ವರ್ಷದ ಸೆಪ್ಟೆಂಬರ್ ನಡುವೆ ಪ್ರಕಟಿಸಲಾದ 163 ಪುಸ್ತಕಗಳಿಂದ ಆಯ್ಕೆ ಮಾಡಲಾಗಿದೆ.
ಭಾರತೀಯ ಮೂಲದ ಲಂಡನ್ ನಿವಾಸಿ ಲೇಖಕಿ ಚೇತನಾ ಮಾರೂ ಅವರ ಚೊಚ್ಚಲ ಕಾದಂಬರಿ ʼವೆಸ್ಟರ್ನ್ ಲೇನ್’ ಪಟ್ಟಿಗೆ ಸೇರಿಕೊಂಡಿದೆ. ಪಟ್ಟಿಯಲ್ಲಿರುವ ಇತರ ಕೃತಿಗಳೆಂದರೆ ಪಾಲ್ ಲಿಂಚ್ (ಐರ್ಲೆಂಡ್) ಅವರ ಪ್ರಾಫೆಟ್ ಸಾಂಗ್, ಪಾಲ್ ಮುರ್ರೆ (ಐರ್ಲೆಂಡ್) ಅವರ ದಿ ಬೀ ಸ್ಟಿಂಗ್, ಸಾರಾ ಬರ್ನ್‌ಸ್ಟೈನ್ (ಕೆನಡಾ) ಅವರ ಸ್ಟಡಿ ಫಾರ್ ಒಬೀಡಿಯೆನ್ಸ್, ಜೊನಾಥನ್ ಎಸ್ಕೋಫರಿ (ಯುಎಸ್) ಅವರ ಇಫ್ ಐ ಸರ್ವೈವ್ ಯು, ಮತ್ತು ಪಾಲ್ ಹಾರ್ಡಿಂಗ್ (ಯುಎಸ್) ಅವರ ದಿಸ್ ಅದರ್ ಈಡನ್ (ಯುಎಸ್).
ಚೇತನಾ ಮಾರೂ ಅವರ ʼವೆಸ್ಟರ್ನ್ ಲೇನ್’ ಗೋಪಿ ಎಂಬ 11 ವರ್ಷದ ಬ್ರಿಟಿಷ್ ಗುಜರಾತಿ ಹುಡುಗಿ ಮತ್ತು ಅವಳ ಕುಟುಂಬದೊಂದಿಗೆ ಅವಳ ಸಂಬಂಧದ ಸುತ್ತಲಿನ ಕಥೆಯಾಗಿದೆ. ಈ ಕಾದಂಬರಿಯು ವಲಸಿಗ ತಂದೆ ತನ್ನ ಕುಟುಂಬವನ್ನು ಏಕಪೋಷಕನಾಗಿ ಬೆಳೆಸುವ ಕಥೆಯನ್ನು ವಿಸ್ತರಿಸುತ್ತದೆ. ಸ್ಕ್ವಾಷ್ ಕ್ರೀಡೆಯನ್ನು ಸಂಕೀರ್ಣ ಮಾನವ ಭಾವನೆಗಳಿಗೆ ರೂಪಕವಾಗಿ ಬಳಸಿದ್ದಕ್ಕಾಗಿ ಬೂಕರ್ ನ್ಯಾಯಾಧೀಶರು ಈ ಪುಸ್ತಕವನ್ನು ಶ್ಲಾಘಿಸಿದ್ದಾರೆ.
ಚೇತನಾ ಮಾರೂ ಅವರ ಪ್ರಕಾರ ʼʼಇದೊಂದು ಕ್ರೀಡಾ ಕಾದಂಬರಿ. ಇದು ಭವಿಷ್ಯದ ಕಾದಂಬರಿ, ಆಂತರಿಕ ಕಾದಂಬರಿ, ದುಃಖದ ಬಗೆಗಿನ ಕಾದಂಬರಿ, ವಲಸಿಗರ ಅನುಭವದ ಕಾದಂಬರಿ ಎಂದೂ ಕರೆಯಬಹುದು.ʼʼ
ಬೂಕರ್ ಪ್ರಶಸ್ತಿಯ ವಿಜೇತರನ್ನು ನವೆಂಬರ್ 26ರಂದು ಘೋಷಿಸಲಾಗುತ್ತದೆ. ಗೆದ್ದವರು £50,000 (50.92 ಲಕ್ಷ ರೂ.) ಬಹುಮಾನ ಪಡೆಯುತ್ತಾರೆ. ಶಾರ್ಟ್ ಲಿಸ್ಟ್‌ನಲ್ಲಿರುವ ಇತರರಿಗೆ £2,500 (2.54 ಲಕ್ಷ ರೂ.) ದೊರೆಯುತ್ತದೆ. ಈ ಪ್ರತಿಷ್ಠಿತ ಪ್ರಶಸ್ತಿಯು ಪ್ರಪಂಚದ ಯಾವುದೇ ಕಡೆ ಇಂಗ್ಲಿಷ್‌ನಲ್ಲಿ ಬರೆಯಲ್ಪಟ್ಟ ಕಾದಂಬರಿಗಳಿಗೆ ಮೀಸಲಾಗಿದೆ.
ಇದನ್ನೂ ಓದಿ: Booker award: ಭಾರತೀಯ ಲೇಖಕಿ ಗೀತಾಂಜಲಿ ಶ್ರೀ ಕಾದಂಬರಿಗೆ ಮನ್ನಣೆ
ಕಲೆ/ಸಾಹಿತ್ಯ
Painting: ಕೇವಲ 328 ರೂ.ಗೆ ಖರೀದಿಸಿದ ಪೇಂಟಿಂಗ್ 1.5 ಕೋಟಿ ರೂಪಾಯಿಗೆ ಹರಾಜು!
Painting: ಬಹು ವರ್ಷಗಳಿಂದ ಕಳೆದು ಹೋಗಿದ್ದ ಖ್ಯಾತ ಕಲಾವಿದ ಎನ್ ಸಿ ವೈತ್ ಅವರ ಅಮೂಲ್ಯ ಪೇಂಟಿಂಗ್ ಸಿಕ್ಕಿದ್ದೇ ರೋಚಕವಾಗಿದೆ.
ನವದೆಹಲಿ: ಕೇವಲ 4 ಡಾಲರ್‌ಗೆ ಖರೀದಿಸಿದ ಪೇಂಟಿಂಗ್‌ವೊಂದು (Painting) 1,91,000 ಡಾಲರ್ ರೂ.ಗೆ ಬಿಕರಿಯಾಗಿದೆ. ಹೌದು, ಖ್ಯಾತ ಚಿತ್ರಕಾರ ಎನ್ ಸಿ ವೈತ್ (N C Wyeth) ಅವರ ಚಿತ್ರಪಟವೊಂದನ್ನು ಇಂಗ್ಲೆಂಡ್‌ನ ನ್ಯೂ ಹ್ಯಾಂಪ್‌ಶೈರ್‌ನ (New Hampshire) ಅಂಗಡಿಯೊಂದರಿಂದ ಕೇವಲ 4 ಡಾಲರ್‌ಗೆ (ಅಂದಾಜು 328 ರೂ.) ಖರೀದಿಸಿಲಾಗಿತ್ತು. ಅದೇ ಪೇಂಟಿಂಗ್, ವೈತ್ ಅವರ ಕಳೆದು ಹೋದ ಅಮೂಲ್ಯ ಕೃತಿಯಾಗಿ ಭಾರೀ ಮೊತ್ತಕ್ಕೆ ಅಂದರೆ, 1.5 ಕೋಟಿ ರೂಪಾಯಿಗೆ ಮಾರಾಟವಾಗಿದೆ(Viral News).
2017ರಲ್ಲಿ ಮ್ಯಾಂಚೆಸ್ಟರ್‌ನ ಸೇವರ್ಸ್ ಸ್ಟೋರ್‌ನಲ್ಲಿ ಫ್ರೇಮ್‌ಗಳ ದಾಸ್ತಾನಗಳ ಮಧ್ಯದಲ್ಲಿ ಈ ಅಮೂಲ್ಯವಾದ ಕಲಾಕೃತಿಯನ್ನು ಮಹಿಳೆಯೊಬ್ಬರು ಹೆಕ್ಕಿ ತೆಗೆದಿದ್ದರು. ಆದರೆ, ಆಕೆ ಈ ಪೇಂಟಿಂಗ್ ನಿರ್ಮಾತೃ ನೀಧಮ್-ಸಂಜಾತ ಕಲಾವಿದ ಎನ್ ಸಿ ವೈತ್ ಎಂಬುದನ್ನು ತಿಳಿಯದೇ ಹೋದಳು. ವೈತ್ ಅವರ ಈ ವರ್ಣ ಚಿತ್ರವು ಅದ್ಭುತ ಕಲಾಕೃತಿಯಾಗಿದೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ.
ರಮೋನಾ ಎಂಬ ಶೀರ್ಷಿಕೆಯ ಈ ಪೇಂಟಿಂಗ್, ಹೆಲೆನ್ ಹಂಟ್ ಜಾಕ್ಸನ್ ಅವರ ಕಾದಂಬರಿ ‘ರಮೋನಾ’ ದ 1939 ರ ಆವೃತ್ತಿಗಾಗಿ ಲಿಟಲ್, ಬ್ರೌನ್ ಮತ್ತು ಕಂಪನಿಯಿಂದ ರೂಪಿಸಲಾದ ನಾಲ್ಕು ಸೆಟ್‌ಗಳಲ್ಲಿ ಒಂದಾಗಿದೆ. ಪೇಂಟಿಂಗ್ ನಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು ಸಾಕಿದ ತಾಯಿಯೊಂದಿಗೆ ಸಮಸ್ಯೆ ಎದುರಿಸುತ್ತಿರುವ ಯುವತಿಯನ್ನು ನೋಡಬಹುದು.
ಈ ಸುದ್ದಿಯನ್ನೂ ಓದಿ: Tiranga Nail Art: ಸೀಸನ್ ಟ್ರೆಂಡ್‌ಗೆ ಎಂಟ್ರಿ ನೀಡಿದ ಆಕರ್ಷಕ ತಿರಂಗಾ ನೇಲ್ ಆರ್ಟ್
ಹರಾಜು ಸಂಸ್ಥೆಯಾಗಿರುವ ಬೋನ್‌ಹ್ಯಾಮ್ಸ್ ಈ ರಮೋನಾ ಚಿತ್ರಕೃತಿಯ ಕುರಿತು ಇನ್ಸ್‌ಟಾಗ್ರಾಮ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ. ಈ ದೀರ್ಘಕಾಲದಿಂದ ಕಳೆದುಹೋಗಿದ್ದ ಎನ್ ಸಿ ವೈತ್ ಅವರ ಪೇಂಟಿಂಗ್ ಸೆಪ್ಟೆಂಬರ್ 19 ರಂದು ಬೊನ್‌ಹ್ಯಾಮ್ಸ್ ಸ್ಕಿನ್ನರ್‌ನಲ್ಲಿ ಹರಾಜಿಗೆ ಬರುತ್ತಿದೆ. 2017ರಲ್ಲಿ ಈ ಕಲಾಕೃತಿಯನ್ನು ಅಂಗಡಿಯೊಂದರಿಂದ ಕೇವಲ 4 ಡಾಲರ್‌ಗೆ ಖರೀದಿಸಲಾಗಿದೆ. ಬಳಿಕ, ಅಮೆರಿಕದ ಪ್ರಸಿದ್ಧ ಕಲಾವಿದರು ಈ ಅಮೂಲ್ಯ ಪೇಂಟಿಂಗ್‌ನ ಮಹತ್ವವನ್ನು ಬಹಿರಂಗಗೊಳಿಸಿದ್ದಾರೆ ಎಂದು ಬೋನ್‌ಹ್ಯಾಮ್ಸ್ ಬರೆದುಕೊಂಡಿದೆ.
ಕಲೆ/ಸಾಹಿತ್ಯ
UNESCO World Heritage List: ರವೀಂದ್ರನಾಥ ಠಾಗೋರ್‌ರ ‘ಶಾಂತಿನಿಕೇತನ’ ಈಗ ಯುನೆಸ್ಕೋ ವಿಶ್ವ ಪಾರಂಪರಿಕ ತಾಣ!
UNESCO World Heritage List: ಕವಿ, ತತ್ವಜ್ಞಾನಿ ಹಾಗೂ ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ್ ಠಾಗೋರ್ ಅವರು 1901ರಲ್ಲಿ ಶಾಂತಿನಿಕೇತನ ಆರಂಭಿಸಿದ್ದರು.
ನವದೆಹಲಿ: ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಠಾಗೋರ್ (Rabindranath Tagore) ಅವರು ತಮ್ಮ ಜೀವನದ ಬಹುಭಾಗವನ್ನು ಕಳೆದ ಪಶ್ಚಿಮ ಬಂಗಾಳದ (West Bengal) ಬಿರ್ಭುಮ್ ಜಿಲ್ಲೆಯ (Birbhum district) ಶಾಂತಿನಿಕೇತನ(Santiniketan) ಪಟ್ಟಣವನ್ನು ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ(UNESCO World Heritage List) ಸೇರಿಸಲಾಗಿದೆ. ಈ ಕುರಿತು ಎಕ್ಸ್ ವೇದಿಕೆಯಲ್ಲಿ ಟ್ವೀಟ್ ಮಾಡಿರುವ ಯುನೆಸ್ಕೋ, ಬ್ರೇಕಿಂಗ್ ನ್ಯೂಸ್. ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಶಾಂತಿನಿಕೇತನ ಸೇರ್ಪಡೆ. ಅಭಿನಂದನೆಗಳು ಎಂದು ಹೇಳಿದೆ.
🔴BREAKING!
— UNESCO 🏛️ #Education #Sciences #Culture 🇺🇳 (@UNESCO) September 17, 2023
New inscription on the @UNESCO #WorldHeritage List: Santiniketan, #India 🇮🇳. Congratulations! 👏👏
➡️ https://t.co/69Xvi4BtYv #45WHC pic.twitter.com/6RAVmNGXXq
ಕವಿ, ತತ್ವಜ್ಞಾನಿ ಠಾಗೋರ್ ಅವರು 1901ರಲ್ಲಿ ಶಾಂತಿನಿಕೇತನ ವಸತಿ ಶಾಲೆಯನ್ನು ಆರಂಭಿಸಿದ್ದರು. ಇದು ಪ್ರಾಚೀನ ಭಾರತೀಯ ಸಂಪ್ರದಾಯಗಳ ಆಧಾರದ ಮೇಲೆ ವಸತಿ ಶಾಲೆ ಮತ್ತು ಕಲೆಯ ಕೇಂದ್ರವಾಗಿತ್ತು. ಧಾರ್ಮಿಕ ಮತ್ತು ಸಾಂಸ್ಕೃತಿಕ ಗಡಿಗಳನ್ನು ಮೀರಿದ ಮಾನವೀಯತೆಯ ಏಕತೆಯನ್ನು ಇದು ಪ್ರತಿನಿಧಿಸುತ್ತದೆ.
ಈ ಸುದ್ದಿಯನ್ನೂ ಓದಿ: Beluru Temple : ಬೇಲೂರು ಚನ್ನಕೇಶವ ದೇಗುಲ ಶೀಘ್ರವೇ ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಗೆ: ಬೊಮ್ಮಾಯಿ
1921ರಲ್ಲಿ ಶಾಂತಿನಿಕೇತನದಲ್ಲಿ ‘ವಿಶ್ವ ವಿಶ್ವವಿದ್ಯಾನಿಲಯ’ವನ್ನು ಸ್ಥಾಪಿಸಲಾಯಿತು, ಇದು ಮಾನವೀಯತೆಯ ಏಕತೆಯನ್ನು ಅಥವಾ “ವಿಶ್ವ ಭಾರತಿ” ತತ್ವವನ್ನು ಪ್ರತಿನಿಧಿಸುತ್ತದೆ. 20ನೇ ಶತಮಾನದ ಆರಂಭದಲ್ಲಿ ಚಾಲ್ತಿಯಲ್ಲಿರುವ ಬ್ರಿಟಿಷ್ ವಸಾಹತುಶಾಹಿ ವಾಸ್ತುಶಿಲ್ಪದ ದೃಷ್ಟಿಕೋನಗಳಿಂದ ಮತ್ತು ಯುರೋಪಿಯನ್ ಆಧುನಿಕತಾವಾದದಿಂದ ಭಿನ್ನವಾಗಿರುವ ಶಾಂತಿನಿಕೇತನವು ಆಧುನಿಕತೆಯ ಕಡೆಗೆ ವಿಧಾನಗಳನ್ನು ಪ್ರತಿನಿಧಿಸುತ್ತದೆ. ಇದು ಪ್ರದೇಶದಾದ್ಯಂತ ಪ್ರಾಚೀನ, ಮಧ್ಯಕಾಲೀನ ಮತ್ತು ಜಾನಪದ ಸಂಪ್ರದಾಯಗಳನ್ನು ಚಿತ್ರಿಸುತ್ತದೆ ಎಂದು ತಿಳಿಸಲಾಗಿದೆ.
ಶಾಂತಿನಿಕೇತನವನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆ ಮಾಡುವುದು ಭಾರತದ ಬಹುದಿನದ ಬೇಡಿಕೆಯಾಗಿತ್ತು. ಅದೀಗ ಈಡೇರಿದೆ. ಕೆಲವು ತಿಂಗಳ ಹಿಂದೆ, ಅಂತಾರಾಷ್ಟ್ರೀಯ ಸಲಹಾ ಸಂಸ್ಥೆ ICOMOS ಈ ಶಾಂತಿನಿಕೇತನ ಪಟ್ಟಣವನ್ನು ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಶಿಫಾರಸು ಮಾಡಿತ್ತು.
ಕಲೆ/ಸಾಹಿತ್ಯ
Sunday Read: ಹೊಸ ಪುಸ್ತಕ: ಪುನರ್ನವ: ಅಳಿದುಳಿದ ಕುರುಕ್ಷೇತ್ರದಲ್ಲಿ
ಸಚಿನ್ ನಾಯಕ್ ಅವರ ನೂತನ ಕೃತಿ ʼಪುನರ್ನವʼ ಮಹಾಭಾರತವನ್ನು, ಭೀಮನ ಬದುಕನ್ನುಆಧರಿಸಿದ ಕಾದಂಬರಿ. ಇದರಿಂದ ಆಯ್ದ ಭಾಗ (new kannada book extract) ಇಲ್ಲಿದೆ.
:: ಸಚಿನ್ ನಾಯಕ್
“ದುರ್ಯೋಧನ ಹತನಾದ, ಭೀಮ ಕೊಂದು ಮುಗಿಸಿದ. ದುರ್ಯೋಧನನ ತೊಡೆ ಮುರಿದು, ಅವನನ್ನು, ತೊಟ್ಟ ಪ್ರತಿಜ್ಞೆಯಂತೆಯೇ ದ್ವಂದ್ವ ಯುದ್ಧದಲ್ಲಿ ಮಣ್ಣು ಮುಕ್ಕಿಸಿ, ದೌಪದಿಯ ಅವಮಾನದ ಸೇಡು ತೀರಿಸಿಕೊಂಡ… ಯುದ್ಧ ಮುಗಿಯಿತು….ಪಾಂಡವರಿಗೇ ಜಯ…!!”
ಹದಿನೆಂಟನೇ ದಿನ ಎರಡೂ ಕಡೆಯ ಕೆಲವು ಅಳಿದುಳಿದ ಸೈನಿಕರು ಅಕ್ಷರಶಃ ಅರೆಜೀವವಾಗಿದ್ದರೂ ಉತ್ಸಾಹದಿಂದ ಕುಣಿಯುತ್ತಾ ಕೇಕೆ ಹಾಕುತ್ತಿದ್ದರು!! ಎರಡೂ ಕಡೆಯ ಸೈನ್ಯಗಳೂ ಸಂಪೂರ್ಣವಾಗಿ ನಾಶವಾಗಿದ್ದವು. ಉಳಿದುಕೊಂಡವರಲ್ಲಿ ಇನ್ನೆಲ್ಲಿಯ ಶತ್ರುತ್ವ? ಪರಸ್ಪರ ಗುರುತು ಪರಿಚಯ ಕೂಡ ಇಲ್ಲದ ಈ ಸೈನಿಕರಿಗೆ ತಾವು ಯಾರ ಕೈ ಕೆಳಗೆ ಹೋರಾಡಿದ್ದರೋ ಇಲ್ಲವಾದ ಮೇಲೆ ತಮ್ಮತಮ್ಮಲ್ಲಿ ಇನ್ನೆಲ್ಲಿಯ ದ್ವೇಷ?? ಅವರೂ
ಒಟ್ಟಾಗಿಯೇ ಇದ್ದ ಬದ್ದ ಶಕ್ತಿಯನ್ನೆಲ್ಲಾ ಒಗ್ಗೂಡಿಸಿಕೊಂಡು ಕೇಕೆ ಹಾಕುತ್ತಿದ್ದರು.
ಅಲ್ಲಲ್ಲಿ ಬಿದ್ದಿದ್ದ ಸೇನಾನಿಗಳ, ರಥಿಕರ ಶವಗಳಿಂದ ಆಭರಣ, ಶಸ್ತ್ರಾಸ್ತ್ರ ಅಥವಾ ಬೆಲೆಬಾಳುವ ವಸ್ತುವೇನಾದರೂ ಸಿಕ್ಕರೆ ಕಿತ್ತು ಇಟ್ಟುಕೊಳ್ಳುತ್ತಿದ್ದರು. ಹದಿನೆಂಟು ದಿನಗಳ ಈ ಮಹಾಮಾರಿಯ ನರ್ತನದಲ್ಲಿ ಬದುಕುಳಿದಿದ್ದೇ ಹೆಚ್ಚು ಎಂದು ಸುಮ್ಮನೆ ಕೈ ಬೀಸಿಕೊಂಡು ಮನೆಗೆ ಹೋಗಲಾದೀತೇ? ತಮ್ಮ ಪರಾಕ್ರಮವನ್ನು ಹೇಳಿಕೊಳ್ಳಲು, ತೋರಿಸಿಕೊಳ್ಳಲು ಏನಾದರೂ ಬೇಕಲ್ಲವೇ?? ಹಾಗಾಗಿ ಕಿರೀಟ, ಕತ್ತಿ, ಕುದುರೆಯ ವಾಫೆಯ ತಾಮ್ರದಪಟ್ಟಿ, ಹೀಗೆ ಕೈಗೆ ಸಿಕ್ಕಿದ್ದನ್ನೆಲ್ಲ ಕಿತ್ತುಕೊಳ್ಳುತ್ತಿದ್ದರು ಈ ಅರೆಸತ್ತ ಮನುಷ್ಯರು. ಸತ್ತವನಾದರೂ ಸರಿ, ಕೊಳೆತು ನಾರುತ್ತಿರುವ ಹೆಣವಾದರೂ ಸರಿ, ಲೋಹ ಕೊಳೆಯುವುದೇ??
ಇವರ ನಡುವೆಯೇ ಕೊಳೆತ ಹೆಣಗಳನ್ನು ಕುಕ್ಕಿ ಕುಕ್ಕಿ ತಿನ್ನುತ್ತಾ, ಹದಿನೆಂಟು ದಿನಗಳಿಂದ ಸತತವಾಗಿ ತಿಂದು ಹೊಟ್ಟೆಯೆಂಬುದು ಭೂಮಿಭಾರವಾಗಿದ್ದರೂ ತಮ್ಮತಮ್ಮಲ್ಲೇ ಒಂದೊಂದು ತುಣುಕು ಮಾಂಸಕ್ಕಾಗಿಯೂ
ಕಚ್ಚಾಡುತ್ತಿರುವ ರಣಹದ್ದುಗಳು. ತಿಳಿಗುಲಾಬಿ ಬಣ್ಣದ ಅವುಗಳ ಮುಖಗಳು ಮಾಂಸ ಮಜ್ಜೆ, ನೆತ್ತರಿನಿಂದ ಮೆತ್ತಲ್ಪಟ್ಟು ಕಪ್ಪು ಮಿಶ್ರಿತ ಕೆಂಪುಬಣ್ಣಕ್ಕೆ ತಿರುಗಿದ್ದವು. ದಿನಗಟ್ಟಲೆ ಸ್ನಾನ, ನೀರನ್ನೇ ಕಾಣದ ಬೆವರು ರಕ್ತದಿಂದ ದುರ್ನಾತ ಬೀರುತ್ತಿದ್ದ ಆ ಸೈನಿಕರಿಗೂ, ಆ ರಣಹದ್ದುಗಳಿಗೂ ಯಾವ ವ್ಯತ್ಯಾಸವೂ ಕಾಣುತ್ತಿರಲಿಲ್ಲ.
ಯುದ್ಧವೇನೋ ಮುಗಿಯಿತು, ಗೆದ್ದವರು ಯಾರು? ಅದಕ್ಕಿಂತ ಮುಖ್ಯವಾಗಿ, ಗೆದ್ದಿದ್ದೇನನ್ನು? ಕೊಳೆತ ಹೆಣಗಳ ದುರ್ನಾತ ಬೀರುತ್ತಿರುವ ಈ ನೆಲವೇ? ವಿಧವೆ, ಅನಾಥರಿಂದ ತುಂಬಿ ಗೊಳೋ ಎನ್ನುತ್ತಿರುವ ಹಸ್ತಿನಾವತಿಯೇ? ಮೂಳೆ, ಬುರುಡೆಗಳ ಭವ ಸಿಂಹಾಸನವನ್ನೇರುವನೇ ಸಾಮ್ರಾಟ ಯುಧಿಷ್ಠಿರ, ಪಕ್ಕದಲ್ಲಿ ರಾರಾಜಿಸುವಳೇ ಸಾಮ್ರಾಜ್ಞಿ ದೌಪದಿ?
ಶೀಘ್ರವೇ ಇಲ್ಲಿಂದ ತೆರಳಬೇಕು, ಭೀಮನನ್ನೂ ಕರೆದುಕೊಂಡು. ಸಾಕು ಈ ಪರಾಕ್ರಮ, ಪೌರುಷ, ಸಾಹಸ ಎಲ್ಲವೂ, ಇನ್ನು ಬಾಹುಬಲದ ಅಗತ್ಯವಿಲ್ಲ. ಅರಮನೆ, ಬೆಡಗು, ಬಿನ್ನಾಣ ಇವ್ಯಾವುದರ ಅಗತ್ಯವೂ ಇಲ್ಲ. ನನ್ನಣ್ಣ ಮಹಾರಾಜ ಸೇನೇಶನನ್ನು ಕೋರಿ ಗಂಗೆಯ ತಟದಲ್ಲಿ ಭೂಮಿಯ ತುಣುಕೊಂದನ್ನು ಪಡೆದುಕೊಂಡು, ಅಲ್ಲೊಂದು ಚಿಕ್ಕ ಸೌಧವನ್ನು ಕಟ್ಟಿಕೊಂಡು ನಾನು, ಭೀಮ ಇಬ್ಬರೇ… ಅಕ್ಕಪಕ್ಕದಲ್ಲಿ ವಿಶೋಕ ಚಿತ್ರೆಯರ
ಸಂಸಾರವೂ, ಗೌರಾಂಗಿಯೂ, ನೆಮ್ಮದಿಯಿಂದ ಬದುಕಿನ ಉಳಿದ ದಿನಗಳನ್ನು ಸರಳ ರೀತಿಯಲ್ಲಿ ಎಲ್ಲರೂ ಒಟ್ಟಾಗಿ ಶಾಂತಿ ಕಳೆಯಬೇಕು. ಸಾಂಗತ್ಯ ಒಂದಿದ್ದರೆ ಸಾಕಲ್ಲವೇ, ಒಬ್ಬರಿಗೊಬ್ಬರು. ಅದೇ ಅಲ್ಲವೇ ನಿಜವಾದ ಸಂಪತ್ತು !
ಬಲಂಧರೆಯ ಸಾಮ್ರಾಜ್ಯ ಅದೇ.
ಯುವರಾಜನಾಗಿ ಸರ್ವಗನಿಗೆ ಕರ್ತವ್ಯಗಳಿರುತ್ತವೆ. ಈ ಯುದ್ಧ ಅನುಭವ ಹಾಗೂ ಪಾಠ. ಇನ್ನೆಂದೂ ಆತ ಬಯಸಲಾರ, ಜನಪರ ಕಾರ್ಯಗಳನ್ನು ಕೈಗೊಳ್ಳುತ್ತಾ ಉತ್ತಮ ಆಡಳಿತಗಾರ ಎನಿಸಿಕೊಂಡರೆ ಸಾಕಲ್ಲವೇ! ಹೌದು! ಇವನಲ್ಲಿ ನನ್ನ ಮಗ ಸರ್ವಗ, ಇನ್ನೂ ಬಂದಿಲ್ಲವಲ್ಲ ಭೇಟಿಯಾಗಲು?? ವಿಜಯೋತ್ಸವ ಆಚರಿಸುತ್ತಿರುವರೇ ಪಾಂಡವರು, ಏನಿದೆ ಆಚರಿಸಲು?? ಬರುತ್ತಾನೆ, ಪಾಪ ಆಯಾಸದಿಂದ ಮಲಗಿ ವಿಶ್ರಾಂತಿ ಪಡೆಯುತ್ತಿರಬೇಕು. ನಾಳೆ ಬೆಳಿಗ್ಗೆ ಎದ್ದು ಬರಲಿ, ವಯಸ್ಸಿಗೆ ಮೀರಿದ ಅನುಭವ, ಆಪ್ತರಾದ ಅಭಿಮನ್ಯು ಹಾಗು ಘಟೋತ್ಕಚರ ಸಾವನ್ನು ಕಣ್ಣೆದುರೇ ನೋಡಿದ ಆ ಎಳೆಯ ಹರೆಯದ ಹುಡುಗನ ಮನಃಸ್ಥಿತಿ ಹೇಗಿರಬಹುದು? ಅಲ್ಲಿ ಕಾಶಿಯಲ್ಲಿ
ಅವನ ಪತ್ನಿಗೆ ಬಹುಶಃ ಪ್ರಸವವಾಗಿರಲೂಬಹುದೇ? ಕೆಲ ದಿನಗಳಲ್ಲಿಯೇ ಇವೆಲ್ಲಾ ದುಃಸ್ವಪ್ನಗಳನ್ನೂ ಬದಿಗೊತ್ತಿ ಹೊಸ ಜೀವನಕ್ಕೆ ತನ್ನನ್ನು ತಾನು ತೆರೆದುಕೊಳ್ಳಬೇಕು ಆತ. ಅವನಿಗೆ ನನ್ನ ಭೀಮನ ಮಾರ್ಗದರ್ಶನದ ಅಗತ್ಯ ತುಂಬಾ ಇದೆಯಲ್ಲವೇ? ನಿರ್ವಹಿಸಬಲ್ಲ ನಮ್ಮ ಮಗ, ಅವನಲ್ಲಿ ಆ ಯೋಗ್ಯತೆ ಇದೆ. ವಿಶ್ರಾಂತಿ ತೆಗೆದುಕೋ ಕಂದ, ನಾಳೆಯಿಂದ ಹೊಸ ಜೀವನಕ್ಕೆ ಪಯಣಿಸುವ.
” ಅ….ಯ್ಯೋ…..!”
ಮುಗಿಲನ್ನೇ ಭೇದಿಸುವಂತಹ ಆರ್ತನಾದ!! ಹೆಣ್ಣಿನದೋ? ಗಂಡಿನದೋ? ಗುರುತಿಸಲಾಗದಷ್ಟು ಕರ್ಕಶವಾಗಿತ್ತು ಆ ಚೀತ್ಕಾರ! ಆ ಕಡೆಯ ಶಿಬಿರದತ್ತಣಿಂದ ಬಂತಲ್ಲವೇ ಕೂಗು? ಇನ್ನೊಮ್ಮೆ ಮತ್ತೊಮ್ಮೆ…. ಇತ್ತಲಿಂದ ಯಾರೋ ಆ ಕಡೆ ಓಡಿದರು. ಅವರ ಧ್ವನಿಯೂ ಆ ಚೀತ್ಕಾರದೊಂದಿಗೇ ಸೇರಿ…!!!! ತಟ್ಟನೆ ನನ್ನ ಶಿಬಿರದ ಪರದೆಯನ್ನು ಸರಿಸಿ ಒಳಗೆ ಬಂದ ಹೆಣ್ಣು ನನ್ನನ್ನು ಎಬ್ಬಿಸಿ ಕರೆದುಕೊಂಡು ಹೋಯಿತು.
ಕೃತಿ: ಪುನರ್ನವ (ಕಾದಂಬರಿ)
ಲೇಖಕ: ಸಚಿನ್ ನಾಯಕ್
ಪ್ರಕಾಶನ: ಬಿಎಫ್‌ಸಿ ಪಬ್ಲಿಕೇಶನ್ಸ್
ಬೆಲೆ: 280 ರೂ.
ಇದನ್ನೂ ಓದಿ: Sunday Read: ಹೊಸ ಪುಸ್ತಕ: ನಾ.ಮೊಗಸಾಲೆ ಕಾದಂಬರಿ: ನೀರು
-
ಪ್ರಮುಖ ಸುದ್ದಿ14 hours ago
Lina Mukherjee: ಇಸ್ಲಾಮಿಕ್ ದೇಶದಲ್ಲಿ ಹಂದಿ ಮಾಂಸ ತಿಂದ ಟಿಕ್ಟಾಕ್ ಸ್ಟಾರ್ಗೆ 2 ವರ್ಷ ಜೈಲು ಶಿಕ್ಷೆ!
-
ಪ್ರಮುಖ ಸುದ್ದಿ6 hours ago
Ipsos poll Survey: ಟ್ರುಡೋ ಜನಪ್ರಿಯತೆ ಕುಸಿತ, ಕೆನಡಾ ಪಿಎಂ ಆಗಲು ಪ್ರತಿಪಕ್ಷ ನಾಯಕನೇ ಬೆಸ್ಟ್!
-
ಉಡುಪಿ12 hours ago
FB Profile Deleted: 20ಕ್ಕೂ ಅಧಿಕ ಹಿಂದು ಜಾಗರಣ ವೇದಿಕೆ ನಾಯಕರ ಫೇಸ್ ಬುಕ್ ಪ್ರೊಫೈಲ್ ಏಕಕಾಲದಲ್ಲಿ ಡಿಲೀಟ್!
-
ಗ್ಯಾಜೆಟ್ಸ್8 hours ago
YouTube: ಯುಟ್ಯೂಬ್ ವಿಡಿಯೋ ಮಾಡುವುದು ಇನ್ನೂ ಸುಲಭ! ಹೊಸ ಎಡಿಟಿಂಗ್ ಆ್ಯಪ್ ಲಾಂಚ್
-
ಆರೋಗ್ಯ17 hours ago
Health Tips: ಎಳನೀರು ಒಳ್ಳೆಯದೆಂದು ಕುಡಿಯುವ ಮೊದಲು ಅದರ ಅವಗುಣಗಳೂ ಗೊತ್ತಿರಲಿ!
-
ದೇಶ7 hours ago
Prisoners Escape: ವ್ಯಾನ್ನಿಂದ ಜಿಗಿದು ಇಬ್ಬರು ಕೈದಿಗಳು ಪರಾರಿ; ಕತ್ತೆ ಕಾಯುತ್ತಿದ್ದ ಪೊಲೀಸರು!
-
ಕ್ರಿಕೆಟ್11 hours ago
ind vs aus : ಮೊದಲ ಪಂದ್ಯದಲ್ಲಿ ಭಾರತ ತಂಡಕ್ಕೆ ಜಯ, ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ 1-0 ಮುನ್ನಡೆ
-
ದೇಶ11 hours ago
Udhayanidhi Stalin: ಸನಾತನ ಧರ್ಮ; ಉದಯನಿಧಿ ಸ್ಟಾಲಿನ್ಗೆ ಸುಪ್ರೀಂ ನೋಟಿಸ್, ಎದುರಾಯ್ತು ಸಂಕಷ್ಟ