ಬೆಂಗಳೂರು: ಪಠಾಣ್ ಸಿನಿಮಾದ ವಿವಾದಾತ್ಮಕ ʻಬೇಷರಮ್ ರಂಗ್’ ಹಾಡಿನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ್ದಾರೆ ಎನ್ನುವ ವಿವಾದ ತಾರಕಕ್ಕೇರಿತ್ತು. ಹಾಡಿನ ಸಾಹಿತ್ಯ ಕೂಡ ತೀವ್ರ ವಿವಾದ ಸೃಷ್ಟಿಸಿತ್ತು. ಇದೀಗ ಬೇಷರಮ್ ರಂಗ್ ಹಾಡಿನ ಬಗ್ಗೆ ಚಲನಚಿತ್ರ ಕ್ಷೇತ್ರದ ಹೆಸರಾಂತ ಹಿರಿಯ ನಟ ಅನಂತ್‌ನಾಗ್ ಖಡಕ್ ಆಗಿ ಪ್ರತಿಕ್ರಿಯಿಸಿದ್ದು, ” ಮಹಿಳೆಯನ್ನು ಈ ರೀತಿ ಅಶ್ಲೀಲವಾಗಿ ತೋರಿಸುವುದು ನಮ್ಮ ಭಾರತೀಯ ಸಂಸ್ಕೃತಿಯ ಭಾಗವಲ್ಲ. ಆದ್ದರಿಂದ ಭಾರತೀಯ ಸಿನಿಮಾ ಭವಿಷ್ಯದಲ್ಲಿ ಇಂಥ ನಗ್ನತೆಯ ದೃಶ್ಯಗಳ ಪ್ರದರ್ಶನವನ್ನು ಸ್ಥಗಿತಗೊಳಿಸಬೇಕು ಎಂದು ಹೇಳಿದ್ದಾರೆ.
ಸಿನಿಮಾ ಅಥವಾ ಟಿವಿ ಇರಬಹುದು ಇಂಥ ನಗ್ನತೆಯ ಪ್ರದರ್ಶನ ಸಲ್ಲದು. ಇದು ನಮ್ಮ ಸಂಸ್ಕೃತಿ ಮತ್ತು ಪರಂಪರೆಗೆ ಖಂಡಿತವಾಗಿಯೂ ವಿರುದ್ಧವಾಗಿದ್ದು, ಜನರ ನಡುವೆ ಸಂಘರ್ಷವನ್ನು ಹುಟ್ಟಿಸಬಲ್ಲುದು. ಆದ್ದರಿಂದ ಸಮಾಜಕ್ಕೆ ಹಿತವಲ್ಲ ಎಂದು ಅನಂತ್‌ನಾಗ್ ಅವರು ಹೇಳಿದ್ದಾರೆ.
ಸೆನ್ಸಾರ್ ಮಂಡಳಿ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿರುತ್ತಿದ್ದರೆ ಆರಂಭದಲ್ಲಿಯೇ ಈ ವಿವಾದವನ್ನು ತಡೆಯಬಹುದಿತ್ತು. ಸಿನಿಮಾ ಬಿಡಿ, ಒಟಿಟಿ ಕಂಟೆಂಟ್‌ಗಳನ್ನು ನೋಡಿದರೆ, ಅಶ್ಲೀಲ, ಹಿಂಸಾತ್ಮಕತೆಯ ಪ್ರದರ್ಶನ ಮಿತಿ ಮೀರಿದೆ. ಯಾರೊಬ್ಬರೂ ಅವುಗಳನ್ನು ತಡೆಯುತ್ತಿಲ್ಲ ಎಂದು ಅನಂತ್‌ನಾಗ್ ವಿವರಿಸಿದ್ದಾರೆ.
ಶಾರುಖ್ ಖಾನ್-ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಸಿನಿಮಾ ಜನವರಿ 25ಕ್ಕೆ ಬಿಡುಗಡೆಯಾಗಲಿದೆ.