Site icon Vistara News

Electric bike Taxi service : ರಾಜ್ಯದಲ್ಲಿ ಆ್ಯಪ್‌ ಆಧಾರಿತ ಎಲೆಕ್ಟ್ರಿಕ್‌ ಬೈಕ್‌ ಟ್ಯಾಕ್ಸಿ ಸೇವೆ ಸ್ಟಾಪ್‌

Electric bike taxi service

ಬೆಂಗಳೂರು:​ ಮಹತ್ವದ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರ (Karnataka Government) ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೇವೆಯನ್ನು (Electric bike Taxi service) ರದ್ದು ಪಡಿಸಿದೆ. ಇನ್ನು ಮುಂದೆ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಬಳಸಿ ಸಂಚಾರ ಸೇವೆಯನ್ನು ನೀಡುವಂತಿಲ್ಲ. ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ -2021ನ್ನು ರದ್ದುಗೊಳಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಇದರಿಂದಾಗಿ ಇನ್ನು ಮುಂದೆ ಯಾರೂ ಎಲೆಕ್ಟ್ರಿಕ್‌ ಬೈಕ್‌ಗಳನ್ನು ಹಣ ಪಡೆದು ಸೇವೆ ನೀಡಲು ಬಳಸುವಂತಿಲ್ಲ.

ಹಿಂದಿನ ಬಿಜೆಪಿ ಸರ್ಕಾರವು 2021ರ ಜುಲೈ 14ರಂದು ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿತ್ತು. ಇದೀಗ ಕಾಂಗ್ರೆಸ್‌ ಸರ್ಕಾರ, ಸಾರ್ವಜನಿಕರಿಂದ ಕೇಳಿಬಂದ ಹಲವು ದೂರುಗಳು ಮತ್ತು ಸಮೀಕ್ಷೆಯ ಬಳಿಕ ಅನುಮತಿಯನ್ನು ವಾಪಸ್ಸು ಪಡೆದುಕೊಂಡಿದೆ.

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ವಿರುದ್ದ ಬೃಹತ್ ಹೋರಾಟ ಹಿಂದಿನಿಂದಲೇ ನಡೆದುಕೊಂಡು ಬಂದಿದೆ. ಆಟೋ, ಟ್ಯಾಕ್ಸಿ, ಮ್ಯಾಕ್ಸಿ, ಕ್ಯಾಬ್ ಚಾಲಕರಂತೂ ಬೈಕ್ ಟ್ಯಾಕ್ಸಿ ವಿರುದ್ಧ ಬಾರಿ ಹೋರಾಟವನ್ನೇ ಮಾಡಿದ್ದರು. ಮಹಿಳೆಯರಿಗೆ ಬೈಕ್‌ ಟ್ಯಾಕ್ಟಿ ಅಸುರಕ್ಷಿತವಾದ ಯೋಜನೆ ಎಂಬ ಕೂಗು ಕೇಳುತ್ತಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ-2021 ರದ್ದುಗೊಳಿಸಿ ಆದೇಶ ಹೊರಡಿಸಿದೆ.

Electric bike taxi service rapido

ಸಮಿತಿಯ ವರದಿ ಪಡೆದು ತೀರ್ಮಾನ

ಬೈಕ್‌ ಟ್ಯಾಕ್ಸಿ ಯೋಜನೆಯನ್ನು ಪ್ರಮುಖವಾಗಿ ಮೆಟ್ರೋ ಪ್ರಯಾಣಿಕರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಜಾರಿ ಮಾಡಲಾಗಿತ್ತು. ಅದರ ಬಗ್ಗೆ ಅಪಸ್ವರಗಳು ಕೇಳಿಬಂದ ಹಿನ್ನೆಲೆಯಲ್ಲಿ ಬಿಎಂಆರ್​ಸಿಎಲ್ (BMRCL) ಎಂ.ಡಿ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ ಅಧ್ಯಯನಕ್ಕೆ ಸೂಚಿಸಲಾಗಿತ್ತು. ಇದೀಗ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆಯು ಮೋಟಾರ್ ವಾಹನ ಕಾಯ್ದೆಗೆ ಪೂರಕವಾಗಿಲ್ಲ ಎಂದು ವರದಿ ತಿಳಿಸಿದೆ. ಇದನ್ನು ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್ ಅವರು ಪರಿಗಣಿಸಿ ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ 2021 ಉದ್ದೇಶವೇನಿತ್ತು?

‘ಕರ್ನಾಟಕ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ- 2021’ ಯೋಜನೆ ಮುಖ್ಯ ಉದ್ದೇಶ ಸಾರ್ವಜನಿಕರು ತಮ್ಮ ಮನೆಗಳಿಂದ ಬಸ್ ನಿಲ್ದಾಣಗಳು, ರೈಲ್ವೆ ಮತ್ತು ಮೆಟ್ರೋ ಸ್ಟೇಷನ್‌ಗಳಿಗೆ ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ತೆರಳುವಂತೆ ಮಾಡುವುದಾಗಿತ್ತು. ವೇಗವಾಗಿ ಮತ್ತು ತ್ವರಿತವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಅನುಕೂಲವಾಗುತ್ತಿತ್ತು. ಆದರೆ, ಕರ್ನಾಟಕ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ ಮಹಿಳೆಯರಿಗೆ ಅಸುರಕ್ಷಿತ ಎಂಬುದು ಹಲವು ಘಟನೆಗಳಿಂದ ಸಾಬೀತಾಗಿತ್ತು. ಹೀಗಾಗಿ ಅದರ ವಿರುದ್ಧ ಜನಾಕ್ರೋಶ ಹೆಚ್ಚಾಗಿತ್ತು.

ಇದನ್ನೂ ಓದಿ : Physical Abuse : ಯುವತಿಗೆ ಲೈಂಗಿಕ ಕಿರುಕುಳ ನೀಡಿದ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸವಾರ ಅರೆಸ್ಟ್

ಸರ್ಕಾರ ಹೊರಡಿಸಿದ ಹೊಸ ಆದೇಶದಲ್ಲಿ ಏನಿದೆ?

ಸರ್ಕಾರದ ಅಧಿಸೂಚನೆ 14/7/2021ರ ಅನ್ವಯ ಸಾರ್ವಜನಿಕ ಸಾರಿಗೆಗಾಗಿ ಮೊದಲ ಮತ್ತು ಕೊನೆಯ ಹಂತದ ಸಾರಿಗೆ ಸಂಪರ್ಕವನ್ನು ಕಲ್ಪಿಸುವ ಮತ್ತು ಸ್ವಯಂ ಉದ್ಯೋಗ ಅವಕಾಶವನ್ನು ಒದಗಿಸುವ ಉದ್ದೇಶದಿಂದ, ಮೋಟಾರು ವಾಹನ ಕಾಯ್ದೆ 1988ರ (1998ರ ಕೇಂದ್ರ ಅಧಿನಿಯಮ 59ರ ಕಲಂ 2ರ ಉಪಕಲಂ (1) ಕ್ರಮ ಸಂಖ್ಯೆ: 38(ಎ) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯದಲ್ಲಿನ ಎಲ್ಲಾ ನಗರ ಪ್ರದೇಶಗಳಿಗೆ ಅನ್ವಯಿಸುವಂತೆ ‘ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ 2021’ ಅನ್ನು ಜಾರಿಗೆ ತರಲಾಗಿತ್ತು.

ಕರ್ನಾಟಕ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಯ ಅಗತ್ಯತೆ ಮತ್ತು ಜಾರಿಯ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರು, BMRCL ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯ ವರದಿಯಲ್ಲಿ ಬೈಕ್ ಟ್ಯಾಕ್ಸಿ ಯೋಜನೆಗೆ ಸಂಬಂಧಿಸಿದಂತೆ ವರದಿಯು ಪೂರಕವಾಗಿರುವುದಿಲ್ಲವೆಂದು ತಿಳಿಸಿದೆ. ಪ್ರಸ್ತುತ ಕೆಲವು ಖಾಸಗಿ ಅಪ್ಲಿಕೇಶನ್ ಆಧಾರಿತ ಸಂಸ್ಥೆಗಳು ಮೋಟಾರು ವಾಹನ ಕಾಯ್ದೆ ಮತ್ತು ಅದರಡಿ ರಚಿತವಾದ ನಿಯಮಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಸಾರಿಗೇತರ (Non-transport) ದ್ವಿಚಕ್ರ ವಾಹನಗಳನ್ನು ಸಾರಿಗೆ (Transport) ವಾಹನಗಳನ್ನಾಗಿ ಉಪಯೋಗಿಸುತ್ತಿರುವುದು ಕಂಡುಬಂದಿರುತ್ತದೆ. ಹೀಗಾಗಿ ಯೋಜನೆಯನ್ನು ರದ್ದು ಮಾಡಲಾಗಿದೆ.

Exit mobile version