ಬೆಂಗಳೂರು: ಭೀಕರ ಬರಗಾಲದಿಂದ ಜನರು ತತ್ತರಿಸಿದ್ದಾರೆ. ರಾಜಧಾನಿ ಬೆಂಗಳೂರಲ್ಲಿ ನೀರಿಗಾಗಿ ಹಾಹಾಕಾರ (Water Crisis) ಶುರುವಾಗಿದೆ. ಹೀಗಾಗಿ ನಗರದಲ್ಲಿ ಕೊಳವೆ ಬಾವಿ ಕೊರೆಯುವ (Permission to drill borewells) ಮುನ್ನ ಅನುಮತಿಯನ್ನು ಕಡ್ಡಾಯಗೊಳಿಸಲಾಗಿದೆ. ಅನುಮತಿ ಪಡೆಯದೇ ಕೊಳವೆ ಬಾವಿ ಕೊರೆಸಿದರೆ ಕಾನೂನು ಕ್ರಮದ ಎಚ್ಚರಿಕೆಯನ್ನು ಜಲಮಂಡಳಿ ನೀಡಿದೆ.
ಬೋರ್‌ವೆಲ್ ಕೊರೆಸಬೇಕಾದರೆ ಅನುಮತಿಗಾಗಿ ಜಲಮಂಡಳಿಯ ವೆಬ್ ಸೈಟ್‌ನಲ್ಲಿ ಮೊದಲು ಅರ್ಜಿ ಸಲ್ಲಿಸಬೇಕು. ಅಧಿಕಾರಿಗಳಿಂದ ಅನುಮತಿ ಪಡೆದು ಬೋರ್‌ವೆಲ್ ಕೊರೆಸಬೇಕು. ಬೋರ್‌ವೆಲ್ ಕೊರೆಸಲು ಅನುಮತಿ ಅರ್ಜಿ ಸಲ್ಲಿಸುವಿಕೆಗೆ ಮಾ.15ರಿಂದ ಅವಕಾಶ ಕಲ್ಪಿಸಲಾಗುತ್ತಿದೆ.
ಯಾವ್ಯಾವ ನಿಯಮಗಳನ್ನು ಪಾಲಿಸಬೇಕು?
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬೋರ್‌ವೆಲ್‌ಗಳನ್ನು ಕೊರೆಸುವವರು ಅನುಮತಿ ಪಡೆದಿರುವ ಜಾಗದಲ್ಲಿ ಮಾತ್ರ ಕೊರೆಸಬೇಕು. ಒಂದು ವೇಳೆ ಅನುಮತಿ ಪಡೆಯದೇ ಇರುವ ಸ್ಥಳಗಳಲ್ಲಿ ಬೋರ್‌ವೆಲ್‌ಗಳನ್ನು ಕೊರೆಸಿದರೆ ಅಂತಹ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಚ್ಚರಿಕೆ ನೀಡಿದೆ.
ಅಂತರ್ಜಲವನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡುವ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಆದೇಶ ಹೊರಡಿಸಿರುವ ಮಂಡಳಿಯು ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) ಅಧಿನಿಯಮ 2011ರ ಕಂಡಿಕೆ 17 ರ ಅಧಿಕಾರದನ್ವಯ ನಿಯಮಾನುಸಾರ ರಿಗ್ ಪಡೆಯಲು ನೀಡಿರುವ ಅನುಮತಿಯನ್ನು ಕೂಡಲೇ ರದ್ದುಪಡಿಸಲು ಕ್ರಮವಹಿಸಲಾಗುತ್ತಿದೆ. ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾದ್ ಮನೋಹರ್ ಅವರು ತಿಳಿಸಿದ್ದಾರೆ.
ಇನ್ನು ಮುಂದೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕರ್ನಾಟಕ ಅಂತರ್ಜಲ ಅಧಿನಿಯಮ 2011ರ ಕಂಡಿಕೆ 11 ರನ್ವಯ ಎಲ್ಲಾದರು ಸಂಬಂಧಪಟ್ಟ ಪ್ರಾಧಿಕಾರಿಯಿಂದ ಅನುಮತಿ ಪಡೆಯದೇ ಕೊಳವೆ ಬಾವಿಗಳನ್ನು ಕೊರೆದಲ್ಲಿ ಕೊಳವೆಬಾವಿಯನ್ನು ಕೊರೆಸುವ ಮಾಲೀಕರ ವಿರುದ್ಧ ನಿಯಮ ಉಲ್ಲಂಘನೆ ಮಾಡಿರುವುದ್ದಾಗಿ ದೂರು ಹಾಗೂ ಅಂತವರ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ಜರುಗಿಸಲಾಗುತ್ತದೆ.
ಇದನ್ನೂ ಓದಿ: Water Crisis : ಬೆಂಗಳೂರಿಗರೇ ಭಯ ಬೇಡ; ಕುಡಿಯುವ ನೀರಿನ ಕೊರತೆ ಇಲ್ಲ, ಆದರೆ ..
ಮಾರ್ಚ್ 15ರಿಂದಲೇ ಆದೇಶ ಜಾರಿ
ಈ ಆದೇಶವು ಇದೇ ಮಾ.15 ರಿಂದ ಜಾರಿಗೆ ಬರಲಿದೆ. ಮಾ.15 ರಿಂದ ಬೆಂಗಳೂರು ಜಲಮಂಡಳಿ ಜಾಲತಾಣದಲ್ಲಿ ಕೊಳವೆಬಾವಿ ಕೊರೆಸಲು ಅನುಮತಿ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಅನುಮತಿ ಕೇಳಿದ್ದಲ್ಲಿ ಸಾರ್ವಜನಿಕ ಕೊಳವೆ ಬಾವಿಗಳಿಗೆ ಪ್ರಥಮ ಆಧ್ಯತೆ ನೀಡಲಾಗುವುದು. ಖಾಸಗಿ ಕೊಳವೆಬಾವಿಗಳಿಗೆ ಅಂತರ್ಜಲ ಮಟ್ಟ, ಅವಶ್ಯಕತೆ ಹಾಗೂ ತಜ್ಞರ ವರದಿ ಆಧಾರಿಸಿ ಸಂಬಂಧಪಟ್ಟವರಿಂದ ಸ್ಥಳ ಪರಿಶೀಲಿಸಿ ನಂತರ ನಿಯಮಾನುಸಾರ ಪ್ರಾಧಿಕಾರದಿಂದ ಅನುಮತಿ ನೀಡಲಾಗುವುದು ತಿಳಿಸಿದ್ದಾರೆ.
ಬೆಂಗಳೂರು ಮಹಾನಗರದಲ್ಲಿ ಮಳೆ ನೀರಿನ ಕೊರತೆಯಿಂದಾಗಿ ಅಂತರ್ಜಲ ಮಟ್ಟ ಕುಸಿದಿದೆ. ನಗರದಲ್ಲಿನ ಸಾಕಷ್ಟು ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಅಂತರ್ಜಲ ನೀರಿನ ಮಟ್ಟ ಕಡಿಮೆಯಾಗಿದೆ. ಬೆಂಗಳೂರು ನಗರದಲ್ಲಿ ವೈಯಕ್ತಿಕ ಅಥವಾ ಇನ್ನಿತರೆ ಬಳಕೆಗೆ ಕೊಳವೆ ಬಾವಿಗಳನ್ನು ಕೊರೆಯುವ ಮುನ್ನ ಸಂಬಂಧಪಟ್ಟ ಪ್ರಾಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಅವೈಜ್ಞಾನಿಕವಾಗಿ ಕೊಳವೆ ಬಾವಿಗಳನ್ನು ಕೊರೆಯುತ್ತಿರುವುದು ಹಾಗೂ ನಿಯಮಾನುಸಾರ ಕೊಳವೆ ಬಾವಿಗಳನ್ನು ಕೊರೆಯುವ ಮುನ್ನ ಸಂಬಂಧಪಟ್ಟ ಪ್ರಾಧಿಕಾರಿಗಳಿಂದ ಅನುಮತಿ ಪಡೆಯದೇ ಇರುವುದರಿಂದ ಬೆಂಗಳೂರು ನಗರದ ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಅಂತರ್ಜಲವನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡುವ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಈ ನಿರ್ಣಯ ಕೈಗೊಳ್ಳಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ