Site icon Vistara News

Physical Abuse : ಸ್ಕೂಟರ್‌ ಅಡ್ಡಗಟ್ಟಿ ಯುವತಿ ಬಟ್ಟೆ ಹಿಡಿದು ಎಳೆದಾಡಿದ ಕಾಮುಕ!

Physical abuse in bengaluru

ಬೆಂಗಳೂರು: ರಾತ್ರಿ ಕೆಲಸ ಮುಗಿಸಿ ಮನೆಗೆ ಸ್ಕೂಟರ್‌ನಲ್ಲಿ ವಾಪಸ್‌ ಆಗುತ್ತಿದ್ದ ಯುವತಿಯನ್ನು ಕಾಮುಕನೊಬ್ಬ (Physical Abuse) ಹಿಂಬಾಲಿಸಿದ್ದಾನೆ. ಬಳಿಕ ಒಮ್ಮೆಲೆ ಸ್ಕೂಟರ್‌ಗೆ ಅಡ್ಡಗಟ್ಟಿದ್ದಾನೆ. ನಂತರ ನಡುರಸ್ತೆಯಲ್ಲೇ ಯುವತಿಯ ಬಟ್ಟೆಯನ್ನು ಹಿಡಿದು ಎಳೆದಾಡಿದ್ದಾನೆ.

ಜಯನಗರದ ಸೌತ್‌ ಎಂಡ್‌ ಸರ್ಕಲ್‌ನಲ್ಲಿ ಬಳಿ ಇರುವ ಉಪ ಪೊಲೀಸ್ ಆಯುಕ್ತರ ಕಚೇರಿ ಸಮೀಪವೇ ಈ ದುರ್ಘಟನೆ ನಡೆದಿದೆ. ಯುವತಿ ಕೆಲಸ ಮುಗಿಸಿ ರಾತ್ರಿ ಸುಮಾರು 10:40ರ ಸುಮಾರಿಗೆ ಕೂಡ್ಲುಗೇಟ್‌ನಿಂದ ಬಸವನಗುಡಿ ಕಡೆ ಬರುತ್ತಿದ್ದರು.

ಈ ವೇಳೆ ವೈಟ್ ಸ್ವೆಟ್ ಶರ್ಟ್ ಹಾಗೂ ಹ್ಯಾಟ್ ಧರಿಸಿಕೊಂಡು ಬಂದಿದ್ದ ಅಪರಿಚಿತನೊಬ್ಬ ಯುವತಿಯನ್ನು ಸ್ವಲ್ಪ ದೂರ ಹಿಂಬಾಲಿಸಿದ್ದಾನೆ. ಬಳಿಕ ಸೌತ್‌ ಎಂಡ್ ಸರ್ಕಲ್ ಬಳಿ ಏಕಾಏಕಿ ಅಡ್ಡಗಟ್ಟಿ ಬಳಿಕ ಯುವತಿಯ ಬಟ್ಟೆ ಹಿಡಿದು ಎಳೆದಾಡಿ ಲೈಂಗಿಕ ಕಿರುಕುಳ ನೀಡಿದ್ದಾನೆ.

ಮಾತ್ರವಲ್ಲದೆ ಯುವತಿ ಕಿರುಚಾಡಲು ಶುರು ಮಾಡುತ್ತಿದ್ದಂತೆ ಅಶ್ಲೀಲ ಪದಗಳಿಂದ ನಿಂದಿಸಿ ಕಾಮುಕ ಪರಾರಿ ಆಗಿದ್ದಾನೆ. ಸದ್ಯ ಯುವತಿ ಈ ಸಂಬಂಧ ಜಯನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಕಾಮುಕನಿಗಾಗಿ ಹುಡುಕಾಟ ನಡೆಸಿದ್ದಾರೆ.

ವಸತಿ ಶಾಲೆಯ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ

ಚಿಕ್ಕಮಗಳೂರು: ವಸತಿ ಶಾಲೆಗೆ ಮಕ್ಕಳನ್ನು ಕಳಿಸಿ ಓದಿಸುವ ಪೋಷಕರು ಇನ್ನಷ್ಟು ಎಚ್ಚರ ವಹಿಸಬೇಕಿದೆ. ಚಿಕ್ಕಮಗಳೂರಲ್ಲಿ (chikkamagaluru news) ಶಿಕ್ಷಣ ಇಲಾಖೆ ತಲೆತಗ್ಗಿಸುವಂಥ ಘೋರ ಘಟನೆ ನಡೆದಿದೆ. ವಸತಿ ಶಾಲೆಯ ಹೆಣ್ಣುಮಕ್ಕಳನ್ನು ಪ್ರಜ್ಞೆ ತಪ್ಪಿಸಿ ಲೈಂಗಿಕವಾಗಿ ಬಳಸಿಕೊಂಡವರನ್ನು (physical abuse, pocso case) ಬಂಧಿಸಲಾಗಿದೆ.

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸರ್ಕಾರಿ ಅಧಿಕಾರಿಯಿಂದಲೇ ಅಮಾಯಕ ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಕ್ರೂರ ಕೃತ್ಯ ನಡೆದಿದೆ. ವಸತಿ ಶಾಲೆ ವಿದ್ಯಾರ್ಥಿನಿಯರಿಗೆ ಪ್ಯಾರಾ ನರ್ಸಿಂಗ್ ಕೋರ್ಸ್ ಹೆಸರಲ್ಲಿ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ.

ಚಿಕ್ಕಮಗಳೂರು ಕಡೂರು ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು, ಘಟನೆ ಸಂಬಂಧ ಮೂವರನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ. ವಸತಿ ಶಾಲೆಯ ಡಿ. ದರ್ಜೆ ನೌಕರ ಸುರೇಶ್, ಶುಶ್ರೂಷಕಿ ಚಂದನ ಹಾಗೂ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ನರ್ಸ್ ಪ್ರಿಯಕರ ವಿನಯ್ ಎಂಬವರನ್ನು ಬಂಧಿಸಲಾಗಿದೆ.

ವಿದ್ಯಾರ್ಥಿನಿಯರಿಗೆ ಅಮಲು ಬರೆಸುವ ಔಷಧಿ ನೀಡಿ ಲೈಂಗಿಕ ದೌರ್ಜನ್ಯ ಎಸಗಲಾಗುತ್ತಿತ್ತು ಎಂದು ಗೊತ್ತಾಗಿದೆ. ಆರೋಪಿಗಳು ವಸತಿ ಶಾಲೆಯ ಹಲವು ಮಕ್ಕಳನ್ನು ಬಳಸಿಕೊಂಡಿರುವ ಅನುಮಾನವಿದೆ. ತಿಂಗಳುಗಳಿಂದ ಈ ಕೃತ್ಯ ನಡೆಯುತ್ತಿತ್ತು ಎಂದು ಪೊಲೀಸರ ತನಿಖೆಯಿಂದ ಬಯಲಾಗಿದೆ.

ಸುರೇಶ್ ಪ್ಯಾರಾ ಮೆಡಿಕಲ್ ಕೋರ್ಸ್‌ ಕೊಡಿಸುತ್ತೇನೆ ಎಂದು ವಿದ್ಯಾರ್ಥಿನಿಯರನ್ನು ಪುಸಲಾಯಿಸುತ್ತಿದ್ದ. ಪರೀಕ್ಷೆಯಲ್ಲಿ ಪಾಸಾದರೆ ಕೆಲಸ ಸಿಗುತ್ತದೆ ಎಂದು ನಂಬಿಸುತ್ತಿದ್ದ. ಒಪ್ಪಿದ ಮಕ್ಕಳ ಪೋಷಕರನ್ನು ನಂಬಿಸಿ ವಿದ್ಯಾರ್ಥಿನಿಯರನ್ನು ಚಂದನಾ ಬಳಿ ಕಳಿಸುತ್ತಿದ್ದ. ಚಂದನಾ ಆರೋಗ್ಯ ಕೇಂದ್ರಕ್ಕೆ ಬರುವ ವಿದ್ಯಾರ್ಥಿನಿಯರನ್ನು ಅಲ್ಲೇ ಉಳಿಸಿಕೊಳ್ಳುತ್ತಿದ್ದಳು. ಕಾಫಿ- ಟೀಯಲ್ಲಿ ಮತ್ತು ಬರುವ ಔಷಧಿ ಬೆರೆಸಿ ವಿದ್ಯಾರ್ಥಿನಿಯರಿಗೆ ನೀಡುತ್ತಿದ್ದಳು. ಅರೆಪ್ರಜ್ಞಾವಸ್ಥೆಯಲ್ಲಿರುತ್ತಿದ್ದ ಮಕ್ಕಳ ಮೇಲೆ ಚಂದನಾ ಲವರ್ ವಿನಯ್ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂದು ತಿಳಿದುಬಂದಿದೆ. ಆರೋಪಿಗಳಿಗೆ ಸೂಕ್ತ ಶಿಕ್ಷೆ ನೀಡಲು ಪೋಷಕರು ಒತ್ತಾಯಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version