Site icon Vistara News

Namma Metro : ನೀವು ಮೆಟ್ರೋ ಪ್ರಯಾಣಿಕರೇ? ಹಾಗಿದ್ದರೆ ಗಮನಿಸಿ, ಸಂಚಾರದಲ್ಲಿ ಭಾರಿ ವ್ಯತ್ಯಯ ಆಗಲಿದೆ

Namma metro purple line

ಬೆಂಗಳೂರು: ನೀವು ರಾಜಧಾನಿಯ ಲೈಫ್‌ಲೈನ್‌ ಎಂಬ ಅಸ್ಮಿತೆಯನ್ನು ಪಡೆದುಕೊಳ್ಳುತ್ತಿರುವ ನಮ್ಮ ಮೆಟ್ರೋ (Namma Metro) ಪ್ರಯಾಣಿಕರೇ? ಹಾಗಿದ್ದರೆ ನಿಮಗೆ ಕೆಲವೊಂದು Updates ಇದೆ. ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ (Purple line) ಆಗಸ್ಟ್‌ 10, 11 ಮತ್ತು 14ರಂದು ಸಂಚಾರ ವ್ಯತ್ಯಯ ಆಗಲಿದೆ. ಹಾಗಾಗಿ ಈ ದಿನಗಳಲ್ಲಿ ನಿಮ್ಮ ಸಂಚಾರದ ವಿಚಾರದಲ್ಲಿ ಪ್ಲ್ಯಾನ್‌ ಮಾಡಿಕೊಳ್ಳಬೇಕಾಗುತ್ತದೆ.

ಎಲ್ಲರಿಗೂ ತಿಳಿದಿರುವಂತೆ ನೇರಳೆ ಮಾರ್ಗದಲ್ಲಿ ಕೆಂಗೇರಿಯಿಂದ ಬೈಯಪ್ಪನಹಳ್ಳಿವರೆಗೆ, ಕೆ.ಆರ್‌ ಪುರದರಿಂದ ವೈಟ್‌ ಫೀಲ್ಡ್‌ವರೆಗೆ ರೈಲು ಸಂಚಾರ ಈಗ ನಡೆಯುತ್ತಿದೆ. ಈ ತಿಂಗಳ ಅಂತ್ಯದಲ್ಲಿ ಕೆಂಗೇರಿವರೆಗಿನ ರೈಲು ಸಂಚಾರ 1.9 ಕಿ.ಮೀ. ದೂರದ ಚಲ್ಲಘಟ್ಟದವರೆಗೆ ವಿಸ್ತರಣೆಯಾಗಲಿದೆ. ಅದರ ಜತೆಗೆ ಬೈಯಪ್ಪನ ಹಳ್ಳಿಯಿಂದ ಕೆ.ಆರ್‌. ಪುರ ನಡುವಿನ 2.5 ಕಿ.ಮೀ. ರೈಲು ಮಾರ್ಗವೂ ತೆರವುಗೊಂಡು ಮೈಸೂರು ರಸ್ತೆಯ ಚಲ್ಲಘಟ್ಟದಿಂದ ವೈಟ್‌ ಫೀಲ್ಡ್‌ ವರೆಗೆ ನೇರವಾಗಿ ಒಂದೇ ಸಂಚಾರ ನಡೆಸಲು ಅವಕಾಶ ದೊರೆಯಲಿದೆ.

ಈ ನಡುವೆ ಈ ವಿಸ್ತರಣೆ ಮತ್ತು ಲಿಂಕಿಂಗ್‌ ಮಾರ್ಗಗಳ ಸಿಗ್ನಲಿಂಗ್‌ ಮತ್ತಿತರ ಅಂತಿಮ ತಾಂತ್ರಿಕ ಕೆಲಸಗಳನ್ನು ಮಾಡಬೇಕಾಗಿರುವುದರಿಂದ ನೇರಳೆ ಮಾರ್ಗದಲ್ಲಿ ಒಂದೆರಡು ದಿನ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಅಂದರೆ ದಿನದ ಕೆಲವು ಹೊತ್ತು ಕೆಲವು ನಿಲ್ದಾಣಗಳ ನಡುವೆ ಸಂಚಾರ ಇರುವುದಿಲ್ಲ. ಹಾಗಿದ್ದರೆ ಯಾವ ದಿನ, ಯಾವ ನಿಲ್ದಾಣಗಳ ನಡುವೆ, ಯಾವ ಹೊತ್ತಿನಲ್ಲಿ ಸಂಚಾರ ಇರುವುದಿಲ್ಲ ಎನ್ನುವುದನ್ನು ಇಲ್ಲಿ ತಿಳಿಯೋಣ.

ಕೆ.ಆರ್‌ ಪುರಂ ಮೆಟ್ರೋ ಸ್ಟೇಷನ್‌

ಆಗಸ್ಟ್‌ 10, 11ರಂದು ಎಲ್ಲಿ ಸಂಚಾರ ವ್ಯತ್ಯಯ?

  1. ಬೈಯಪ್ಪನಹಳ್ಳಿ ಟರ್ಮಿನಲ್‌ನಿಂದ ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣ ಹಾಗೂ ಕೃಷ್ಣರಾಜಪುರದಿಂದ ವೈಟ್‌ ಫೀಲ್ಡ್ (ಕಾಡುಗೋಡಿ) ನಿಲ್ದಾಣಗಳವರೆಗೆ ಆಗಸ್ಟ್‌ 10, 11ರಂದು ಸಂಚಾರ ಸ್ಥಗಿತವಾಗಲಿದೆ.
    ಆದರೆ, ಈ ಸಂಚಾರ ಸ್ಥಗಿತ ಮುಂಜಾನೆ 5.00 ಗಂಟೆಯಿಂದ ಬೆಳಗ್ಗೆ 7.00 ಗಂಟೆಯವರೆಗೆ ಚಾಲ್ತಿಯಲ್ಲಿರುತ್ತದೆ.
  2. ಈ ಎರಡೂ ದಿನಗಳಲ್ಲಿ ಬೆಳಗ್ಗಿನ ಎರಡು ಗಂಟೆ ವೈಟ್‌ ಫೀಲ್ಡ್‌ನಿಂದ ಕೆ.ಆರ್‌ ಪುರ ಮತ್ತು ಬೈಯಪ್ಪನಹಳ್ಳಿಯಿಂದ ಸ್ವಾಮಿ ವಿವೇಕಾನಂದ ರಸ್ತೆ ಸ್ಟೇಷನ್‌ವರೆಗೆ ರೈಲುಗಳು ಓಡುವುದಿಲ್ಲ.
  3. ಉಳಿದಂತೆ ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ನಿಲ್ದಾಣದವರೆಗೆ ಮೆಟ್ರೋ ರೈಲು ಸೇವೆಗಳು ಎಂದಿನಂತೆಯೇ ಇರುತ್ತದೆ.
  4. ಇದನ್ನೂ ಓದಿ: Namma Metro : ನೀವು ನಂಬ್ತೀರಾ? ಇನ್ನು ಸ್ವಲ್ಪ ದಿನ ಹೋದ್ರೆ ಚಾಲಕನಿಲ್ಲದೆಯೇ ಓಡುತ್ತಂತೆ ನಮ್ಮ ಮೆಟ್ರೊ!
ಚಲ್ಲಘಟ್ಟ ಮಟ್ರೋ ಸ್ಟೇಷನ್

ಆಗಸ್ಟ್‌ 14ರಂದು ಎಲ್ಲಿ ಸಂಚಾರ ವ್ಯತ್ಯಯ?

  1. ಕೆಂಗೇರಿ ನಿಲ್ದಾಣದಿಂದ ರೈಲು ಸೇವೆಯನ್ನು ಚಲ್ಲಘಟ್ಟ ನಿಲ್ದಾಣದವರೆಗೆ ವಿಸ್ತರಿಸಲು ಸಿಗ್ನಲಿಂಗ್ ಮತ್ತು ಇತರ ಸಂಬಂಧಿತ ಕಾಮಗಾರಿಗಳಿಗಾಗಿ ಆಗಸ್ಟ್​​ 14ರಂದು ಮುಂಜಾನೆ 5.00 ಗಂಟೆಯಿಂದ ಬೆಳಗ್ಗೆ 7.00 ಗಂಟೆಯವರೆಗೆ ಕೆಂಗೇರಿ ಮತ್ತು ವಿಜಯನಗರ ಮೆಟ್ರೋ ನಿಲ್ದಾಣಗಳ ನಡುವಿನ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತಿದೆ.
  2. ಈ ಸಮಯದಲ್ಲಿ ಬೈಯಪ್ಪನಹಳ್ಳಿ ಮತ್ತು ವಿಜಯನಗರ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸೇವೆ ಯಥಾವತ್ತಾಗಿರುತ್ತದೆ.
  3. ಬೆಳಗ್ಗೆ 7.00 ಗಂಟೆಯ ನಂತರ, ಬೈಯಪ್ಪನಹಳ್ಳಿ ಮತ್ತು ಕೆಂಗೇರಿ, ಕೃಷ್ಣರಾಜಪುರ ಮತ್ತು ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣಗಳ ನಡುವೆ ಎಂದಿನಂತೆ ಮೆಟ್ರೋ ರೈಲು ಸೇವೆಗಳು ರಾತ್ರಿ 11.00 ರವರೆಗೆ ಲಭ್ಯವಿರುತ್ತವೆ.

ಈ ಎಲ್ಲ ಬದಲಾವಣೆಗಳು ನೇರಳೆ ಮಾರ್ಗದಲ್ಲಿ ಮಾತ್ರ ಇರುತ್ತದೆ. ಹಸಿರು ಮಾರ್ಗದ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

Exit mobile version