ಬೆಂಗಳೂರು: ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆಗೆ ಯತ್ನಿಸಿದ ಯುವಕನ ಪ್ರಾಣ ಉಳಿಸಿದ ಸಿಬ್ಬಂದಿಗೆ ಬೆಂಗಳೂರು ದಕ್ಚಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಅವರು ಶ್ಲಾಘನಾ ಪತ್ರ ಹಾಗೂ ಬಹುಮಾನ ನೀಡಿ ಗೌರವಿಸಿದ್ದಾರೆ.
ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ 24 ವರ್ಷದ ಯುವಕ ಜೂನ್ 28ರಂದು ಜೆ.ಪಿ. ನಗರ ಠಾಣೆ ವ್ಯಾಫ್ತಿಯಲ್ಲಿದ್ದ ಪಿ.ಜಿ.ಯಲ್ಲಿ ಯಾರೂ ಇರದಿದ್ದಾಗ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಆತ್ಮಹತ್ಯೆ ಯತ್ನಕ್ಕೂ ಮುನ್ನ ಸ್ನೇಹಿತನಿಗೆ ಡೆತ್ ನೋಟ್ ರವಾನಿಸಿದ್ದ. ಯುವಕ ಆತ್ಮಹತ್ಯೆಗೆ ಯತ್ನಿಸಿದ ಸ್ಥಳದಿಂದ ದೂರದಲ್ಲಿದ್ದ ಸ್ನೇಹಿತ, ತಕ್ಷಣ 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದ.
ಸ್ಥಳದ ಮಾಹಿತಿ ಪಡೆದ ತಕ್ಷಣ ಜೆ.ಪಿ.ನಗರ ಠಾಣೆ ಹೊಯ್ಸಳ ಪೊಲೀಸರು ಪಿ.ಜಿ.ಗೆ ತೆರಳಿದ್ದರು. ಎಎಸ್ಐ ಚಂದ್ರಶೇಖರ್ ಹಾಗೂ ಹೆಡ್ ಕಾನ್ಸ್‌ಟೇಬಲ್ ಬಿ.ರಮೇಶ್ ಪಿ.ಜಿ.ಯೊಳಗೆ ಪ್ರವಶಿಸಿ, ತೀವ್ರ ರಕ್ತಸ್ರಾವದಿಂದ ಅಸ್ವಸ್ಥನಾಗಿದ್ದ ಯುವಕನನ್ನು ರಕ್ಷಿಸಿದ್ದರು. ಕೂಡಲೆ ಆಸ್ಪತ್ರೆಗೆ ದಾಖಲಿಸಿದ್ದರು.
ಯುವಕನ ಸ್ನೇಹಿತನ ಸಮಯಪ್ರಜ್ಞೆ ಹಾಗೂ ಪೊಲೀಸರ ಕರ್ತವ್ಯಪ್ರಜ್ಞೆಯಿಂದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದ. ಈ ಹಿನ್ನೆಲೆಯಲ್ಲಿ ಎಎಸ್ಐ ಚಂದ್ರಶೇಖರ್ ಹಾಗೂ ಹೆಡ್ ಕಾನ್ಸ್‌ಟೇಬಲ್ ಬಿ.ರಮೇಶ್ ಅವರನ್ನು ಶ್ಲಾಘಿಸಿ, ಅಭಿನಂದಿಸಲಾಯಿತು.
ಇದನ್ನೂ ಓದಿ| ಆತ್ಮಹತ್ಯೆಗೆ ಯತ್ನಿಸಿದ ಯುವಕನ ಜೀವ ಉಳಿಸಿದ 112