Site icon Vistara News

ಚಾಮರಾಜಪೇಟೆ ಮೈದಾನ: ಖಾಕಿ ಕಣ್ಗಾವಲು, ಕೆಎಸ್‌ಆರ್‌ಪಿ ಪಥಸಂಚಲನ

eidgah

ಬೆಂಗಳೂರು: ಹಿಂದೂ ಹಾಗೂ ಮುಸ್ಲಿಂ ಪರ ಸಂಘಟನೆಗಳ ನಡುವಿನ ತಿಕ್ಕಾಟ, ಸಂಘರ್ಷಕ್ಕೆ ಕಾರಣವಾಗಿರುವ ಚಾಮರಾಜಪೇಟೆಯ ಮೈದಾನದಲ್ಲಿ ಪೊಲೀಸ್‌ ಹಾಗೂ ಅರೆಸೇನಾ ಪಡೆಗಳು ಪಥಸಂಚಲನ ನಡೆಸಿದವು.

ಚಾಮರಾಜಪೇಟೆಯ ರಸ್ತೆಗಳು ಹಾಗೂ ಮೈದಾನದಲ್ಲಿ ಕೆಎಸ್ಆರ್‌ಪಿ‌ ತುಕಡಿ ಹಾಗು ಪೊಲೀಸರು ಸೇರಿ ಸುಮಾರು 600 ಸಿಬ್ಬಂದಿ ಪಥಸಂಚಲನದಲ್ಲಿ ಭಾಗಿಯಾದರು. ಡಿಸಿಪಿ ಲಕ್ಷ್ಮಣ್ ನಿಂಬರಗಿ, ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮತ್ತು ಹಿರಿಯ ಅಧಿಕಾರಿಗಳು ಏರಿಯಾ ಮ್ಯಾಪಿಂಗ್ ನಡೆಸಿದ್ದಾರೆ.

ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿಕೆ ನೀಡಿ, ಪರಿಸರದಲ್ಲಿ ಶಾಂತಿ ಕಾಪಾಡುವ ಹಾಗೂ ದುಷ್ಕೃತ್ಯಕ್ಕೆ ಮುಂದಾಗಲಿರುವ ಕಿಡಿಗೇಡಿಗಳಿಗೆ ಎಚ್ಚರ ನೀಡುವ ಉದ್ದೇಶದಿಂದ ಈ ಪರೇಡ್‌ ನಡೆಸಲಾಗಿದೆ ಎಂದರು.

ಆಗಸ್ಟ್‌ 15ರಂದು ಸೂಕ್ತ ಪೊಲೀಸ್ ಬಂದೋಬಸ್ತ್‌ನಲ್ಲಿ ಶಾಂತಿಯುತವಾಗಿ ಸರ್ಕಾರದ ಕಡೆಯಿಂದಲೇ ಇಲ್ಲಿ ಧ್ವಜಾರೋಹಣ ನಡೆಯಲಿದೆ. ಯಾವುದೇ ರೀತಿಯ ಗಲಭೆಗೆ ಆಸ್ಪದ ಇಲ್ಲ. ಕಾರ್ಯಕ್ರಮಕ್ಕೆ ಆಹ್ವಾನ ಇರುವವರಿಗೆ ಮಾತ್ರ ಅವಕಾಶ. ಎರಡು ತುಕಡಿ ಕೆಎಸ್‌ಆರ್‌ಪಿ ಸಿಬ್ಬಂದಿ ಹಾಗೂ ಪೊಲೀಸರು ಸದಾ ಇಲ್ಲಿರುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ: ಜಮೀರ್‌ ಅಹ್ಮದ್‌ಗೆ ಹಿನ್ನಡೆ: ಚಾಮರಾಜಪೇಟೆ ಮೈದಾನದಲ್ಲಿ ರಾಜ್ಯ ಸರ್ಕಾರದಿಂದಲೇ ಧ್ವಜಾರೋಹಣ

ಈದ್ಗಾ ಮೈದಾನ ಹಾಟ್‌ಸ್ಪಾಟ್‌

ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಈಗ ಈದ್ಗಾ ಮೈದಾನ ಹಾಟ್‌ಸ್ಪಾಟ್ ಎನಿಸಿದೆ. ಕಂದಾಯ ಇಲಾಖೆಯ ಸುಪರ್ದಿಗೆ ಬಂದ ಬಳಿಕ ಈದ್ಗಾ ಮೈದಾನದಲ್ಲಿ ಪ್ರಥಮ ಬಾರಿಗೆ ಸರ್ಕಾರದ ವತಿಯಿಂದ ಧ್ವಜಾರೋಹಣ ನಡೆಯಲಿದೆ. ಪ್ರತಿ ಬಾರಿ ಮಾಣಿಕ್ ಶಾ ಪರೇಡ್ ಗ್ರೌಂಡ್‌ನಲ್ಲಿ ಹೆಚ್ಚಿನ ಭದ್ರತೆ ನೀಡಲಾಗುತಿತ್ತು. ಆದರೆ ಈ ಬಾರಿ ಈದ್ಗಾ ಮೈದಾನಕ್ಕೆ ಹೆಚ್ಚಿನ ಪೊಲೀಸ್ ದಳ ನಿಯೋಜನೆ ಮಾಡಲಾಗಿದೆ‌. ಆಗಸ್ಟ್ 15ರಂದು ಹೆಚ್ಚಿನ ಭದ್ರತೆ ಬೇಕಿರುವ ಹಿನ್ನೆಲೆಯಲ್ಲಿ ರ್ಯಾಪಿಡ್ ಆಕ್ಷನ್ ಫೋರ್ಸ್‌ಗೂ ಪೊಲೀಸ್ ಇಲಾಖೆ ಮನವಿ ಮಾಡಲಿದೆ.

ಚಾಮರಾಜಪೇಟೆ ಮೈದಾನದಲ್ಲಿ ಮುಸ್ಲಿಮರು ಹಾಗೂ ಹಿಂದೂಗಳು ಕಾರ್ಯಕ್ರಮ ನಡೆಸಲು ಮುಂದಾದ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಪ್ರದೇಶದ ಸೂಕ್ಷ್ಮ ಪರಿಸ್ಥಿತಿ ಅರಿತ ಪೊಲೀಸರು ಸ್ಥಳದಲ್ಲಿ ಸಾಕಷ್ಟು ಮುಂಜಾಗರೂಕತೆ ವಹಿಸಿದ್ದಾರೆ. 15 ದಿನಗಳಿಂದ ಕೆಎಸ್‌ಆರ್‌ಪಿ ತುಕಡಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿವೆ.

ಪಶ್ಚಿಮ ವಿಭಾಗದ ಪೊಲೀಸರು ಮಫ್ತಿಯಲ್ಲಿ ಮಾಹಿತಿ ಕಲೆ ಹಾಕುತ್ತಿದ್ದು, ಅಂಗಡಿ ಮುಂಗಟ್ಟು, ಬಾರ್ ಆ್ಯಂಡ್ ರೆಸ್ಟೋರೆಂಟ್, ಸಂಘಸಂಸ್ಥೆಗಳು, ಕಚೇರಿಗಳು, ಸಾರ್ವಜನಿಕ ಪ್ರದೇಶಗಳು, ಆಟೋ ಸ್ಟಾಂಡ್‌ಗಳು, ದೇವಾಲಯಗಳು ಹೀಗೆ ಹತ್ತು ಹಲವಾರು ಕಡೆ ಬಾತ್ಮಿದಾರರನ್ನು ಹೆಚ್ಚಿಸಿಕೊಂಡಿದ್ದಾರೆ. ದಿನದ 24 ಗಂಟೆಯೂ ಗಸ್ತು ನಡೆಸುತ್ತಿರುವ ಪೊಲೀಸ್ ಪಡೆ ಮೈದಾನದ ಸುತ್ತಮುತ್ತ ಜನ ಗುಂಪುಗೂಡದಂತೆ ನೋಡಿಕೊಂಡಿದ್ದಾರೆ. ಸ್ಥಳೀಯ ಮತ್ತು ಸುತ್ತಮುತ್ತಲಿನ ಪೊಲೀಸ್ ಠಾಣೆಗಳ ರೌಡಿ ಶೀಟರ್‌ಗಳ ಮೇಲೆ ಹೆಚ್ಚಿನ ನಿಗಾ ಇಟ್ಟಿದ್ದಾರೆ.

ಇದನ್ನೂ ಓದಿ: ಈದ್ಗಾ ಮೈದಾನ ಇನ್ನು `ಸರ್ವೇ ನಂಬರ್‌ 40-ಗುಟ್ಟಹಳ್ಳಿʼ: ಸಚಿವ ಆರ್‌. ಅಶೋಕ್‌

Exit mobile version