ಬೆಂಗಳೂರು: ಭಾರತದಲ್ಲಿ ಈಗ ಏನಿದ್ದರೂ ‘ಪ್ಯಾನ್ ಇಂಡಿಯಾ’ ಸಿನಿಮಾಗಳದ್ದೇ ಹವಾ. ಅದರಲ್ಲೂ ದಕ್ಷಿಣ ಭಾರತದ ಸಿನಿಮಾಗಳು ಜಗತ್ತಿನಾದ್ಯಂತ ಭಾರಿ ಸೌಂಡ್ ಮಾಡುತ್ತಿವೆ. ಈಗ ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ (Ponniyin Selvan) ಮಿಂಚಿನ ಸಂಚಲನ ಸೃಷ್ಟಿಸುತ್ತಿದ್ದು, ಚಿತ್ರದ ಪ್ರಚಾರ ಭರ್ಜರಿಯಾಗಿ ಸಾಗಿದೆ. ಸೆಪ್ಟೆಂಬರ್ 30ಕ್ಕೆ ಸಿನಿಮಾ ರಿಲೀಸ್ ಆಗಲಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ (ಸೆ.30) ಅದ್ಧೂರಿಯಾಗಿ ಪ್ರಮೋಷನ್ ನಡೆಯಿತು.
ಸಾವಿರಾರು ಸಿನಿಮಾಗಳು ಬರುತ್ತವೆ, ಹೋಗುತ್ತವೆ. ಆದರೆ ಪ್ರೇಕ್ಷಕರಿಗೆ ಮುದ ನೀಡುವ ಸಿನಿಮಾಗಳ ಸಂಖ್ಯೆ ತೀರಾ ವಿರಳ. ಇಂತಹ ಚಿತ್ರಗಳ ಲಿಸ್ಟ್ಗೆ ಸೇರುವ ಎಲ್ಲ ಲಕ್ಷಣ ‘ಪೊನ್ನಿಯಿನ್ ಸೆಲ್ವನ್’ಗೆ ಇದೆ ಎನ್ನಲಾಗುತ್ತಿದೆ. ಸದ್ಯ ಟ್ರೈಲರ್ ಮೂಲಕ ಹವಾ ಎಬ್ಬಿಸಿರುವ ‘ಪೊನ್ನಿಯಿನ್ ಸೆಲ್ವನ್’, ತನ್ನ ಖದರ್ ತೋರಿಸಿದೆ. ಇದರ ಜತೆಗೆ ಪ್ರಮೋಷನ್ ಕಾರ್ಯದಲ್ಲಿ ಸ್ಟಾರ್ ನಟರು ಒಟ್ಟಾಗಿ ದೇಶಾದ್ಯಂತ ಸಂಚರಿಸುತ್ತಿದ್ದು, ಗುರುವಾರ (ಸೆ.30) ಕೂಡ ಬೆಂಗಳೂರಿನಲ್ಲಿ ಘಟಾನುಘಟಿ ಸ್ಟಾರ್‌ಗಳ ಸಮಾಗಮವಾಗಿತ್ತು.
ಕಾದಂಬರಿ ಆಧಾರಿತ
ಪೊನ್ನಿಯಿನ್ ಸೆಲ್ವನ್ ಕಾದಂಬರಿ ಆಧಾರಿತ ಚಿತ್ರವಾಗಿದೆ. ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿರುವ ಈ ಸಿನಿಮಾಗೆ ಚೋಳರ ಸಾಮ್ರಾಜ್ಯದ ಕತೆ ಆಧಾರ. ಕಲ್ಕಿ ಕೃಷ್ಣಮೂರ್ತಿ ಅವರು ಬರೆದಿದ್ದ ಕಾದಂಬರಿ ‘ಪೊನ್ನಿಯಿನ್ ಸೆಲ್ವನ್’ ಆಧಾರದಲ್ಲಿ ಸಿನಿಮಾ ತಯಾರಾಗಿದೆ. ಆದರೆ ಆಧುನಿಕ ಸ್ಪರ್ಶ ನೀಡಲಾಗಿದೆ. ಹಾಗೇ ಅಲ್ಲಲ್ಲಿ ಬದಲಾವಣೆಗಳನ್ನೂ ನಿರ್ದೇಶಕ ಮಣಿರತ್ನಂ ಮಾಡಿದ್ದಾರೆ.
ಪುಸ್ತಕವೇ ಸಿನಿಮಾ
1950-54ರ ನಡುವೆ ತಮಿಳು ಮ್ಯಾಗಜಿನ್ ‘ಕಲ್ಕಿ’ ಕಾದಂಬರಿಯನ್ನು ಪ್ರಕಟಿಸಿತ್ತು. ವಾರಕ್ಕೊಮ್ಮೆ ಧಾರಾವಾಹಿ ರೂಪದಲ್ಲಿ ‘ಪೊನ್ನಿಯಿನ್ ಸೆಲ್ವನ್’ ಪ್ರಕಟವಾಗುತ್ತಿತ್ತು. ಈ ಕಾದಂಬರಿಯ ಯಶಸ್ಸನ್ನು ನೋಡಿ 1955ರಲ್ಲಿ ಪುಸ್ತಕದ ರೂಪದಲ್ಲಿ ಹೊರತರಲಾಗಿತ್ತು. ಆದರೆ ಸಿನಿಮಾ ಮಾಡಿ, ಕಾದಂಬರಿಯನ್ನು ತೆರೆಮೇಲೆ ತರಲು ಯತ್ನಿಸಿದ್ದು ಇಷ್ಟುದಿನ ಕೈಗೂಡಿರಲಿಲ್ಲ. ಕಡೆಗೂ ನಿರ್ದೇಶಕ ಮಣಿರತ್ನಂ ಅವರ ಸತತವಾದ ಪ್ರಯತ್ನ ಕೈಗೂಡಿದೆ. ‘ಪೊನ್ನಿಯಿನ್ ಸೆಲ್ವನ್’ ಬಿಡುಗಡೆಗೆ ಸಜ್ಜಾಗಿದೆ.
ಇಷ್ಟೆಲ್ಲ ತಯಾರಿ ಮಾಡಿಕೊಂಡಿರುವ ಚಿತ್ರತಂಡ ಪ್ರಮೋಷನ್ಗೂ ಸಾಕಷ್ಟು ಸಮಯ ಕೊಟ್ಟಿದೆ. ಇದರೊಂದಿಗೆ ಸಿನಿಮಾದ ಸ್ಟಾರ್ ಲಿಸ್ಟ್ ದೊಡ್ಡದಾಗಿರುವುದು ಚಿತ್ರಕ್ಕೆ ಮತ್ತಷ್ಟು ಬಲ ನೀಡುತ್ತಿದೆ. ಖ್ಯಾತ ನಟ ವಿಕ್ರಂ, ನಟಿ ಐಶ್ವರ್ಯ ರೈ ಬಚ್ಚನ್, ತ್ರಿಷಾ, ನಟರಾದ ಜಯಂ ರವಿ, ಕಾರ್ತಿ ಸೇರಿದಂತೆ ದೊಡ್ಡ ತಾರಾಬಳಗವು ‘ಪೊನ್ನಿಯಿನ್ ಸೆಲ್ವನ್’ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಇದನ್ನೂ ಓದಿ: Avatar Re Release | ಬಾಕ್ಸ್ ಆಫೀಸ್ನಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಿದ ‘ಅವತಾರ್ -1’