Site icon Vistara News

POP Ganesh Statue: ಪಿಒಪಿ ಮೂರ್ತಿ ತಯಾರಕರು, ಪಟಾಕಿ ಮಾರಾಟಗಾರರೇ ಹುಷಾರ್; 7 ತಿಂಗಳ ಮೊದಲೇ ನೋಟಿಸ್‌ ಕೊಟ್ಟ ಸರ್ಕಾರ!

POP Ganesh Statue Govt issues notice to POP idol makers and fireworks vendors

ಬೆಂಗಳೂರು: ಇನ್ನು ಮುಂದೆ ಪಿಒಪಿ ಗಣೇಶ ಮೂರ್ತಿ (POP Ganesh Statue) ತಯಾರಿಕರು ಸಬೂಬು ಹೇಳುವಂತಿಲ್ಲ. ಮೊದಲೇ ಹೇಳಿದ್ದರೆ ನಾವು ತಯಾರಿಕೆಯನ್ನೇ ಮಾಡುತ್ತಿರಲಿಲ್ಲ. ಕೊನೇ ಘಳಿಗೆಯಲ್ಲಿ ಹೇಳಿದರೆ ಹೇಗೆ? ಎಂದು ಪ್ರಶ್ನೆ ಮಾಡುತ್ತಿದ್ದರು. ಈಗ ಪ್ರಕೃತಿ, ಪರಿಸರ ಉಳಿಸುವ ನಿಟ್ಟಿನಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ (Eshwar Khandre) 7 ತಿಂಗಳ ಮೊದಲೇ ಕಾರ್ಯೋನ್ಮುಖರಾಗಿದ್ದು, ಪಿಒಪಿ ಮೂರ್ತಿಗಳ ತಯಾರಕರು ಮತ್ತು ಪಟಾಕಿ ಮಾರಾಟಗಾರರಿಗೆ (Firecracker vendors) ಸ್ಪಷ್ಟ ಸೂಚನೆಯೊಂದಿಗೆ ನೋಟಿಸ್ ನೀಡಲು ಆದೇಶ ನೀಡಿದ್ದಾರೆ.

ಈ ಸಂಬಂಧ ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಸೂಚನೆ ನೀಡಿರುವ ಸಚಿವರು, ಪ್ರಕೃತಿ ಪರಿಸರ ಉಳಿದರಷ್ಟೇ ನಾವು ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಜಲ ಮೂಲಗಳನ್ನು ಕಲುಷಿತಗೊಳಿಸುವ ಪ್ಲಾಸ್ಟರ್ ಆಫ್ ಪ್ಯಾರೀಸ್ (Plaster of Paris) ಮೂರ್ತಿಗಳ ತಯಾರಿಕೆ, ಸಾಗಾಟ ಮತ್ತು ಮಾರಾಟ ನಿಷೇಧಿಸಲಾಗಿದ್ದು, ಈ ಬಗ್ಗೆ ತಯಾರಕರಿಗೆ ಹಬ್ಬಕ್ಕೆ 7 ತಿಂಗಳು ಮುಂಚಿತವಾಗಿಯೇ ಸೂಕ್ತ ತಿಳಿವಳಿಕೆಯೊಂದಿಗೆ ನೋಟಿಸ್ ನೀಡುವಂತೆ ಸೂಚಿಸಿದ್ದಾರೆ.

ಇನ್ನು ಸಬೂಬು ಹೇಳುವಂತಿಲ್ಲ

ಪ್ರತಿ ಬಾರಿ ನೀರಿನಲ್ಲಿ ವಿಸರ್ಜನೆ ಮಾಡುವ ರಾಸಾಯನಿಕ ಬಣ್ಣ ಲೇಪಿತ ಪಿಒಪಿ ಗಣೇಶ ಮೂರ್ತಿಗಳ ತಯಾರಕರು ತಮಗೆ ಮೊದಲೇ ನೋಟಿಸ್ ನೀಡಿದ್ದರೆ, ತಾವು ತಯಾರಿಕೆಯನ್ನೇ ಮಾಡುತ್ತಿರಲಿಲ್ಲ. ಈಗ ತಯಾರಿಸುವ ಮೂರ್ತಿ ಏನು ಮಾಡುವುದು? ತಮಗೆ ನಷ್ಟವಾಗುತ್ತದೆ ಎಂದು ಸಬೂಬು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ 7 ತಿಂಗಳ ಮೊದಲೇ ಎಲ್ಲ ಪಿೊಪಿ ತಯಾರಕರಿಗೆ ಪರಿಸರ ಸ್ನೇಹಿ ಮೂರ್ತಿಗಳ ತಯಾರಿಕೆ ಮಾಡುವಂತೆ ಮತ್ತು ಅದಕ್ಕೆ ರಾಸಾಯನಿಕ ಬಣ್ಣ ಲೇಪನ ಮಾಡದಂತೆ ಸೂಚಿಸಿ ನೋಟಿಸ್ ನೀಡುವಂತೆ ತಿಳಿಸಿದ್ದಾರೆ.

ಹಸಿರು ಪಟಾಕಿಗೆ ಮಾತ್ರ ಅವಕಾಶ

ಅದೇ ರೀತಿ ಹೆಚ್ಚು ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಉಂಟು ಮಾಡುವ ಸಾಂಪ್ರದಾಯಿಕ ಪಟಾಕಿಗಳು ಸಹ ಪರಿಸರಕ್ಕೆ ಮಾರಕವಾಗಿದ್ದು, ಈ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಅನುಸರಣೆಯ ಹಿನ್ನೆಲೆಯಲ್ಲಿ ಹಿಂದಿನ ವರ್ಷಗಳಲ್ಲಿ ಪಟಾಕಿ ಮಳಿಗೆಗಳನ್ನು ತೆರೆಯಲು ಅನುಮತಿ ಕೋರಿ ಅರ್ಜಿ ಸಲ್ಲಿಸಿರುವ ಮಾರಾಟಗಾರರ ಪಟ್ಟಿಯನ್ನು ಸ್ಥಳೀಯ ಸಂಸ್ಥೆಗಳಿಂದ ಪಡೆದು, ಅವರೆಲ್ಲರಿಗೂ ಹಸಿರು ಪಟಾಕಿ ಮಾತ್ರ ದಾಸ್ತಾನು, ಸಾಗಾಟ ಮತ್ತು ಮಾರಾಟ ಮಾಡುವಂತೆ ನೋಟಿಸ್ ನೀಡಲು ಆದೇಶಿಸಿದ್ದಾರೆ.

ಇದನ್ನೂ ಓದಿ: Kannada signboard rules: ಕರ್ನಾಟಕದಲ್ಲಿ ಕನ್ನಡ ಬೋರ್ಡ್‌ ಕಡ್ಡಾಯ; 2 ವಾರ ಗಡುವು ವಿಸ್ತರಿಸಿದ ಡಿಕೆಶಿ

ಕಟ್ಟೆಚ್ಚರ ವಹಿಸಲು ಸೂಚನೆ

ಈ ಬಾರಿ ದೀಪಾವಳಿಯ ಸಂದರ್ಭದಲ್ಲಿ ಹಸಿರು ಪಟಾಕಿಗಳ ಹೊರತಾಗಿ ಬೇರೆ ಪಟಾಕಿ ಮಾರಾಟಕ್ಕೆ ಅವಕಾಶ ನೀಡದಂತೆ ಈಗಿನಿಂದಲೇ ಕಟ್ಟೆಚ್ಚರ ವಹಿಸುವಂತೆ ಮತ್ತು ಪಟಾಕಿ ಸಗಟು ದಾಸ್ತಾನುದಾರರಿಗೆ ಮತ್ತು ಮಾರಾಟಗಾರರಿಗೆ ಸೂಕ್ತ ತಿಳಿವಳಿಕೆ ನೀಡುವಂತೆ ಸೂಚನೆ ನೀಡಿದ್ದಾರೆ.

Exit mobile version