ಬೆಂಗಳೂರು: ರಾಜಧಾನಿಯ ರಸ್ತೆ ಗುಂಡಿಗಳ ಅವಾಂತರ ಮುಂದುವರಿದಿದೆ. ಸೋಮವಾರ ಮಹಿಳೆಯೊಬ್ಬರು ರಸ್ತೆ ಗುಂಡಿ ತಪ್ಪಿಸಲು ಹೋಗಿ ಬಸ್‌ನಡಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದಾರೆ. ನಗರದ ಓಕುಳಿಪುರಂ ಹತ್ತಿರದ ಸುಜಾತಾ ಥಿಯೇಟರ್ ಬಳಿ ಘಟನೆ ನಡೆದಿದೆ.
ಬೆಂಗಳೂರಿನ ರಾಜಾಜಿನಗರ ಸಮೀಪದ ನಿವಾಸಿಯಾಗಿರುವ ಉಮಾ ಅವರು ಮೃತರಾದವರು. ಸೋಮವಾರ ಬೆಳಗ್ಗೆ ಉಮಾ ಅವರು ಮಗಳು ವನಿತಾ ಅವರನ್ನು ಹೋಂಡಾ ಆಕ್ಟೀವಾದಲ್ಲಿ ಕೂರಿಸಿಕೊಂಡು ರಾಜಾಜಿನಗರದ ಕಡೆಗೆ ಹೋಗುತ್ತಿದ್ದರು. ಈ ಭಾಗದಲ್ಲಿ ರಸ್ತೆಯಲ್ಲಿ ವಿಪರೀತ ಗುಂಡಿಗಳಿದ್ದು, ಒಂದು ದೊಡ್ಡ ಗುಂಡಿಯ ಹತ್ತಿರ ಬಂದಿದ್ದರು. ಅದನ್ನು ತಪ್ಪಿಸಲು ಹೋದ ಸಂದರ್ಭದಲ್ಲಿ ಒಮ್ಮೆಗೇ ಆಯತಪ್ಪಿ ಬಿದ್ದು ಬಿಟ್ಟಿದ್ದಾರೆ.
ಈ ವೇಳೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಸರ್ಕಾರಿ ಬಸ್ ಅವರ ಮೇಲೆ ಹರಿದುಹೋಗಿದೆ. ಅವರ ಕಾಲಿನ ಮೇಲೆ ಚಕ್ರ ಹರಿದಿದ್ದು ಮಾಂಸವೆಲ್ಲ ಕಿತ್ತುಬಂದಿದೆ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತ ನಡೆದಿದ್ದು ಹೇಗೆ?
ʻʻಇಬ್ಬರು ಮಹಿಳೆಯರು ಆಕ್ಟಿವಾದಲ್ಲಿ ಬರುತ್ತಿದ್ದರು. ಮುಂದೆ ಗುಂಡಿ ಇದ್ದ ಕಾರಣ ಮಹಿಳೆ ಸಡನ್ ಆಗಿ ಬ್ರೇಕ್ ಹಾಕಿ ನಿಲ್ಲಿಸಿದರು. ಒಮ್ಮೆಗೇ ಬ್ರೇಕ್ ಹಾಕಿದ್ದರಿಂದ ಆಕ್ಟಿವಾ ಕೆಳಗೆ ಉರುಳಿತು. ಆಗ ಹಿಂದಿನಿಂದ ಬರುತ್ತಿದ್ದ ಬಸ್ ಅವರಿಗೆ ಡಿಕ್ಕಿ ಹೊಡೆದಿದೆ. ಮಹಿಳೆಯ ಕಾಲಿನ ಮೇಲೆ ಚಕ್ರ ಹರಿದಿದೆ. ಈ ಘಟನೆಗೆ ರಸ್ತೆಗುಂಡಿನೇ ಕಾರಣ. ರಸ್ತೆ ಗುಂಡಿ ಇರಲಿಲ್ಲ ಅಂದರೆ ಆ ಮಹಿಳೆಗೆ ಏನೂ ಆಗುತ್ತಿರಲಿಲ್ಲ. ಈ ಘಟನೆಗೆ ಬಿಬಿಎಂಪಿ ಅಧಿಕಾರಿಗಳೇ ನೇರ ಕಾರಣʼʼ ಎಂದು ಪ್ರತ್ಯಕ್ಷದರ್ಶಿ ಜಮೀರ್ ಹೇಳಿದ್ದಾರೆ.
ಕೇಸು ದಾಖಲಿಸಲು ‘ಲ್ಯಾಂಡ್ ಡಿಸ್ಪ್ಯೂಟ್’
ಅಪಘಾತ ನಡೆದ ಸುಜಾತ ಥಿಯೇಟರ್‌ನ ಮುಂದಿನ ರಸ್ತೆ ಮಲ್ಲೇಶ್ವರಂ, ಮಾಗಡಿ ರೋಡ್, ರಾಜಾಜಿ ನಗರದ ಮೂರು ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಗೂ ಬರುತ್ತದೆ. ಒಂದೆರಡು ಅಡಿಗಳ ವ್ಯತ್ಯಾಸದ ಸರಹದ್ದು ವಿವಾದದಿಂದಾಗಿ ಯಾವ ಪೊಲೀಸರು ಕೇಸು ದಾಖಲಿಸಿಕೊಳ್ಳಬೇಕೆಂಬ ಗೊಂದಲವೂ ಸೃಷ್ಟಿಯಾಗಿದೆ.
ಆರು ತಿಂಗಳಲ್ಲಿ ಬ್ರಿಜ್ ಆಗಿದೆ, ಗುಂಡಿ ಮುಚ್ಚಲು ಆಗಿಲ್ಲ!
ಸುಜಾತಾ ಥಿಯೇಟರ್ ಎದುರು ಭಾಗದಲ್ಲಿ ಅತಿ ದೊಡ್ಡ ಲುಲು ಮಾಲ್ ಇತ್ತೀಚೆಗೆ ಉದ್ಘಾಟನೆಗೊಂಡಿತ್ತು. ಈ ಬೃಹತ್ ಮಳಿಗೆಗೆ ಹೋಗಲು ಒಂದು ಸೇತುವೆಯನ್ನು ಕೇವಲ ಆರು ತಿಂಗಳಲ್ಲಿ ನಿರ್ಮಾಣ ಮಾಡಲಾಗಿತ್ತು. ಆದರೆ, ಅದರ ಪಕ್ಕದಲ್ಲೇ ಇಷ್ಟೊಂದು ದೊಡ್ಡ ಹೊಂಡಗಳಿದ್ದರೂ ಅವುಗಳನ್ನು ಮುಚ್ಚುವ ಕೆಲಸ ಮಾತ್ರ ಆಗಿಲ್ಲ.
ಬಿಬಿಎಂಪಿಯಿಂದ ಪರಿಹಾರ ಕೊಡಲ್ಲ ಎಂದ ಮುಖ್ಯ ಆಯುಕ್ತರು
ಅಪಘಾತಕ್ಕೆ ಸಂಬಂಧಿಸಿ ಬಿಬಿಎಂಪಿಯ ಮುಖ್ಯ ಆಯುಕ್ತರಾಗಿರುವ ತುಷಾರ್ ಗಿರಿನಾಥ್ ಅವರು, ಘಟನೆ ಹೇಗಾಯಿತು ಎಂಬ ಬಗ್ಗೆ ಬಿಬಿಎಂಪಿಯಿಂದಲೂ ತನಿಖೆ ನಡೆಯಲಿದೆ ಎಂದು ಹೇಳಿದರು.
ʻʻಈ ಘಟನೆ ನೋವು ತಂದಿದೆ. ಒಂದು ಅಮೂಲ್ಯ ಜೀವ ಹೋಗಿದೆ. ಈಗ ತನಿಖೆ ನಡೆಯುತ್ತಿದೆ, ಯಾರ ತಪ್ಪು ಅಂತಾ ಗೊತ್ತಾಗುತ್ತದೆ. ಅಧಿಕಾರಿಗಳ ತಪ್ಪಾ, ಗುತ್ತಿಗೆದಾರರ ತಪ್ಪು ಅನ್ನೋದು ಸ್ಪಷ್ಟವಾಗುತ್ತದೆ. ಸದ್ಯ ಮಳೆ ಬರುತ್ತಿರುವ ಕಾರಣ ರಸ್ತೆ ಗುಂಡಿ ಮುಚ್ಚಲು ಆಗುತ್ತಿಲ್ಲ. ಅದಕ್ಕೆ ಜಲ್ಲಿಗಳನ್ನು ಹಾಕಿ ಮುಚ್ಚಲಾಗುತ್ತಿದೆ. ಅವರು ಹೇಗೆ ಬಿದ್ದಿದ್ದಾರೆ ಅಂತಾ ಗೊತ್ತಿಲ್ಲ, ಅದರ ಬಗ್ಗೆ ತನಿಖೆ ನಡೆಯುತ್ತದೆʼʼ ಎಂದು ತುಷಾರ್ ಗಿರಿನಾಥ್ ಹೇಳಿದರು.
ಅಪಘಾತಕ್ಕೆ ಪರಿಹಾರವಾಗಿ ಬಿಬಿಎಂಪಿ ಕಡೆಯಿಂದ ಯಾವುದೇ ಮೊತ್ತವನ್ನು ನೀಡಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ | ಸಿದ್ಧಾರೂಢ ಮಠದ ಗೇಟಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ