Site icon Vistara News

ಬೆಂಗಳೂರು ರಸ್ತೆಗೆ ಬಂದಿಳಿದ ಮಂಗಳ ಗ್ರಹ !

ಬೆಂಗಳೂರು: ವಾಹನಗಳು ನಿಧಾನಗತಿಯಲ್ಲಿ ರಸ್ತೆಯಲ್ಲಿ ಸಾಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿದರೆ, ದೊಡ್ಡ ದೊಡ್ಡ ಕುಳಿಗಳಿರುವ ಮಂಗಳ ಗ್ರಹದಲ್ಲಿ ಮಾನವ ಹೋಗಿ ಅಲ್ಲಿ ವಾಹನ ಚಲಾಯಿಸುತ್ತಿದ್ದಾನೆಯೇ ಎಂದು ತೋರುತ್ತದೆ. ಆದರೆ ಇದು ಮಂಗಳ ಗ್ರಹ ಅಲ್ಲ, ಮೈಸೂರು ರಸ್ತೆ ಕೆಂಗೇರಿ ಬಳಿಯ ನೈಸ್ ಜಂಕ್ಷನ್‌ನಲ್ಲಿ ಗುಂಡಿ ಬಿದ್ದು ಹಾಳಾಗಿರುವ ರಸ್ತೆಯ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿರುವ ರೀತಿ. ಈ ವಿಡಿಯೋಗೆ ಸಾವಿರಾರು ಜನರು ಪ್ರತಿಕ್ರಿಯೆ ನೀಡಿದ್ದಾರೆ. ಬಿಬಿಎಂಪಿ ಮತ್ತು ಸರಕಾರದ ಆಡಳಿತ ಬಗ್ಗೆ ಕಿಡಿಕಾರಿದ್ದಾರೆ.

ಇದೊಂದೆ ಅಲ್ಲ, ಇಂತಹ ರಸ್ತೆ ಗುಂಡಿಗಳ ಹತ್ತಾರು ಫೋಟೊಗಳು ಹರಿದಾಡುತ್ತಿವೆ. ಬೆಂಗಳೂರು – ಮೈಸೂರು ನಡುವಿನ ರಸ್ತೆಯ ನೈಸ್ ರಸ್ತೆ ಜಂಕ್ಷನ್‌ ಸಮೀಪದಲ್ಲಿ ಹತ್ತಾರು ಗುಂಡಿಗಳು ಕಾಣಿಸಿಕೊಂಡಿರುವ ವಿಡಿಯೋ ತುಣುಕನ್ನು ಹಂಚಿಕೊಳ್ಳುತ್ತಿರುವ ನೆಟ್ಟಿಗರು, ಇದು ಆಘಾತಕಾರಿ ಮತ್ತು ನಾಚಿಕೆಗೇಡು ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

ಈ ಪೋಸ್ಟ್‌ಗೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮುಜುಂದಾರ್ ಷಾ ಕೂಡ ದನಿಗೂಡಿಸಿದ್ದಾರೆ. ಹದಗೆಟ್ಟ ರಸ್ತೆಗಳ ಬಗ್ಗೆ ಟ್ವೀಟ್‌ ಮೂಲಕ ಕೆಲ ದಿನಗಳ ಹಿಂದೆ ಬೇಸರ ಹೊರಹಾಕಿದ್ದರು. ರಸ್ತೆಗಳ ದುಸ್ಥಿತಿ ಆನೇಕ ರಾಜಕಾರಣಿಗಳಿಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದ್ದರು. ಆನೇಕಲ್ ತಾಲೂಕಿನ ಹೊಸೂರು ಸರ್ಜಾಪುರ ರಸ್ತೆ ಸಂಚಾರ ಮಾಡದಿರುವಷ್ಟು ಹದಗೆಟ್ಟಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ದುರಸ್ತಿ ಸಾಧ್ಯವಾಗದಿದ್ದರೆ ಸರ್ಕಾರ ಬಸ್ ಡಿಪೋ, ವಸತಿ ಗೃಹಗಳನ್ನು ಇಲ್ಲಿ ಏಕೆ ನಿರ್ಮಿಸಬೇಕಿತ್ತು ಎಂದು ಆಕ್ರೋಶದಿಂದ ಪ್ರಶ್ನಿಸಿದ್ದರು.

ಬಸವೇಶ್ವರ ಜನ್ಮಭೂಮಿಯಿಂದ ಕರ್ಮಭೂಮಿಗೆ ಪ್ರವೇಶಿಸಿದ ಪಾದಯಾತ್ರೆ

Exit mobile version