Site icon Vistara News

Prajadhwani Yatre | ಬ್ರಿಟಿಷರನ್ನು ಓಡಿಸಿದಂತೆ ಬಿಜೆಪಿಯನ್ನು ಕಿತ್ತೊಗೆಯುತ್ತೇವೆ ಎಂದ ಡಿ.ಕೆ. ಶಿವಕುಮಾರ್: ಪ್ರಜಾಧ್ವನಿ ಯಾತ್ರೆ ಲೋಗೊ ಬಿಡುಗಡೆ

prajadhwani-yatre-DK shivakumar says congress will throw out bjp as we did with with british

‌ಬೆಂಗಳೂರು: ಭಾರತದಿಂದ ಬ್ರಿಟಿಷರನ್ನು ಓಡಿಸಿದಂತೆಯೇ ಕರ್ನಾಟಕದಿಂದ ಬಿಜೆಪಿಯನ್ನು ಕಿತ್ತೊಗೆಯುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಬುಧವಾರದಿಂದ ಆರಂಭವಾಗಲಿರುವ ಪ್ರಜಾಧ್ವನಿ ಯಾತ್ರೆಯ (Prajadhwani Yatre) ಲೋಗೊ, ವೆಬ್‌ಸೈಟ್‌ ಬಿಡುಗಡೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಹೊಸ ವರ್ಷದಲ್ಲಿ ಕಾಂಗ್ರೆಸ್‌ ಪಕ್ಷದ ವಿಜಯ ಪರ್ವ ಆರಂಭವಾಗಿದೆ. ಜನರಿಗೋಸ್ಕರ ಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ. ಮೂರು ವರ್ಷ ಬಿಜೆಪಿ ಸರ್ಕಾರ ಯಾವುದರಲ್ಲಿ ವಿಫಲ ಆಗಿದೆ ಎಂದು ಜನರ ಗಮನವನ್ನು ಸೆಳೆದು, ಅವರ ಬದುಕಿಗೆ ನಾವು ಏನು ಮಾಡುತ್ತೇವೆ ಎಂದು ತಿಳಿಸುತ್ತೇವೆ. ಅದಕ್ಕಾಗಿ ಪ್ರಜಾ ಧ್ವನಿ ಯಾತ್ರೆಯನ್ನು ಕೈಗೊಂಡಿದ್ದೇವೆ.

ಮಹಾತ್ಮಾ ಗಾಂಧೀಜಿಯವರು ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಗಾಂಧಿ ಬಾವಿ ಎಂಬ ಸ್ಥಳದಿಂದ ಯಾತ್ರೆ ಆರಂಭವಾಗುತ್ತದೆ. ಬ್ರಿಟಿಷರನ್ನು ಭಾರತದಿಂದ ಓಡಿಸಲು ಗಾಂಧೀಜಿ ಅಧಿಕಾರ ವಹಿಸಿಕೊಂಡ ಭೂಮಿಯಿಂದಲೇ ಯಾತ್ರೆ ಆರಂಭಿಸುತ್ತೇವೆ. ಭ್ರಷ್ಟ ಬಿಜೆಪಿಯನ್ನು ಕಿತ್ತೊಗೆಯಲು ಸಂಕಲ್ಪ ಮಾಡಿದ್ದೇವೆ.

ಇಡೀ ವಿಶ್ವವೇ ಕರ್ನಾಟಕದತ್ತ ನೋಡುತ್ತಿತ್ತು. ಈಗ ಕರ್ನಾಟಕಕ್ಕೆ ಕಳಂಕ ಬಂದಿದೆ. ಪ್ರತಿ ಕ್ಷೇತ್ರದಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ರೈತರ ಬದುಕು ಹಸನಾಗಲಿಲ್ಲ, ಯುವಕರಿಗೆ ಉದ್ಯೋಗ ಸಿಗಲಿಲ್ಲ. ಈ ಸರ್ಕಾರಕ್ಕೆ ಜನಾದೇಶ ಆಗಲಿಲ್ಲ. ಆಪರೇಷನ್‌ ಕಮಲ ಮೂಲಕ ಅಧಿಕಾರಕ್ಕೆ ಬಂದರು. ಅವರು ನೀಡಿದ 600 ವಚನಗಳಲ್ಲಿ 550 ಮಾತ್ರ ಮಾಡಿದ್ದಾರೆ. ಬಿಜೆಪಿ ಸರ್ಕಾರದ ಪಾಪದ ಪುರಾಣವನ್ನು ಜನರ ಮುಂದಿಟ್ಟು ಜನರ ಆಕಾಂಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇವೆ. ಕೈ ಜೋಡಿಸಿ, ಕರುನಾಡಿಗಾಗಿ ಎಂಬ ಘೋಷವಾಕ್ಯದೊಂದಿಗೆ ಯಾತ್ರೆ ನಡೆಯುತ್ತದೆ ಎಂದರು.

ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, 15ನೇ ಹಣಕಾಸು ಆಯೋಗದಿಂದ ಐದು ಸಾವಿರ ಕೋಟಿ‌ ರೂ. ಬರಬೇಕು. ಅಷ್ಟು ಹಣ ನೀಡಲಾಗುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಪತ್ರ ಬರೆದು ಹೇಳಿದ್ದಾರೆ. 25 ಸಂಸದರು ಇದ್ದರೂ ಪ್ರಧಾನಿ‌ ಮೇಲೆ ಒತ್ತಡ ಹಾಕಲಿಲ್ಲ. ಬಿಜೆಪಿ ಹೇಡಿತನದಿಂದ ರಾಜ್ಯಕ್ಕೆ ಅನ್ಯಾಯ ಆಯಿತು.

ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ರೈತರು, ಮಹಿಳೆಯರು, ಜನರು ಭಯದಿಂದ ಆತಂಕಕ್ಕೊಳಗಾಗಿದ್ದಾರೆ. ಇದೊಂದು ರೀತಿ ಅಲಿ ಬಾಬಾ ಮತ್ತು 40 ಕಳ್ಳರ ಸರ್ಕಾರ. ಹೋಟೆಲ್‌ ಮೆನು ರೀತಿ ಭ್ರಷ್ಟಾಚಾರ ಎಸಗುತ್ತಿದ್ದಾರೆ. ಇದಕ್ಕಾಗಿ ಮೊದಲ ಹಂತದಲ್ಲಿ ಜಿಲ್ಲಾ ಮಟ್ಟದ ರಥಯಾತ್ರೆ ನಡೆಯುತ್ತದೆ. ನಂತರ ಎಲ್ಲ ಮತ ಕ್ಷೇತ್ರಗಳಿಗೆ ತೆರಳಲು ಎರಡು ಗುಂಪುಗಳಲ್ಲಿ ಯಾತ್ರೆ ನಡೆಸಲಿದ್ದೇವೆ ಎಂದರು.

ಬೆಳಗಾವಿಯಿಂದ ಯಾತ್ರೆ ಆರಂಭ
ಪ್ರಜಾಧ್ವನಿ ಯಾತ್ರೆಯ ಲಾಂಛನ ಹಾಗೂ ವೆಬ್‌ಸೈಟನ್ನು ಸುದ್ದಿಗೋಷ್ಠಿಯಲ್ಲಿ ಲೋಕಾರ್ಪಣೆ ಮಾಡಲಾಯಿತು. ಬುಧವಾರ ಬೆಳಗ್ಗೆ 9.30ಕ್ಕೆ ಬೆಳಗಾವಿಯ ಚಿಕ್ಕೋಡಿಗೆ ತೆರಳಿ ಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಅದೇ ದಿನ ಸಂಜೆ ಬೆಳಗಾವಿಯಲ್ಲಿ ಮತ್ತೊಂದು ಕಾರ್ಯಕ್ರಮ ನಡೆಯುತ್ತದೆ.

ಜನವರಿ 12ರಿಂದ ೧೫ರವರೆಗೆ ಸಂಕ್ರಾಂತಿ ಪ್ರಯುಕ್ತ ವಿರಾಮ ನೀಡಲಾಗಿದೆ.
ಜನವರಿ 17ರಂದು ಹೊಸಪೇಟೆ, ಕೊಪ್ಪಳ
ಜನವರಿ 18ರಂದು ಬಾಗಲಕೋಟೆ, ಗದಗ
ಜನವರಿ 19ರಂದು ಹಾವೇರಿ, ದಾವಣಗೆರೆ
ಜನವರಿ 21ರಂದು ಹಾಸನ, ಚಿಕ್ಕಮಗಳೂರು
ಜನವರಿ 22ರಂದು ಉಡುಪಿ, ಮಂಗಳೂರು
ಜನವರಿ 23ರಂದು ಕೋಲಾರ, ಚಿಕ್ಕಬಳ್ಳಾಪುರ
ಜನವರಿ 24ರಂದು ತುಮಕೂರು, ದೊಡ್ಡಬಳ್ಳಾಪುರ
ಜನವರಿ 26ರಂದು ಚಾಮರಾಜನಗರ, ಮೈಸೂರು
ಜನವರಿ 27ರಂದು ಮಂಡ್ಯ, ರಾಮನಗರ
ಜನವರಿ 28ರಂದು ಯಾದಗಿರಿ, ಬೀದರ್‌

ಮೊದಲ ಹಂತದಲ್ಲಿ ಒಟ್ಟು 20 ಜಿಲ್ಲೆಗಳಲ್ಲಿ ಯಾತ್ರೆ ನಡೆಯಲಿದ್ದು, ಬೆಂಗಳೂರು ಈ ಪಟ್ಟಿಯಲ್ಲಿ ಇಲ್ಲ. ಯಾತ್ರೆಗಾಗಿ prajadhwani.com ವೆಬ್‌ಸೈಟ್ ಅನ್ನು ಪ್ರಾರಂಭಿಸಲಾಗಿದೆ ಹಾಗೂ ಜನರ ತಮ್ಮ ಸಲಹೆ, ನಿರೀಕ್ಷೆಗಳನ್ನು ದಾಖಲಿಸಲು 9537 224 224 ಸಂಖ್ಯೆಯನ್ನು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ | Prajadhwani Yatre | ಬಸ್‌ ಯಾತ್ರೆಗೆ ಎರಡು ತಂಡ ಪ್ರಕಟಿಸಿದ ಕಾಂಗ್ರೆಸ್‌; ʼಪ್ರಜಾಧ್ವನಿ ಯಾತ್ರೆʼ ಎಂದು ನಾಮಕರಣ?

Exit mobile version