ಬೆಂಗಳೂರು: ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಎಂಎಸ್ಐಎಲ್ – MSIL) ಸರ್ಕಾರಿ ಪ್ರೀಮಿಯಂ ಮದ್ಯ ಮಾರಾಟ ಮಳಿಗೆಯನ್ನು (Liquor Shop) ಪ್ರಾರಂಭ ಮಾಡಿದೆ. ಅಲ್ಲದೆ, ಇದಕ್ಕೆ ಕಾರ್ಪೊರೇಟ್ ಟಚ್ ನೀಡಲಾಗಿದ್ದು, ಎಲ್ಲ ವರ್ಗದ ಮದ್ಯ ಪ್ರಿಯರನ್ನೂ ಸೆಳೆಯಲು ಮುಂದಾಗಲಾಗಿದೆ. ಸದ್ಯ ಇದನ್ನು ಬಸವೇಶ್ವರ ನಗರದಲ್ಲಿ ಪ್ರಾರಂಭ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರಿನ ಹಲವು ಕಡೆ ಸ್ಥಾಪನೆ ಮಾಡುವ ಚಿಂತನೆಯನ್ನು ನಡೆಸಲಾಗಿದೆ.
ಇಲ್ಲಿನ ಬಸವೇಶ್ವರ ನಗರದ ತಿಮ್ಮಯ್ಯ ರಸ್ತೆಯಲ್ಲಿ ಹೊಸದಾಗಿ ಆರಂಭಿಸಿರುವ ಸರ್ಕಾರಿ ಪ್ರೀಮಿಯಂ ಮದ್ಯ ಮಾರಾಟ ಮಳಿಗೆಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ನೂತನ ವರ್ಷಾರಂಭದ ದಿನವಾದ ಸೋಮವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮನೋಜ್ ಕುಮಾರ್, `ಮಧ್ಯಮ ವರ್ಗದಿಂದ ಹಿಡಿದು ಸಮಾಜದ ಪ್ರತಿಯೊಂದು ವರ್ಗದ ಗ್ರಾಹಕರನ್ನೂ ಸೆಳೆಯುವುದು ಎಂಎಸ್ಐಎಲ್‌ನ ಗುರಿಯಾಗಿದೆ. ಇದರಂತೆ, ಹೊಸ ರೂಪ ಪಡೆದಿರುವ ಈ ಬೋಟಿಕ್ ನಲ್ಲಿ ಸಾಮಾನ್ಯ ಬೆಲೆಯಿಂದ ಹಿಡಿದು ಅತ್ಯಂತ ದುಬಾರಿ ಬೆಲೆಯ ಬ್ರಾಂಡೆಡ್ ಮದ್ಯದ ಉತ್ಪನ್ನಗಳು ಸುಲಭವಾಗಿ ಸಿಗಲಿದೆ. ಚಿತ್ತಾಕರ್ಷಕ ಒಳಾಂಗಣ ವಿನ್ಯಾಸ ಮತ್ತು ಗ್ರಾಹಕರಿಗೆ ಹಿತಕರ ಅನುಭವ ಸಿಗುವಂತೆ ಮಾಡಲು ಇಲ್ಲಿ ಆದ್ಯತೆ ಕೊಡಲಾಗಿದ್ದು, ಜಾಗತಿಕ ಗುಣಮಟ್ಟದ ಮಾಲ್ ರೀತಿಯಲ್ಲಿ ಈ ಪ್ರೀಮಿಯಂ ಬೋಟಿಕ್ ಇದೆ” ಎಂದರು.
ಎಂ.ಬಿ. ಪಾಟೀಲ್ ಸಲಹೆ
ಎಂಎಸ್ಐಎಲ್ ಅಧ್ಯಕ್ಷರೂ ಆದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರ ಸಲಹೆ ಮೇರೆಗೆ ಹಾಲಿ ಇರುವ ಮದ್ಯ ಮಾರಾಟ ಮಳಿಗೆಗಳನ್ನು ಹೈಟೆಕ್ ರೀತಿಯಲ್ಲಿ ವಿನ್ಯಾಸ ಮಾಡಲು ಆರಂಭಿಸಿದ್ದು ಹಂತಹಂತವಾಗಿ ಎಲ್ಲವನ್ನೂ ಬದಲಿಸಲಾಗುವುದು ಎಂದು ಮನೋಜ್ ಕುಮಾರ್ ತಿಳಿಸಿದರು.
ಬೋಟಿಕ್ ಆಗಿ 200 ಮಳಿಗೆಗಳು ಮೇಲ್ದರ್ಜೆಗೆ
ಎಂಎಸ್ಐಎಲ್ ರಾಜ್ಯದಲ್ಲಿ ಒಟ್ಟು 1,029 ಮದ್ಯ ಮಾರಾಟ ಮಳಿಗೆಗಳನ್ನು ನಡೆಸುತ್ತಿದೆ. ಈ ಪೈಕಿ 200 ಮಳಿಗೆಗಳನ್ನು ಬೋಟಿಕ್ ಆಗಿ ಮೇಲ್ದರ್ಜೆಗೇರಿಸಲಾಗುತ್ತಿದ್ದು, ಇದರಲ್ಲಿ 20 ಮಳಿಗೆಗಳು ಬೆಂಗಳೂರಿನಲ್ಲೇ ಇರಲಿವೆ. ಇನ್ನು ಕೆಲವೇ ದಿನಗಳಲ್ಲಿ ಡಾ.ರಾಜಕುಮಾರ್ ರಸ್ತೆ, ಆರ್ ಪಿಸಿ ಬಡಾವಣೆ ಮತ್ತು ವಿಜಯನಗರದಲ್ಲಿ ಇಂತಹ ಬೋಟಿಕ್ ಮದ್ಯಪ್ರಿಯರಿಗೆ ಮುಕ್ತವಾಗಲಿವೆ ಎಂದು ಮನೋಜ್ ಕುಮಾರ್ ಹೇಳಿದರು.
ಇದಲ್ಲದೆ ಶಿವಾನಂದ ವೃತ್ತ, ವರ್ತೂರು, ಕೆಂಗೇರಿ ಉಪನಗರ, ಮಾರುತಿ ಸೇವಾ ನಗರ, ಹನುಮಂತ ನಗರ ಮತ್ತು ಸರ್ಜಾಪುರ ರಸ್ತೆಯಲ್ಲಿರುವ ದೊಡ್ಡಕನ್ನಹಳ್ಳಿಯಲ್ಲಿ ಇರುವ ಎಂಎಸ್ಐಎಲ್ ಮಳಿಗೆಗಳನ್ನು ಬೋಟಿಕ್‌ಗಳಾಗಿ ರೂಪಾಂತರಿಸುವ ಕೆಲಸ ಪ್ರಗತಿಯಲ್ಲಿದೆ. ಈ ಎಲ್ಲ ಮಳಿಗೆಗಳಲ್ಲೂ ಚಿಲ್ಲರೆ ಮಾರಾಟ ದರದಲ್ಲಿ ಅತ್ಯುತ್ಕೃಷ್ಟ ಮದ್ಯಗಳು ಲಭ್ಯವಾಗಲಿವೆ ಎಂದು ಮನೋಜ್ ಕುಮಾರ್ ನುಡಿದರು.
ಎಂಎಸ್ಐಎಲ್ ರಾಜ್ಯದಲ್ಲಿರುವ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಇಂತಹ ತಲಾ 2 ಬೋಟಿಕ್ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ತಲಾ ಒಂದು ಇಂತಹ ಬೋಟಿಕ್ ತೆರೆಯಲಿದೆ. ಇವೆಲ್ಲವೂ ಇನ್ನು ಮೂರ್ನಾಲ್ಕು ತಿಂಗಳುಗಳಲ್ಲಿ ಹಂತಹಂತವಾಗಿ ಆರಂಭವಾಗಲಿವೆ. ಮದ್ಯಪ್ರಿಯರು ಯಾವುದೇ ತೊಂದರೆ ಇಲ್ಲದೆ, ತಮಗೆ ಬೇಕಾದ ದರ್ಜೆಯ ಮದ್ಯದ ಉತ್ಪನ್ನಗಳನ್ನು ಇಲ್ಲಿ ಖರೀದಿಸಬಹುದು ಎಂದು ಮನೋಜ್ ಕುಮಾರ್ ಮಾಹಿತಿ ನೀಡಿದರು.
ಇಂತಹ ಬೋಟಿಕ್‌ಗಳಿಂದ ಸಂಸ್ಥೆಯ ವಹಿವಾಟು ಶೇಕಡ 30ರಿಂದ 40ರಷ್ಟು ಏರಿಕೆಯಾಗಲಿದೆ. ಇಲ್ಲಿ ಸಿಗುವ ಬ್ರಾಂಡೆಡ್ ಮದ್ಯದ ಬಗೆಗಳಿಗೆ ಗುಣಮಟ್ಟದ ಖಾತ್ರಿ ಇರಲಿದೆ. ಈ ಮೂಲಕ ಸಂಸ್ಥೆಯು ಹೊಸ ಹೆಜ್ಜೆ ಇಡುತ್ತಿದೆ. ಸಂಸ್ಥೆಯು ವಹಿವಾಟನ್ನು 4 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಿಕೊಳ್ಳುವ ಗುರಿ ಇಟ್ಟುಕೊಂಡಿದೆ. ಈ ನಿಟ್ಟಿನಲ್ಲಿ ವಾರ್ಷಿಕ 10 ಸಾವಿರ ಕೋಟಿ ರೂ. ಮೊತ್ತದ ಚಿಟ್ ಫಂಡ್ ವ್ಯವಹಾರ, ಲೇಖನ ಸಾಮಗ್ರಿಗಳ ಮಾರಾಟಕ್ಕೆ ಫ್ರಾಂಚೈಸಿಗಳ ಆರಂಭ, 10 ಮೆಗಾ ಮೆಡಿಕಲ್ ಶಾಪ್ ಆರಂಭ ಮುಂತಾದ ಉಪಕ್ರಮಗಳನ್ನು ಕೈಗೊಳ್ಳಲಿದೆ. ಜತೆಗೆ ಪ್ರತಿಯೊಂದು ವಹಿವಾಟಿನಲ್ಲೂ ಕಾರ್ಪೊರೆಟ್ ಸ್ಪರ್ಶ ನೀಡಲಾಗುವುದು ಎಂದು ಮನೋಜ್ ಕುಮಾರ್ ವಿವರಿಸಿದರು.
ಇದನ್ನೂ ಓದಿ: Coronavirus News: ಕೊರೊನಾ ನಿರ್ಲಕ್ಷ್ಯಕ್ಕೆ ಬಲಿ; ಆಸ್ಪತ್ರೆಗೆ ಸೇರದೇ ಶಿವನ ಪಾದ ಸೇರಿದ 7 ಮಂದಿ!
ಎಂಎಸ್ಐಎಲ್ ನಿರ್ದೇಶಕ ಎ.ಎಂ.ಚಂದ್ರಪ್ಪ, ಪ್ರಧಾನ ವ್ಯವಸ್ಥಾಪಕ (ಮೂಲಸೌಕರ್ಯ) ಕೆ.ರವಿಕುಮಾರ್, ಪ್ರಧಾನ ವ್ಯವಸ್ಥಾಪಕರಾದ ಬಸವರಾಜ, ಚಂದ್ರಶೇಖರ, ಸಿಎಫ್ಒ ಅವಿನಾಶ ಉಪಸ್ಥಿತರಿದ್ದರು.