ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರಕ್ಕೆ ಬಂದು 4 ತಿಂಗಳು ಕಳೆಯುತ್ತಿರುವ ಬೆನ್ನಲ್ಲೇ ಬೆಲೆ ಏರಿಕೆಯ (Price Rise) ಭೂತ ಶುರುವಾಗಿದೆ. ದಿನನಿತ್ಯ ಬಳಕೆಯ ವಸ್ತುಗಳ ದುಬಾರಿ ಆಗುತ್ತಿರುವ ಮಧ್ಯೆಯೇ ಈಗ ಕುಡಿಯುವ ನೀರೂ ಸಹ ತುಟ್ಟಿ (Water will be Costly) ಆಗುವ ಸಾಧ್ಯತೆ ದಟ್ಟವಾಗಿದೆ. ಇದಲ್ಲದೆ ವಿದ್ಯುತ್ ದರ ಏರಿಕೆಯು (Electricity Tariff) ಸದ್ದಿಲ್ಲದೆ ಆಗುತ್ತಿದ್ದು, ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಕಳೆದ 9 ವರ್ಷಗಳಿಂದಲೂ ನೀರಿನ ದರ ಪರಿಷ್ಕರಣೆ ಮಾಡದ ಹಿನ್ನೆಲೆ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಬೆಂಗಳೂರು ಜಲಮಂಡಳಿ ಕೊನೆಗೂ ನೀರಿದ ದರ ಏರಿಕೆಗಾಗಿ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಹೀಗಾಗಿ ದಿನನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆಯ ಮಧ್ಯೆ ನೀರಿಗೂ ದುಬಾರಿ ಬೆಲೆ ತೆರಬೇಕಾದ ಸ್ಥಿತಿ ಕೆಲವೇ ದಿನಗಳಲ್ಲಿ ಬಂದೊದಗಲಿದೆ.
ಸದ್ಯ ಜಲಮಂಡಳಿಗೆ ಬರುವ ಮಾಸಿಕ 110 ಕೋಟಿ ರೂಪಾಯಿ ಆದಾಯದಲ್ಲಿ 80 ಕೋಟಿ ವಿದ್ಯುತ್ ಬಿಲ್ ಕಟ್ಟಬೇಕಾದ ಸ್ಥಿತಿಯಲ್ಲಿ ಹಾಗೂ ಇನ್ನುಳಿದ ಆದಾಯವನ್ನ ಕಾಮಗಾರಿ, ನೂತನ ಯೋಜನೆ, ಸಿಬ್ಬಂದಿ ವೇತನಕ್ಕಾಗಿ ಪರದಾಡಬೇಕಾಗಿದೆ. ಹೀಗಾಗಿ ಶೆ.30-40ರಷ್ಟು ನೀರಿದ ದರ ಪರಿಷ್ಕರಣೆಗೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಜಲಮಂಡಳಿ ಮಾಹಿತಿ ನೀಡಿದೆ.
ನೀರಿನ ದರ ಏರಿಕೆ ಬೆನ್ನಲ್ಲೇ ವಿದ್ಯುತ್ ಬೆಲೆ ಏರಿಕೆ ಶಾಕ್..!
ನೀರಿನ ದರ ಏರಿಕೆ ಚರ್ಚೆ ಬೆನ್ನಲ್ಲೆ, ಬೆಸ್ಕಾಂನಿಂದ ವಿದ್ಯುತ್ ಶಾಕ್ ಕೂಡ ಎದುರಾಗಿದೆ. ಯೂನಿಟ್‌ಗೆ 1.01 ರೂಪಾಯಿ FAC ಶುಲ್ಕ ಹೆಚ್ಚಳ ಮಾಡಿ ಬೆಸ್ಕಾಂ ಆದೇಶ ಹೊರಡಿಸಿದೆ. ಕಳೆದ ಜೂನ್‌ನಲ್ಲಿ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ 50 ಪೈಸೆ ಶುಲ್ಕ ಹೆಚ್ಚಳ ಮಾಡಿದ್ದ ಬೆಸ್ಕಾಂ, ಇದೀಗ ಅಕ್ಟೋಬರ್‌ಗೆ ಸೀಮಿತವಾಗಿ 51 ಪೈಸೆ ಹೆಚ್ಚುವರಿ ಶುಲ್ಕ ವಿಧಿಸಿರೋ ಮಾಹಿತಿ ಲಭ್ಯವಾಗುತ್ತಿದೆ. ಇನ್ನು ಈ FAC ದರ ಈ ತಿಂಗಳಿಗೆ ಮಾತ್ರ ಅನ್ವಯವಾಗಲಿದ್ದು, ಮುಂದಿನ ತಿಂಗಳು ಮತ್ತೆ ಪರಿಷ್ಕರಣೆಯಾಗಲಿದೆ. ಇನ್ನು ಇದರಿಂದ ಗೃಹಜ್ಯೋತಿ ಫಲಾನುಭವಿಗಳನ್ನ ಹೊರತುಪಡಿಸಿ ಉಳಿದ ಗ್ರಾಹಕರಿಗೆ ಇದರ ಬಿಸಿ ತಟ್ಟಲಿದೆ ಎನ್ನಲಾಗ್ತಿದೆ. ಇನ್ನು ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಬೆಸ್ಕಾಂ, ವಿದ್ಯುಚ್ಛಕ್ತಿ ಆಯೋಗದಂತೆ ಹೊಂದಾಣಿಕೆ ಶುಲ್ಕ ನಿಗದಿ ಮಾಡಿದ್ದೇವೆ ಅಂತಾ ಹೇಳಿದೆ.
ಇದನ್ನೂ ಓದಿ: Price Rise : ಟೊಮೆಟೊ, ನೀರುಳ್ಳಿ ಬಳಿಕ ತೊಗರಿ ಬೇಳೆ ಬೆಲೆ ಏರಿಕೆಯ ಬಿಸಿ! ದರ ಎಷ್ಟಾಗಬಹುದು?
ಒಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿ ಯೋಜನೆಗಳ ಜಾರಿ ಮಾಡುತ್ತಲೇ, ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬರೆಯನ್ನೂ ಹಾಕುತ್ತಿದೆ. ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದೆ ಅಂತಾ ಜನರು ಆಡಿಕೊಳ್ಳುತ್ತಿದ್ದಾರೆ. ತರಕಾರಿ, ದಿನಸಿ ಸಹಿತ ಅತ್ಯವಶ್ಯಕ ವಸ್ತುಗಳ ಜೊತೆಗೆ ವಿದ್ಯುತ್, ನೀರೂ ಸಹ ಗಗನ ಕುಸುಮವಾಗುತ್ತಿರುವುದು ಮಧ್ಯಮ ವರ್ಗದ ಜನರ ಜೀವನಕ್ಕೆ ಕುತ್ತು ತರುತ್ತಿದೆ.