Site icon Vistara News

Mann Ki Baat 2022 | ರಸ್ತೆ ಬದಿ ಗೋಡೆಗಳನ್ನು ಸ್ವಚ್ಛಗೊಳಿಸುವ ಬೆಂಗಳೂರಿನ ಯೂತ್‌ ಫಾರ್ ಪರಿವರ್ತನ್‌ಗೆ ಪ್ರಧಾನಿ ಪ್ರಶಂಸೆ

youth

ನವ ದೆಹಲಿ: ಬೆಂಗಳೂರಿನಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿನ ಆವರಣ ಗೋಡೆಗಳನ್ನು ಸ್ವಚ್ಛಗೊಳಿಸಿ, ಕಲಾತ್ಮಕವಾಗಿ ಅಂದಗೊಳಿಸುವ ಯೂತ್‌ ಫಾರ್‌ ಪರಿವರ್ತನ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬಾನುಲಿ ಕಾರ್ಯಕ್ರಮ ಮನ್‌ಕಿ ಬಾತ್‌ನಲ್ಲಿ ಮೆಚ್ಚುಗೆ (Mann Ki Baat 2022) ವ್ಯಕ್ತಪಡಿಸಿದ್ದಾರೆ.

” ಬೆಂಗಳೂರಿನ ಯೂತ್‌ ಫಾರ್‌ ಪರಿವರ್ತನ್‌ ಸಂಘಟನೆಯು ನಗರದ 370ಕ್ಕೂ ಹೆಚ್ಚು ಸ್ಥಳಗಳಲ್ಲಿ ಗೋಡೆಗಳನ್ನು ಸ್ವಚ್ಛಗೊಳಿಸುವುದಲ್ಲದೆ, ವರ್ಣಮಯ ಚಿತ್ತಾರಗಳಿಂದ ಅಲಂಕರಿಸಿದೆ. ದೂರುವುದನ್ನು ನಿಲ್ಲಿಸಿ, ಕಾರ್ಯಪ್ರವೃತ್ತರಾಗಿ ಎನ್ನುವುದೇ ಸಂಘಟನೆಯ ಧ್ಯೇಯೋದ್ದೇಶ. 100ರಿಂದ 150 ನಾಗರಿಕರು ಇದರಲ್ಲಿ ತೊಡಗಿಸಿಕೊಂಡಿದ್ದಾರೆʼʼ ಎಂದರು.

ಪ್ರತಿ ಭಾನುವಾರ ಬೆಳಗ್ಗೆ ಅವರು ತಂಡಗಳಲ್ಲಿ ತೆರಳಿ ಮಧ್ಯಾಹ್ನದ ತನಕ ಸ್ವಚ್ಛತಾ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಹಲವು ಕಡೆಗಳಲ್ಲಿ ಇತಿಹಾಸ ಪುರುಷರ, ಸಾಧಕರ ಚಿತ್ರಗಳನ್ನು ತಂಡ ಚಿತ್ರಿಸಿರುವುದನ್ನು ಕಾಣಬಹುದು.ಇದು ಮಾದರಿ ಹಾಗೂ ಪ್ರೇರಣಾದಾಯಿ ಸಮಾಜ ಸೇವೆಯಾಗಿದೆʼʼ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರಿನ ಯೂತ್‌ ಫಾರ್‌ ಪರಿವರ್ತನ್ : ಬೆಂಗಳೂರಿನಲ್ಲಿ 2014ಕ್ಕೆ ಅಸ್ತಿತ್ವಕ್ಕೆ ಬಂದಿರುವ ಯೂತ್‌ ಫಾರ್‌ ಪರಿವರ್ತನ್‌ ಸ್ವಯಂಸೇವಾ ಸಂಸ್ಥೆ (ಎನ್‌ಜಿಒ) ” ಸ್ವಚ್ಛ ಭಾರತ್-ಸ್ವಚ್ಛ ಬೆಂಗಳೂರುʼ ಅಭಿಯಾನವನ್ನು ಆರಂಭದಿಂದಲೂ ಕೈಗೊಂಡಿದೆ. ಸಾರ್ವಜನಿಕ ಪ್ರದೇಶಗಳನ್ನು ಸ್ವಚ್ಛಗೊಳಿಸುವುದು ಮಾತ್ರವಲ್ಲದೆ, ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ತೆರಳಿಯೂ ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸುತ್ತದೆ. ರಕ್ತದಾನ ಶಿಬಿರ, ಮಕ್ಕಳಿಗೆ ವರ್ಣಚಿತ್ರ ಸ್ಪರ್ಧೆ, ಆರೋಗ್ಯ ಶಿಬಿರ, ಮತದಾರರ ಜಾಗೃತಿ, ಗಿಡ ಮರಗಳನ್ನು ಪೋಷಿಸುವುದು, ಕೆರೆಗಳ ನವೀಕರಣಕ್ಕೆ ಸಹಕಾರ ಇತ್ಯಾದಿ ಸಮಾಜ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನಕ್ಕೆ ಮೊದಲೇ ಯೂತ್‌ ಫಾರ್‌ ಪರಿವರ್ತನ್‌, ಬೆಂಗಳೂರಿನಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿತ್ತು. ಆದರೆ ಪ್ರಧಾನಿಯವರ ಸ್ವಚ್ಛ ಭಾರತ್‌ ಅಭಿಯಾನ ಶುರುವಾದ ಬಳಿಕ ಇವರಿಗೆ ಬೆಂಬಲ ಮತ್ತಷ್ಟು ಹೆಚ್ಚಳವಾಗಿತ್ತು. ವಕೀಲರಾದ ಅಮಿತ್‌ ಅಮರನಾಥ್‌ ಈ ಸ್ವಯಂಸೇವಾ ಸಂಸ್ಥೆಯ ಸಂಸ್ಥಾಪಕರು ಹಾಗೂ ಅಧ್ಯಕ್ಷರು.

Exit mobile version