ಬೆಂಗಳೂರು: ರಾಮಾಯಣ ಮತ್ತು ಮಹಾಭಾರತ ನಮ್ಮ ಸನಾತನ ಸಂಸ್ಕೃತಿ ಮತ್ತು ಪರಂಪರೆಯ ಎರಡು ಕಣ್ಣುಗಳಿದ್ದಂತೆ. ಭಾಗವತ ಗ್ರಂಥವು ಆತ್ಮ ಇದ್ದಂತೆ. ಇವುಗಳ ಮೌಲ್ಯ ಮತ್ತು ಸಂದೇಶಗಳನ್ನು ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ತರವಾದ ಜವಾಬ್ದಾರಿ ನಮ್ಮ ಮೇಲಿದ್ದು, ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಗಿರಿನಗರದ ಭಾಗವತ ಕೀರ್ತಿ ಧಾಮದ ಉಡುಪಿ ಶ್ರೀ ಭಂಡಾರಕೇರಿ ಮಹಾ ಸಂಸ್ಥಾನದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ತಿಳಿಸಿದರು.
ತಿರುಮಲ- ತಿರುಪತಿ ದೇವಸ್ಥಾನ (ಟಿಟಿಡಿ) ಆಡಳಿತ ಮಂಡಳಿ ಹಮ್ಮಿಕೊಂಡಿದ್ದ 3 ದಿನಗಳ ಹಿಂದು ಧರ್ಮ ಪ್ರಚಾರ ಪರಿಷತ್ತಿನ ಧಾರ್ಮಿಕ ಸಮ್ಮೇಳನದ ಅಂಗವಾಗಿ ಅವರು ವೆಬಿನಾರ್ ಮೂಲಕ ಆಶೀರ್ವಚನ ನೀಡಿದರು.
ರಾಮಾಯಣದ ಮೌಲ್ಯ ಎಂದರೆ ಅದು ಕೇವಲ ಭಾರತೀಯರಿಗೆ ಮಾತ್ರವಲ್ಲ, ಇಡೀ ವಿಶ್ವಕ್ಕೇ ರಾಮ- ಕೃಷ್ಣರು ಆದರ್ಶ ನಾಯಕರು. ಮಹಾಭಾರತ ಮತ್ತು ಭಾಗವತಗಳನ್ನು ಕೇವಲ ಹಿಂದುಗಳಿಗೆಂದು ಯಾರೂ ರಚಿಸಿಲ್ಲ. ನಿರ್ಣಯಗಳನ್ನು ಬರೆದಿಲ್ಲ. ಇವೆಲ್ಲವೂ ವಿಶ್ವ ಸಂವಾದಿ. ಜಗತ್ ಮಾರ್ಗದರ್ಶಿ. ಈ ಮಹೋನ್ನತ ಗ್ರಂಥಗಳನ್ನು ಯಾರು ಓದುವರೋ, ಯಾರು ಅನ್ವಯಿಸಿಕೊಳ್ಳುವರೋ ಅವರು ಇಹ ಮತ್ತು ಪರದಲ್ಲಿ, ಜನ್ಮ ಜನ್ಮಾಂತರಗಳಲ್ಲಿ ಸದ್ಗತಿಯನ್ನೇ ಪಡೆಯುತ್ತಾರೆ. ಇದು ಸಾವಿರಾರು ವರ್ಷಗಳಿಂದ ನಮ್ಮೆಲ್ಲಾ ಋಷಿಮುನಿಗೆ ಸಾಕ್ಷಾತ್ಕಾರಗೊಂಡ ಸಂಗತಿಯಾಗಿದೆ ಎಂದು ಹೇಳಿದರು.
ರಾಮಾಯಣ- ಮಹಾಭಾರತ ಪರಿವರ್ತನಾ ಕೇಂದ್ರಗಳನ್ನು ಆರಂಭಿಸಿ
ಉತ್ತರ ಭಾರತದಲ್ಲಿ ಅಯೋಧ್ಯೆ, ದಕ್ಷಿಣದಲ್ಲಿ ತಿರುಪತಿ ಎಂಬ ಎರಡು ಬೃಹತ್ ದೈವಿಕ ಕೇಂದ್ರಗಳು ನಮಗೆ ವರವಾಗಿವೆ. ಈ ಕೇಂದ್ರಗಳಲ್ಲಿ ಸನಾತನ ಹಿಂದು ಪರಂಪರೆ ಉಳಿಸಿ, ಬೆಳೆಸುವ ಸಾವಿರಾರು ಚಟುವಟಿಕೆಗಳು ಸಂಪನ್ನಗೊಳ್ಳಬೇಕು. ಇದಕ್ಕೆ ಪೂರಕವಾಗಿ ಸಾಕಷ್ಟು ಆರ್ಥಿಕ ಮತ್ತು ಮಾನವ ಸಂಪನ್ಮೂಲಗಳೂ ಈಗ ಒದಗಿ ಬಂದಿದೆ. ಇದೊಂದು ದೈವ ಕೃಪೆಯೂ ಆಗಿದೆ. ಇದನ್ನು ಸಮರ್ಥವಾಗಿ ಬಳಸಿಕೊಂಡು ಯುವ ಸಮುದಾಯಕ್ಕೆ ನಮ್ಮ ಭಾರತ ಖಂಡದ ಇತಿಹಾಸ, ಚರಿತ್ರೆ, ಮಹಾಕಾವ್ಯ ಮತ್ತು ಮಹಾ ಪುರುಷರ ಪರಿಚಯ ಮಾಡಿಕೊಡುವ ಕೆಲಸ ತುರ್ತಾಗಿ ಆಗಬೇಕು. ‘ ರಾಮಾಯಣ- ಮಹಾಭಾರತ ಪರಿವರ್ತನಾ ಕೇಂದ್ರ’ ಸ್ಥಾಪಿಸಿ, ಇದಕ್ಕಾಗಿ ಒಂದು ವಿಶೇಷ ಪಠ್ಯವನ್ನೇ ರಚಿಸಿ, ಯುವಜನರಿಗೆ ಪರೀಕ್ಷೆ, ಚರ್ಚೆ, ಸಂವಾದ, ವಿಚಾರಸಂಕಿರಣಗಳನ್ನು ಹಮ್ಮಿಕೊಳ್ಳಬೇಕು. ಇಂಥ ಚಟುವಟಿಕೆಗಳಿಂದ ಮಾತ್ರ ನಮ್ಮ ಸಂಸ್ಕಾರ ಉಳಿಯಲು ಸಾಧ್ಯ ಎಂದು ಶ್ರೀ ವಿದ್ಯೇಶತೀರ್ಥರು ಪ್ರತಿಪಾದಿಸಿದರು.
ಮಕ್ಕಳಿಗೆ ಪರಿಚಯಿಸಿ
ಕಮರ್ಷಿಯಲ್ ಸಿನಿಮಾ, ನಾಟಕ, ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹೇರಳವಾಗಿ ದೊರಕುವ ಅಗ್ಗದ ಮನೋರಂಜನೆಗಳು ಶಾಶ್ವತ ಅಲ್ಲ. ಅವೆಲ್ಲವೂ ಆ ಕ್ಷಣಕ್ಕೆ, ಕೆಲವರಿಗೆ ಮಾತ್ರ ಖುಷಿ ಕೊಡಬಹುದು. ಆದರೆ ನಮ್ಮ ಮಹಾಕಾವ್ಯಗಳು, ಅದರಲ್ಲಿರುವ ಉದಾತ್ತ ಸಂಸ್ಕೃತಿ, ಜೀವನ ಶೈಲಿ ಮತ್ತು ಇದರಿಂದ ಬದುಕನ್ನು ಒಂದು ಮಹೋತ್ಸವವಾಗಿ ಆಚರಿಸುವ ವಿಧಿ- ವಿಧಾನಗಳು ಅನನ್ಯ. ಅಮೋಘ. ಇದನ್ನು ನಾವು ಇಂದಿನ ಮಕ್ಕಳಿಗೆ, ಯುವಪೀಳಿಗೆಗೆ ಪರಿಚಯ ಮಾಡಿಕೊಡದಿದ್ದರೆ ಮುಂದೆ ಬಹು ದೊಡ್ಡ ದುರಂತವನ್ನೇ ಕಾಣಬೇಕಾಗುತ್ತದೆ ಎಂದು ಶ್ರೀಗಳು ಎಚ್ಚರಿಕೆ ನೀಡಿದರು.
ಧಾರ್ಮಿಕ ಕೇಂದ್ರಗಳು ಪ್ರೇರಣೆ ಆಗಲಿ
ಮಕ್ಕಳು, ಯುವಕರೇ ನಮ್ಮ ದೇಶದ ಭವ್ಯವಾದ ಆಸ್ತಿ. ಸಂಸ್ಕೃತಿಹೀನ ಯುವಜನರಿಂದ ದೇಶಕ್ಕೆ ಅಪಾಯವಿದೆ. ಸುಸಂಸ್ಕೃತ ಮಕ್ಕಳಿಂದ ದೇಶವು ವಿಶ್ವದಲ್ಲೇ ಖ್ಯಾತಿ ಪಡೆಯಲಿದೆ. ಇಂಥ ಪ್ರಜೆಗಳನ್ನು ಹೊಂದಬೇಕು ಎಂದರೆ ಇಂದಿನಿಂದಲೇ ಮಕ್ಕಳಿಗೆ ಮನೆ ಮನೆಯಲ್ಲಿ ಭಾರತೀಯ ಸಂಪ್ರದಾಯ ಕಲಿಸಬೇಕು. ತಿರುಪತಿ- ಆಯೋಧ್ಯೆಯಂಥ ಪರಮ ಪಾವನ ಶ್ರದ್ಧಾಕೇಂದ್ರಗಳು ಇಂಥ ಕಾರ್ಯಕ್ಕೆ ಪ್ರೇರಣೆಯಾಗಿ ನಿಂತಾಗ ಮಾತ್ರ ಸನಾತನ ಸಂಸ್ಕೃತಿ ಮುಂದಿನ ಶತಮಾನಕ್ಕೆ ಉಳಿಯಲಿದೆ. ಧರ್ಮ ಕ್ಷೇತ್ರದ ಮುಖಂಡರು, ಪೀಠಾಧಿಪತಿಗಳು ಮತ್ತು ಟಿಟಿಡಿ ಆಡಳಿತ ಮಂಡಳಿಯವರು, ರಾಷ್ಟ್ರಪರ ನಾಯಕರು ಈ ನಿಟ್ಟಿನಲ್ಲಿ ಚಿಂತನೆ ನಡೆಸಿ ಕಾರ್ಯಶೀಲರಾಬೇಕು ಎಂದು ಶ್ರೀ ವಿದ್ಯೇಶತೀರ್ಥರು ಕರೆ ನೀಡಿದರು.
ಇದನ್ನೂ ಓದಿ | ವಿಸ್ತಾರ ಅಂಕಣ: ಮಥುರಾದಲ್ಲೂ ಗತವೈಭವ ಮರುಕಳಿಸುವ ದಿನಗಳು ದೂರವಿಲ್ಲ
ಟಿಟಿಡಿ ಅಧ್ಯಕ್ಷ ಕರುಣಾಕರ ರೆಡ್ಡಿ, ಕಾರ್ಯನಿರ್ವಾಹಕ ಅಧಿಕಾರಿ ಇ.ವಿ. ಧರ್ಮಾರೆಡ್ಡಿ, ದಾಸ ಸಾಹಿತ್ಯ ಯೋಜನೆ ಮುಖ್ಯಸ್ಥರಾದ ಆನಂದತೀರ್ಥಾಚಾರ್ಯ ಪಗಡಾಲ ಮತ್ತು 25ಕ್ಕೂ ಹೆಚ್ಚು ಮಠಾಧೀಶರು ಹಾಜರಿದ್ದರು.