ಬೆಂಗಳೂರು: ಪಿಎಸ್‌ಐ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ನಮಗೆ ನ್ಯಾಯ ಒದಗಿಸಿ, ಇಲ್ಲದೇ ಹೋದರೆ ನಾವು ಭಯೋತ್ಪಾದಕ ಸಂಘಟನೆಗಳನ್ನು ಸೇರಬೇಕಾಗುತ್ತದೆ! ಇದು ಪಿಎಸ್‌ಐ ಆಕಾಂಕ್ಷಿ ಎಂಟು ಅಭ್ಯರ್ಥಿಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಬರೆದ ಪತ್ರ!!
ಪಿಎಸ್‌ಐ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಿಂದ ಮನನೊಂದ ಈ ಅಭ್ಯರ್ಥಿಗಳು, ತಮಗೆ ನ್ಯಾಯ ಒದಗಿಸುವಂತೆ ಕೋರಿ ಪ್ರಧಾನಿಗೆ ರಕ್ತ ಪತ್ರ ಬರೆದಿದ್ದಾರೆ. ಈ ಹಗರಣದ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಎಂದವರು ಒತ್ತಾಯಿಸಿದ್ದಾರೆ. ಪ್ರಧಾನಮಂತ್ರಿಗೆ ಅವರು ಎರಡು ಪುಟಗಳ ಪತ್ರ ಬರೆದಿದ್ದಾರೆ.
“”ನಮಗೆ ಈ ಹಗರಣಕ್ಕೆ ಸಂಬಂಧಿಸಿ ಸೂಕ್ತ ನ್ಯಾಯ ಒದಗಿಸಬೇಕು. ಒಂದು ವೇಳೆ ಸೂಕ್ತ ನ್ಯಾಯ ಸಿಗದೇ ಇದ್ದಲ್ಲಿ ನಾವು ಭಯೋತ್ಪಾದಕರ ಗುಂಪನ್ನು ಸೇರುವುದು ಅನಿವಾರ್ಯ ಆಗುತ್ತದೆ. ಪ್ರಧಾನಿ ಮೋದಿ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರು ನಮಗೆ ನ್ಯಾಯ ಕೊಡಿಸುತ್ತಾರೆ ಎಂಬ ನಂಬಿಕೆ ಇದೆ,ʼʼ ಎಂದು ಪಿಎಸ್‌ಐ ಆಕಾಂಕ್ಷಿಗಳು ಪತ್ರದಲ್ಲಿ ವಿವರಿಸಿದ್ದಾರೆ.
ಸರಕಾರಿ ಹುದ್ದೆಗಳ ನೇಮಕಾತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅಭ್ಯರ್ಥಿಗಳು “”ಕರ್ನಾಟಕ ರಾಜ್ಯದಲ್ಲಿ ಸರಕಾರಿ ಹುದ್ದೆಗಳು ಕೇವಲ ಹಣ ಇದ್ದವರಿಗೆ ಮಾತ್ರ ಎಂಬಂತಾಗಿದೆ. ಸರ್ಕಾರದ ಈ ವ್ಯವಸ್ಥೆಯಿಂದ ನಾವು ಮಾನಸಿಕವಾಗಿ ಸತ್ತುಹೋಗಿದ್ದೇವೆ. ಈ ಕಾರಣದಿಂದ ಇನ್ನು ಮುಂದೆ ಸರ್ಕಾರಿ ಹುದ್ದೆ ಪರೀಕ್ಷೆಗಳನ್ನು ನಾವು ಬರೆಯುವುದಿಲ್ಲ. ಬದಲಾಗಿ ಉಗ್ರರ ಜೊತೆ, ನಕ್ಸಲೈಟ್ ಸಂಘಟನೆ ಸೇರಲು ಇಚ್ಛಿಸಿದ್ದೇವೆ. ಅವರ ಜತೆ ಕೈ ಜೋಡಿಸಿ ಹಣ ಪಡೆದು ಬಡ ಕುಟುಂಬಗಳಿಗೆ ನಾವು ಸಹಾಯ ಮಾಡುತ್ತೇವೆ,ʼʼ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“”ಪಿಎಸ್‌ಐ ಪ್ರಕರಣದಲ್ಲಿ ಅನ್ಯಾಯ ಮಾಡಿದವರನ್ನು ಜೈಲಿಗೆ ಹಾಕಬೇಕು. 2021ರಲ್ಲಿ ನಡೆದ ಎಫ್‌ಡಿಎ ಪರೀಕ್ಷೆಯಲ್ಲಿ ಸಹ ಅಕ್ರಮವಾಗಿದೆ. ಈ ಬಗ್ಗೆ ಕೂಡ ತನಿಖೆ ಮಾಡಿ ನ್ಯಾಯ ಕೊಡಿಸಬೇಕು,ʼʼ ಎಂದು ಅಭ್ಯರ್ಥಿಗಳು ಪತ್ರದ ಮೂಲಕ ಒತ್ತಾಯಿಸಿದ್ದಾರೆ.