ಬೆಂಗಳೂರು: ಹಿಂದು ಕಾರ್ಯಕರ್ತ ಪುನೀತ್ ಕೆರೆಹಳ್ಳಿ (Puneeth Kerehalli) ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಮಾಲ್ ಆಫ್ ಏಷಿಯಾ ಶಾಪಿಂಗ್ (Mall Of Asia) ಮಾಲ್ನ ಸೆಕ್ಯೂರಿಟಿ ಅಸಿಸ್ಟೆಂಟ್ ಮ್ಯಾನೇಜರ್ ಸ್ಟೀಫನ್ ವಿಕ್ಟೋರ್ ಎಂಬುವವರು ನೀಡಿದ ದೂರಿನ ಮೇರೆಗೆ ಕೊಡಿಗೆಹಳ್ಳಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಡಿ. 23ರ ಮಧ್ಯಾಹ್ನ ಹೊತ್ತಿಗೆ ಐದಾರು ಮಂದಿ ಜತೆಗೆ ಗುಂಪು ಕಟ್ಟಿಕೊಂಡು ಬಂದಿದ್ದ ಪುನೀತ್ ಕೆರೆಹಳ್ಳಿ ಏಕಾಏಕಿ ಮಾಲ್ಗೆ ನುಗ್ಗಿದ್ದಾರೆ. ಬಳಿಕ ಮಾಲ್ನ ಇನ್ಚಾರ್ಜ್ ಯಾರು? ಮಾಲ್ ಮುಂಭಾಗ ಕ್ರಿಸ್ಮಸ್ ಟ್ರೀಗಳನ್ನು ಯಾರು ಹಾಕಲು ಹೇಳಿದ್ದು ಎಂದು ಕಿರಿಕ್ ತೆಗೆದಿದ್ದಾರೆ. ಜತೆಗೆ ಹಿಂದು ಧರ್ಮದ ಹಬ್ಬಗಳಿಗೆ ಯಾಕೆ ಅಲಂಕಾರ ಮಾಡುವುದಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಮಾಲ್ಗೆ ಬಂದಿದ್ದ ಇತರೆ ಗ್ರಾಹಕರಿಗೆ ತೊಂದರೆ ಕೊಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಾವು ಮೀಡಿಯಾದವರು, ಮಾಲ್ ಒಳ ಪ್ರವೇಶಿಸಲು ಗ್ರಾಹಕರ ಬಳಿ 200 ರೂ. ಶುಲ್ಕವನ್ನು ವಸೂಲಿ ಮಾಡುತ್ತಿದ್ದೀರಿ ಎಂದು ಪುನೀತ್ ತಂಡದವರು ಚಿತ್ರೀಕರಣವನ್ನು ಮಾಡಿಕೊಂಡಿದ್ದಾರೆ. ಮಾಲ್ನ ಸಿಬ್ಬಂದಿ ಕ್ರಿಶ್ಚಿಯನ್ ಎಂದು ತಿಳಿದಾಗ ಪುನೀತ್ ನಮ್ಮ ಮೇಲೆ ಕೂಗಾಡಿದರು ಎಂದು ಆರೋಪಿಸಿದ್ದಾರೆ.
ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಇದೆ. ಆ ದಿನ ಇದೇ ರೀತಿ ನಮ್ಮ ಹಿಂದು ಧರ್ಮಕ್ಕೆ ಸಂಬಂಧಿಸಿದ ಅಲಂಕಾರವನ್ನು ಮಾಡಬೇಕು. ಇಲ್ಲದಿದ್ದರೆ ಮಾಲ್ ಎದುರಿಗೆ ದೊಡ್ಡ ಮಟ್ಟದ ಪ್ರತಿಭಟನೆ ಮಾಡುವುದಾಗಿ ಪುನೀತ್ ಎಚ್ಚರಿಸಿದ್ದಾರೆ. ಈ ನಡುವೆ ಹೊರಗೆ ಹೋಗುವಂತೆ ಮಾಲ್ ಸಿಬ್ಬಂದಿ ಹೇಳಿದಾಗ, ಪುನೀತ್ ಏಕವಚನದಲ್ಲಿ ನಿಂದಿಸಿ, ಹೊರಗೆ ಬಂದರೆ ನಿನ್ನನ್ನು ನೋಡಿಕೊಳ್ಳುವೆ ಎಂದು ಪ್ರಾಣ ಬೆದರಿಕೆಯನ್ನು ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ