ಬೆಂಗಳೂರು: ಕನ್ನಡ ಪುಸ್ತಕೋದ್ಯಮದಲ್ಲಿ ಹೊಸ ಕ್ರಾಂತಿ ಎಂದೇ ಪರಿಗಣಿತವಾದ ವೀರಲೋಕ ಪ್ರಕಾಶನದ (Veeraloka Prakashana) ಅತಿ ವಿಶಿಷ್ಟ ʻಪುಸ್ತಕ ಸಂತೆʼ (Pustaka Sante) ಶನಿವಾರ ಅದ್ಧೂರಿಯಾಗಿ ಆರಂಭಗೊಂಡಿದೆ. ನಗರದ ಎಚ್.ಎಸ್.ಆರ್ ಬಡಾವಣೆಯ ಸ್ವಾಭಿಮಾನ ಉದ್ಯಾನವನದಲ್ಲಿ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ (ಫೆ 11 ಮತ್ತು 12) ನಡೆಯುವ ಈ ಪುಸ್ತಕ ಸಂತೆಯನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಉದ್ಘಾಟಿಸಿದರು. ಇದೊಂದು ಉತ್ತಮ ಪ್ರಯತ್ನ ಎಂದು ಅವರು ಪ್ರಶಂಸಿಸಿದರು.
ಜ್ಞಾನಾರ್ಜನೆಗೆ ಪುಸ್ತಕಗಳ ಓದು ಬಹಳ ಅಗತ್ಯ. ಉಳಿದೆಲ್ಲಾ ಜ್ಞಾನ ಮೂಲಗಳಿಗಿಂತ ಪುಸ್ತಕ ಓದಿನ ಮೂಲದ ಜ್ಞಾನಾರ್ಜನೆ ಬಹಳ ಪರಿಣಾಮಕಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಪುಸ್ತಕ ಮತ್ತು ಪತ್ರಿಕೆಗಳನ್ನು ಕೊಂಡು ಓದುವ ಅಭಿರುಚಿ ಮತ್ತು ಕಾಳಜಿಯನ್ನು ಬೆಳೆಸಿಕೊಳ್ಳಿ ಎಂದು ನೆರೆದಿದ್ದ ಓದುಗರಿಗೆ ಕರೆ ನೀಡಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ರಾಮಲಿಂಗಾರೆಡ್ಡಿ, ಲೇಖಕರಾದ ಬರಗೂರು ರಾಮಚಂದ್ರಪ್ಪ, ಮಾಜಿ ಸಂಸದ ಉಗ್ರಪ್ಪ ಮತ್ತು ವಿಶ್ವವಾಣಿ ಸಂಪಾದಕರಾದ ವಿಶ್ವೇಶ್ವರ ಭಟ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
ಕನ್ನಡ ಬರಹಗಾರರು ಮತ್ತು ಪ್ರಕಾಶಕರ ಸಂಘದ ರಾಜ್ಯಾಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ, ಕಾರ್ಯದರ್ಶಿಗಳಾದ ಆರ್. ದೋಡ್ಡೇಗೌಡ, ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷರಾದ ಪ್ರಕಾಶ್ ಕಂಬತ್ತಳ್ಳಿ, ರೋಟರಿ ಕ್ಲಬ್‌ನ ಮುಖ್ಯಸ್ಥ ರಾಜೀವ್ ಥ್ಯಾಕಟ್, ಪುಸ್ತಕಸಂತೆಯ ಆಯೋಜಕರಾದ ವೀರಕಪುತ್ರ ಶ್ರೀನಿವಾಸ ಮತ್ತಿತರರು ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.
ಎರಡನೇ ದಿನದ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭಾಗಿಯಾಗಿ, ಮಕ್ಕಳ ಸಂತೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ನೂರಕ್ಕೂ ಹೆಚ್ಚು ಪ್ರಕಾಶಕರು, ನೂರಾರು ಸ್ಟಾಲ್‌ಗಳು
ಎಚ್.ಎಸ್.ಆರ್ ಬಡಾವಣೆಯ ಸ್ವಾಭಿಮಾನ ಉದ್ಯಾನವನದಲ್ಲಿ ನಡೆಯುತ್ತಿರುವ ‘ಪುಸ್ತಕ ಸಂತೆ’ಯಲ್ಲಿ ನೂರಕ್ಕೂ ಹೆಚ್ಚು ಪ್ರಕಾಶಕರು ತಮ್ಮ ಸ್ಟಾಲ್‌ಗಳನ್ನು ತೆರೆದಿದ್ದಾರೆ. ಸಾಕಷ್ಟು ಓದುಗರು, ಬರಹಗಾರರು ಮತ್ತು ಪುಸ್ತಕಾಭಿಮಾನಿಗಳು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜನರನ್ನು ಮತ್ತೆ ಪುಸ್ತಕಗಳ ಕಡೆಗೆ ಸೆಳೆಯುವ ಪ್ರಯತ್ನ
ಮೊಬೈಲ್, ಟಿವಿ, ಸೋಷಿಯಲ್ ಮೀಡಿಯಾಗಳಲ್ಲಿ ಕಳೆದುಹೋಗಿರುವ ಜನರಲ್ಲಿ ಮತ್ತೆ ಓದಿನ ಆಸಕ್ತಿ ಬೆಳೆಸುವುದು, ಪುಸ್ತಕಗಳ ಬಗೆಗಿನ ಕಾಳಜಿಯನ್ನು ಉದ್ದೀಪಿಸುವ ಉದ್ದೇಶದ ಈ ಪುಸ್ತಕ ಸಂತೆ ಕನ್ನಡದ ಮಟ್ಟಿಗೆ ಹೊಸ ಪ್ರಯತ್ನವಾಗಿದೆ. ಒಂದೇ ಪ್ರದೇಶದಲ್ಲಿ ಸಾವಿರಾರು ವೈವಿಧ್ಯಮಯ ಪುಸ್ತಕಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಗಮನ ಸೆಳೆದಿದೆ. ಎರಡು ದಿನಗಳಲ್ಲಿ 20,000ಕ್ಕೂ ಅಧಿಕ ಪುಸ್ತಕಾಭಿಮಾನಿಗಳು ಪುಸ್ತಕ ಸಂತೆಗೆ ಭೇಟಿ ನೀಡುವ ಸಾಧ್ಯತೆ ಇದೆ. (ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದಾದ ಸಂಖ್ಯೆಗಳು 7022122121, 8861212172)
ಇದನ್ನೂ ಓದಿ: Pustaka Sante: ಎಚ್ಎಸ್ಆರ್ ಲೇಔಟ್‌ನಲ್ಲಿ ಫೆ. 10, 11 ರಂದು ಪುಸ್ತಕ ಸಂತೆ
ವಿಸ್ತಾರ ನ್ಯೂಸ್ ಮಾಧ್ಯಮ ಸಹಯೋಗ, ವಿಸ್ತಾರ ಪ್ರಕಾಶನದ ಪುಸ್ತಕಗಳೂ ಲಭ್ಯ
ಅತ್ಯಂತ ವಿಶಿಷ್ಟ ಪರಿಕಲ್ಪನೆಯ ಈ ಪುಸ್ತಕ ಸಂತೆಗೆ ವಿಸ್ತಾರ ನ್ಯೂಸ್ ಮಾಧ್ಯಮ ಸಹಯೋಗ ನೀಡಿದೆ. ಅದರ ಜತೆಗೆ ವಿಸ್ತಾರ ಪ್ರಕಾಶನದ ಪುಸ್ತಕಗಳ ಮಾರಾಟದ ಮಳಿಗೆಯೂ ಸಂತೆಯಲ್ಲಿ ಇರಲಿದೆ.
ಮಳಿಗೆಯಲ್ಲಿ ಲಭ್ಯವಿರುವ ವಿಸ್ತಾರ ಪ್ರಕಾಶನದ ಜನಪ್ರಿಯ ಪುಸ್ತಕಗಳು
1.ಹೊಸತಿಳಿವಿನ ಬಾಗಿಲು: ವಿಸ್ತಾರ ಭಾಗ -1 (ಲೇಖಕರು: ಹರಿಪ್ರಕಾಶ್ ಕೋಣೆಮನೆ)
2.ಹರಿವ ನದಿಗೆ ಸಾವಿರ ಕಾಲು: ವಿಸ್ತಾರ ಭಾಗ-2 (ಲೇಖಕರು: ಹರಿಪ್ರಕಾಶ್ ಕೋಣೆಮನೆ)
3.ರಾಜ ಮಾರ್ಗ: ಇವು ಸೋತವರನ್ನೂ ಗೆಲ್ಲಿಸುವ ಕಥೆಗಳು (ಲೇಖಕರು: ರಾಜೇಂದ್ರ ಭಟ್ ಕೆ.)
4. ನಮ್ಮದೇ ಕಥೆಗಳು; ಇದು ದಂತ ಕಥೆಯಲ್ಲ, ನಮ್ಮೆಲ್ಲರ ಸ್ವಂತ ಕಥೆ (ಲೇಖಕರು: ಕೃಷ್ಣ ಭಟ್ ಅಳದಂಗಡಿ)
5. ಅಮ್ಮ ಹೇಳುವ ಚಂದದ ಕಥೆಗಳು (ಲೇಖಕರು: ಅಲಕಾ ಕಟ್ಟೆಮನೆ)