Site icon Vistara News

Rain News | ರಾಜಧಾನಿಯಲ್ಲಿ ಮಳೆ ಅವಾಂತರ; ಹಾನಿ ಪ್ರದೇಶಗಳಿಗೆ ಇಂದು ಸಂಜೆ ಸಿಎಂ ರೌಂಡ್ಸ್‌

rain news

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಮಳೆಗೆ (Rain News) ಜನರು ನಲುಗಿ ಹೋಗಿದ್ದಾರೆ. ಈ ಹಿಂದೆ ಪ್ರವಾಹ ಕಾಣದ ಪ್ರದೇಶಗಳಲ್ಲಿಯೂ ಈ ಬಾರಿ ಪ್ರವಾಹ ಸೃಷ್ಟಿಯಾಗಿದೆ. ಅದರಲ್ಲೂ ಮಹದೇವಪುರ ವಿಧಾನಸಭಾ ಕ್ಷೇತ್ರದ ಮಾರತ್‌ಹಳ್ಳಿ ಭಾಗದಲ್ಲಿ‌ ಮಳೆ ನೀರಿಗೆ ರಸ್ತೆಯೇ ಕಾಣದಂತಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಲಿದ್ದಾರೆ. ಗುರುವಾರ ಸಂಜೆ 4 ಗಂಟೆಗೆ ಸಿಎಂ ಬೊಮ್ಮಾಯಿ‌ ಬೆಂಗಳೂರು ಸಿಟಿ ರೌಂಡ್ಸ್ ನಡೆಸಲಿದ್ದು, ಬಳಿಕ ಮಳೆ ಹಾನಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಆಕ್ರೋಶ

ಮಳೆ ಹಾನಿಯಿಂದ ಬೇಸತ್ತ ಸಾರ್ವಜನಿಕರು ಸೋಶಿಯಲ್‌ ಮೀಡಿಯಾ ಮೂಲಕ ಆಕ್ರೋಶ ಹೊರಹಾಕಿದ್ದಾರೆ. “ಸೇವ್ ಬೆಂಗಳೂರುʼ ಎಂಬ ಟ್ಯಾಗ್ ಲೈನ್ ಮೂಲಕ ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ. “ಸೇವ್ ಬೆಂಗಳೂರುʼ ಎಂದು ಪ್ರಧಾನಿ ನರೇಂದ್ರ ಮೋದಿಗೆ ಐಟಿ ಉದ್ಯಮಿ ಮೋಹನ್ ದಾಸ್ ಪೈ ಅವರು ಟೀಟ್‌ ಮಾಡಿದ್ದಾರೆ.

ಮಳೆ ಹಾನಿ ಸಂಬಂಧ ಬುಧವಾರ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಿಎಂ ಸಭೆ ನಡೆಸಿದ್ದು, ತೀವ್ರ ಹಾನಿ ಸಂಭವಿಸಿರುವ ಸ್ಥಳಗಳನ್ನು ಬಿಬಿಎಂಪಿ ಅಧಿಕಾರಿಗಳು ಗುರುತಿಸಿದ್ದಾರೆ. ಮಹದೇವಪುರದ 9 ಸ್ಥಳಗಳು ಹಾಗೂ ಬೊಮ್ಮನಹಳ್ಳಿಯ 11 ಕಡೆ ಹೆಚ್ಚಿನ ಹಾನಿಯಾಗಿದೆ. ಈ ಪ್ರದೇಶಗಳಿಗೆ ಸಿಎಂ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ಇಕೋಸ್ಪೇಸ್‌-ಆರ್‌ಎಂಝಡ್‌ ಪ್ರದೇಶ ಜಲಾವೃತ

ಸವಳಕೆರೆ ತುಂಬಿ ಹರಿದ ಹಿನ್ನಲೆಯಲ್ಲಿ ಕೆರೆ ನೀರು ರಸ್ತೆಗೆ ಹರಿದು ಬಂದಿದೆ. ಬೆಳ್ಳಂದೂರು ಇಕೋಸ್ಪೇಸ್ ಹಾಗೂ ಆರ್‌ಎಂಝಡ್ ಪ್ರದೇಶದಲ್ಲಿ ನೀರು ಜಲಾವೃತಗೊಂಡಿದ್ದು, ಕೂಡಲೇ ತೆರವುಗೊಳಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ಬೊಮಾಯಿ ಸೂಚನೆ ನೀಡಿದ್ದಾರೆ. ಜತೆಗೆ ರೇನ್ಬೊ ಲೇಔಟ್‌ನಲ್ಲಿ ಪರಿಹಾರ ಕಾರ್ಯಕ್ಕೂ ಅನುಮತಿ ನೀಡಲಾಗಿದೆ. ಇಂದಿನ ಸಿಎಂ ಸಿಟಿ ರೌಂಡ್ಸ್‌ನಲ್ಲಿ ಬಿಬಿಎಂಪಿ, ಬೆಸ್ಕಾಂ, ಬಿಡಬ್ಲ್ಯೂಎಸ್‌ಸ್‌ಬಿ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಸಾಥ್‌ ನೀಡಲಿದ್ದಾರೆ.

ಹೊಸ ಹೊಸ ಏರಿಯಾದಲ್ಲೂ ಪ್ರವಾಹ ಸೃಷ್ಟಿ

ಬಿಬಿಎಂಪಿ ತನ್ನ ವ್ಯಾಪ್ತಿಯಲ್ಲಿ 209 ಸ್ಥಳಗಳನ್ನು ಮಳೆ ಹಾನಿ ಪ್ರದೇಶಗಳೆಂದು ಗುರುತು ಮಾಡಿದೆ. ಆದರೆ ಈ ಬಾರಿಯ ಮಳೆಗೆ ಹೊಸ ಏರಿಯಾಗಳಲ್ಲಿಯೂ ಪ್ರವಾಹ ಸೃಷ್ಟಿಯಾಗಿದೆ. ಪಾಲಿಕೆ ಗುರುತು ಹಚ್ಚಿದ ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶ ಹೊರತುಪಡಿಸಿ ಹೊಸ ಪ್ರದೇಶಗಳು ಜಲಾವೃತಗೊಂಡಿವೆ. ಅದರಲ್ಲೂ ಐಟಿ ಕಾರಿಡಾರ್‌ಗಳಾದ ಮಾರತ್‌ಹಳ್ಳಿ, ಸರ್ಜಾಪುರ, ಔಟರ್‌ರಿಂಗ್ ರೋಡ್‌, ಬೆಳ್ಳಂದೂರು ಭಾಗದಲ್ಲಿ ರಸ್ತೆಗಳು ಮುಳುಗಡೆಯಾಗಿವೆ.

ಮಳೆಗೆ ಉಕ್ಕಿ ಹರಿದ ಕೆರೆಗಳು

ಮಳೆಯಿಂದಾಗಿ ಕೆರೆಯ ನೀರು ಉಕ್ಕಿ ಹರಿಯುತ್ತಿದೆ. ಬೆಳ್ಳಂದೂರು, ವರ್ತೂರು, ನಲ್ಲೂರಹಳ್ಳಿ ಕೆರೆಯು ಉಕ್ಕಿ ರಸ್ತೆಗೆ ನೀರು ಹರಿದು ಬರುತ್ತಿದೆ. ಇತ್ತ ರಸ್ತೆಗೆ ಹರಿದು ಬರುತ್ತಿರುವ ನೀರು ಸರಾಗವಾಗಿ ಹರಿದು ಹೋಗಲು ಆಗದೇ ಜಲಾವೃತಗೊಳ್ಳುತ್ತಿದೆ. ಈ ಭಾಗದಲ್ಲಿ ರಾಜಕಾಲುವೆ ಒತ್ತುವರಿ ಹಾಗೂ ಕೆರೆ ಒತ್ತುವರಿ ಬಗ್ಗೆ ಪಾಲಿಕೆ ಮೈಮರೆತಿರುವ ಆರೋಪ ಕೇಳಿ ಬಂದಿದೆ. ಕೆರೆಯಿಂದ ಹೊರ ಹೋಗುವ ನಾಲೆಗಳ ಒತ್ತುವರಿಯಾಗಿದ್ದೇ ಇದೆಕ್ಕೆಲ್ಲ ಕಾರಣವೆಂದು ದೂರಲಾಗುತ್ತಿದೆ.

ದಾಖಲೆಯ ಮಳೆ

ಆಗಸ್ಟ್‌ನಲ್ಲಿ ದಾಖಲೆಯ ಮಳೆಯಾಗಿದ್ದು, ರಾಜಧಾನಿಯಲ್ಲಿ ಬಹುತೇಕ ಕೆರೆಗಳು ಭರ್ತಿಯಾಗಿದೆ. ಆಗಸ್ಟ್‌ನಲ್ಲಿ ಈವರೆಗೆ 364.2 ಮಿಲಿ ಮೀಟರ್ ಮಳೆಯಾಗಿದ್ದು, 1998ರ ಬಳಿಕ ದಾಖಲೆಯ ಮಳೆಗೆ ಉದ್ಯಾನನಗರಿ ಸಾಕ್ಷಿಯಾಗಿದೆ. ಇದರ ಜತೆಗೆ ಕಳೆದ ಸೋಮವಾರ ಸುರಿದ ಧಾರಾಕಾರ ಮಳೆಯಿಂದಾಗಿ ಭರ್ತಿಯಾಗಿದ್ದ ಕೆರೆಯು ಉಕ್ಕಿ ಹರಿದಿದೆ. ಈ ಕಾರಣದಿಂದ ಈ ಹಿಂದೆ ಪ್ರವಾಹಕ್ಕೆ ಸಿಲುಕದ ಪ್ರದೇಶಗಳಲ್ಲಿಯೂ ಈ ಬಾರಿ ನೆರೆ ಸೃಷ್ಟಿಯಾಗಿದೆ.

ಇದನ್ನೂ ಓದಿ | ಚಾಮರಾಜನಗರ ಶಾಸಕ ಎನ್‌.ಮಹೇಶ್‌ಗೆ ಮಳೆಹಾನಿ ಗ್ರಾಮಸ್ಥರ ತರಾಟೆ

Exit mobile version