Site icon Vistara News

Rajakaluve Encroachment: ಬೆಂಗಳೂರಿನಲ್ಲಿ ಇಂದು ಮತ್ತೆ ಗರ್ಜಿಸಲಿದೆ ಬುಲ್ಡೋಜರ್! ಅಕ್ರಮ ಒತ್ತುವರಿದಾರರಿಗೆ ಪಾಲಿಕೆಯಿಂದ ಶಾಕ್

Rajakaluve Encroachment

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದು ಒತ್ತುವರಿ ತೆರವು ಶುರುವಾಗಲಿದ್ದು, ರಾಜಕಾಲುವೆ ಒತ್ತುವರಿದಾರರಲ್ಲಿ (Rajakaluve Encroachment) ನಡುಕ ಮೂಡಿಸಲು ಮಹಾನಗರಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ಮಹಾದೇವ ಪುರ ಹಾಗೂ ಕೆ.ಆರ್ ಪುರಂ ಎರಡು ಕಡೆ ಇಂದು ಜೆಸಿಬಿಗಳು ಗರ್ಜಿಸಲಿವೆ.

ರಾಜಧಾನಿಯಲ್ಲಿ 571 ಕಡೆಗಳಲ್ಲಿ ಅಕ್ರಮ ಒತ್ತುವರಿ ವರದಿ ಪಡೆದಿರುವ ಪಾಲಿಕೆ, 100ಕ್ಕೂ ಹೆಚ್ಚು ಕಡೆ ಒತ್ತುವರಿಗೆ ತೆರವಿಗೆ ಪ್ಲಾನ್ ಮಾಡಿಕೊಂಡಿದೆ. ಪಾಲಿಕೆಯ ಎಂಟು ವಲಯಗಳಲ್ಲಿ 571 ಕಡೆ ಒತ್ತುವರಿಯ ಬಗ್ಗೆ ಸರ್ವೆ ವರದಿ ಪಡೆಯಲಾಗಿದೆ. ಇಂದು, ನಾಳೆ ಎರಡು ವಲಯಗಳಲ್ಲಿ ಪಾಲಿಕೆ ತೆರವು ನಡೆಸಲಿದೆ.

ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಹೊರಮಾವು ವಾರ್ಡ್‌ನ ಹೊಯ್ಸಳ ನಗರದಲ್ಲಿ ರಾಜಕಾಲುವೆ ತೆರವು ಮಾಡಿಕೊಂಡು ಅಂಗಡಿ ಮಳಿಗೆ ನಿರ್ಮಿಸಲಾಗಿದ್ದು ಇಂದು ತೆರವು ಕಾರ್ಯಾಚರಣೆ ನಡೆಯಲಿದೆ. ರಾಜಕಾಲುವೆ ಒತ್ತುವರಿ ಎಂದು ಗುರುತಿಸಿ ತೆರವುಗೊಳಿಸುವುದಕ್ಕೆ ತಹಶೀಲ್ದಾರ್ ಆದೇಶ ನೀಡಿದ್ದಾರೆ. ಒತ್ತುವರಿದಾರರಿಗೆ ಬಿಬಿಎಂಪಿ ಅಧಿಕಾರಿಗಳಿಂದ ತೆರವು ಬಗ್ಗೆ ಮಾಹಿತಿ ನೀಡಿದ್ದು ಅಗತ್ಯವಿರುವ ವಸ್ತುಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಮಹದೇವಪುರ ವಲಯದ ಪೈಕ್ ಗಾರ್ಡನ್‌ನಲ್ಲಿ ಅನಧಿಕೃತವಾಗಿ ಪಿ.ಜಿ. ಕಟ್ಟಡ, ಕಾಂಪೌಂಡ್ ನಿರ್ಮಿಸಲಾಗಿದ್ದು, ಒಟ್ಟು 20 ಕಟ್ಟಡಗಳಿಂದ ಒತ್ತುವರಿ ಆಗಿರುವುದು ಗುರುತಿಸಲಾಗಿದೆ. ಇದನ್ನೆಲ್ಲ ಇಂದು ತೆರವು ಮಾಡಲಾಗುತ್ತಿದೆ. 9 ಗಂಟೆಯ ಬಳಿಕ ತೆರವು ಕಾರ್ಯ ಶುರುವಾಗಲಿದೆ.

ಆಮೆಗತಿಯಲ್ಲಿ ಸಾಗುತ್ತಿದ್ದ ರಾಜಕಾಲುವೆ ಒತ್ತುವರಿ ತೆರವು ಚುರುಕುಗೊಳಿಸಲು ಅಧಿಕಾರಿಗಳಿಗೆ ಕಮಿಷನರ್‌ 15 ದಿನ ಗಡುವು ಕೊಟ್ಟಿದ್ದಾರೆ. ಕಳೆದ ವರ್ಷ ಮಳೆಯಿಂದಾಗಿ ಭಾಗಶಃ ಬೆಂಗಳೂರು ಮುಳುಗಡೆಯಾಗಿತ್ತು. ಮನೆಗಳಲ್ಲಿ ನೀರು ಹೊಕ್ಕು ನಿವಾಸಿಗರು ಪರದಾಡಿದ್ದರು. ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಹೈರಾಣಾಗಿದ್ದರು. ಕೆಲವು ಬಡಾವಣೆಗಳು ಅಕ್ಷರಶಃ ಕೆರೆಯಂತಾಗಿದ್ದವು. ಈ ಸಮಸ್ಯೆಗೆ ರಾಜಕಾಲುವೆ ಒತ್ತುವರಿಯೂ ಒಂದು ಕಾರಣವಾಗಿದೆ. ಬಿಜೆಪಿ ಸರ್ಕಾರ ಅಕ್ರಮ ಒತ್ತುವರಿ ತೆರವು ಕಾರ್ಯ ಆರಂಭಿಸಿತ್ತು.

ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿ 840 ಕಿ. ಮೀ ವ್ಯಾಪ್ತಿಯಲ್ಲಿ ರಾಜಕಾಲುವೆ ಇದೆ. ವೃಷಭಾವತಿ, ಕೋರಮಂಗಲ, ಚೆಲ್ಲಘಟ್ಟ ವ್ಯಾಲಿ ಹಾಗೂ ಹೆಬ್ಬಾಳ ಕಣಿವೆ ಪ್ರಮುಖ ರಾಜಕಾಲುವೆಗಳಾಗಿವೆ. 415 ಕಿ.ಮೀ ಉದ್ದದ ಪ್ರಾಥಮಿಕ ಹಂತದ ಕಾಲುವೆ, 426 ಕಿ.ಮೀ ಉದ್ದದ ದ್ವಿತೀಯ ಹಂತದ ಕಾಲುವೆಯನ್ನು ಹೊಂದಿದೆ. ನಗರದಲ್ಲಿ ಉಂಟಾಗುವ ಪ್ರವಾಹ ನಿಯಂತ್ರಣ ಮಾಡುವ ಉದ್ದೇಶದಿಂದ 2016ರಲ್ಲಿ ಕಂದಾಯ ಇಲಾಖೆಯಿಂದ ಸಮೀಕ್ಷೆ ನಡೆದಿದ್ದು, 2,626 ಕಡೆ ರಾಜಕಾಲುವೆ ಒತ್ತುವರಿಗಳನ್ನು ಪತ್ತೆ ಮಾಡಲಾಗಿತ್ತು. ಈ ಪೈಕಿ 2016-17ನೇ ಸಾಲಿನಲ್ಲಿ 428, 2018-19ನೇ ಸಾಲಿನಲ್ಲಿ 1502 ಹಾಗೂ 2020ರಲ್ಲಿ 714 ಒತ್ತುವರಿ ಪ್ರಕರಣ ತೆರವು ಮಾಡಲಾಗಿದೆ.

ಇದನ್ನೂ ಓದಿ: Rajakaluve Encroachment: ಬೆಂಗಳೂರಲ್ಲಿ ಮತ್ತೆ ಜೆಸಿಬಿ ಗರ್ಜನೆ; ಉರುಳಲಿವೆಯೇ ಮತ್ತಷ್ಟು ಅಕ್ರಮ ಒತ್ತುವರಿ ಕಟ್ಟಡ?

Exit mobile version