Site icon Vistara News

Rajakaluve Encroachment: ರಾಜಕಾಲುವೆ ಒತ್ತುವರಿದಾರರಿಗೆ ಮತ್ತೆ ನಡುಕ, ತೆರವಿಗೆ ಬಿಬಿಎಂಪಿ ಸಿದ್ಧತೆ

Rajakaluve Encroachment

ಬೆಂಗಳೂರು: ರಾಜಕಾಲುವೆ ಒತ್ತುವರಿದಾರರಿಗೆ (rainwater drain) ಮತ್ತೆ ನಡುಕ ಆರಂಭವಾಗಿದೆ. ಬಿಬಿಎಂಪಿಯಿಂದ (BBMP) ರಾಜಕಾಲುವೆ ಒತ್ತುವರಿ (Rajakaluve Encroachment) ಸರ್ವೆ ನಡೆಯುತ್ತಿದ್ದು, ಮಳೆ ನಿಂತ ನಂತರ ಒತ್ತುವರಿ ತೆರವು (Rajakaluve clearance) ಮಾಡಲು ಬಿಬಿಎಂಪಿ ಸನ್ನದ್ಧವಾಗಿದೆ.

ಇದುವರೆಗೆ ಮಾಡಿರುವ ಸಮೀಕ್ಷೆಯಲ್ಲಿ 3182 ಕಟ್ಟಡಗಳನ್ನು ಡೆಮಾಲಿಷನ್‌ಗಾಗಿ ಗುರುತು ಮಾಡಲಾಗಿದೆ. ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಿರುವುದರಿಂದ ಮಳೆ ನೀರು ಹರಿಯಲು ತಡೆ ಉಂಟಾಗಿ ನಗರದಲ್ಲಿ ಪ್ರವಾಹ ಸೃಷ್ಟಿಯಾಗುವ ಭೀತಿ ಸೃಷ್ಟಿಯಾಗಿದೆ. ಹೀಗಾಗಿ ಒತ್ತುವರಿ ತೆರವು ಮಾಡಲು ಬಿಬಿಎಂಪಿ ತೀರ್ಮಾನಿಸಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಬೆಂಗಳೂರು ಉಸ್ತುವಾರಿಯೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಕೂಡ ಒತ್ತುವರಿ ತೆರವು ಮಾಡಲು ಬಿಬಿಎಂಪಿಗೆ ಕಠಿಣ ಸೂಚನೆ ನೀಡಿದ್ದಾರೆ.

ಯಾವ ವಲಯದಲ್ಲಿ ಎಷ್ಟು ಕಟ್ಟಡ ಡೆಮಾಲಿಷನ್‌ಗೆ ಗುರುತು?

ಮಹಾದೇವಪುರ ವಲಯದಲ್ಲಿ 1651 ಕಟ್ಟಡಗಳ ಗುರುತು
ಯಲಹಂಕ ವಲಯದಲ್ಲಿ 588 ಕಟ್ಟಡಗಳು ಗುರುತು.
ಬೊಮ್ಮನಹಳ್ಳಿ ವಲಯದ 368 ಕಟ್ಟಡಗಳ ಗುರುತು
ಪೂರ್ವ ವಲಯ 237 ಕಟ್ಟಡಗಳ ಗುರುತು
ಆರ್ ಆರ್ ನಗರ 75 ಕಟ್ಟಡಗಳ ಗುರುತು

ಇಷ್ಟು ಕಟ್ಟಡಗಳನ್ನು ಕೆಡವಲು ಬಿಬಿಎಂಪಿ ಗುರುತು ಮಾಡಿಕೊಂಡಿದೆ. ಇದರಲ್ಲಿ ಪ್ರಭಾವಿಗಳ, ಶ್ರೀಮಂತರ ಒತ್ತುವರಿಗಳು ಕೂಡ ಸೇರಿವೆ. ಕೆಲವು ಕಡೆ ಭಾರಿ ಅಪಾರ್ಟ್‌ಮೆಂಟ್‌ಗಳು ಒತ್ತುವರಿ ಮಾಡಿಕೊಂಡಿದ್ದು, ಕಾನೂನು ತಗಾದೆಯೂ ಇದೆ. ಆಗಸ್ಟ್‌ನಿಂದ‌ ಡೆಮಾಲಿಷನ್ ಕಾರ್ಯಾಚರಣೆ ಶುರುವಾಗಲಿದೆ. ಮಳೆಗಾಲದ ಹಿನ್ನೆಲೆಯಲ್ಲಿ ಪ್ರವಾಹ ಪ್ರದೇಶದಲ್ಲಿರುವ ಒತ್ತುವರಿ ಮೊದಲು ತೆರವು ಮಾಡಿಕೊಳ್ಳಲಾಗುತ್ತದೆ. ತಹಶಿಲ್ದಾರರ ಮುಖಾಂತರ ತೆರವು ಕಾರ್ಯಾಚರಣೆಗೆ ಆದೇಶ ನೀಡಲಾಗಿದೆ.

ಒತ್ತುವರಿ ಕಂಡರೆ ತಿಳಿಸಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಜಕಾಲುವೆಗಳ ಒತ್ತುವರಿ ಅಥವಾ ಅತಿಕ್ರಮಣ ಗುರುತಿಸಲು ಸಹಾಯ ಮಾಡುವಂತೆ ಸಾರ್ವಜನಿಕರನ್ನು ಮಹಾನಗರ ಪಾಲಿಕೆ ಈ ಹಿಂದೆ ಕೋರಿತ್ತು. ರಾಜಕಾಲುವೆ ಒತ್ತುವರೆ ಮಾಡಿ ಅಲ್ಲಿ ಕಟ್ಟಡ ನಿರ್ಮಿಸಿರುವುದು ಯಾರಿಗಾದರೂ ತಿಳಿದಿದ್ದರೆ ಅಥವಾ ಗಮನಕ್ಕೆ ಬಂದರೆ ವಲಯಗಳ ಈ ನಿರ್ದಿಷ್ಟ ಕಚೇರಿಗಳ ಅಧಿಕಾರಿಗಳಿಗೆ ದೂರನ್ನು ನೀಡುವಂತೆ ಬಿಬಿಎಂಪಿ ಪತ್ರಿಕಾ ಪ್ರಕಟಣೆ ನೀಡಿತ್ತು.

ಕಳೆದ ವರ್ಷ ಹೈಕೋರ್ಟ್, ರಾಜಕಾಲುವೆಯನ್ನು ಅತಿಕ್ರಮಣ ಮಾಡಿರುವ ಬಗ್ಗೆ ಸಮೀಕ್ಷೆ ನಡೆಸಿ ಗುರುತಿಸಿ 10 ದಿನಗಳ ಒಳಗೆ ವರದಿ ನೀಡುವಂತೆ ಬಿಬಿಎಂಪಿಗೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಸಾರ್ವಜನಿಕರ ಸಹಕಾರ ಕೋರಿದ್ದು, ಸಾರ್ವಜನಿಕರು ಅತಿಕ್ರಮಣವಾದ ರಾಜಕಾಲುವೆ ಪ್ರದೇಶವನ್ನು ಸ್ಪಷ್ಟವಾಗಿ ಫೋಟೋ ಸಹಿತ ನಿರ್ದಿಷ್ಟ ಅಧಿಕಾರಿಗಳಿಗೆ ಕಳುಹಿಸುವಂತೆ ತಿಳಿಸಿತ್ತು. ನೂರಾರು ಫೋಟೋಗಳು ಬಂದಿದ್ದವು.

ಇದನ್ನೂ ಓದಿ: Road Accident: ರಾಜಕಾಲುವೆಗೆ ಬಿದ್ದ ಬೈಕ್‌ ಸವಾರನ ಮೃತದೇಹ ಪತ್ತೆ

Exit mobile version