Site icon Vistara News

Rajyasabha Election : ಕಣದಿಂದ ಹಿಂದೆ ಸರಿಯದ ಕುಪೇಂದ್ರ ರೆಡ್ಡಿ, 4 ಸ್ಥಾನಕ್ಕೆ ಐವರ ಫೈಟ್‌, ಗೆಲ್ಲೋರು ಯಾರು?

Rajyasabha Election Contestents

ಬೆಂಗಳೂರು: ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಉದ್ಯಮಿ ಕುಪೇಂದ್ರ ರೆಡ್ಡಿ (Kupendra Reddy) ಅವರು ನಾಮಪತ್ರ ಹಿಂದೆಗೆದುಕೊಳ್ಳದ ಹಿನ್ನೆಲೆಯಲ್ಲಿ ಫೆಬ್ರವರಿ 27ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯ (Rajyasabha Election) ಕಣದಲ್ಲಿ ಪ್ರಬಲ ಪೈಪೋಟಿ ನಡೆಯುವುದು ಖಚಿತವಾಗಿದೆ.

ರಾಜ್ಯದಲ್ಲಿ ತೆರವಾಗಿರುವ ನಾಲ್ಕು ರಾಜ್ಯಸಭಾ ಸ್ಥಾನಕ್ಕೆ ಐವರು ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್‌ನಿಂದ ಹಿರಿಯ ನಾಯಕ ಅಜಯ್‌ ಮಾಕೆನ್‌, ಸಯ್ಯದ್‌ ನಾಸಿರ್‌ ಹುಸೇನ್‌, ಜಿ.ಸಿ. ಚಂದ್ರಶೇಖರ್‌, ಬಿಜೆಪಿಯಿಂದ ನಾರಾಯಣ ಸಾ ಭಾಂಡಗೆ ಹಾಗೂ ಜೆಡಿಎಸ್‌ನಿಂದ ಉದ್ಯಮಿ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸಿದ್ದರು. ಇಲ್ಲಿ ಕಾಂಗ್ರೆಸ್‌ 135 ಶಾಸಕರನ್ನು ಹೊಂದಿದ್ದು ಸರಿಯಾಗಿ ಮೂರು ಸ್ಥಾನ ಗೆಲ್ಲುವಷ್ಟು ಮತ ಹೊಂದಿದೆ. ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದರಿಂದ ಈ ಕೂಟಕ್ಕೆ ಒಟ್ಟು 84 ಮತಗಳಿವೆ. ಅಂದರೆ ಬಿಜೆಪಿ ಒಂದು ಸ್ಥಾನವನ್ನು ಗೆಲ್ಲುವುದು ಖಚಿತವಾಗಿದೆ. ಆದರೆ, ಜೆಡಿಎಸ್‌ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿ ಸ್ಪರ್ಧೆಯ ಕಣವನ್ನು ಸಿದ್ಧಪಡಿಸಿತ್ತು.

ಮಂಗಳವಾರ ಸಂಜೆ ಮೂರು ಗಂಟೆ (ಫೆ. 20) ವರೆಗೆ ನಾಮಪತ್ರ ಹಿಂದಕ್ಕೆ ಪಡೆಯಲು ಕಾಲಾವಕಾಶವಿತ್ತು. ಆದರೆ, ಜೆಡಿಎಸ್‌ ನಾಮಪತ್ರ ಹಿಂದೆ ಪಡೆದಿಲ್ಲ. ಹೀಗಾಗಿ ಫೆ. 27ರಂದು ಮತದಾನ ನಡೆಯುವುದು ಖಚಿತವಾಗಿದೆ. ಮತದಾನ ನಡೆಯಲಿದೆ ಎಂದು ಕುಪೇಂದ್ರ ರೆಡ್ಡಿ ಅವರ ಗೆಲುವಿಗೆ ಪ್ರಯತ್ನಿಸುವ ಜೆಡಿಎಸ್‌ ಕಾಂಗ್ರೆಸ್‌ ಶಾಸಕರನ್ನು, ಕಾಂಗ್ರೆಸ್‌ ಜತೆಗಿರುವ ಪಕ್ಷೇತರ ಶಾಸಕರನ್ನು ಸೆಳೆಯಲು ಪ್ರಯತ್ನಿಸುವುದು ಖಚಿತವಾಗಿದೆ.

ಆಗಲೇ ಶಾಸಕರನ್ನು ಸೆಳೆಯುವ ಪ್ರಯತ್ನ

ಕುಪೇಂದ್ರ ರೆಡ್ಡಿ ಅವರನ್ನು ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿರುವ ಎಚ್‌.ಡಿ ಕುಮಾರಸ್ವಾಮಿ ಅವರ ಗೆಲುವಿಗಾಗಿ ಕಾಂಗ್ರೆಸ್‌ ಶಾಸಕರಿಗೆ ಧಮಕಿ ಹಾಕುವ, ಆಮಿಷ ಒಡ್ಡು ಕೆಲಸ ಮಾಡುತ್ತಿದ್ದಾರೆ ಎಂದು ಸ್ವತಃ ಡಿಸಿಎಂ ಡಿ.ಕೆ. ಶಿವಕುಮಾರ್‌ ಆರೋಪಿಸಿದ್ದರು. ಅದರ ಜತೆಗೆ ಮಂಡ್ಯ ಶಾಸಕ ರವಿ ಕುಮಾರ್‌ ಗಣಿಗ ನೇತೃತ್ವದಲ್ಲಿ ಪೊಲೀಸ್‌ ಕಮೀಷನರ್‌ ಅವರಿಗೆ ದೂರು ಕೂಡಾ ನೀಡಿದ್ದಾರೆ.

ಕುಮಾರಸ್ವಾಮಿ ಅವರು ಕಾಂಗ್ರೆಸ್‌ ಪಕ್ಷದ ಜತೆಗಿರುವ ಲತಾ ಮಲ್ಲಿಕಾರ್ಜುನ್, ಪುಟ್ಟಸ್ವಾಮಿ ಗೌಡ, ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಆಮಿಷ ಒಡ್ಡುತ್ತಿದ್ದಾರೆ. ಬೆದರಿಕೆ ಹಾಕುತ್ತಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಐದನೇ ಅಭ್ಯರ್ಥಿಗೆ ಮತಹಾಕುವಂತೆ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕುದುರೆ ವ್ಯಾಪಾರ ನಡೆಸುವ ಸಾಧ್ಯತೆಯ ಬಗ್ಗೆ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ : Rajya Sabha Election: ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಸೋನಿಯಾ ಗಾಂಧಿ

ಗೆಲುವಿನ ಸಾಧ್ಯತೆಗಳ ಲೆಕ್ಕಾಚಾರ ಹೇಗೆ?

ರಾಜ್ಯ ವಿಧಾನಸಭೆಯ ಒಟ್ಟು ಬಲ 224. ಅದರಲ್ಲಿ ಕಾಂಗ್ರೆಸ್‌ನ 135 ಶಾಸಕರಿದ್ದಾರೆ. 66 ಬಿಜೆಪಿ, 19 ಜೆಡಿಎಸ್‌, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜನಾರ್ದನ ರೆಡ್ಡಿ, ಸರ್ವೋದಯ ಪಕ್ಷದ ದರ್ಶನ್‌ ಪುಟ್ಟಣ್ಣಯ್ಯ, ಪಕ್ಷೇತರರಾಗಿ ಲತಾ ಮಲ್ಲಿಕಾರ್ಜುನ್‌ ಹಾಗೂ ಪುಟ್ಟಸ್ವಾಮಿ ಗೌಡ ಇದ್ದಾರೆ. ಇತರರ ಪೈಕಿ ದರ್ಶನ್‌ ಪುಟ್ಟಣ್ಣಯ್ಯ, ಲತಾ ಮಲ್ಲಿಕಾರ್ಜುನ್‌, ಪುಟ್ಟಸ್ವಾಮಿ ಗೌಡ ಅವರು ಕಾಂಗ್ರೆಸ್‌ ಪರವಾಗಿದ್ದರೆ, ಜನಾರ್ದನ ರೆಡ್ಡಿ ಬಿಜೆಪಿ ಜತೆಗಿದ್ದಾರೆ.

ಬಲಾಬಲವನ್ನು ನೋಡಿದಾಗ ಕಾಂಗ್ರೆಸ್‌ 138 ಮತ್ತು ಬಿಜೆಪಿ-ಜೆಡಿಎಸ್‌ 86 ಮತಗಳನ್ನು ಹೊಂದಿದೆ. ಪ್ರತಿಯೊಬ್ಬ ಅಭ್ಯರ್ಥಿ ಗೆಲುವಿಗೆ 45 ಶಾಸಕರ ಬೆಂಬಲ ಬೇಕು. ಕಾಂಗ್ರೆಸ್‌ ಎರಡು ಸ್ಥಾನಗಳನ್ನು ನಿರಾಯಾಸವಾಗಿ ಗೆಲ್ಲಲಿದೆ. ಬಿಜೆಪಿ ಒಂದು ಸ್ಥಾನ ಗೆಲ್ಲುವುದು ಖಚಿತ. ಆದರೆ ಐದನೇ ಸ್ಥಾನಕ್ಕೆ ಪೈಪೋಟಿ ನಡೆಯಲಿದೆ.

ಸಾಧ್ಯತೆ ಒಂದು

ಐದನೇ ಸ್ಥಾನಕ್ಕೆ ಕಾಂಗ್ರೆಸ್‌ ಬಳಿ 48 ಮತಗಳಿದ್ದರೆ ಬಿಜೆಪಿ-ಜೆಡಿಎಸ್‌ ಕೂಟದಲ್ಲಿ 41 ಮತಗಳಿವೆ. ಒಂದು ವೇಳೆ ಜೆಡಿಎಸ್‌ ಪಕ್ಷವು ಕಾಂಗ್ರೆಸ್‌ ಜತೆಗಿರುವ ಮೂವರು ಶಾಸಕರನ್ನು ಸೆಳೆದರೆ ಅದರ ಬಲ 44 ಆಗುತ್ತದೆ. ಕಾಂಗ್ರೆಸ್‌ನಿಂದ ಇನ್ನೊಂದು ಶಾಸಕರನ್ನು ಸೆಳೆದುಕೊಳ್ಳಲು ಯಶಸ್ವಿಯಾದರೆ ಕಾಂಗ್ರೆಸ್‌ ಬಲ 44ಕ್ಕೆ ಕುಸಿದು ಮೈತ್ರಿ ಬಲ 45 ಆಗಿ ಗೆಲುವು ಸಿಗಲಿದೆ.

ಸಾಧ್ಯತೆ ಎರಡು

ಅದೇ ಹೊತ್ತಿಗೆ ಇನ್ನೊಂದು ಲೆಕ್ಕಾಚಾರವೂ ಇದೆ. ಇಬ್ಬರು ಬಿಜೆಪಿ ಶಾಸಕರಾದ ಎಸ್‌.ಟಿ. ಸೋಮಶೇಖರ್‌ ಮತ್ತು ಶಿವರಾಮ ಹೆಬ್ಬಾರ್‌ ಅವರು ಪಕ್ಷದಿಂದ ದೂರವಾಗಿದ್ದಾರೆ. ಅವರು ಮತದಾನದಿಂದ ದೂರ ಉಳಿದರೆ ಮೈತ್ರಿ ಬಲ ಕುಸಿಯಲಿದೆ. ಒಂದು ವೇಳೆ ಪರಿಸ್ಥಿತಿಗೆ ಅಗತ್ಯವಿದ್ದರೆ ಅವರು ಕಾಂಗ್ರೆಸ್‌ ಪರ ಮತ ಚಲಾಯಿಸುವ ಸಾಧ್ಯತೆಯೂ ಇಲ್ಲದಿಲ್ಲ. ಹೀಗಾಗಿ ಚುನಾವಣಾ ಕಣ ರಂಗೇರಿದ್ದಂತೂ ನಿಜ.

Exit mobile version