ಬೆಂಗಳೂರು: ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ (Rama Mandir) ರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದ್ದು, ಅದಕ್ಕೆ ಸಂಬಂಧಿಸಿದ ಸಂಪ್ರದಾಯ, ಸಂಭ್ರಮಾಚರಣೆಗಳಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಸರ್ಕಾರಿ ರಜೆ ಘೋಷಿಸಬೇಕು (Demand for Public holiday) ಎಂಬ ಬಿಜೆಪಿ ಆಗ್ರಹ (BJP Demands for Holiday) ಮುಂದುವರಿದಿದೆ. ಈ ನಡುವೆ ಬಿಜೆಪಿ ಮನವಿ ಸಲ್ಲಿಸಿದ ವಿಷಯ ತನಗೆ ಗೊತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.
ರಾಜಕೀಯ ಮಾಡಬೇಡಿ, ರಜೆ ಘೋಷಿಸಿ ಎಂದ ತೇಜಸ್ವಿ ಸೂರ್ಯ
ಕಾಂಗ್ರೆಸ್ ಸರ್ಕಾರ ರಾಮಮಂದಿರದ ಉದ್ಘಾಟನಾ ಕಾರ್ಯಕ್ರಮದ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಆಕ್ಷೇಪಿಸಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ಅರ್ಧ ದಿನ ರಜೆ ಘೋಷಣೆ ಮಾಡಿದೆ. ಹಲವಾರು ರಾಜ್ಯಗಳು ಈಗಾಗಲೇ ರಜೆ ಪ್ರಕಟಿಸಿವೆ. ಆದರೆ, ಕರ್ನಾಟಕ ಸರ್ಕಾರ ಮಾತ್ರ ರಜೆ ಘೋಷಣೆ ಮಾಡಿಲ್ಲ ಎಂದು ಹೇಳಿದರು.
ರಾಜ್ಯದ ಕೋಟ್ಯಂತರ ಜನ ರಾಮ ಪ್ರತಿಷ್ಠಾಪನೆಯನ್ನು ನೋಡಲು ಕಾಯುತ್ತಿದ್ದಾರೆ. ಆದರೆ ರಾಜ್ಯಸರ್ಕಾರ ಅಂದು ರಜೆ ನೀಡದೇ ಮೌನ ವಹಿಸಿದೆ ಎಂದು ತೇಜಸ್ವಿ ಸೂರ್ಯ ಕಿಡಿಕಾರಿದರು. ಇಡೀ ದೇಶ ಸೋಮವಾರ ರಾಮ ಲಲ್ಲಾ ಪ್ರತಿಷ್ಠಾಪನೆಗೆ ಕಾತರದಿಂದ ಕಾಯುತ್ತಿದೆ. ಇಂತಹ ಸಮಯದಲ್ಲಿ ಕರ್ನಾಟಕ ಸರ್ಕಾರ ರಜೆ ಘೋಷಣೆ ಮಾಡಬೇಕು. ಸಾವಿರಾರು ಸಂಘಟನೆಗಳು ಸಿಎಂಗೆ ಮನವಿ ಮಾಡಿವೆ. ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರು ಸಹ ಮನವಿ ಮಾಡಿದ್ದಾರೆ. ಸಿಎಂ ಮಾತ್ರ ಯಾವುದೇ ನಿಲುವು ತೆಗದುಕೊಂಡಿಲ್ಲ ಎಂದು ತೇಜಸ್ವಿ ಸೂರ್ಯ ಆಕ್ಷೇಪಿಸಿದರು.
ಸಂಸದನಾಗಿ ನಾನು ಕೂಡ ಸಿಎಂಗೆ ಮನವಿ ಮಾಡುತ್ತೇನೆ. ಭಾನುವಾರದೊಳಗೆ ರಜೆ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಈ ಸುದಿನದ ಕಾರ್ಯವನ್ನು ನೋಡಲು ಬಿಡದ ಸರ್ಕಾರ ಎಂದು ಜನ ನೂರಾರು ವರ್ಷಗಳ ಕಾಲ ಇದನ್ನು ಮಾತನಾಡುತ್ತಾರೆ ಎಂದು ಹರಿಹಾಯ್ದಿದ್ದಾರೆ.
ರಜೆ ಕೊಡಲು ಕೂಡಾ ಹೇಳಿಸಿಕೊಳ್ಳಬೇಕಾ? – ಸಿ.ಟಿ ರವಿ ಪ್ರಶ್ನೆ
ಇತ್ತ ಬಿಜೆಪಿ ಹಿರಿಯ ನಾಯಕ ಸಿ.ಟಿ. ರವಿ ಕೂಡಾ ಸರ್ಕಾರದ ನಿಲುವನ್ನು ಖಂಡಿಸಿದ್ದಾರೆ. ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ದಿನ ಸರ್ಕಾರಿ ರಜೆ ಕೊಡಲು ಇಷ್ಟು ದಿನ ಮೀನಾಮೇಷ ಎಣಿಸುವುದೇ ತಪ್ಪು, ರಜೆ ಕೊಡಬೇಕೆಂದು ಹೇಳಿಸಿಕೊಂಡು ಮಾಡಬೇಕಾ ಎಂದು ಕಿಡಿ ಕಾರಿದ್ದಾರೆ.
ಕಾಂಗ್ರೆಸ್‌ನ ಹಿಂದೂ ವಿರೋಧಿ ಧೋರಣೆಗಳನ್ನು ಖಂಡಿಸಿ ಗುಜರಾತ್ ನಲ್ಲಿ ಕಾಂಗ್ರೆಸ್ ಶಾಸಕರೊಬ್ಬರು ರಾಜೀನಾಮೆ ನೀಡಿದ್ದಾರೆ. ರಾಜ್ಯದಲ್ಲಿ ಕೂಡಾ ಹಲವು ಹಿಂದು ಪರ ಕಾಂಗ್ರೆಸ್ ನಾಯಕರಿದ್ದಾರೆ. ಅವರು ಕೂಡಾ ರಾಜೀನಾಮೆ ನೀಡಬಹುದು ಎಂದು ಹೇಳಿದರು ಸಿ.ಟಿ ರವಿ.
ರಜೆ ಕೊಡಲೇಬೇಕು ಎಂದು ಹೇಳಿದ ಬಿವೈ ವಿಜಯೇಂದ್ರ
ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯುವ ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮದ ಸೊಬಗನ್ನು ವೀಕ್ಷಿಸುವುದಕ್ಕಾಗಿ ರಾಜ್ಯ ಸರ್ಕಾರ ಸರ್ಕಾರಿ ರಜೆ ಘೋಷಣೆ ಮಾಡಿ ರಾಮಭಕ್ತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತೆ ವಿನಂತಿ ಮಾಡಿದ್ದಾರೆ.
ಈಗಾಗಲೇ ಹಲವು ರಾಜ್ಯಗಳಲ್ಲಿ ರಜೆ ಘೋಷಣೆ ಮಾಡಲಾಗಿದೆ. ಕೇಂದ್ರ ಸರ್ಕಾರ ಕೂಡ ಅರ್ಧ ದಿನ ರಜೆ ಘೋಷಣೆ ಮಾಡಿದೆ. ಹಾಗಾಗಿ ರಾಜ್ಯದಲ್ಲೂ ರಜೆ ಘೋಷಣೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಇದನ್ನೂ ಓದಿ: Rama Mandir : ಮುಸ್ಲಿಂ ಏರಿಯಾದಲ್ಲಿ ಮಂತ್ರಾಕ್ಷತೆ ವಿತರಣೆಗೆ ಆಕ್ಷೇಪ; ಬಿಗು ವಾತಾವರಣ
ನನಗೆ ಗೊತ್ತೇ ಇಲ್ಲ ಎಂದ ಸಿಎಂ ಸಿದ್ದರಾಮಯ್ಯ
ರಾಮಮಂದಿರ ಉದ್ಘಾಟನಾ ದಿನದಂದು ರಜೆ ನೀಡಬೇಕು ಎಂದು ವಿರೋಧ ಪಕ್ಷದ ಮನವಿ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಗೊತ್ತಿಲ್ಲ ನನಗೆ, ಆ ವಿಚಾರ ಗೊತ್ತಿಲ್ಲ. ಆ ಪತ್ರ ನನಗೆ ಬಂದಿಲ್ಲ ನೋಡ್ತೀನಿ ಎಂದಷ್ಟೇ ಹೇಳಿದರು.
ಅಯೋಧ್ಯೆಗೆ ತೆರಳುವ ವಿಚಾರದ ಬಗ್ಗೆ ಕೇಳಿದಾಗ, ʻʻನಾನು ಇನ್ನೊಂದು ದಿನ ಹೋಗ್ತೀನಿ ಅಂತ ಹೇಳಿದ್ದೇನೆ ತಾನೇ? ಮತ್ತೆ ಮತ್ತೆ ಅದೇ ಪ್ರಶ್ನೆ ಕೇಳ್ತೀರಾʼʼ ಎಂದ ಸಿಎಂ, ʻʻರಾಜಕೀಯ ಮಾಡ್ತಿದ್ದಾರೆ. ಅದಕ್ಕೆ ನಾನು ಹೋಗ್ತಿಲ್ಲ ಎಂದರು.