Site icon Vistara News

Rama Mandir : ರಾಮ ಮಂದಿರ ಉದ್ಘಾಟನೆಗೆ ದಿನಗಣನೆ; ಜ. 22ರವರೆಗೆ ರಾಜ್ಯದಲ್ಲಿ ಹೈಅಲರ್ಟ್‌

High poliCe alert

ಬೆಂಗಳೂರು: ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ (Rama Janmabhoomi) ಜನವರಿ 22ರಂದು ನಡೆಯಲಿರುವ ಶ್ರೀ ರಾಮ ಮಂದಿರ (Rama Mandir) ಲೋಕಾರ್ಪಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ (High alert in State) ವಹಿಸಲು ಸೂಚನೆ ನೀಡಲಾಗಿದೆ. ಜನವರಿ 16ರಿಂದಲೇ ಮಂದಿರ ಲೋಕಾರ್ಪಣೆ, ರಾಮ ಮೂರ್ತಿಗೆ ಪ್ರಾಣಪ್ರತಿಷ್ಠೆ ಮಾಡುವುದಕ್ಕೆ ಸಂಬಂಧಿಸಿ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಂಡಿವೆ. ಅದರ ನಡುವೆ ಇಡೀ ರಾಜ್ಯಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ.

ಬೆಂಗಳೂರು ನಗರ ಸೇರಿ ಎಲ್ಲಾ ಕಡೆಗಳಲ್ಲಿಯೂ ಜನವರಿ 22ರ ವರೆಗೂ ಹೈ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ ಎಲ್ಲಾ ಕಮೀಷನರೇಟ್ ಹಾಗೂ ಜಿಲ್ಲಾ ಎಸ್‌ಪಿಗಳಿಗೆ ಡಿಜಿ ಐಜಿಪಿ ಅಲೋಕ್ ಮೋಹನ್ ಅವರು ಕಟ್ಟೆಚ್ಚರದ ಸೂಚನೆ ನೀಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಬೆಂಗಳೂರು, ಶಿವಮೊಗ್ಗ, ಮಂಗಳೂರು, ಚಿಕ್ಕಮಗಳೂರು, ಹುಬ್ಬಳ್ಳಿ ಮತ್ತು ಉಡುಪಿ ಸೇರಿ ಕೆಲ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಸೂಚಿಸಲಾಗಿದೆ.

ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸೂಚನೆ

ಡಿಜಿ ಐಜಿಪಿ ಅಲೋಕ್‌ ಮೋಹನ್‌ ಅವರು ಸೋಮವಾರ ರಾಜ್ಯದ ಎಲ್ಲ ಪೊಲೀಸ್‌ ಕಮೀಷನರ್‌ ಗಳು ಹಾಗೂ ಎಲ್ಲಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಜತೆ ವಿಡಿಯೋ ಕಾಲ್ ಮೀಟಿಂಗ್ ನಡೆಸಿದರು. ಈ ವೇಳೆ ಎಲ್ಲಾ ಶ್ರೀರಾಮ ದೇವಸ್ಥಾನ, ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ಹೆಚ್ಚಿನ ಪೊಲೀಸರ ಕಣ್ಗಾವಲಿಗೆ ಸೂಚನೆ ನೀಡಲಾಯಿತು.

ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶದಲ್ಲಿನ ದೇವಾಲಯಗಳ ಬಳಿ ಅಲರ್ಟ್ ಇರಬೇಕು. ಸೂಕ್ಷ್ಮ ಪ್ರದೇಶವೆನ್ನಿಸಿದರೆ ಕೆಎಸ್ ಆರ್ ಪಿ ನಿಯೋಜನೆ ಮಾಡಬೇಕು ಎಂದು ಸಲಹೆ ನೀಡಲಾಗಿದೆ.

ದೇವಸ್ಥಾನಗಳಿಗೂ ಕೆಲವೊಂದು ಷರತ್ತುಗಳು

ಈ ನಡುವೆ, ರಾಮ ಮಂದಿರ ಉದ್ಘಾಟನೆ ಸಂದರ್ಭ ಊರೂರಿನ ದೇವಾಲಯಗಳಲ್ಲಿ ಪೂಜೆ ಮತ್ತಿತರ ಧಾರ್ಮಿಕ ಮತ್ತು ಸಭಾ ಕಾರ್ಯಕ್ರಮಗಳು ನಡೆಯಲಿವೆ. ಅದಕ್ಕೆ ಸಂಬಂಧಿಸಿಯೂ ಕೆಲವೊಂದು ಕಟ್ಟೆಚ್ಚರದ ಸೂಚನೆಗಳನ್ನು ನೀಡಲಾಗಿದೆ.

1.ಪೂಜೆ ಪುನಸ್ಕಾರ ಹೊರತುಪಡಿಸಿ ಬೇರೆ ಯಾವುದೇ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡದಿರಲು ಸೂಚನೆ ನೀಡಲಾಗಿದೆ.

2. ದೇವಸ್ಥಾನ ಬಳಿಯಲ್ಲಿ ರಾಜಕೀಯವಾಗಿ ಮಾತನಾಡುವುದು, ಪ್ರತಿಭಟನೆ ಮಾಡುವುದು, ಸಮಾಜದ ಶಾಂತಿ ಭಂಗ ಮಾಡುವ ಘೋಷಣೆ ಕೂಗುವುದನ್ನು ನಿಷೇಧಿಸಲಾಗಿದೆ. ಅದರ ಮೇಲೆ ಖಾಕಿ ಕಣ್ಣು ಇಡಲಿದೆ.

3.ಇಷ್ಟೇ ಅಲ್ಲದೇ ಸಾಮಾಜಿಕ‌ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದರೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಹೀಗಾಗಿ ಅವರು ಸಾಮಾಜಿಕ ಜಾಲ ತಾಣದ ಮೇಲೆ ಕಣ್ಣಿಡಲಿದ್ದಾರೆ.

ಇದನ್ನೂ ಓದಿ : Rama Mandir: ರಾಮಮಂದಿರ ಉದ್ಘಾಟನೆಗೆ ಆಹ್ವಾನ ಬಂದಿದೆ, ಆದ್ರೆ ಹೋಗಲಾಗುತ್ತಿಲ್ಲ: ಸದ್ಗುರು

ಗುಪ್ತಚರ ಇಲಾಖೆಗಳು ಕೂಡಾ ಹೈ ಅಲರ್ಟ್‌

ರಾಮ ಮಂದಿರ ಲೋಕಾರ್ಪಣೆಯ ಸಂದರ್ಭವನ್ನು ಕೆಲವೊಂದು ದುಷ್ಟ ಶಕ್ತಿಗಳು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಅದರ ಬಗ್ಗೆಯೂ ರಾಜ್ಯಾದ್ಯಂತ ಅಲರ್ಟ್ ಇರಲು ಕೇಂದ್ರ ಗುಪ್ತಚರ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ.

ಕರ್ನಾಟಕದಲ್ಲಿ ಈಗಾಗಲೇ ಕೆಲವು ಉಗ್ರರು ಅರೆಸ್ಟ್ ಆಗಿದ್ದಾರೆ. ಇನ್ನೂ ಹಲವು ಸಂಘಟನೆಗಳು ಭೂಗತವಾಗಿ ಕೆಲಸ ಮಾಡಿಕೊಂಡಿವೆ. ಈ ಸಮಯವನ್ನೇ ಬಳಸಿಕೊಳ್ಳಲು ಪ್ಲ್ಯಾನ್‌ ಮಾಡುತ್ತಿರುತ್ತವೆ. ಹೀಗಾಗಿ ಎಲ್ಲಾ ಚಟುವಟಿಕೆಗಳ ಮೇಲೆ ನಿಗಾ ಇಡಲು ಡಿಜಿ ಐಜಿಪಿ ಸೂಚಿಸಿದ್ದಾರೆ. ಅದರ ಜತೆಗೆ ಜ 22.ರ ವರೆಗೂ ಪೊಲೀಸ್ ಅಧಿಕಾರಿಗಳು ಅವರ ಲಿಮಿಟ್ಸ್ ಬಿಟ್ಟು ಹೋಗದಂತೆಯೂ ಸೂಚನೆ ನೀಡಲಾಗಿದೆ.

Exit mobile version