Site icon Vistara News

Rama Mandir : ಜ.22ರಂದು ಶಾಲೆಗಳಲ್ಲಿ ರಾಮ ಮಂದಿರ ಲೋಕಾರ್ಪಣೆ ಲೈವ್‌ ವ್ಯವಸ್ಥೆ

Rama Mandir Schools

ಬೆಂಗಳೂರು: ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ (Ayodhye Rama Janmabhoomi) ‌ ಮಂದಿರ ಲೋಕಾರ್ಪಣೆ, ಮೂರ್ತಿ ಪ್ರತಿಷ್ಠಾಪನೆ ನಡೆಯಲಿರುವ ಜನವರಿ 22ರಂದು ಕೆಲವು ರಾಜ್ಯಗಳಲ್ಲಿ ಸರ್ಕಾರಿ ರಜೆ (Government Holiday) ಘೋಷಿಸಲಾಗಿದೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು, ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುವಾಗುವಂತೆ ರಾಜ್ಯದಲ್ಲೂ ಸರ್ಕಾರಿ ರಜೆಯ ಬೇಡಿಕೆ ಇದೆ. ಆದರೆ, ಸರ್ಕಾರ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈ ನಡುವೆ ರಾಜ್ಯದ ಖಾಸಗಿ ಶಾಲೆಗಳಲ್ಲಿ (Live Telecast in Private Schools) ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮವನ್ನು ಲೈವ್‌ ಆಗಿ ತೋರಿಸುವ ಚಿಂತನೆ ನಡೆದಿದೆ.

ರಾಮ ಮಂದಿರ ಲೋಕಾರ್ಪಣೆಯ ದಿನ ಕೆಲವು ಖಾಸಗಿ ಶಾಲೆಗಳು ರಜೆಯನ್ನೇ ಘೋಷಿಸಿವೆ. ಆದರೆ, ಕೆಲವು ಘೋಷಿಸಿಲ್ಲ. ರಜೆ ಘೋಷಿಸದ ಶಾಲೆಗಳಲ್ಲಿ ಲೋಕಾರ್ಪಣೆ ಕಾರ್ಯಕ್ರಮ, ರಾಮನ ಮೂರ್ತಿ ಪ್ರತಿಷ್ಠಾಪನೆ ನಡೆಯುವ‌ ಹೊತ್ತಿನಲ್ಲಿ ಲೈವ್‌ ಆಗಿ ನೋಡಲು ವ್ಯವಸ್ಥೆ ಮಾಡಲಾಗುವುದು ಎಂದು ಖಾಸಗಿ ಶಾಲೆಗಳ ಒಕ್ಕೂಟ ಕ್ಯಾಮ್ಸ್‌ನ ಅಧ್ಯಕ್ಷ ಶಶಿಕುಮಾರ್ ಹೇಳಿಕೆ ನೀಡಿದ್ದಾರೆ.

ಜನವರಿ 22ರಂದು ಶಾಲೆಗಳಿಗೆ ರಜೆ ನೀಡುವ ಬದಲು ಶಾಲೆಯಲ್ಲೇ ಲೈವ್ ಟೆಲಿಕಾಸ್ಟ್ ಮಾಡುವ ಪ್ಲಾನ್ ಇದೆ. ಆಯಾ ಶಾಲೆಯ ತರಗತಿಗಳಲ್ಲೇ ಒಂದು ಗಂಟೆ ರಾಮನ ಪ್ರತಿಷ್ಠಾಪನೆ ಬಗ್ಗೆ ಲೈವ್ ನಡೆಸಿ ಮಕ್ಕಳಿಗೆ ಅದರ ಮಾಹಿತಿ ನೀಡಲು ತೀರ್ಮಾನ ಮಾಡಲಾಗಿದೆ ಎಂದು ಅವರು ಹೇಳಿದರು.

ಕ್ಯಾಮ್ಸ್ ಸಂಘಟನೆಯಡಿ ಬರುವ ಎಲ್ಲಾ ಖಾಸಗಿ ಶಾಲೆಗಳಿಗೆ ಮಾಹಿತಿ ನೀಡಲಾಗಿದೆ ಎಂದು ಅವರು ತಿಳಿಸಿದರು.

ಸರ್ಕಾರಿ ರಜೆ ನೀಡಲು ಶಿವಸೇನೆ ಮನವಿ

ಈ ನಡುವೆ, ಜನವರಿ 22 ರಂದು ಸರ್ಕಾರಿ ರಜೆ ಘೋಷಣೆ ಮಾಡಲು ಶ್ರೀರಾಮ ಸೇನೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. ರಾಮ ಜನ್ಮಭೂಮಿ ಉದ್ಘಾಟನಾ ದಿನದಂದು ರಾಜ್ಯದ ಎಲ್ಲಾ ಶಾಲೆ ಕಾಲೇಜುಗಳಿಗೆ ರಜೆ ನೀಡಬೇಕು ಎಂದು ಅದು ಮನವಿ ಮಾಡಿದೆ. ಶ್ರೀರಾಮ ಸೇನೆಯ ರಾಜ್ಯ ಅಧ್ಯಕ್ಷರಾದ ಗಂಗಾಧರ್ ಕುಲಕರ್ಣಿ ನೇತೃತ್ವದಲ್ಲಿ ರಾಜಭವನಕ್ಕೆ ತೆರಳಿ ಮನವಿ ಸಲ್ಲಿಸಲಿದೆ.

ಇದನ್ನೂ ಓದಿ : Rama Mandir : ರಾಮ ಶಿಲೆ ಸಿಕ್ಕ ಕ್ಷೇತ್ರವೀಗ ಯಾತ್ರಾಸ್ಥಳ, ದೇಗುಲ ನಿರ್ಮಾಣಕ್ಕೆ ಚಿಂತನೆ

ಜನವರಿ 22ರಂದು ಏನೇನು ಕಾರ್ಯಕ್ರಮವಿದೆ?

ಜನವರಿ 22ರಂದು ಮನೆಯಲ್ಲಿ ದೇವರ ಫೋಟೊಗಳನ್ನು ಅಲಂಕಾರ ಮಾಡಿ ದೀಪ ಹಚ್ಚುವಂತೆ ಮನವಿ ಮಾಡಲಾಗಿದೆ. ಅದರ ಜತೆ ಊರಿನಲ್ಲಿರುವ ಪ್ರಮುಖ ದೇವಾಲಯಗಳಲ್ಲಿ ಭಜನೆ, ಪೂಜೆ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವಂತೆ ಸೂಚಿಸಲಾಗಿದೆ. ಅದರ ಜತೆಗೆ ಹೆಚ್ಚಿನ ಕಡೆಗಳಲ್ಲಿ ಪ್ರತಿಷ್ಠಾಪನೆಯ ಬಳಿಕ ಅನ್ನದಾನದ ವ್ಯವಸ್ಥೆ ಮಾಡಲಾಗುತ್ತಿದೆ. ‌ ದೇವಸ್ಥಾನ ಮತ್ತು ಸಾರ್ವಜನಿಕ ಜಾಗಗಳಲ್ಲಿ ದೊಡ್ಡ ಎಲ್‌ಇಡಿ ಸ್ಕ್ರೀನ್‌ ಮೂಲಕ ಕಾರ್ಯಕ್ರಮವನ್ನು ಲೈವ್‌ ಆಗಿ ತೋರಿಸಲಾಗುತ್ತದೆ ಎಂದು ಬಿಜೆಪಿ ತಿಳಿಸಿದೆ.

Exit mobile version