ಬೆಂಗಳೂರು: ಕರಾವಳಿ ಸೇರಿ ರಾಜ್ಯದ ವಿವಿಧೆಡೆ ಕೋಮುಗಲಭೆಯನ್ನು ನಡೆಸಲು ಬಿಜೆಪಿಯು ತಯಾರಿ ನಡೆಸುತ್ತಿದೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ತಿಳಿಸಿದ್ದಾರೆ. ಸಿ.ಟಿ. ರವಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಡಿ.ಕೆ. ಸುರೇಶ್, ಚುನಾವಣೆಯಲ್ಲಿ ಗೆಲ್ಲುವುದಕ್ಕೋಸ್ಕರ (Karnataka Election) ಬಿಜೆಪಿಯವರು ಏನು ಬೇಕಾದರೂ ಮಾಡುತ್ತಾರೆ ಎಂದರು.
ಸಿ.ಟಿ. ರವಿಯವರು ನಮ್ಮ ಸರ್ವೆ ವಿಚಾರದಲ್ಲಿ ವ್ಯಂಗ್ಯ ಮಾಡಿದ್ದಾರೆ ಎಂದ ಡಿ.ಕೆ. ಸುರೇಶ್, ಬಿಜೆಪಿ ಪಕ್ಷ ಶೀಘ್ರದಲ್ಲೇ ಕೋಮು ಗಲಭೆ ಮಾಡಿಸಲು ಸಿದ್ದವಾದಂತೆ ಕಾಣುತ್ತಿದೆ. ಕರಾವಳಿ ಬೆಂಗಳೂರು ಬೇರೆ ಕಡೆ ಕೋಮು ಗಲಭೆ ಮಾಡಿಸಲು ಸಿದ್ದತೆ ಮಾಡಿಕೊಂಡಂತೆ ಕಾಣ್ತಿದೆ. ರಾಜ್ಯದಲ್ಲಿ ಅಶಾಂತಿ ಮೂಡಿಸಲು ಸಿಟಿ ರವಿ ಪಾಕಿಸ್ತಾನ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಪದೇ ಪದೇ ಪಾಕಿಸ್ತಾನ ವಿಚಾರ ತರುವಂತಹ ಸಿಟಿ ರವಿ ವಿರುದ್ದ ಕ್ರಮ ಆಗಬೇಕು. ಬಿಜೆಪಿಯವರು ನೀಚರು, ಅವರು ಯಾವ ಹಂತಕ್ಕೆ ಬೇಕಾದರೂ ಹೋಗ್ತಾರೆ.
ರಾಜ್ಯದ ಬಗ್ಗೆ ಅವರ ಗಮನ ಇಲ್ಲ, ಅವರ ನಂಟು ಇರುವುದೆಲ್ಲ ಪಾಕಿಸ್ತಾನದ ವಿಚಾರಕ್ಕೆ ಮಾತ್ರ. ಮೋದಿ ಯಾಕೆ ಬರ್ತಾ ಇದಾರೆ ರಾಜ್ಯಕ್ಕೆ? ಅವರ ಮನ್ ಕಿ ಬಾತ್ ನಲ್ಲಿ ಭ್ರಷ್ಟಾಚಾರ ಕಾಣಸ್ತಾ ಇಲ್ವಾ? ಬಿಜೆಪಿಯವರಿಗೆ ನಾಚಿಕೆ ಆಗಬೇಕು, ಅವರ ಪಕ್ಷದ ನಾಯಕರನ್ನು ಕಂಟ್ರೋಲ್ ಮಾಡಲು ಆಗದವರು ಡಿಕೆಶಿವಕುಮಾರ್ ಬಗ್ಗೆ ಮಾತನಾಡ್ತಾರಾ? ಡಿ.ಕೆ. ಶಿವಕುಮಾರ್ ಬಗ್ಗೆ ಮಾತನಾಡೋ ಯಾವ ಹಕ್ಕಿದೆ ಅವರಿಗೆ. ಪಾಕಿಸ್ತಾನ ಬೇಕಿದ್ದರೆ ಇವರು ಸೇರಿಸಿಕೊಳ್ಳಲಿ. ಪಾಕಿಸ್ತಾನದ ಹೆಸರಿಟ್ಟುಕೊಂಡು ರಾಜಕಾರಣ ಮಾಡುವುದು ನಿಮ್ಮ ಪದ್ದತಿ. ಬಿಜೆಪಿಯವರು ಏನು ಬೇಕಾದರೂ ಮಾಡ್ತಾರೆ. ರಾಜಕಾರಣಕ್ಕಾಗಿ ಕೊಲೆಗಳನ್ನು ಮಾಡಿಸ್ತಾರೆ, ಯಾರನ್ನು ಬೇಕಾದರೂ ಹೊಡಿತಾರೆ, ಯಾವ ಆಪರೇಷನ್ ಬೇಕಾದರೂ ಮಾಡ್ತಾರೆ ಎಂದರು.
ಡಾ. ಜಿ. ಪರಮೇಶ್ವರ್ ಅಸಮಧಾನ ವಿಚಾರ ಕುರಿತು ಪ್ರತಿಕ್ರಿಯಿಸಿ, ಪರಮೇಶ್ವರ್ ಅಸಮಧಾನವೆಲ್ಲ ಏನೂ ಇಲ್ಲ. ಒಟ್ಟಾಗಿ ಕೆಲಸ ಮಾಡ್ತಾ ಇದ್ದಾರೆ. ರಾಜೀನಾಮೆ ಕೊಟ್ಟ ಬಗ್ಗೆ ಮಾಹಿತಿ ಇಲ್ಲ. ಡಿ. ಕೆ. ಶಿವಕುಮಾರ್, ಪರಮೇಶ್ವರ್ ಒಂದೆ ನಾಣ್ಯದ ಮುಖಗಳು ಎಂದರು.
ರಾಮನಗರ ಜಿಲ್ಲೆ ರಾಜಕಾರಣದಲ್ಲಿ ಡಿ.ಕೆ. ಸಹೋದರರು ಹಾಗೂ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ನಡುವೆ ವಾಗ್ಯುದ್ಧ ಮುಂದುವರಿದಿದೆ. ಕಾಂಗ್ರೆಸ್ ಪಕ್ಷದ ಕುರಿತು ಅಶ್ವತ್ಥನಾರಾಯಣ ಟೀಕೆ ಮಾಡಿರುವ ಕುರಿತು ಖಾರವಾಗಿ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಸುರೇಶ್, ಕೆಲಸ ನೋಡೋಕೆ ಹೇಳಿ ಅವನಿಗೆ. ಅವನ ಬಗ್ಗೆ ಇನ್ನೊಂದು ದಿನ ಮಾತಾಡ್ತೀನಿ ಎಂದು ಏಕವಚನದಲ್ಲೇ ಹರಿಹಾಯ್ದಿದ್ದಾರೆ.
ಇದನ್ನೂ ಓದಿ : Karnataka Election: ಪ್ರಜಾಧ್ವನಿಗೆ ಇರುವುದು ಎರಡೇ ಬಸ್; 4 ಇದ್ದಿದ್ರೆ ನಾನೂ ಸಾರಥಿ ಆಗ್ತಿದ್ದೆ: ಡಾ.ಜಿ.ಪರಮೇಶ್ವರ್
ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ಕುರಿತು ಪ್ರತಿಕ್ರಿಯೆ ನೀಡಿದ ಡಿ.ಕೆ. ಸುರೇಶ್, ಈಗಾಗಲೇ ಚುನಾವಣೆಗೆ ಕಾಂಗ್ರೆಸ್ ಪಕ್ಷ ಎಲ್ಲ ರೀತಿಯ ಸಿದ್ದತೆ ಮಾಡಿಕೊಂಡಿದೆ. ಚುನಾವಣಾ ಸಮಿತಿ ಕೂಡ ಸಭೆ ಸೇರಿ ರಾಜ್ಯದ ವರಿಷ್ಟರಿಗೆ ನಮ್ಮ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಕೇಂದ್ರದ ಸ್ಕ್ರೀನಿಂಗ್ ಕಮೀಟಿ ಮುಂದೆ ಆದಷ್ಟು ಬೇಗ ಕಳಿಸುತ್ತೇವೆ. ಕ್ಷೇತ್ರದಲ್ಲಿ ಎಲ್ಲರನ್ನೂ ಒಗ್ಗಟ್ಟಾಗಿ ತೆಗೆದುಕೊಂಡು ಹೋಗಲು ಅನುಕೂಲ ಆಗಲಿದೆ. ಯಾವ ಶಿಫಾರಸುಗಳನ್ನು ಮಾಡಿದ್ದೇವೆ ಎಲ್ಲವೂ ಸ್ಕ್ರೀನಿಂಗ್ ಕಮಿಟಿ ಮುಂದೆ ಹೋಗಿ ನಿರ್ಧಾರ ಆಗಲಿದೆ ಎಂದರು.
ಬಿಜೆಪಿಯು ಭ್ರಮೆಯಲ್ಲಿ ರಾಜ್ಯವನ್ನು ಇಟ್ಟಿದೆ. ಸುಳ್ಳು ಆಶ್ವಾಸನೆ, ಸುಳ್ಳು ಭರವಸೆಗಳೆಲ್ಲವೂ ಕೂಡ ಹುಸಿಯಾಗಿದೆ. ಹಳ್ಳಿಗಳ ಮಟ್ಟದಲ್ಲಿ ಜನರು ಬಿಜೆಪಿಯಿಂದ ಬದಲಾವಣೆ ಬಯಸಿದ್ದಾರೆ. ಬಿಜೆಪಿ ಸರ್ಕಾರ ತೊಲಗಬೇಕು ಅಂತ ಜನ ಬಯಸ್ತಾ ಇದ್ದಾರೆ. ಪಕ್ಷದ ಅಧ್ಯಕ್ಷರು ಎಲ್ಲ ಕಡೆಯಿಂದಲೂ ಸರ್ವೆ ಮಾಡಿಸಿದ್ದಾರೆ ಎಂದರು.