Site icon Vistara News

ಮಹಿಳೆಯಿಂದ ಉದ್ಯಮಿಗೆ ಪಿಸ್ತೂಲ್‌ ತೋರಿಸಿ ಹಲ್ಲೆ, ರೇಪ್‌ ಕೇಸ್‌ ಹಾಕುವುದಾಗಿ ಬ್ಲ್ಯಾಕ್‌ಮೇಲ್‌

threat

ಬೆಂಗಳೂರು: ಐಎಎಸ್ ಅಧಿಕಾರಿಯ ಪಿಎ ಎಂದು ನಂಬಿಸಿ ಅಕ್ರಮ ಬಂಧನದಲ್ಲಿಟ್ಟುಕೊಂಡು, ಹಣಕ್ಕಾಗಿ ಪೀಡಿಸಿ ಹಲ್ಲೆ ನಡೆಸಿದ, ಹಣ ಕೊಡದಿದ್ದರೆ ರೇಪ್ ದೂರು ನೀಡುವುದಾಗಿ ಉದ್ಯಮಿಗೆ ಮಹಿಳೆಯೊಬ್ಬಳು ಬ್ಲ್ಯಾಕ್‌ಮೇಲ್‌ ಮಾಡಿದ ಘಟನೆ ನಡೆದಿದೆ.

ರವಿ ಇಂಡಸ್ಟ್ರೀಯಲ್ ಸಪ್ಲೈನ ಮಾಲೀಕನ ಮಗನಾದ ಸೂರಜ್ ಎಂಬ ಉದ್ಯಮಿ ಮೇಲೆ ಪಿಸ್ತೂಲ್ ತೋರಿಸಿ ಹಲ್ಲೆ ನಡೆದಿದೆ. ಮಹಿಳೆ ಸೇರಿ ನಾಲ್ವರು ಬ್ಲಾಕ್‌ಮೇಲ್, ಹಲ್ಲೆ ನಡೆಸಿದ್ದಾರೆ. ಪುಷ್ಪಾ ಅಲಿಯಾಸ್‌ ಪುಷ್ಪಲತಾ, ಅಯ್ಯಪ್ಪ ಅಲಿಯಾಸ್ ಅರ್ಜುನ್, ರಾಕೇಶ್ ಹಾಗು ಸಂತೋಷ್‌ರಿಂದ ಕೃತ್ಯ ನಡೆದಿದೆ.

ಇದರಲ್ಲಿ ಪುಷ್ಪಲತಾ ಎಂಬಾಕೆ ಶ್ರೀ ಅಬ್ದುಲ್ ಕಲಾಂ ಚಾರಿಟೇಬಲ್ ಟ್ರಸ್ಟ್ ಎಂಬ ಸಂಸ್ಥೆಯ ಅಧ್ಯಕ್ಷೆಯಾಗಿದ್ದಾಳೆ. ಈಕೆ ಸೂರಜ್‌ಗೆ ಎರಡು ವರ್ಷದ ಹಿಂದೆ ಪರಿಚಯವಾಗಿದ್ದಳು. ಮೂರು ತಿಂಗಳ ಹಿಂದೆ ಸರ್ಕಾರದ ಟೆಂಡರ್ ಕೊಡಿಸುತ್ತೇನೆ ಎಂದು ನಾಲ್ಕೈದು ಬಾರಿ ಭೇಟಿಯಾಗಿದ್ದಳು. ನಂತರ ಸಂತೋಷ್ ಎಂಬವವರನ್ನು ಭೇಟಿ ಮಾಡಿಸಿ, ಇವರು ಐಎಎಸ್ ಅಧಿಕಾರಿಯ ಪಿಎ, ಟೆಂಡರ್ ಕೊಡಿಸುಸ್ತಾರೆ ಎಂದು ನಂಬಿಸಿದ್ದಳು. ಇದೇ ವೇಳೆಗೆ ಒಳನುಗ್ಗಿದ ಅಯ್ಯಪ್ಪ ಅಲಿಯಾಸ್ ಅರ್ಜುನ್ ಹಾಗು ರಾಕೇಶ್ ಎಂಬವರು ಏಕಾಏಕಿ ಹಲ್ಲೆ ನಡೆಸಿ, ಪಿಸ್ತೂಲ್ ತೋರಿಸಿ 4‌ ಕೋಟಿ ಕೊಡುವಂತೆ ಬೆದರಿಸಿದ್ದರು.‌

ಇದನ್ನೂ ಓದಿ: ಕೊಡಿಸಿದ ಸಾಲ ಮರಳಿ ಕೇಳಿದ್ದಕ್ಕೆ ಕೊಲೆಯಾದ

ಅವರ ಜೊತೆ ಸೇರಿಕೊಂಡ ಪುಷ್ಪಾ ಕೂಡ ಸೂರಜ್‌ ಮೇಲೆ ಹಲ್ಲೆ ಮಾಡಿ ಅಕ್ರಮ ಬಂಧನದಲ್ಲಿಟ್ಟುಕೊಂಡಿದ್ದರು. ನಾಲ್ಕು ಕೋಟಿ ರೂ. ಕೊಡಬೇಕು, ಇಲ್ಲವಾದರೆ ನನ್ನನ್ನು ರೇಪ್ ಮಾಡಿದ್ದೀಯ ಎಂದು ಕೇಸು ಹಾಕುತ್ತೇನೆ ಎಂದು ಬೆದರಿಕೆ ಒಡ್ಡಿದ್ದಳು. ನನ್ನ ಬಳಿ‌ ಅಷ್ಟು ಹಣವಿಲ್ಲ, ಮನೆ ಮಾರಿದರೂ ಅಷ್ಟು ದುಡ್ಡು ಸಿಗುವುದಿಲ್ಲ, ಬಿಟ್ಟು ಬಿಡಿ ಎಂದು ಸೂರಜ್‌ ಕೇಳಿಕೊಂಡಿದ್ದರು. ಈ ವೇಳೆ ಅಯ್ಯಪ್ಪ ಪಿಸ್ತೂಲ್ ತೋರಿಸಿ ಕೊಂದುಬಿಡುವುದಾಗಿ ಬೆದರಿಕೆ ಹಾಕಿದ್ದ.

ನಂತರ ಸೂರಜ್ ತನ್ನ ಸ್ನೇಹಿತ ಗುರುಮೂರ್ತಿಗೆ ಹೇಳಿ ಐದು ಗಂಟೆಯ ವೇಳೆ 25 ಲಕ್ಷ ತರುವಂತೆ ಹೇಳಿದ್ದ. ಅಬ್ದುಲ್ ಕಲಾಂ ಚಾರಿಟೇಬಲ್ ಟ್ರಸ್ಟ್ ಬಳಿ ಗುರುಮೂರ್ತಿ 25 ಲಕ್ಷ ಹಣ ತಂದಿದ್ದರು. ಸೂರಜ್ ಇಲ್ಲದ ಕಾರಣ ಪುಷ್ಪಾಳ ಕಡೆಯವರಿಗೆ ಹಣ ನೀಡದೆ ವಾಪಾಸಾಗಿದ್ದರು. ನಂತರ ಪುಷ್ಪಲತಾ, ʼʻನಿನ್ನನ್ನು ಕಳಿಸ್ತಾ ಇದೀನಿ. ಈ ವಿಚಾರ ಹೊರಗೆ ಹೇಳಿದರೆ ರೇಪ್ ಕೇಸ್ ಹಾಕುವುದಲ್ಲದೆ, ಇಡೀ‌ ಕುಟುಂಬವನ್ನು ಹತ್ಯೆ ಮಾಡುತ್ತೇನೆʼʼ ಎಂದು ಬೆದರಿಕೆ ಹಾಕಿದ್ದಳು.

ಈ ಸಂಬಂಧ ಉದ್ಯಮಿ ಸೂರಜ್‌ ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಲೇಡಿ ಡಾನ್ ಪುಷ್ಪಾ ಸೇರಿ ಮೂವರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Mother killed daughter | ಬಾತ್‌ಟಬ್‌ನಲ್ಲಿ ಮಗುವನ್ನು ಮುಳುಗಿಸಿ ಕೊಂದು ನೇಣು ಹಾಕಿಕೊಂಡ ತಾಯಿ

Exit mobile version