ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರಕ್ಕೆ ಬಂದು ಐದು ತಿಂಗಳಾಗಿದೆ. ಚುನಾವಣೆಗೂ ಪೂರ್ವದಲ್ಲಿ ಘೋಷಣೆ ಮಾಡಿದಂತಹ ಐದು ಗ್ಯಾರಂಟಿ ಯೋಜನೆಗಳಲ್ಲಿ (Congress Guarantee Scheme) ನಾಲ್ಕನ್ನು ಈಗಾಗಲೇ ಅನುಷ್ಠಾನಕ್ಕೆ ತರಲಾಗಿದೆ. ಈಗ ಈ ಗ್ಯಾರಂಟಿ ಯೋಜನೆಯಲ್ಲಿ ಮುಖ್ಯವಾದ ಅನ್ನಭಾಗ್ಯ ಯೋಜನೆ ಅಡಿ ಸರ್ಕಾರ ತನ್ನ ದೃಷ್ಟಿ ನೆಟ್ಟಿದೆ. ಪಡಿತರ ಕಾರ್ಡ್ (Ration Card) (ಬಿಪಿಎಲ್ ಅಥವಾ ಅಂತ್ಯೋದಯ ಕಾರ್ಡ್ – BPL or Antyodaya Card) ಅನ್ನು ಹೊಂದಿದ್ದರೂ ಕಳೆದ ಆರು ತಿಂಗಳಿಂದ ಯಾರು ಪಡಿತರವನ್ನು ಪಡೆದುಕೊಂಡಿಲ್ಲವೋ ಅಂಥವರ ಕಾರ್ಡ್‌ಗಳನ್ನು ರದ್ದು ಪಡಿಸಲು ಸರ್ಕಾರ ಮುಂದಾಗಿದೆ. ಇದರ ಪ್ರಕಾರ 3.26 ಲಕ್ಷ ಪಡಿತರ ಕಾರ್ಡ್‌ಗಳು ರದ್ದುಗೊಳ್ಳಲಿವೆ. ಹೀಗೆ ರದ್ದುಗೊಂಡರೆ ಈ ಎಲ್ಲ ಫಲಾನುಭವಿಗಳ ಖಾತೆಗೆ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ (Anna Bhagya and Gruha Lakashmi Scheme) ಹಣವನ್ನು ಹಾಕುವುದು ತಪ್ಪಲಿದೆ.
ಆರು ತಿಂಗಳಿಂದ ಪಡಿತರ ಪಡೆಯದೇ ಇರುವ ಎಲ್ಲ 3.26 ಲಕ್ಷಕ್ಕೂ ಅಧಿಕ ಪಡಿತರ ಕಾರ್ಡ್‌ಗಳು ಪತ್ತೆಯಾಗಿವೆ. ಹೀಗಾಗಿ ಇವುಗಳ ದತ್ತಾಂಶವನ್ನು ಸಮರ್ಪಕವಾಗಿ ಸಂಗ್ರಹ ಮಾಡಿ ರದ್ದು ಮಾಡಲು ರಾಜ್ಯ ಸರ್ಕಾರ ಸಹ ಆದೇಶ ನೀಡಿದೆ. ಇದರಿಂದ ಯಾವೆಲ್ಲ ಗ್ಯಾರಂಟಿ ಯೋಜನೆಗೆ ಪಡಿತರ ಚೀಟಿ ಬೇಕೋ ಅದೆಲ್ಲದಕ್ಕೂ ಕಡಿವಾಣ ಬೀಳುವ ಲಕ್ಷಣ ಕಾಣುತ್ತಿದೆ.
ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆಗೆ ಕೊಕ್ಕೆ?
ಅನ್ನಭಾಗ್ಯ ಯೋಜನೆಯು ನೇರವಾಗಿ ಪಡಿತರ ಚೀಟಿಗೆ ಸಂಬಂಧಪಟ್ಟಂತೆ ಆಗಿದೆ. ಇಲ್ಲಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಅನ್ನು ಹೊಂದಿರುವ ಪ್ರತಿ ಸದಸ್ಯರಿಗೆ ಪ್ರತಿ ಕೆ.ಜಿ.ಗೆ 34 ರೂಪಾಯಿಯಂತೆ ಐದು ಕೆಜಿಗೆ 170 ರೂಪಾಯಿಯನ್ನು ವರ್ಗಾವಣೆ ಮಾಡಬೇಕು. ಇನ್ನು ಮನೆಯಲ್ಲಿ ನಾಲ್ಕು ಸದಸ್ಯರಿದ್ದರೆ ಅವರಿಗೆ 680 ರೂಪಾಯಿ ನೀಡಬೇಕು. ಇನ್ನು ಗೃಹಲಕ್ಷ್ಮಿ ಯೋಜನೆಗಳಿಗೆ ಪಡಿತರ ಚೀಟಿ ಪ್ರಮುಖ ಆಧಾರವಾಗಿದೆ. ಈ ಸೌಲಭ್ಯವನ್ನು ಪಡೆಯಲು ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್ ಇರಲೇಬೇಕು. ಒಂದು ವೇಳೆ ಈ ಕಾರ್ಡ್ ಅನ್ನು ರದ್ದು ಮಾಡಿದರೆ ಫಲಾನುಭವಿಗಳು ಈ ಎರಡೂ ಗ್ಯಾರಂಟಿ ಯೋಜನೆಗಳಿಂದ ವಿಮುಖರಾಗಬೇಕಾಗುತ್ತದೆ.
ರಾಜ್ಯದಲ್ಲಿ ಅಂತ್ಯೋದಯ, ಪಿಎಚ್ಎಚ್ ಹಾಗೂ ಎನ್‌ಪಿಎಚ್‌ಎಚ್ ಸೇರಿ ಒಟ್ಟು 52,34,148 ಕಾರ್ಡ್‌ಗಳಿವೆ. ಈ ಕಾರ್ಡ್‌ನಲ್ಲಿ 1,52,79,343 ಫಲಾನುಭವಿಗಳಿದ್ದಾರೆ. ರಾಜ್ಯದಲ್ಲಿ 1,27,82,893 ಬಿಪಿಎಲ್ ಕಾರ್ಡ್ಗಳಿದ್ದು, ಇದರಡಿ 4,37,65,128 ಫಲಾನುಭವಿಗಳಿದ್ದಾರೆ. ಈ ಎರಡೂ ವಿಭಾಗದಲ್ಲಿ 3.26 ಲಕ್ಷ ಕಾರ್ಡ್‌ಗಳನ್ನು ಅಮಾನತು ಮಾಡಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಆ ಬಳಿಕವಷ್ಟೇ ಪುನಃ ಹೊಸ ಕಾರ್ಡ್‌ಗಳಿಗೆ ಅನುಮತಿ ನೀಡುವ ಚಿಂತನೆಯಲ್ಲಿ ರಾಜ್ಯ ಸರ್ಕಾರ ಇದೆ.
ಇದನ್ನೂ ಓದಿ: BY Vijayendra : ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ; ‘ವಿಶ್ವಾಸ’ ನಡೆಗೆ ಮುಂದಾದ ಬಿಎಸ್‌ವೈ ಈಗ ಫುಲ್ ಆ್ಯಕ್ಟಿವ್!
ರಾಜ್ಯದ ಬೊಕ್ಕಸಕ್ಕೆ ಉಳಿತಾಯ
ಒಂದು ವೇಳೆ ಕಳೆದ ಆರು ತಿಂಗಳಿಂದ ರೇಷನ್ ಪಡೆಯದೇ ಇರುವ ಕಾರಣಕ್ಕೆ 3.26 ಲಕ್ಷ ಕಾರ್ಡ್‌ಗಳ ನೋಂದಣಿ ರದ್ದುಗೊಂಡರೆ, ಸರ್ಕಾರಕ್ಕೆ ಕೆಲವು ತಿಂಗಳು ಅವರ ಖಾತೆಗೆ ಹಣ ವರ್ಗಾವಣೆ ಮಾಡುವುದು ತಪ್ಪುತ್ತದೆ. ಪುನಃ ಸರ್ಕಾರ ಹೊಸ ಕಾರ್ಡ್‌ಗೆ ಅರ್ಜಿ ಕರೆದು ಇವರು ಮತ್ತೆ ಅರ್ಜಿ ಸಲ್ಲಿಸಿ ಹೊಸದಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಆ ಬಳಿಕ ಪುನಃ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸಬೇಕು. ಈ ಹೊತ್ತಿಗೆ ಕೆಲವು ತಿಂಗಳುಗಳೇ ಕಳೆದು ಹೋಗುವುದರಿಂದ ಗ್ಯಾರಂಟಿ ಯೋಜನೆಗೆ ಸಂಬಂಧಿಸಿ ಇವರ ಖಾತೆಗೆ ಜಮೆ ಮಾಡಬೇಕಾದ ಅಗತ್ಯ ಇರುವುದಿಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ಸಾಕಷ್ಟು ಉಳಿತಾಯವಾಗುತ್ತದೆ ಎಂಬ ಲೆಕ್ಕಾಚಾರವನ್ನು ಹೊಂದಲಾಗಿದೆ ಎಂದು ಸಹ ಹೇಳಲಾಗುತ್ತಿದೆ. ಹೀಗಾಗಿ ಈ ಪಡಿತರವನ್ನು ಪಡೆಯದೇ ಇರುವ ಕಾರ್ಡ್‌ಗಳ ದತ್ತಾಂಶ ಸಂಗ್ರಹಿಸಿ ರದ್ದುಗೊಳಿಸಲು ರಾಜ್ಯ ಸರ್ಕಾರ ಆದೇಶಿಸಿರುವುದು ಕೆಲವರಿಗೆ ನುಂಗಲಾರದ ತುತ್ತಾಗಿದೆ.