Site icon Vistara News

RDPR Protest: ಅಕ್ಟೋಬರ್ 4ರಿಂದ ರಾಜ್ಯಾದ್ಯಂತ ಗ್ರಾಮ ಪಂಚಾಯತ್ ಸೇವೆ ಸಂಪೂರ್ಣ ಬಂದ್!

RDPR Protest

ಬೆಂಗಳೂರು: ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯತ್ ಸೇವೆಗಳಲ್ಲಿ ಭಾರೀ ವ್ಯತ್ಯಯವಾಗುವ ಸಾಧ್ಯತೆ ಇದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR)ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಒಕ್ಕೂಟದ ವತಿಯಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಕ್ಟೋಬರ್ 4 ರಿಂದ ಅನಿರ್ದಿಷ್ಟಾವಧಿ ಹೋರಾಟಕ್ಕೆ (RDPR Protest) ನಿರ್ಧರಿಸಿದೆ.

ರಾಜ್ಯಾದ್ಯಂತ ಗ್ರಾಮ ಪಂಚಾಯತ್ ಸೇವೆಗಳನ್ನು ನಿಲ್ಲಿಸಿ ಹೋರಾಟಕ್ಕೆ ಸಜ್ಜಾಗಿದ್ದಾರೆ. ಆರ್‌ಡಿಪಿಆರ್‌ (RDPR)ಇಲಾಖೆಯ ಸುಮಾರು 11 ವೃಂದಗಳು ಸೇರಿ ಬೃಹತ್ ಹೋರಾಟ ನಡೆಸಲಿದ್ದಾರೆ. ಅಧಿಕಾರಿಗಳು ಹಾಗೂ ನೌಕರರ ಸಮಸ್ಯೆಗಳನ್ನು ಸೆಪ್ಟೆಂಬರ್ 30ರೊಳಗೆ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ. ಇಲ್ಲದಿದ್ದಲ್ಲಿ ಅಕ್ಟೋಬರ್ 4 ರಿಂದ ಅನಿರ್ದಿಷ್ಟಾವಧಿ ಹೋರಾಟ ನಿಶ್ಚಿತ ಎಂದು ಎಚ್ಚರಿಕೆ ನೀಡಿದ್ದಾರೆ. ಸರ್ಕಾರ ಹಾಗೂ ಇಲಾಖೆಯ ಸಚಿವರು ಈ ಬಗ್ಗೆ ಸ್ಪಂದಿಸದಿದ್ದಲ್ಲಿ ತೀವ್ರ ಹೋರಾಟ ಮಾಡಲಿದ್ದಾರೆ.

RDPR protest

ಪ್ರತಿಭಟನೆಗೆ ಯಾರೆಲ್ಲಾ ಸಾಥ್ ?

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಓ)ಗಳು, ಪಂಚಾಯಿತಿ ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಡೇಟಾ ಎಂಟ್ರಿ ಆಪರೇಟರ್, ಕರವಸೂಲಿಗಾರರು, ಜವಾನರು, ಸ್ವಚ್ಛತಾಗಾರರು, ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಒಕ್ಕೂಟ ಈ ಪ್ರತಿಭಟನೆಗೆ ಸಾಥ್‌ ನೀಡಿದ್ದಾರೆ.

ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ ಬೇಡಿಕೆ

1) ಏಳು ವರ್ಷ ಪೂರೈಸಿ ಕರ್ತವ್ಯ ನಿರ್ವಹಿಸುತ್ತಿರುವ ಪಂಚಾಯತ ಅಭಿವೃದ್ಧಿ ಅಧಿಕಾರಿಗಳನ್ನು ಬೇರೆ ತಾಲೂಕಿಗೆ ವರ್ಗಾವಣೆ ಮಾಡುವ ನಿಯಮವನ್ನು ಕೈಬಿಡುವುದು ಹಾಗೂ ಜಿಲ್ಲೆಯಲ್ಲಿ ಸ್ವಇಚ್ಚೆ ಇಲ್ಲದೆ ಸಾರ್ವಜನಿಕ ಹಿತಾಸಕ್ತಿ ಹಿತದೃಷ್ಟಿ ತೋರದೆ ವರ್ಗಾವಣೆ ಮಾಡಬಾರದು ಮತ್ತು ವರ್ಗಾವಣೆ ನಿಯಮಗಳಲ್ಲಿ ಯಾವುದೇ ಬದಲಾವಣೆಗೆ ಮುನ್ನ ಸಂಘದ ಸಲಹೆಯನ್ನು ಪಡೆಯುವುದು

2) ರಾಜ್ಯದ ಎಲ್ಲಾ ಪಂಚಾಯಿತ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಗೆಜೆಟೆಡ್ ಗ್ರೂಪ್ ಬಿ ದರ್ಜೆಗೆ ಉನ್ನತಿಕರಿಸುವುದು

3) ಎಂ.ಜಿ.ಎನ್.ಆರ್.ಇ.ಜಿ.ಎ ಯೋಜನೆಯ ಅನುಷ್ಠಾನ ಪಡಿಸುವ ಬಗ್ಗೆ ಗುರಿ ನಿಗದಿಯನ್ನು ಕೈಬಿಡುವುದು ಅವಶ್ಯಕತೆ ಇಲ್ಲದ ಕಡೆಗಳಲ್ಲಿ ಗ್ರಾಮ ಪಂಚಾಯತ್ ಅಭಿಪ್ರಾಯ ಪಡೆದು ಕೂಸಿನ ಮನೆ ಮುಂದುವರಿಸುವ ಬಗ್ಗೆ ಕ್ರಮ ಕೈಗೊಳ್ಳುವುದು

4) ಗ್ರಾಮ ಪಂಚಾಯಿತಿಗೆ ಅಗತ್ಯವಿರುವ ಕಾರ್ಯದರ್ಶಿಗಳು ಲೆಕ್ಕ ಸಹಾಯಕರು ಹಾಗೂ ಅಗತ್ಯವಿದ್ದಷ್ಟು ಗ್ರಾಮ ಪಂಚಾಯತ್ ಸಿಬ್ಬಂದಿಗಳನ್ನು ನೇಮಕ ಮಾಡುವುದು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ಮಾದರಿಯನ್ನು ಪರಿಷ್ಕರಿಸಿ ಪ್ರತಿಯೊಂದು ವಿಷಯಕ್ಕೂ ಒಬ್ಬರು ವಿಷಯ ನಿರ್ವಾಹಕರನ್ನು ನೇಮಿಸುವುದು ಹಾಗೂ ತಾಂತ್ರಿಕ ಸಿಬ್ಬಂದಿಯನ್ನು ಒದಗಿಸುವುದು.

5) ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಜೇಷ್ಠತಾ ಪಟ್ಟಿ ಹಾಗೂ ಬಡ್ತಿಯಲ್ಲಿನ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸುವುದು.

6) ಕುಂದು ಕೊರತೆ ಪ್ರಾಧಿಕಾರವನ್ನು ಪೊಲೀಸ್ ಇಲಾಖೆ ಮಾದರಿಯಲ್ಲಿ ಸದೃಢಗೊಳಿಸುವುದು, ಮತ್ತು ತಜ್ಞರ ಸಮಿತಿ ನೇಮಿಸುವುದು ಹಾಗೂ ಏಕರೂಪದ ಅಡಿಟ್ ಪದ್ಧತಿ ಜಾರಿಗೊಳಿಸುವುದು. ಮತ್ತು ಸೇವಾ ವಿಷಯಗಳನ್ನು ಸಕಾಲ ವ್ಯಾಪ್ತಿಗೆ ತರುವುದು. ಹಾಗೂ ಎಲ್ಲ ತಂತ್ರಾಂಶಗಳಿಗೆ ಏಕರೂಪದ ಸಹಾಯವಾಣಿ ವ್ಯವಸ್ಥೆ ಜಾರಿಗೊಳಿಸುವುದು

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version