ಬೆಂಗಳೂರು: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ (Kannada Sahitya Sammelana) ಪ್ರತಿನಿಧಿಯಾಗಿ ಭಾಗವಹಿಸುವವರು ಮತ್ತು ಪುಸ್ತಕ ಹಾಗೂ ವಾಣಿಜ್ಯ ಮಳಿಗೆಗಳನ್ನು ಕಾಯ್ದಿರಿಸುವವರಿಗೆ ಈಗಾಗಲೇ ಆನ್‌ಲೈನ್ ನೋಂದಣಿ ವ್ಯವಸ್ಥೆ ಇದೆ. ಆದರೂ, ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಕಚೇರಿ, ಜಿಲ್ಲಾ ಕಚೇರಿಯಲ್ಲಿ ನೇರವಾಗಿ (ಆಫ್ ಲೈನ್) ನೋಂದಣಿಗೆ ಅವಕಾಶ ಕಲ್ಪಿಸಿ, ಡಿಸೆಂಬರ್ ೧೮ರವರೆಗೆ ಇದ್ದ ಪ್ರತಿನಿಧಿಗಳ ನೋಂದಣಿ ಅವಧಿಯನ್ನು ಡಿಸೆಂಬರ್ ೨೫ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಹಾವೇರಿಯಲ್ಲಿ ಹಮ್ಮಿಕೊಂಡಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನ ಪ್ರತಿನಿಧಿ ಹಾಗೂ ಪುಸ್ತಕ/ವಾಣಿಜ್ಯ ಮಳಿಗೆಗಳ ನೋಂದಣಿಗೆ, https://bit.ly/3VlidZj ಈ ಕೊಂಡಿಯ ಮೂಲಕ ಹಾಗೂ ಎಲ್ಲಾ ಸೇವಾ ಸಿಂಧು ಕೇಂದ್ರಗಳಲ್ಲಿ ಆನ್ ಲೈನ್ ನೋಂದಣಿ ಕಾರ್ಯ ಆರಂಭವಾಗಿದೆ. ಆದರೂ ಗ್ರಾಮಾಂತರ ಪ್ರದೇಶಗಳಲ್ಲಿ ಆನ್ ಲೈನ್ ಮೂಲಕ ನೋಂದಣಿ ಮಾಡುವುದಕ್ಕೆ ಸಮಸ್ಯೆಗಳು ಎದುರಾಗುತ್ತಿದೆ. ಹೀಗಾಗಿ ಆಫ್‌ಲೈನ್ ಮೂಲಕವೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಮ್ಮೇಳನದ ಪ್ರತಿನಿಧಿಯಾಗಿ ಭಾಗವಹಿಸಲು ೫೦೦ ರೂ. ನೀಡಿ ರಸೀದಿ ಪಡೆಯುವ ಜತೆಗೆ ಸ್ವ ವಿವರ ನೀಡುವುದರೊಂದಿಗೆ ನೋಂದಣಿ ಮಾಡಿಕೊಳ್ಳಬಹುದು. ಅದರೊಂದಿಗೆ ನಾಡಿನ ಎಲ್ಲ ಸೇವಾ ಸಿಂಧು ಕೇಂದ್ರಗಳಲ್ಲಿ, ಕನ್ನಡ ಸಾಹಿತ್ಯ ಪರಿಷತ್‌ನ ಆ್ಯಪ್ ಮೂಲಕವೂ ಪ್ರತಿನಿಧಿಯಾಗಲು ಮತ್ತು ಮಳಿಗೆಗಳ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಹಾವೇರಿಯಲ್ಲಿ ವಸತಿ ವ್ಯವಸ್ಥೆ ಗಮನದಲ್ಲಿ ಇಟ್ಟುಕೊಂಡು ೨೦ ಸಾವಿರ ಪ್ರತಿನಿಧಿಗಳಿಗೆ ಮಾತ್ರ ಅವಕಾಶ ನೀಡಲು ಪರಿಷತ್ ಮುಂದಾಗಿದೆ. ಈ ಹಿಂದೆ ಡಿಸೆಂಬರ್ ೧೮ರಂದು ಕೊನೆಯ ದಿನವೆಂದು ನಿಗದಿ ಮಾಡಲಾಗಿತ್ತು. ಆದರೆ ಕನ್ನಡಿಗರ ಒತ್ತಾಯದ ಮೇರೆಗೆ ಪ್ರತಿನಿಧಿಗಳ ನೋಂದಣಿ ಪ್ರಕ್ರಿಯೆಯನ್ನು ಡಿಸೆಂಬರ್ ೨೫ರವರೆಗೆ ಮುಂದುವರಿಸಲಾಗಿದ್ದು, ೨೦ ಸಾವಿರ ಪ್ರತಿನಿಧಿಗಳು, ೩೦೦ ಪುಸ್ತಕ ಮಳಿಗೆಗಳು ಹಾಗೂ ೨೦೦ ವಾಣಿಜ್ಯ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Kannada Sahitya Parishat | ಡಿ.30ರಿಂದ ಕನ್ನಡ ಸಾಹಿತ್ಯ ಪರಿಷತ್ ಸಾಹಿತ್ಯ ಪರೀಕ್ಷೆ